ಕಾವ್ಯ ಸಂಗಾತಿ
ನನ್ನಮ್ಮ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಬಹಳ ಸಮಯದಿಂದ
ಮುಖ ತೋರಿಸದಿದ್ದ ನನ್ನಮ್ಮ
ನಿನ್ನೆ ಇದ್ದಕ್ಕಿದ್ದಂತೆ
ನನ್ನ ಕನಸಿನಲ್ಲಿ ಕಂಡಳು
ದೇವತೆ ದರ್ಶನವಾದಂತೆ!
ಕನಸಲ್ಲಿ ಕಂಡ ಅಮ್ಮ
ವಾಸ್ತವದಲ್ಲಿ ನನ್ನ ಹೆತ್ತಮ್ಮ ಅಲ್ಲ
ನಾನವಳ ಗರ್ಭದಲಿ
ಕೂತ ಸುಖ ಕಂಡವನೂ ಅಲ್ಲ
ನನ್ನ ಬರುವಿಗೆ ಮುನ್ನ
ಅವಳಿಗೊಬ್ಬ ಮಗ ಜನಿಸಿದ್ದ
ಆದರು ಎಲ್ಲೋ ಬಿದ್ದಿದ್ದು
ಹೇಗೋ ಸಿಕ್ಕದ ನನ್ನನ್ನು
ಅಂಬೆಗಾಲಿಡುವ ಮೊದಲೆ
ಎತ್ತಿ ಎದೆಗಪ್ಪಿಕೊಂಡು
ಅವಳ ಹೆಸರ ನನ್ನ ಹಣೆ
ಮೇಲೆ ಅಳಿಸದಂತೆ ಕೊರೆದಳು!
ಹೌದು, ನನ್ನಿಂದಾಗಿ
ಅವಳ ಸುತ್ತ ಸುತ್ತುತ್ತಿದ್ದ
ಬಾಂಧವ ಗ್ರಹಗಳು
ದೂರ ದೂರ ತೂರಿಹೋದರು
ಬೆಳೆಬೆಳೆದಂತೆ ಅವಳ ಸ್ವಂತ ಮಗ
ನನ್ನಣ್ಣ ಮತ್ತು ಅತ್ತಿಗೆ ಕೂಡ
ಅದೇ ದಾರಿ ಹಿಡಿದರು!
ನನ್ನಮ್ಮ ವಿಧವೆ
ನನ್ನ ಕಣ್ಣು ಅರಿವ ಹೊತ್ತಿಗೆ
ನನಗೆ ಕಂಡದ್ದೆ ಹಾಗೆ!
ಪತಿಯ ಅವಸಾನದ ನಂತರ
ಅವರದೆ ಇಲಾಖೆಯಲ್ಲಿ ಕೆಲಸ
ಅಮ್ಮ ಪ್ರೈಮರಿ ಉಪಾಧ್ಯಾಯಿನಿ
ನನ್ನಮ್ಮನ ಕಾಲೊಂದು ಕುಂಟು
ಆದರು ಅವರತ್ತ ಹಾಯದ ಸೋಲು
ನನ್ನ ಬದುಕಿನಲ್ಲಿ ನಾ ಕಂಡುಂಡ
ಕುಗ್ಗಿಸುವ ಎಲ್ಲ ಸಂಕಷ್ಟಗಳ ಭಾಗಿ
ನನ್ನ ವೈದ್ಯ ಓದಿಗಾಗಿ ದುಡಿದಳು
ಮನೆ ಪಾಠ ನಡೆಸಿದಳು
ಅನಾಥನೊಬ್ಬನನ್ನು ಕೈ ಹಿಡಿದಳು
ನನ್ನ ಎದೆಯಲಿ ನನ್ನತನ ಕೊರೆದು
ಒಬ್ಬ ಮನುಷ್ಯನನ್ನಾಗಿಸಿ ನಿಲ್ಲಿಸಿದಳು!
ಈಗ ನನ್ನಮ್ಮ ನನ್ನೊಡನಿಲ್ಲ
ನಾ ಯಾರು ಎಲ್ಲಿ ಜಗದ ಬೆಳಕ ಕಂಡೆ
ಯಾರು ನನ್ನ ಹೆತ್ತವರು
ಯಾವ ಅರಿವಿಲ್ಲದ ನನಗೆ
ಅಂಥ ಕೊರತೆ ಮುಟ್ಟದ ಹಾಗೆ
ನನ್ನ ಜನ್ಮಾಂತರದ ಅಮ್ಮನಾದಳು
ನನ್ನೆದೆ ಬಡಿತವಾದಳು ನನ್ನಮ್ಮ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
(ನನ್ನ ಆತ್ಮೀಯ ಗೆಳೆಯನೊಬ್ಬನ ಅಮ್ಮನ ವೃತ್ತಾಂತ)
ನಿಮ್ಮ ಗೆಳೆಯನ ಬಾಳನ್ನ ಸಮರ್ಥವಾಗಿ ಹೇಳಿದ್ದೀರ
Congrats
NICE
Excellent narration