ವಸುಂಧರಾ ಭಟ್-ಗಜಲ್

ಕಾವ್ಯ ಸಂಗಾತಿ

ಗಜಲ್

ವಸುಂಧರಾ ಭಟ್

ಎದೆಯ ಕದವನು ತೆರೆದು ಹೆಬ್ಬಾಗಿಲಲಿ ಕಾದಿರುವೆ ಬರುವೆಯಾ ಇನಿಯಾ
ಸುಧೆಯು ಅಧರದ ಮಧುವು ಬಟ್ಟಲಲಿ ಹಿಡಿದು ತರುವೆಯಾ ಇನಿಯಾ

ಮಲ್ಲಿಗೆಯ ಕಂಪು ಎಲ್ಲೆಲ್ಲು ಪಸರಿಹುದುಮತ್ತೇರಿದಂತಿದೆ ಅಲ್ಲವೇ
ಮೆಲ್ಲಗೆ ಚೆಲ್ಲಿದೆ ಚಂದಿರನ ಹಾಲ್ಬೆಳಕು ನಗುವ ಬೀರುವೆಯಾ ಇನಿಯಾ

ರಸಿಕತೆಯ ಮಾತಿಂದ ನಲ್ಲೆಯನು ಬರಸೆಳೆದು ಮುದ್ದಿಸಬಾರದೇ ಒಮ್ಮೆ
ಹಸನಾದ ಬಾಳಿಗೆ ಆಧಾರ ಕೊಡುತಬಿಸುಪಾಗಿ ಇರುವೆಯಾ ಇನಿಯಾ

ಹೊಸ ಲೋಕವೊಂದು ಕರೆದಿದೆ ತೋಳನು ಚಾಚುತ ಹತ್ತಿರಕೆ
ಬಿಸಿ ಉಸಿರು ಸೋಕುತ ಬೆಚ್ಚನೆಯ ಹೃದಯ ತೆರೆವೆಯಾ ಇನಿಯಾ

ಜನುಮ ಜನುಮದ ಬೆಸುಗೆ ಬೇಡಿ ಪಡೆದಿಹಳು ದೇವನಲಿ ವಸು
ತನು ಮನವ ಆವರಿಸಿ ಪ್ರೇಮ ಭಾವದಿ ಬೆರೆವೆಯಾ ಇನಿಯಾ


Leave a Reply

Back To Top