ಶಿ ಕಾ ಬಡಿಗೇರ ಗಜಲ್

ಕಾವ್ಯ ಸಂಗಾತಿ

ಗಜಲ್

ಶಿ ಕಾ ಬಡಿಗೇರ

ಕಣ್ಣು ಅಗಲಿಸಿ ದಿಟ್ಟಿಸುವುದು ಬೇಡ ಹಠದ ಸೂರ್ಯನೆದುರು
ಕೈ ಜೋಡಿಸಿ ಕಣ್ಣು ಮುಚ್ಚಿ ನಿಲ್ಲಬೇಕು ದಿಟದ ಮಾತಿನೆದುರು

ಗಾಳಿ ನಮಗಾಗಿಯೇ ಬೀಸುತ್ತದೆ ಎಂಬ ಸೊಕ್ಕು ತಕ್ಕುದಲ್ಲ
ಚಪ್ಪಲಿ ಇಲ್ಲದೇ ಬರಿಗಾಲ ನಡಿಗೆ ಒಳ್ಳೆಯದಲ್ಲ ಹಾಕಿದ ಬೇಲಿ ಎದುರು

ತುಸು ಮಾತಿನಲೂ ಜಗವ ಗೆಲ್ಲುವ ತಾಕತ್ತು ಎಂದೂ ಇದೆ
ಸಲುಗೆಯ ಮಾತು ಬೇಡ ಅಡ್ಡ ಕಸುಬ ಹಿಡಿದ ಜನರೆದುರು

ಬಿಲ್ಲಿದ್ದರೇನು ಬಂತು ಬಾಣವಿಲ್ಲವೆಂದರೆ ಹೆಗಲಿಗೆ ಭಾರ
ವ್ಯಾಪಾರ ಮಾಡುವುದೇಗೆ ನಿತ್ಯ ಅನುಭವಿಸುವ ನಷ್ಟದ ಎದುರು

ಪ್ರೀತಿಯ ಫಸಲಿಗೆ ಕೊಳ್ಳಿ ಇಟ್ಟು ಸುಖ ಉಣ್ಣಲಾದೀತೆ
ನಾ ನಿಲ್ಲುವುದಿಲ್ಲ ನನ್ನೆದೆಯೊಳಗಿದ್ದೂ ನಿನ್ನ ಮೋಸದ ಎದುರು


Leave a Reply

Back To Top