ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಮಕ್ಕಳೆಮಗೆ ಬದುಕು

ಮಕ್ಕಳು ಸುಂದರ ಲೋಕದ ಪುಷ್ಪಗಳಂತೆ” ಎಂಬ ಮಾತು ಅಕ್ಷರಶಃ ಸತ್ಯ. ಮುಗ್ಧ ಮನದ ಮಕ್ಕಳಲ್ಲಿ ಯಾವುದೇ ತೆರನಾದ ಕೆಟ್ಟಭಾವನೆಗಳಿರದ ಸ್ವಚ್ಛ ತಿಳಿಗೊಳದ ನಿಷ್ಕಲ್ಮಷ ಭಾವಜೀವಿಗಳು.ಆ ಭಾವನೆಗಳಿಗೆ ಕಿಂಚಿತ್ ಧಕ್ಕೆ ಬಂದರೂ ಅದು ಖಿನ್ನತೆಯ ಗೂಡಾಗಿ ನಿಸ್ತೇಜಮೌನದ ಕೂಪದಿ ನರಳಿ ಅರಳುವ ಮುನ್ನ ಬಾಡಿ ಹೋಗುತ್ತದೆ.

“ಏಯ್ ಗಣೇಶ ಯಾಕೆ ಪರೀಕ್ಷೆಯಲ್ಲಿ ಈ ಸಲ ಕಡಿಮೆ ಅಂಕ ಪಡೆದೆ?

ನೋಡು ಪಕ್ಕದ ಮನೆಯ ರಮೇಶ ನಿನಗಿಂತ ಒಳ್ಳೆ ಅಂಕಗಳನ್ನು ಪಡೆದಿದ್ದಾನೆ! ನಾನು  ಎಲ್ಲರ ಮುಂದೆ ಮುಖ ತೋರಿಸಲು ನಾಚಿಕೆಯಾಗುತ್ತಿದೆ ನೀನು ಬರೀ ಚಿತ್ರಬಿಡಿಸುವುದರಲ್ಲಿ , ತೋಟದ ಗಿಡ ಬೆಳೆಸುದರಲ್ಲೆ ವೇಳೆ ಕಳಿತೀಯಾ ಅವನನ್ನು ನೋಡು ಯಾವಾಗಲೂ ಅಭ್ಯಾಸ ಮಾಡುತ್ತಲೇ ಇರ್ತಾನೆ”

ಎಂದಾಗ ಕೇವಲ ಐದು ಅಂಕಗಳ ವ್ಯತ್ಯಾಸದಿ ತಾಯಿ ಗೊಣಗುವದನ್ನು ನೋಡಿದಾಗ ಗಣೇಶನ ಮುಖ ಬಾಡಿ ಊಟ ಮಾಡಲು ಕೂಡ ಬರದೆ ಕೋಣೆಯ ಬಾಗಿಲು ಹಾಕಿಕೊಂಡು ಹಾಗೆ ಮಲಗಿದ.ಮರುದಿನ ಬೇಸರದಿಂದಲೇ ತೋಟದೆಡೆ ಪ್ರತಿದಿನ ಒಂದು ಸುತ್ತು ನಡೆದಾಡಲೂ ಕೂಡ ಹೋಗದೇ ಓದಲು ಕುಳಿತ.ಕೊಂಚ ವಿಚಾರಿಸಿ ನೋಡಿದಾಗ ಪಾಲಕರಾದ ನಾವು ಎತ್ತಸಾಗುತ್ತಿದ್ದೇವೆ.ಪುಸ್ತಕದ ಹುಳುಗಳನ್ನಾಗಿಸಿ ಕೇವಲ ಅಂಕ ಗಳಿಕೆಯಿಂದ ಭವಿಷ್ಯದ ಕನಸ ಹೆಣೆಯುವ ನಾವು  ನಮ್ಮ ಪ್ರತಿಷ್ಠೆಯ ಮುಂದೆ ಮಕ್ಕಳ ಹವ್ಯಾಸ,ಪ್ರತಿಭೆಗಳನ್ನು ಗೌಣವಾಗಿಸುತ್ತೇವೆ. ತಂತ್ರಜ್ಞಾನದ ಭರಾಟೆಯ ಈ ದಿನಗಳಲ್ಲಿ ನಾವು ನಮ್ಮ ಮಗು ಕಲಿಕೆಯಲ್ಲಿ ಮುಂಚೂಣಿಯಲ್ಲಿರಬೇಕೆಂದು ಬಯಸುವದು ದಿಟವಾದರೂ ಮಗುವಿಗೂ ತನ್ನದೇ ಆದ ಭಾವನೆಗಳಿವೆ.ಅದನ್ನು ಪಾಲಕರಾದವರು ಅರ್ಥ ಮಾಡಿಕೊಂಡು ಅಭ್ಯಾಸದ ನಂತರ ಬಿಡುವಿನ ವೇಳೆಯಲ್ಲಿ ಅವರ ಉತ್ತಮ ಹವ್ಯಾಸಗಳನ್ನೂ ಕೂಡ ಪ್ರೋತ್ಸಾಹದ ನೀರೆರೆದು ಪೋಷಿಸುವ ಮೂಲಕ ಮೌಲ್ಯಗಳ ನೆಲೆಗಟ್ಟನ್ನು ಭದ್ರ ಪಡಿಸಬೇಕಾದ ಅವಶ್ಯಕತೆ ಅನಿವಾರ್ಯತೆ ತುಂಬಾ ಇದೆ.

ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳಲ್ಲಿ ಥಾಮಸ್ ಅಲ್ವ ಎಡಿಸನ್ ಕೂಡ ಒಬ್ಬರು.

ಇವರು ತಮ್ಮ 7ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದರು ಕಲಿಕೆಯಲ್ಲಿ ತುಂಬಾ ಹಿಂದುಳಿದ ವಿದ್ಯಾರ್ಥಿಯಾಗಿದ್ದರು.ಅವರ ವರ್ಗ ಶಿಕ್ಷಕರು ಎಷ್ಟು  ಪ್ರಯತ್ನ ಪಟ್ಟರೂ ಕಲಿಕೆಯಲ್ಲಿ ಸ್ವಲ್ಪವೂ ಸುಧಾರಿಸದ ಕಾರಣ ಅವರ ಕೈಯಲ್ಲಿ ಒಂದು ಚೀಟಿಯನ್ನು ಬರೆದು ಕೊಟ್ಟು ನಾಳೆಯಿಂದ ಶಾಲೆಗೆ ಬರಬಾರದೆಂದು ತಾಕೀತು ಮಾಡಿ ಕಳಿಸಿದರು.ಅದನ್ನು ಅವರು ತಮ್ಮ ತಾಯಿಗೆ ತೋರಿಸಿದಾಗ ತಾಯಿ ಕಂಬನಿ ಮಿಡಿಯುವದನ್ನು ಕಂಡು ಆ ಚೀಟಿಯಲ್ಲಿ ಏನು ಬರೆದಿದೆ?ಎಂದು ತಾಯಿಯನ್ನು ಕೇಳಿದಾಗ ತಾಯಿ ಹೇಳಿದ ಮಾತು ತುಂಬಾ ಅದ್ಭುತವಾಗಿತ್ತು.ಏನೆಂದರೆ” ನಿಮ್ಮ ಮಗ ತುಂಬಾ ಜಾಣನಿದ್ದಾನೆ ಅವನ ಬುದ್ಧಿಮಟ್ಟಕ್ಕೆ ಕಲಿಸುವ ಅರ್ಹತೆ ನಮಗಿಲ್ಲ ಆದ್ದರಿಂದ ಅವನನ್ನು ನಾಳೆಯಿಂದ ಶಾಲೆಗೆ ಕಳಿಸಬೇಡಿ”ಎಂದು ಬರೆದಿದ್ದಾರೆ ಎಂದು ಹೇಳಿ ಮರುದಿನದಿಂದ ತನ್ನ ಮಗನ ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸತೊಡಗಿದಳು.ಪರಿಸರದಲ್ಲಿ ಸಿಗುವ ವಸ್ತುಗಳನ್ನು ಸಂಗ್ರಹಿಸಿ ಒವರ ಮನೆಯ ನೆಲಮಾಳಿಗೆಯನ್ನೇ ಪ್ರಯೋಗಾಲಯ ಮಾಡಿಕೊಂಡು ತಾಯಿಯ ಮಾರ್ಗದರ್ಶನದೊಂದಿಗೆ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು ಭವಿಷ್ಯದಲ್ಲಿ ಮಹಾನ್ ವಿಜ್ಞಾನಿಯಾದರು.  ವಿದ್ಯುತ್ ಬಲ್ಬ,ಮೋಷನ್ ಪಿಕ್ಚರ್ ಕ್ಯಾಮೆರಾ,ಫೋನೋಗ್ರಾಫ್ ನಂತಹ ಉಪಕರಣಗಳನ್ನು ಸಂಶೋಧಿಸಿದರು.

ತಾಯಿಯ ಮರಣಾನಂತರ ಒಂದು ದಿನ ನೆಲಮಾಳಿಗೆಗೆ ಹೋಗಿ ತಾನು ಚಿಕ್ಕವನಿದ್ದಾಗ ಪ್ರಯೋಗ ಮಾಡುತ್ತಿದ್ದ ಸ್ಥಳದಲ್ಲಿರುವ ಒಂದು ಕಬ್ಬಿಣದ ಪೆಟ್ಟಿಗೆಯನ್ನು ಕಂಡು ತೆರೆದು ನೋಡಿದಾಗ ತನ್ನ ಶಿಕ್ಷಕಿ ನೀಡಿದ ಚೀಟಿ ನೋಡಿ  ಅದನ್ನು ಬಿಡಿಸಿ ಓದಿದಾಗ ಕಣ್ಣಂಚಲಿ ನೀರಾಡಿತು. ಆ ಚೀಟಿಯಲ್ಲಿ ಬರೆದ ವಿಷಯವೇನೆಂದರೆ”ನಿಮ್ಮ ಮಗ ತುಂಬಾ ದಡ್ಡ ನಮ್ಮಿಂದ ಅವನಿಗೆ ಕಲಿಸಲಾಗುವದಿಲ್ಲ ದಯವಿಟ್ಟುನಾಳೆಯಿಂದ  ಶಾಲೆಗೆ ಕಳಿಸಬೇಡಿ”ಎಂದು ಬರೆದಿತ್ತು. ತಾಯಿ ಹೇಳಿದ ಒಂದೇ ಒಂದು ಸುಳ್ಳು ಇವತ್ತು ಅವರನ್ನು ಒಬ್ಬ ವಿಜ್ಞಾನಿಯಾಗಲು ಕಾರಣವಾಗಿತ್ತು, ಹೀಗೆ ಮಕ್ಕಳ ಮನವರಿತು ಅವರ ಆಸಕ್ತಿಯನುಸಾರ ಸಕಾರಾತ್ಮಕವಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಪಾಲಕರಿಗಿದೆ.ಮಕ್ಕಳ ಕಲಿಕೆಯ ಪ್ರಗತಿ ತಿಳಿಯಲು ಅವರ ಶಿಕ್ಷಕರೊಂದಿಗೂ ಕೂಡ ಸಮಾಲೋಚನೆ ಮಾಡಬೇಕಿದೆ.

ಮಕ್ಕಳು ಕಷ್ಟ ಪಟ್ಟು ಒತ್ತಾಯ ಮಾಡಿ ಕಲಿಯುವಂತಾಗದೇ ಇಷ್ಟಪಟ್ಟು ಕಲಿಯುವಂತೆ ಮಾಡುವಲ್ಲಿ  ಪಾಲಕರಾದ ನಮ್ಮ ಪಾತ್ರ ಮಹತ್ತರವಾಗಿದೆ ಇದರ ಜೊತೆಗೆ ಮಕ್ಕಳ ಸಹವಾಸ ಬಗ್ಗೆ ಕೂಡ ಗಮನ ಹರಿಸಬೇಕಿದೆ.”ಗಿಡವಾಗೌ ಬಗ್ಗದ್ದು ಮರವಾಗಿ ಬಗ್ಗೀತೆ?”ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಆರಂಭದ ಹಂತದಿಂದಲೇ ಅವರ  ತಪ್ಪನ್ನು ತಿದ್ದಬೇಕಿದೆ. ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ.ಮನೆಯ ಪರಿಸರ ,ಸಂಸ್ಕಾರಗಳು ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.ಮೊಬೈಲ್ ಹಾಗೂ ಟಿ.ವಿ ಇವುಗಳ ಬಳಕೆ ಅತಿಯಾಗದಿರಲಿ.ವಾರದಲ್ಲಿ ಒಮ್ಮೆಯಾದರೂ ಮಕ್ಕಳೊಂದಿಗೆ ಬೆರೆತು ಅವರ ಅಭಿರುಚಿಯ ಹೊಳಹುಗಳು ಅವರ ಕಣ್ಣಂಚಿನ ತೇಜಸ್ಸಿನಂತೆ ಅವರ ಉಜ್ವಲ ಭವಿಷ್ಯದ ಕನಸ ಗುರಿಯಾಗಿ ನನಸಾಗಿಸಲು‌ ನಮ್ಮ ಹೊಣೆಗಾರಿಕೆಯನ್ನು ನಾವು ಪ್ರಾಂಜಲ ಮನದಿಂದ ಸಿದ್ದವಾದ ಬದ್ಧತೆಯನ್ನು ನಮ್ಮ ಕರ್ತವ್ಯವನ್ನಾಗಿಸುತ್ತದೆ.

ಡಾ.ಅಬ್ದುಲ್ ಕಲಾಂ ಅವರು ಹೇಳುವಂತೆ”ಮಕ್ಕಳ ಮನಸ್ಸು ಅತ್ಯಂತ ಪರಿಶುದ್ಧ ಮತ್ತು ಅಲ್ಲಿ ಒಡಕು ಹುಟ್ಟಿಸುವ ಪ್ರವೃತ್ತಿ ಇಲ್ಲ,ಅಂತಹ ಮನಸ್ಸುಗಳು ಪೂರ್ಣವಾಗಿ ಅರಳಲು ನಾವು ನೆರವು ನೀಡಬೇಕು”ಎಂಬ ಮಾತಿನಂತೆ ಮಕ್ಕಳೆಮಗೆ ಬದುಕು ಎಂಬ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಸ್ತಿಮಾಡದೇ ಶಿಕ್ಷಣ ನೀಡಿ ಮಕ್ಕಳನ್ನೆ ಆಸ್ತಿ ಮಾಡೋಣ ಅಲ್ಲವೇ?


ಬಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ.

13 thoughts on “

  1. ತುಂಬಾ ಚೆನ್ನಾಗಿದೆ .. ನಿಜಕ್ಕೂ ಪಾಲಕರ ಮನ ಓರೆಗಾನ್.

  2. ತುಂಬಾ ಚೆನ್ನಾಗಿದೆ .. ನಿಜಕ್ಕೂ ಪಾಲಕರ ಮನ ಓರೆಗಚ್ಚುವುದಿದಾಗಿದೆ

  3. ತುಂಬಾ ತುಂಬಾ ಮನಸ್ಸಿಗೆ ಮುಟ್ಟುವ ಲೇಖನ ಇನ್ನೂ ಇನ್ನೂ ಇಂತಹ ಬರಹಗಳು ಮೂಡಿ ಬರಲಿ ಅಭಿನಂದನೆಗಳು ಟೀಚರ್

  4. ಪಾಲಕರ ಆಶಯವನ್ನು ಒತ್ತಡ ವಾಗಿಸದೇ ಮಕ್ಕಳ ಭಾವನೆ ವ್ಯಕತೆಗೆ ಪೂರಕವಾದ ಪ್ರೋತ್ಸಾಹ ತುಂಬಾ ಚೆನ್ನಾಗಿ ಮೂಡಿಬಂದಿದೆ ಅಭಿನಂದನೆಗಳು

Leave a Reply

Back To Top