ಡಾ.ಸುರೇಖಾ ರಾಠೋಡ್-ಕವಿತೆ-ಹೇಳಲಾಗದ ಪ್ರೀತಿ

ಕಾವ್ಯ ಸಂಗಾತಿ

ಡಾ.ಸುರೇಖಾ ರಾಠೋಡ್

ಹೇಳಲಾಗದ ಪ್ರೀತಿ

ಇಪ್ಪತ್ತು ವರ್ಷ,
ಹೆಂಡತಿ, ಮಕ್ಕಳುನ್ನು ಬಿಟ್ಟು,
ದೇಶ ತೊರೆದ;
ವಿದೇಶದಲ್ಲಿ ಹಗಲು, ರಾತ್ರಿ,
ಲಾರಿ ಓಡಿಸಿದ

ತನ್ನವರೆಲ್ಲರೂ ಸುಖವಾಗಿರಲೆಂದು,
ದುಡಿದು ದುಡಿದು ಹಣ ಕಳುಹಿಸಿದ ನಮ್ಮಪ್ಪ,
ನಮ್ಮನ್ನು
ಪ್ರೀತಿಸಲೇ ಇಲ್ಲ ಎಂದೆನಿಸುವುದು

ಮಕ್ಕಳು ಓದಿ ಬರೆದು
ದೊಡ್ಡ ದೊಡ್ಡ
ಹುದ್ದೆ ಅಲಂಕರಿಸಿ,
ತಂದೆಯ ಹೆಸರು
ಜಗತುಂಬಾ ಹಬ್ಬಿಸಲೆಂದು
ಹಣ ಕೇಳಿದಾಗೊಮ್ಮೆ
ಹಿಂದು ಮುಂದು ನೋಡದೇ
ಲೆಕ್ಕ ಕೇಳದೆ
ಮಕ್ಕಳು ಸುಖವಾಗಿರಲೆಂದು
ದಡಿದು ದುಡಿದು ಹಣ ಕಳುಹಿಸಿದ
ಆದರೆ
ನಮ್ಮಪ್ಪ
ನಮ್ಮನ್ನು
ಪ್ರೀತಿಸಲೇ ಇಲ್ಲ ಎಂದೆನಿಸುವುದು

ದೈಹಿಕ ಆರೋಗ್ಯ ಹದಗೆಟ್ಟು
ನಡು ನರದ ಶಸ್ತ್ರಿಕಿತ್ಸಗೆ ಒಳಪಟ್ಟು,
ಚಿಕಿತ್ಸೆ ಪೂರ್ಣ ಫಲಿಸದೆ
ಸೊಂಟ ಕಟ್ಟಿಕೊಂಡು
ಕಷ್ಟ, ನಷ್ಟ, ನೋವು ನಲಿವು ಲೆಕ್ಕಿಸಿದೆ,
ಮತ್ತೆ ದುಡಿಯಲು ವಿದೇಶಕ್ಕೆ ಹಾರಿದ,
ನಮ್ಮಪ್ಪ,
ನಮ್ಮನ್ನು
ಪ್ರೀತಿಸಲೇ ಇಲ್ಲ ಎಂದೆನಿಸುವುದು

ಇಳಿ ವಯಸ್ಸಿನ ನಮ್ಮಪ್ಪ
ತಾನೂ ಮುಂದೆ ಇಲ್ಲದಿದ್ದರೂ
ಎಲ್ಲಾ ಮಕ್ಕಳು ಚೆನ್ನಾಗಿರಲೆಂದು
ಹೊಲ, ಮನೆ ಆಸ್ತಿಗಳಿಸಿ,
ಉಸ್ತುವಾರಿ ವಹಿಸಿಕೊಂಡಿರುವನು,
ಮಕ್ಕಳು ದೊಡ್ಡವರಾಗಿ
ತಮ್ಮ ಸಂಸಾರದಲ್ಲಿ,
ಚಳಿಯಲ್ಲಿ ಬೆಚ್ಚಗೆ ಹೊದ್ದುಕೊಂಡು,
ಬೇಸಿಗೆಯಲ್ಲಿ ಫ್ಯಾನಿನ ತಣ್ಣನೆಯ ಗಾಳಿಯಲ್ಲಿ
ಮಳೆಯಲ್ಲಿ ಮನೆಯಲ್ಲಿದ್ದರೆ,
ಇಳಿ ವಯಸ್ಸಿನ ನಮ್ಮಪ್ಪ
ಈಗಲೂ ,
ಹೊಲದಲ್ಲಿ ದುಡಿಯುತ್ತಿರುವನು..
ಆದರೂ
ನಮ್ಮಪ್ಪ,
ನಮ್ಮನ್ನು
ಪ್ರೀತಿಸಲೇ ಇಲ್ಲ ಎಂದೆನಿಸುವುದು

ಮಕ್ಕಳು ದಾರಿ ತಪ್ಪಬಾರದೆಂದು,
ಸನ್ನಡತೆ, ಸದ್ಗುಣಗಳ
ನಡೆ ನಡೆಯಲೆಂದು,
ಸಿಟ್ಟು ಮಾಡಿ ಬೈದು ,
ಒಳಗೊಳಗೆ ತನ್ನೊಳಗೇ ಕೊರಗುವನು,
ನಮ್ಮಪ್ಪ,
ನಮ್ಮನ್ನು
ಪ್ರೀತಿಸಲೇ ಇಲ್ಲ ಎಂದೆನಿಸುವುದು..


9 thoughts on “ಡಾ.ಸುರೇಖಾ ರಾಠೋಡ್-ಕವಿತೆ-ಹೇಳಲಾಗದ ಪ್ರೀತಿ

  1. ತುಂಬಾ ಭಾವಪೂರ್ಣ ಹಾಗೂ ಅಥ೯ಗಭಿ೯ತ ಕವಿತೆ ಬರೆದಿದ್ದಿರಿ ಮೆಡಂ ಶುಭವಾಗಲಿ
    ನಾರಾಯಣ ರಾಠೋಡ ಉಪನ್ಯಾಸಕರು

  2. ಕಥೆ ಹೇಳುವ ಕವಿತೆ.. ಅಪ್ಪನ ಅಕ್ಕರೆ, ಮಮಕಾರ, ಕಾಳಜಿಯನ್ನು ತೋರಿಸುವ ಅಪ್ಪನಂತಾ ಕವಿತೆ..

Leave a Reply

Back To Top