ವಾಣಿ ಭಂಡಾರಿಯವರಹೊಸ ಕವಿತೆ-ಕೇಳುತ್ತಿಲ್ಲ‌ ನನ್ನ ಮಾತನು

ಕಾವ್ಯ ಸಂಗಾತಿ

ಕೇಳುತ್ತಿಲ್ಲ‌ ನನ್ನ ಮಾತನು

ವಾಣಿ ಭಂಡಾರಿ

ಈ ಕಣ್ಣೀರುಗಳು ಕೇಳುತ್ತಲೇ
ಇಲ್ಲ ನನ್ನ ಮಾತನು,,,
ಉರುಳುರುಳಿ ಜಾರುತಲೇ ಇವೆ
ಕೆನ್ನೆಯಂಗಳದಲಿ ನರ್ತನ
ಇವುಗಳದೆ ಕಾರುಬಾರು
ಲೀಲಾಜಾಲವಾಗಿ ಓಡೋಡಿ
ದಡ‌ಮುಟ್ಟಲು ಅದೆಷ್ಟು ‌
ಆತುರ ತವಕ ತಲ್ಲಣ
ಕಣ್ಣಿಗೂ ಕೆನ್ನೆಗೂ ಉಕ್ಕಿ
ಕೋಡಿ ಹಾಕಿವೆ ಕಂಬನಿ.

ಕಣ್ಣ ಕನ್ನಡಿಯಲಿ
ಪ್ರತಿಬಿಂಬವೆ ಮಸುಕು
ಎದೆಯ ಒಳಗಿನ ನೋವಿಗೆ
ಆಗಾಗ ಹೆರಿಗೆಯ ತ್ರಾಸ
ಜಾರುವ ನೀರಿಗೆ
ಯಾರ ಹಂಗಿಲ್ಲ
ವ್ಯಥೆಯ ಕಥೆ ನಿಗೂಢ
ಕೇಳುವ ಕಿವಿಗಳಿರದೆ
ಜಾರುಬಂಡಿ ಆಡುವಂತೆ
ಮೈಮೇಲೆಲ್ಲ ಒಂದೆ ಸಮನೆ
ಆಡುತ್ತಲೆ ಇವೆ ಪನ್ನಿರಾಗದೆ.

ಮತ್ತದೇ ಬೇಗುದಿಯ ಆಲಾಪ
ಹದಗೆಟ್ಟ ಮನಸರೋವರ
ಕಂಡು ತಳಮಳಿಸೊ ಬುದ್ದಿ
ಹೇಳದೆ ಕೇಳದೆ ಗತ ಕೆದಕಿ
ಕದಡಿ ರಾಡಿ ನೋಡಿಯೂ
ನೋಡದಂತ ಗಾಂದಾರಿಯಂತೆ
ಬುದ್ದಿ ತೆಪ್ಪಗಿದೆ ಮುಪ್ಪಂತಾಗಿ.

ಕೊಂಗಾಟ ಆಡಿ ಅಳಿಸಿ ಬೀಳಿಸಿ
ಸಮಾಧಾನಿಸಿ ಧ್ಯಾನಿಸಿ
ತುಂಬಿದ ಕಂಬನಿ ಹೊಳೆ
ಸಾಗರ ಸೇರಿಸೊವರಗೂ
ನಿಲ್ಲದ ಮನದ ಆರ್ಭಟ.
ಅಡೆತಡೆ ದೋಚಿ ಹೊತ್ತ್ಯೊಯ್ದು
ಮುಕ್ತಿ ನೀಡಲು ಮತ್ತದೆ
ಶಾಂತ ಗಂಭೀರ ಸಾಗರ
ಮನದ ಭಾವ.
ಒಳಗೊಳಗೆ ಏರಿಳಿತವಿದ್ದರೂ
ಉಬ್ಬರ ಅಬ್ಬರವಿದ್ದರೂ
ದೂರದ ಕಣ್ಣಿಗೆ ಶಾಂತ.


Leave a Reply

Back To Top