ಅರುಣಾ ಶ್ರೀನಿವಾಸ ಕವಿತೆ-ಯುದ್ಧ ಭೂಮಿ

ಕಾವ್ಯ ಸಂಗಾತಿ

ಯುದ್ಧ ಭೂಮಿ

ಅರುಣಾ ಶ್ರೀನಿವಾಸ

ತಾನೇ ಗೆಲ್ಲಬೇಕೆಂಬ
ತವಕ…
ಹುಚ್ಚು ಭ್ರಮೆಯಲ್ಲಿ
ಧಾವಂತದ ಓಟ…
ಪ್ರೀತಿ , ಸ್ನೇಹಗಳೆಲ್ಲ ಲೆಕ್ಕಕ್ಕಿಲ್ಲ…
ನಿಸ್ತೇಜ ಮುಖಗಳಲಿ
ನಗುವೂ ಪಕ್ಕ ಸುಳಿಯದಲ್ಲ..
ಎಂಥಾ ಭಾವರಹಿತ ಬದುಕೋ?

ಸಾಗುತ್ತದೇ ಹೀಗೇ ದಿನಾ…
ಚಿತ್ರದಲ್ಲೂ ಒಪ್ಪವಾಗಿ ಅರಳಿಸಲಾಗದ
ಇಂಥಾ ಮುಖಗಳನ್ನೇ ಗಮನಿಸುತ್ತಾ
ಕವಿತೆ ಸಾಲುಗಳನ್ನು
ಅರಸುವ ಹುಚ್ಚು ನನಗೆ…
ಬರೆದ ಕವಿತೆಗಳೆಲ್ಲ ನೀರಸವಾದದ್ದು
ಬಿಟ್ಟರೆ…
ದಕ್ಕಿದ್ದೆಲ್ಲವೂ ಬರೀ ಸೊನ್ನೆ…

ಇಡೀ ವ್ಯವಸ್ಥೆಯೇ ಹಾಗೇ ಬಿಡಿ
ತಂತ್ರಗಳ ಹುಡುಕಿ
ಯಂತ್ರಗಳಾಗುವ ತವಕ…
ಹಣದೊಳಗಷ್ಟೇ ಬದುಕ ಲೆಕ್ಕಾಚಾರ….
ಸವಲತ್ತು ಮಸಲತ್ತು ಎಲ್ಲವೂ…
ಬದುಕ ಉತ್ತುಂಗಕೇರಿಸುವ
ದಾರಿ ತಪ್ಪಿದ ಕಸರತ್ತು..
ಎದೆಗೂಡೊಳಗೆ ಜಾಲಾಡಿದರೆ
ನಿಸ್ಸಂಶಯವಾಗಿ ದಕ್ಕುವುದು
ಕೋಪ, ದ್ವೇಷಗಳ ಒಂದಷ್ಟು ಸೊತ್ತು…
ದುಡ್ಡು ಗಳಿಸಿದೆ ವಿದ್ಯೆ
ಭಾವವಿರದೆಯೇ ಬುದ್ಧಿ..
ಅಣು ಅಣುವಲ್ಲೂ ಅಣಿಗೊಳಿಸಿದ ಬಾಳು
ಯುದ್ಧ ಭೂಮಿಯ ಹೋರಾಟದ ಗೋಳು…

ಸತ್ತ ದೇಹವ ಅರಗಿಸಿಕೊಂಡ
ಈ ಮಣ್ಣಿನಲ್ಲೂ ನಗೆಯಿರುವುದಿಲ್ಲ…
ಒಂದೇ ಒಂದು ಹೂವಿನ ಗಿಡವೂ
ಚಿಗುರುವುದಿಲ್ಲ ಬಿಡಿ….


(ಮೌನಜೀವಿ)

One thought on “ಅರುಣಾ ಶ್ರೀನಿವಾಸ ಕವಿತೆ-ಯುದ್ಧ ಭೂಮಿ

  1. ನಿರಾಶವಾದ ಹರಡಿಕೊಂಡಿದೆ…

    ಕಾವ್ಯ ನಿರಾಶವಾದದಲ್ಲೂ ಆಶಾವಾದ ಬಿತ್ತಬೇಕು.

    ಕವಿತೆ ಆರಂಭದಿಂದ ಸರಳವಾಗಿ ಕವಿ ಹೇಳಬೇಕಾದದ್ದನ್ನು ಹೇಳಿದ ಮೇಲೆ..

    ಕೊನೆಯ ನಾಲ್ಕು ಸಾಲು …ಸಹ ನಿರಾಶವಾದ ಅಷ್ಟಾಗಿ ಇಷ್ಟವಾಗಲಿಲ್ಲ…
    …………
    ಹೀಗೆ ಮುಕ್ತಾಯವಾಗಬೇಕಿತ್ತು….

    ” ಸತ್ತ ದೇಹ ಅರಗಿಸಿಕೊಂಡ ಮಣ್ಣಲ್ಲಿ ಹೂ ಕಂಪಿದೆ
    ಹೂ ಗಿಡದಲ್ಲಿ ಹೊಸ ಚಿಗುರಿದೆ”
    ಸಮಸ್ಯೆ ಇರುವುದು ಯುದ್ಧದಾಹಿ ಮನುಷ್ಯರಲ್ಲಿ…

Leave a Reply

Back To Top