ಚಂದ್ರು ಎಂ ಹುಣಸೂರು ಕವಿತೆ–ಗೀಜಗನ ಮೊಟ್ಟೆ

ಕಾವ್ಯಸಂಗಾತಿ

ಗೀಜಗನ ಮೊಟ್ಟೆ

ಚಂದ್ರು ಎಂ ಹುಣಸೂರು

ಶುಂಠಿ ತೋಟದ ಮೂಲೆಯಲ್ಲಿ ಗೀಜಗ ಹಕ್ಕಿ ಮೊಟ್ಟೆಯನಿಟ್ಟಿದೆ
ಇಷ್ಟೊಂದು ಬಯಲಲ್ಲಿ
ನನ್ನ ಕಣ್ಣಿಗೆ ಕಂಡದ್ದು ಆಶ್ಚರ್ಯ
ಎಂಟು ಚಿಕ್ಕ ಮೊಟ್ಟೆಗಳಿರುವ ಬಟ್ಟಲಿನಂತಾ ಗೂಡಿನ ಮಗ್ಗುಲಿನಲ್ಲೇ
ಒಂದು ಮೊಟ್ಟೆ ಹೊಡೆದು
ಅದರ ಸಿಪ್ಪೆ ಮಾತ್ರ ಬಿದ್ದಿತ್ತು
ಒಂದು ಬಳಸು ತೋಟವನ್ನು ಸುತ್ತಿ ಬರುವುದರೊಳಗೆ ಗೀಜಗ ಹಕ್ಕಿ
ಮೊಟ್ಟೆಯ ಮೇಲೆ ಕೂತಿತ್ತು

ಮನುಷ್ಯನನ್ನು ಕಂಡರೆ
ಓಡುತ್ತಿತ್ತು ಗೀಜಗ ಪರಿವಾರ
ಆದರೆ ಇದೇನೊ ಬದಲಾವಣೆ
ಹತ್ತಿರ ಹೋದರೂ ಹಾರಲಿಲ್ಲ, ಕದಲಲಿಲ್ಲ
ನಾನು ಇನ್ನೂ ಸಮೀಪ ನೋಡುವ ಮನಸ್ಸೂ ಮಾಡಲಿಲ್ಲ
ದೂರದಲ್ಲೆ ಉಳಿದು ಹಕ್ಕಿಗೆ ಮಾತ್ರ ಚೂರು ಕಾವುಕೊಟ್ಟೆ

ಈ ಹಕ್ಕಿ ಹೀಗೆ
ಬುದ್ಧನಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತರೆ
ಅದು ನಮ್ಮ ದಿನಗೂಲಿಯವರ ಕಣ್ಣಿಗೆ ಬಿದ್ದರೆ
ಮೊಟ್ಟೆ ಮರಿಯಾಗುವುದಿಲ್ಲ
ಹಕ್ಕಿಯಂತು ಹಾರುವುದೇ ಇಲ್ಲ
ಈ ಮೊದಲು ಅವರು
ಗೀಜಗ ಹಕ್ಕಿಯ ರುಚಿಯನ್ನು
ಮೊಟ್ಟೆಯ ಸ್ವಾದವನ್ನು
ನನ್ನೊಂದಿಗೆ ಹಂಚಿಕೊಂಡದ್ದರಿಂದ
ಗೀಜಗನ ವಿಚಾರವನ್ನು ಅವರಿಂದ ದೂರವಿಟ್ಟೆ

ಆ ದಿನ ಪೂರ್ತಿ
ಗೀಜಗ ಗೂಡನ್ನು ಬಿಟ್ಟು ಕದಲಲೇ ಇಲ್ಲ
ಸಂಜೆ ಹೊರಡುವ ಮುನ್ನ
ಮಡಿಲನ್ನು ಸಡಿಲಿಸಿಕೊಂಡು ಕೂತ ಗೀಜಗನನ್ನು ಹೆಚ್ಚು ನೋಡಬೇಕೆನಿಸಿತು
ನೋಡುತ್ತಾ ನಿಂತೆ
ಗೀಜಗ ಹಕ್ಕಿಯಾಗಲ್ಲದೆ ತಾಯಿಯಾಗಿ ಕಾಣಲು ಶುರುವಾಯಿತು
ದೇವರನ್ನು ಕರೆದು
ಹೊರಟುಬಿಟ್ಟೆ

ಬೆಳಗ್ಗೆ ಹೋದಾಗ ಮರಿಗಳು ಇಣುಕಿದ್ದವು
ಗೀಜಗ ಈಗ ಹತ್ತಿರ ಹೋದರೆ ಹಾರುವ ಉತ್ಸಾಹ ತೋರುತ್ತಿತ್ತು
ನನಗಾದ ಖುಷಿಗೆ ಕವನ ಬರೆಯಬೇಕಾಯಿತು

ನಮ್ಮ ಕೆಲಸದವ ಶಂಕ್ರಪ್ಪನಿಗೆ
ಈ ವಿಷಯ ಮುಟ್ಟಿಸಿದೆ
ಅವನೂ ಮುಗುಳ್ನಕ್ಕ
ಮತ್ತೆ ಹೋಗಿ ನೋಡೋಣ ಅಂದುಕೊಂಡೆ
ಹಕ್ಕಿ ಗಾಬರಿ ಆದೀತೆಂದು ಸಂಜೆ ಹೋದೆ
ಮರಿಗಳನ್ನು ಕರೆದುಕೊಂಡು ಗೀಜಗ ಹೊರಟು ಹೋಗಿತ್ತು
ಖಾಲಿ ಉಳಿದ ಬಟ್ಟಲಿನ ಗೂಡು
ಅನಾಥವಾಗಿತ್ತು

ಗೀಜಗ ಕೂತಿದ್ದ ಜಾಗದಲ್ಲಿ
ಈಗಲೂ ಕಣ್ಣಾಯಿಸುತ್ತೇನೆ
ಅಲ್ಲೀಗ ಗೀಜಗನ ನಾಲ್ಕು ಪುಕ್ಕಗಳಿವೆ
ಆ ಹೊಡೆದ ಮೊಟ್ಟೆಯ ಸಿಪ್ಪೆಯೂ ಕೂಡ
ಬೇಲಿಯಂಚಲಿ ಚಲಿಸುವಾಗ
ಅದೇ ಗೀಜಗ ನೆನಪಾಗುತ್ತದೆ
ಮರಿಗಳು ಈಗ ಯಾವ ಹದ್ದಿಗು, ಹಾವಿಗು ಸಿಗದಂತೆ
ಹಾರಲು ಕಲಿತಿರುತ್ತವೆ.


ಚಂದ್ರು ಎಂ ಹುಣಸೂರು

Leave a Reply

Back To Top