ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಹನಿಬಿಂದು ಅವರ ಲೇಖನಿಯಿಂದ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ನನ್ನ ಹಲ್ಲುಗಳಿಗೆ ನನ್ನ ಕಂಡರೆ ಅತೀವ ಮುದ್ದೋ, ವೈರತ್ವವೋ ತಿಳಿಯದು. ನನ್ನ ತುಂಬಾ ಕಾಡಿಸಿ ಬಿಡುತ್ತವೆ. ಹಾಗೆ ಕಾಡಿಸುವಾಗ ನೋವು ಸಹಿಸದ ನಾನು ದಂತ ವೈದ್ಯರ ತಲಾಷೆಯಲ್ಲಿ ಇರುತ್ತೇನೆ. ಹಲವಾರು ಊರುಗಳನ್ನು ಆಗಾಗ ಬದಲಿಸುವ ಅಲೆಮಾರಿ ಜನಾಂಗದ ಹಾಗೆ ಇರುವ ನನಗೆ ಆಗಾಗ ಆಯಾ ಊರಿನ ವೈದ್ಯರನ್ನೂ ಬದಲಾಯಿಸುವ ಅನಿವಾರ್ಯತೆ ಇದ್ದೇ ಇದೆ ಅಲ್ಲವೇ?

ಬಂಟ್ವಾಳದ ಮೂಲೆಯ ಕಟ್ಟ ಕಡೆಯ ಹಳ್ಳಿ ಅಥವಾ ಗ್ರಾಮ ಉಳಿ. ಅಲ್ಲಿರುವಾಗ ಬಂಟ್ವಾಳ ಅಥವಾ ಉಪ್ಪಿನಂಗಡಿಯ ವೈದ್ಯರಾದರೆ, ಕುದುರೆಮುಖದಲ್ಲಿ ಇರುವಾಗ ಕಳಸದ ವೈದ್ಯರು, ಸುಳ್ಯಕ್ಕೆ ಹೋದ ಬಳಿಕ ಅಲ್ಲಿನ ವೈದ್ಯರು, ಹತ್ತಿರದ ಬೆಳ್ಳಾರೆಯ ವೈದ್ಯರು, ಈಗ ಮೂಲ್ಕಿ ಗೆ ಬಂದ ಮೇಲೆ ಮಂಗಳೂರು, ಸುರತ್ಕಲ್,ಕಿನ್ನಿಗೋಳಿಗೆ ಹೋಗಲು ಇಲ್ಲಿನ ಜನರ ಪುಕ್ಕಟೆ ಸಲಹೆ. ನಾನು ಹುಡುಕುವುದು ಮೂಲ್ಕಿಯಲ್ಲಿ ಇರುವ ವೈದ್ಯರನ್ನು. ಹತ್ತಿರ ಇದ್ದರೆ ಒಳ್ಳೆಯದಲ್ಲವೇ?

              ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದ್ದರೂ ಮನೆ ಗೆಲ್ಲಿ ಮಾರು ಗೆಲ್ಲು ಎಂಬ ಮಾತೂ ಇದೆ ಅಲ್ಲವೇ? ಹಣ ಕೊಡುವಾಗ ಉತ್ತಮ ಸೇವೆಯನ್ನು ಕೊಡುವ ವೈದ್ಯರನ್ನು ನಾವೇ ಸೃಷ್ಟಿಸಿಕೊಳ್ಳವ ಪ್ರಯತ್ನ ಮಾಡಬೇಕು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ. ಎಲ್ಲೇ ಹೋಗಲಿ, ಅದೇ ಎಂಬಿಬಿಎಸ್ ಅಥವಾ ದುಡ್ಡು ಹೆಚ್ಚಿದ್ದರೆ ಎಂ ಡಿ ಡಾಕ್ಟರ್. ಹಲ್ಲಿಗಾದರೆ ಬಿಡಿಎಸ್ ಎಂ ಡಿ ಎಸ್ ಡಾಕ್ಟರ್, ಸ್ಪೆಷಲ್ ಸರ್ಜನ್. ನಮ್ಮ ಬಜೆಟ್ ನ ಮೇಲೆ ನಮ್ಮ ಡಾಕ್ಟರ್, ಜೀವನ ಶೈಲಿ, ಬಟ್ಟೆ ಬರೆ, ಆಹಾರ, ಶಾಪಿಂಗ್ ಗಳ ನಿರ್ಧಾರ. ಬಡವ ಕಡ್ಲೆಕಾಯಿ ತಿಂದರೆ ಸಿರಿವಂತ ಬಾದಾಮಿ ತಿಂದಾನು, ಬಡವ ಗಂಜಿ ತಿಂದರೆ ಸಿರಿವಂತ ಬಿರಿಯಾನಿ ತಿಂದಾನು ಅಷ್ಟೇ ವ್ಯತ್ಯಾಸ. ಚಿನ್ನದ ತಟ್ಟೆ ಆದ್ರೂವೆ ತಿನ್ನೋದು ಅಕ್ಕಿ ಬೇಯಿಸಿದ ಅನ್ನವನ್ನೇ! ಆ ಅಕ್ಕಿಯನ್ನು ಬೆಳೆಯುವವ ರೈತನೇ!

ಜೀವನ ಮಟ್ಟಕ್ಕೆ ತಕ್ಕ ಹಾಗೆ ಟೈಲರ್ ಅಂಗಡಿ. ಅವನೇ ಎ ಸಿ ರೂಮಲ್ಲಿ ಕುಳಿತು ಹೊಲಿಯುವುದು, ರೇಟ್ ಹೆಚ್ಚು ಗ್ರಾಹಕ ಕೊಡೋದು, ಅವನೇ ಎಸಿ ರೂಮಲ್ಲಿ ಕುಳಿತು ಹೇರ್ ಕಟ್ಟಿಂಗ್ ಮಾಡೋದು. ಹೋಗಿ ಒಂದರ್ಧ ಗಂಟೆ ಕುಳಿತಿದ್ದು ಬಂದುದಕ್ಕೆ ಹೆಚ್ಚು ಕೊಡೋದು ಗ್ರಾಹಕ!! ಡಾಕ್ಟರ್ ವಿಷಯದಲ್ಲೂ ಅಷ್ಟೇ. ಎಂಬಿಬಿಎಸ್ ಮಾಡಿ ಎಂ. ಡಿ ಮಾಡಲು ಎರಡು ಕೋಟಿ ಸುರಿದಿದ್ದರೆ ಅದರ ಡಬ್ಬಲ್ ಪೇಷಂಟ್ ಕೊಟ್ಟು ಆಗಬೇಕು!!
ಇನ್ನೆಲ್ಲಿ ಸಿಗೋದು! ಅದೆಲ್ಲಾ ಜನರಿಂದಲೇ ಆಗಬೇಕು ತಾನೇ! ಇಂದು ದುಡಿದ ಹಣವೆಲ್ಲಾ ಆಸ್ಪತ್ರೆಗೇ ಮೀಸಲು. ಆದರೆ ಅಷ್ಟು ಖರ್ಚು ಮಾಡಿಯೂ ಉತ್ತಮ ಆರೋಗ್ಯ ದೊರೆತರೆ ತಾನೇ? ಹಲ್ಲು ನೋವೆಂದು ಹಲ್ಲಿನ ಡಾಕ್ಟರ್ ಬಳಿ ಹೋದರೆ ಹಣ ಪಡೆದರೂ ಬೇಕಾಬಿಟ್ಟಿ ಕೆಲಸಮಾಡಿ ಹತ್ತಿಯನ್ನು ಹಲ್ಲಿನ ಒಳಗೇ ಬಿಟ್ಟು ರೂಟ್ ಕೆನಾಲ್ ಮಾಡಿ ಕ್ಯಾಪ್ ಹಾಕಿದ್ದನ್ನು ನಾನೇ ನೋವು ಅನುಭವಿಸಿರುವೆ. ಇನ್ನು ಒಂದು ಹಲ್ಲು ನೋವೆಂದು ಡಾಕ್ಟರ್ ಬಳಿ ಹೋದರೆ ಇನ್ನೊಂದು ಹಲ್ಲು ಕಿತ್ತು ಹಾಕಿ ಕಳಿಸಿದ ಡಾಕ್ಟರ್ ಗಳು ಎಷ್ಟು ಮಂದಿ ಇಲ್ಲ!
ಹಾಗಂತ ಡಾಕ್ಟರುಗಳು ಎಲ್ಲರೂ ಕೆಟ್ಟವರಲ್ಲ. ಈಗಂತೂ ಸಮಾಜದಲ್ಲಿ ಎಲ್ಲವೂ ಡೂಪ್ಲಿಕೇಟ್. ಡಾಕ್ಟರ್ ಗಳೂ ಇದ್ದಾರಂತೆ ಇಂಥವರು. ಸರಿಯಾದ ಕೌಟುಂಬಿಕ ಡಾಕ್ಟರ್ಗಳನ್ನು ನಾವು ದೇವರಂತೆ ನಂಬುತ್ತೇವೆ. ತಮ್ಮ ಕರ್ತವ್ಯವನ್ನು ಊಟ, ನಿದ್ರೆ ಬಿಟ್ಟು, ತುಂಬಾ ಸಂತಸದಿಂದ ಮಾಡುವ ವೈದ್ಯರು ಸಮಾಜದಲ್ಲಿ ಹಲವಾರು ಜನ ಇದ್ದಾರೆ ಮತ್ತು ಅವರಿಗೆ ಒಂದು ಸಲಾಂ. ಹಾಗೆಯೇ ಒಂದು ದೇಹವನ್ನು ತಮ್ಮ ಸಂಶೋಧನೆ ಅಥವಾ ಪ್ರಯೋಗಕ್ಕಾಗಿ ಬಳಸಿ ಸಾಯಿಸುವವರೂ ಇದ್ದಾರೆನ್ನಿ. ಮೊದಲೇ ಇಷ್ಟು ಲಕ್ಷ ತಂದರೆ ಮಾತ್ರ ಟ್ರೀಟ್ಮೆಂಟ್ ಆರಂಭ ಎನ್ನುವ ಮಾತೂ ನಾವು ಕೇಳಿದ್ದೇವೆ. ತಾವೇ ಹಣಕ್ಕಾಗಿ ಮೆಸ್ಸೇಜ್ ಕಳಿಸಲು ಟೈಪ್ ಮಾಡಿ ಕೊಟ್ಟ ಡಾಕ್ಟರ್ ಗಳು ರೋಗಿಯ ಸಾವು ಖಚಿತ ಎಂದು ತಿಳಿದಿದ್ದರೂ ನಲವತ್ತು ಲಕ್ಷ ತಂದರೆ ಬದುಕಿಸುತ್ತೇವೆ, ಅರವತ್ತು ಲಕ್ಷ ಕೊಟ್ಟರೆ ಉಳಿಯಬಹುದು ಎನ್ನುವವರೂ ಇದ್ದಾರೆ. ಇಂತಹ ಕೆಲವು ಕೇಸ್ ಗಳಲ್ಲಿ ತಮ್ಮೆಲ್ಲಾ ಆಸ್ತಿ ಮಾರಿ ದುಡ್ಡು ತಂದು ಒಂದಷ್ಟು ದಿನ ತಮ್ಮವರ ಜೀವ ಉಳಿಸಿಕೊಂಡ ಜನರಿದ್ದಾರೆ.

ಪ್ರತಿಯೊಂದು ತಪ್ಪಿಗೂ ಡಾಕ್ಟರನ್ನು ನಾವು ದೂರಾಲಾಗದು. ಕೆಲವೊಮ್ಮೆ ಡಾಕ್ಟರ್ ಹೇಳಿದಂತೆ ನಡೆಯದ ನಾವು ಹೆಚ್ಚು ಹೆಚ್ಚು ಆರೋಗ್ಯ ಕೆಟ್ಟಾಗ ಡಾಕ್ಟರ್ ಮೇಲೆ ಹಾಕಿ ಅವರು ಸರಿ ಇಲ್ಲ ಎಂದು ಮತ್ತೊಂದು ಡಾಕ್ಟರ ಬಳಿ ಓಡುತ್ತಾ ಹಣ ವ್ಯಯ ಮಾಡಿಕೊಳ್ಳುತ್ತೇವೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ಅಲ್ಲವೇ? ಹೊರಗೆ ಹೋಗಿ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿಂದು ಆರೋಗ್ಯ ಕೆಡಿಸಿಕೊಂಡು ಮತ್ತೆ ಡಾಕ್ಟರನ್ನು ದೂರಿ ಅವರು ಸರಿ ಇಲ್ಲ ಎಂದರೆ ಏನು ಪ್ರಯೋಜನ? ಸಮಾಜದಲ್ಲಿ ವಿವಿಧ ರೀತಿಯ ಜನರಿರುವ ಹಾಗೆ ವಿವಿಧ ರೀತಿಯ ವೈದ್ಯರೂ ಇದ್ದಾರೆ. ಉತ್ತಮ ವೈದ್ಯರನ್ನು ಆರಿಸಿಕೊಳ್ಳುವ ಜಾಣ್ಮೆ ಕೂಡಾ ನಮಗೆ ಇರಬೇಕು ಅಲ್ಲವೇ?

ಆರೋಗ್ಯವೇ ಭಾಗ್ಯ. ನಾವು ದುಡಿದ ಹಣವನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹಾಕಿ, ಹೊಳೆಯಲ್ಲಿ ಹುಳಿ ಹಿಂಡಿದ ಹಾಗೆ ಬದುಕು ಆಗುವ ಬದಲು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳೋಣ. ಉತ್ತಮ ಎಣ್ಣೆ, ಒಳ್ಳೆಯ ಆಹಾರ, ಸರಿಯಾದ ನಿದ್ದೆ, ಒಂದಷ್ಟು ವ್ಯಾಯಾಮ, ಯೋಗ, ದ್ಯಾನ ಎಲ್ಲವೂ ಸ್ವಲ್ಪ ಸ್ವಲ್ಪ ಇದ್ದಾಗ, ಕೆಟ್ಟ ಅಭ್ಯಾಸಗಳು ಇಲ್ಲದಾಗ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ನೀವೇನಂತೀರಿ?


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

About The Author

Leave a Reply

You cannot copy content of this page

Scroll to Top