ಪರಿಚಯ
ಸಿದ್ಧರಾಮ ಹೊನ್ಕಲ್
ಈ ಅಲೆಮಾರಿ ಅವಧೂತನ ಒಲಿದಂತೆ ಹಾಡಿರುವೆ
ಈ ಅಲೆಮಾರಿ ಅವಧೂತನ ಒಲಿದಂತೆ ಹಾಡಿರುವೆ…
ಕಲ್ಯಾಣ ಕರ್ನಾಟಕ ಪ್ರದೇಶದ ಅಪರೂಪದ ಹಿರಿಯ ಸಾಹಿತಿ.ಕಥೆ,ಕವಿತೆ,ಲಲಿತ ಪ್ರಬಂಧ, ಶರಣ ಸಾಹಿತ್ಯ,ಪ್ರವಾಸ ಕಥನ,ಜೀವನ ಕಥನ, ಹಾಯ್ಕು,ಗಜಲ್,ಶಾಯಿರಿ,ಹೊನ್ನುಡಿಗಳು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಮೃದ್ಧ ಫಸಲು ತೆಗೆದು ಓದುಗರ ಮನ ಗೆದ್ದವರು ಸಿದ್ಧರಾಮ ಹೊನ್ಕಲ್ ಅವರು.ಕಡಣಿಯ ಬೆರಗು ಪ್ರಕಾಶನವು ಹಿರಿಯ ಸಾಹಿತಿ ಹೊನ್ಕಲ್ ಅವರ ನೂರೂಂದು ಸಾಹಿತ್ಯ ಕೃತಿಗಳ ಅವಲೋಕನ ಸಂಕಲನಒಲಿದಂತೆ ಹಾಡಿರುವೆ.. ಇತ್ತೀಚಿಗೆ ಪ್ರಕಟಿಸಿದೆ.
320 ರೂ ಮುಖಬೆಲೆಯ 328 ಪುಟಗಳ ಬೃಹತ್ ಅಪರೂಪದ ಚೆಂದನೆಯ ಸಂಕಲನವಿದು.ಅವರು ಆಸಕ್ತರಿಗಾಗಿ ಕೇವಲ ರೂ.200/-ದಲ್ಲಿ ಪ್ರಕಾಶಕರಿಂದ ಖರೀದಿಸಿ ಕಳಿಸಿದ್ದಾರೆ..
ಹುದ್ದೆಯಿಂದ ಸಮಾಜ ಶಾಸ್ತ್ರ ಬೋಧಕರಾಗಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದುಪೃವೃತ್ತಿಯಿಂದ ಕನ್ನಡಮ್ಮನ ನುಡಿ ಪರಿಚಾರಕರಾಗಿ 57 ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
ಶ್ರೀ ಅಲ್ಲಮಪ್ರಭು ಪ್ರಕಾಶನದ ಜೊತೆ ಜೊತೆಗೆ ಶ್ರೀ ಹೊನ್ಕಲ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಹೊಸ ಹಾಗೂ ಪ್ರತಿಭಾವಂತ ಹಿರಿ ಕಿರಿಯ ಲೇಖಕರಿಗೆ ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಿಕೊಡುವುದು ಅವರ ಉದ್ದೇಶ.
ಗಾಲೀಬ್, ಲಂಕೇಶ್, ಸುರಪುರದ ರಾಜಾ ವೆಂಕಟಪ್ಪ ನಾಯಕ, ಸುರಪುರದ ರಾಣಿ ಈಶ್ವರಮ್ಮ,ಅಬ್ಬಾಸ್ ಮೇಲಿನಮನಿ, ಪ್ರೊ.ಎಚ್ ಟಿ ಪೋತೆ, ನಾಲವಾರ್ ಕೋರಿ ಸಿದ್ದೇಶ್ವರ ಶ್ರೀ, ಶ್ರೀ ಆರ್ ಟಿ ವಿಠ್ಠಲ್ ಮೂರ್ತಿ, ಡಾ.ಕಾಶೀನಾಥ ಅಂಬಲಗಿ, ಮೊಗಲ್ ಸಾಮ್ರಾಟ್ ಕೊನೆಯ ಬಾದಶಾಹ್ ಬಹಾದ್ದೂರ್ ಜಫರ್ ಮುಂತಾದವರ ಬದುಕು, ಬರವಣಿಗೆಯ ನಿಜ ದರ್ಶನವಾಗುತ್ತದೆ ಈ ಕೃತಿಯಲ್ಲಿ.ಗಜಲ್ ಸಾಹಿತ್ಯ, ಹಾಯ್ಕು ಸಾಹಿತ್ಯ, ಶಾಯರಿ, ಕಥೆ, ಕವಿತೆ, ಕಾದಂಬರಿ ಹೀಗೆ ಅನೇಕ ಹಿರಿ ಕಿರಿಯ ಸಾಹಿತಿಗಳ ಕೃತಿಗಳು ಹೊನ್ಕಲ್ ಅವರ ಈ ಕೃತಿಯ ಅವಲೋಕನಕ್ಕೆ ದಕ್ಕಿವೆ.
Siddarama Honnkal ಅವರು ತಮ್ಮ ಈ ಬರವಣಿಗೆಯಲ್ಲಿ ಹಿರಿಯರಿಗೆ, ಮತ್ತು ತಮಗೆ ಬೇಕಾದವರಿಗೆ ಹೊಗಳಿ ಹೊನ್ನ ಶೂಲಕ್ಕೆ ಏರಿಸುವ,ಬೇಡವಾದವರಿಗೆ ಹೊಸಕಿ ಹಾಕುವ ಅಥವಾ ಪೂರ್ವಗೃಹ ಪೀಡಿತರಾಗಿ, ಹಳದಿ ಕನ್ನಡಕದ ಕಣ್ಣಿಂದ ನೋಡುವ ಕ್ರಿಯೆ ಅವರೆಂದು ಮಾಡಿಲ್ಲ.ಒಬ್ಬ ಅನುಭವಿ ಹಿರಿಯ ಬರಹಗಾರ ತಮಗೆ ಪ್ರಾಮಾಣಿಕವಾಗಿ ಓದಿಗೆ ದಕ್ಕಿದ್ದನ್ನು ನಿಷ್ಠೆಯಿಂದ ಬರೆದು ಈ 101 ಬರಹಗಳ ಮೂಲಕ ಬಹುತೇಕ ಎಲ್ಲಾ ಲೇಖಕರಿಗೆ ಪ್ರೋತ್ಸಾಹಿಸಿದ ರೀತಿಗೆ ಬೆರಗಾಗಿದ್ದೇನೆ.
ಸಂಕಲನದ ಶೀರ್ಷಿಕೆ ಸೂಚಿಸುವಂತೆ ಒಲಿದಂತೆ ಹಾಡಿದ್ದು ಸತ್ಯ,. ಒಳಿತಿಗಾಗಿ ತುಡಿದಿದ್ದು ಸತ್ಯ.ಹರಿತವಾದ ಸಾಣಿ ಹಿಡಿದುಕೊಂಡು ಹಿಗ್ಗಾ ಮುಗ್ಗಾ ಬರೆದಿಲ್ಲ, ಜಡ ವಿಮರ್ಶೆಯ ಪರಿಭಾಷೆ ದೂರಿಕರಿಸಿ ನೊರೊಂದು ಕೃತಿಗಳನ್ನು ಓದುವಂತೆ, ಕುತೂಹಲ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ತಮಗೆ ಸಿಕ್ಕ ಪುಸ್ತಕಗಳನ್ನು ಪ್ರಾಮಾಣಿಕವಾಗಿ ಓದಿ,ಲೇಖಕರಿಗೆ ತಿಳಿಸಿ,ಮತ್ತೊಬ್ಬರು ಓದುವಂತೆ ಪ್ರೇರಣೆ ನೀಡಲು ತುಡಿಯುವ ಸಿದ್ಧರಾಮ ಸರ್ ಅವರ ವಿಶಾಲ ಹೃದಯಕ್ಕೆ ಸಲಾಂ ಹೇಳಲೇ ಬೇಕು.
ಖಾಲಿ ಕೋಣೆಯ ಹುಡುಗನ,
ಮೌನ ಮಾತಿನಲ್ಲಿ,
ಚಿಮಣಿ ಬೆಳಕಲ್ಲಿ ನಕ್ಷತ್ರ ಹುಡುಕಿ
ಭೀಮಾ ತೀರದ ಕಂಪು
ಗರೀಬನ ಜೋಳಿಗೆಗೆ ಬಿರಿಯಾನಿ ಹಾಕಿ
ಅಮೃತ ಸಿಂಚನ ಉಣಬಡಿಸುವ ಪರಿಗೆ ನಾನು ಬೆರಗಾಗಿದ್ದೇನೆ
ಆತ್ಮಧ್ಯಾನದ ನಾದದಲ್ಲಿ..
ಪ್ರಣತಿಯ ಬೆಳಕಿನಲ್ಲಿ..
ಬೆಳ್ಳಕ್ಕಿ ಸಾಲುಗಳಲ್ಲಿ…
ಮಡಿಲ ಮುತ್ತುಗಳನ್ನು ಹುಡುಕುವ..
ನಾದ ನೀನಾದದಲ್ಲಿ ಮೈ ಮರೆಯುವ..
ಅವರ ಕುತೂಹಲ ಹುಟ್ಟಿಸುವ ಈ ನೂರೊಂದು ಬರಹಕ್ಕೆ ಶಬ್ಬಾಸ್ ಹೇಳಲೇ ಬೇಕು
ಮೂರನೇ ಕಣ್ಣಲ್ಲೂ
ನಿಜ ದರ್ಶನವಿದೆ
ಬಯಲಲಿ ಬಯಲಾಗಲು
ಕರೆವ ಕರೆ ಆಲಿಸಬೇಕಿದೆ,
ಅಕ್ಕಡಿಸಾಲಲ್ಲಿ ಹೆಜ್ಜೆ ಹಾಕಿ
ಅಂತರಂಗದ ಮೃದಂಗ ಮೀಟಿಸಿಕೊಂಡು
ಈ ಬದುಕು ನಿನಗಾಗಿ ಎಂದು ಉಸುರುವ
ಈ ಅಲೆಮಾರಿ ಅವಧೂತನಿಗೆ..
ಸಾರಸ್ವತಲೋಕ ಖಂಡಿತ ಅಭಾರಿ ಹೇಳಬೇಕಿದೆ.ಎಲ್ಲರೂ ಈ ಕೃತಿ ಓದಿ ಕಾದಿಡುವಂತಿದೆ.ಇದೊಂದು ಆಕರ ಗ್ರಂಥವೇ ಆಗಿರೋದಂತೂ ಸತ್ಯ.
ಎ ಎಸ್. ಮಕಾನದಾರ
Vivarane chennagide sir
Abhinandanegalu tamage