ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚಿದಂಬರ ರಹಸ್ಯ

ಚಂದ್ರಶೇಖರ ಹೆಗಡೆ

ಮೋಹವನ್ನೇಕೆ ಶಸ್ತ್ರವನ್ನಾಗಿಸುವೆ ಅರಿದು ಇರಿಯಬಾರದೇ ಹೃದಯ
ಪರವಶನಾಗಿಬಿಡುವೆ ಉಸಿರಲ್ಲಿಯೇ
ನೀನೆಂದೆಂದಿಗೂ ಮಾಯದ ಗಾಯ

ಸನ್ನೆಯಲ್ಲೇಕೆ ಬೀಸುವೆ ಕಂಗಳ ಗತ್ತಿ
ಶರಣಾಗಿರುವೆನಲ್ಲ ಅಲಂಕಾರವನ್ನೆಲ್ಲ ಕಳಚಿ
ಹಾದಿಯೆಲ್ಲಿದೆ ಹಿಡಿ ಒಲವಿನ ಹಿಲಾಲು
ಹಿಂಬಾಲಿಸುವೆ ಕಾಮನಬಿಲ್ಲಾಗಿ ಬಣ್ಣಗಳ ಚಾಚಿ

ಮನವಿಲ್ಲದಿದ್ದರೂ ಕಾಡುವೆಯೇಕೆ ಮಾಯೆ
ಸಾಕು ಬಾಳಿಗೊಂದು ಭಾವಗೀತೆಯ ಛಾಯೆ
ತೀರದಲ್ಲಿಯೇ ಕುಪ್ಪಳಿಸಿ ಕುಣಿದು ಹಾಡು
ನಿನ್ನ ಗಾಳಿಯ ಗಾಳಕ್ಕೆ ಮೀನಾಗದಂತೆ ಕಾಯೆ

ಎತ್ತ‌ ನೋಡಿದರತ್ತ ಅನುರಾಗದ ಅಲೆ
ಅದಾವ ರೂಪದಲ್ಲಿಹುದೋ ಬೀಸಿದ ಬಲೆ
ಗೊತ್ತಿಲ್ಲ ನಾಳೆ ಎಲ್ಲಿದೆಯೋ ಮೂಲದೆಳೆ
ಏನಾದರಾಗಲಿ ಈ ಒಲವೊಂದು ನಿಗೂಢವಾದ ಕಲೆ

ಅಣಕಿಸುವುದೇಕೆ ನೀ ಮುಡಿದ ಮಲ್ಲಿಗೆ
ಅದೆಷ್ಟು ಬಾಣಗಳೋ; ಬರಿದಾಗದ ಬತ್ತಳಿಕೆ
ಕಾರುಣ್ಯವರಸಿ ದೂರ ಹಾರಿಬಿಡಿ ರೆಕ್ಕೆಗಳೇ
ಕೊರಳಲ್ಲಿ ಉಳಿದಿರುವುದೊಂದೇ ಬಿಕ್ಕಳಿಕೆ


About The Author

Leave a Reply

You cannot copy content of this page

Scroll to Top