ಶಾಂತಲಿಂಗಪ್ಪ ಪಾಟೀಲ ಕವಿತೆ-

ಕಾವ್ಯ ಸಂಗಾತಿ

ಹೂ ಮನಸ್ಸು!

ಶಾಂತಲಿಂಗಪ್ಪ ಪಾಟೀಲ

ಹೌದು ಇಂತಹ
ಅಗಣಿತ ನೆನಪು ಭ್ರಮೆಗಳ
ಉಗ್ರಾಣವೇ ನನ್ನೆದೆ,
ಹೃದಯ, ಹೂ ಮನಸ್ಸು!

ನೀನಿರುವೆ ಪಕ್ಕದಲ್ಲೇ
ಎನಿಸುತ್ತದೆ,
ಒಮ್ಮೊಮ್ಮೆ ಕೇಳಿ
ಬರುತ್ತದೆ ಮುರಳಿಯ ನಾದ ಸ್ವರ
ಮೂಲೆಯಿಂದೆಲ್ಲಿಂದಲೋ!

ಹೃದಯ ಬಡಿದುಕೊಳ್ಳುತ್ತದೆ
ಸರ್ರನೆ ಸಂಚರಿಸುತ್ತದೆ
ಕೆಂಪು ದ್ರವ
ನಿತ್ರಾಣ ಗೊಂಡು
ನಿಂತ ಕೈ ಕಾಲುಗಳಿಗೆ!

ಕೈಗೆತ್ತಿಕೊಳ್ಳದೇ ಇದ್ದರೂ ತಂಬೂರಿ
ತಂತಿಯ ನಿನಾದದೊಂದಿಗೆ
ಹೊರಡುತ್ತದೆ ಸ್ವರ
ಅವಳಂತೆಯೆ
ಹಾಡುತ್ತದೆ, ಸ್ತುತಿಸುತ್ತದೆ ಜೀವ!

ಸ್ವರ್ಗ, ಮರ್ತ್ಯ, ಪಾತಾಳಕ್ಕೆಲ್ಲ
ಸಂಚರಿಸುತ್ತದೆ ಭಾವ
ಎಲ್ಲಿ ಎಲ್ಲಿ ನೀನೆಲ್ಲಿರುವೆ ದೇವಾ
ಭ್ರಮೆಯೋ ವಾಸ್ತವವೋ
ನಾನರಿಯೆ ದೇವ!


Leave a Reply

Back To Top