ಬೇಲಿ-ಶಿ ಕಾ ಬಡಿಗೇರ, ಕೊಪ್ಪಳ

ಕಾವ್ಯ ಸಂಗಾತಿ

ಬೇಲಿ

ಶಿ ಕಾ ಬಡಿಗೇರ, ಕೊಪ್ಪಳ

ತೇವಗೊಂಡ ಕಣ್ಣುಗಳಲಿ
ಅದೇ ಪ್ರೀತಿಯ ಕಾಮನಬಿಲ್ಲು;
ಹಾಕಿದ ಬೇಲಿ ಎಷ್ಟು ದಿನ ?
ತುಂಬಿದ ಕೆರೆ ತುಳುಕಿ ಹರಿದಿಲ್ಲವೆ?

ಮೊಗ್ಗು ಮೌನ ಮುರಿದ ಹೊತ್ತು
ಸುತ್ತ ಪರಿಮಳದ ಝಲಕ್
ರೆಕ್ಕೆ ಬಲಿಯುವುದೇ ತಡ ಮರಿ ಹಕ್ಕಿಗೆ
ಮುಗಿಲು ಕುಕ್ಕುವ ಚಪಲ

ಜೇನು ಹನಿಯಲಿ ಬೇವಿನ ಕಹಿ
ಅನ್ನುವರ ವಾದಕೆ ನಾನು ತಲೆ
ತೂಗುವುದಿಲ್ಲ; ಪ್ರೀತಿಗೊಂದೇ ಜಾತಿ
ಎಲ್ಲಾ ಧರ್ಮದ ಸಾರವೂ…

ಇರುವ ಒಬ್ಬಳೆ ಧರಣಿಗೆ ದಿನಕರನದೇ ಬೆಳಕು
ಬೀಸುವ ಗಾಳಿಯೂ ಅಷ್ಟೇ! ನೀರು ನಿಂತರೆ
ನಾತ ಸಹಜ ; ಮನಸು ಬಲಿತರೇನೇ
ಪ್ರೀತಿಯ ಅರ್ಥ ಮೊಳಕೆ ಒಡೆದೀತು

ಬಾ ಗೆಳತಿ ಕಾಮನ ಬಿಲ್ಲಿನ ಬಣ್ಣಗಳಲಿ
ಒಟ್ಟಿಗೇ ಮಿಯ್ಯೋಣ; ಬೇಲಿ ಹಾರಿದರೆ
ಆಕಾಶ ಎಂದೂ ಕೈ ಬಿಡದು


Leave a Reply

Back To Top