ವಿನಯಚಂದ್ರ ಕವಿತೆ-ಊರುಗೋಲುಗಳು ಬೇಕು

ಕಾವ್ಯ ಸಂಗಾತಿ

ಊರುಗೋಲುಗಳು ಬೇಕು

ವಿನಯಚಂದ್

ಬೆನ್ನು ಬಾಗುವಾಗ ಮಾತ್ರವಲ್ಲ
ಜೊತೆಯಲಿದ್ದವರು ಒದ್ದು ಹೋದಾಗಲೂ ಎದ್ದು
ಸಂಭಾಳಿಸಿಕೊಂಡು ನಿಲ್ಲುವುದಕ್ಕಾದರೂ
ಊರುಗೋಲುಗಳು ಬೇಕು

ಗೆದ್ದಾಗಲೆಲ್ಲ ಉಘೇ ಎನುವ ಹೊಗಳುಭಟರು
ಸೋತಾಗ ಸದ್ದಿಲ್ಲದೆ ಸರಿದು ಮರೆಯಾಗುವಾಗ
ಛಲಬಿಡದೆ ಮತ್ತೆದ್ದು ನಿಲ್ಲಲಿಕ್ಕಾದರೂ
ಊರುಗೋಲುಗಳು ಬೇಕು

ರಸವತ್ತಾಗಿದ್ದಾಗ ಅಪ್ಪಿಹಿಡಿದು ಹೀರಿ
ಒಣಗುವಂತಾದ ಬಿಟ್ಟು ಪರರನಾಶ್ರಯಿಸುವ
ಪುಷ್ಟ ಬಳ್ಳಿ ಬಂದಳಿಕೆಗಳ ಮರೆತು
ಮತ್ತೆ ಬೇರ ಚಿಗುರಿಸುವಾಗಲಾದರೂ
ಊರುಗೋಲುಗಳು ಬೇಕು

ಹೂ ಬಿಡದಿದ್ದರೂ ಹಣ್ಣ ಕೊಡದಿದ್ದರೂ
ನೆರಳ ನೀಡಿ ಸಾಂತ್ವನಿಸದಿದ್ದರೂ ಬುಡಕೆ
ಸಿಹಿನೀರ ಸುರಿವ ಒಲವ
ಊರುಗೋಲುಗಳು ಬೇಕು


ವಿನಯಚಂದ್ರ

One thought on “ವಿನಯಚಂದ್ರ ಕವಿತೆ-ಊರುಗೋಲುಗಳು ಬೇಕು

Leave a Reply

Back To Top