ಶಿ ಕಾ ಬಡಿಗೇರ ಕವಿತೆ-ಗೋಡೆ

ಕಾವ್ಯ ಸಂಗಾತಿ

ಗೋಡೆ

ಶಿ ಕಾ ಬಡಿಗೇರ

ಗೋಡೆ ಕಟ್ಟಿಕೊಂಡರೂ ಗೋರಿ
ಸೇರುವುದು ತಪ್ಪಿದ್ದಲ್ಲ ಬಿಡಿ
ಮನುಷ್ಯರಾದ ನಿಮಗೆ ನನ್ನ ಕಲ್ಪನೆ
ಹೇಗೇ ಮೂಡಿತೋ ಏನೋ…

ಧರೆ ಹುಟ್ಟಿದ ಹೊತ್ತಿಗೆ ನನ್ನ
ಹುಟ್ಟು ಇರಲಿಲ್ಲ ; ನೀವು ನಾಗರಿಕತೆ
ಅಂದುಕೊಂಡಿರಲ್ಲ ಆಗಲೇ ನೋಡಿ
ನಾನು ಹಾದರಕ ಹುಟ್ಟಿದ್ದು…

ಮನೆ ಕಟ್ಟಿಕೊಂಡಿರಿ ಸರಿಬಿಡಿ
ಬೆಚ್ಚಗಾದರೂ ಬಾಳುತ್ತೀರಿ,
ನೆರೆ ಮನೆಯವರ ನೆರಳೂ
ಬೇಡವೆಂದು ನನ್ನ ಸೃಷ್ಟಿಸುತ್ತೀರಿ
ನನಗೆ ತಡೆಯಲಾಗದ ನಗು…

ಮಹಾಗೋಡೆ ಕಟ್ಟಿ ದೇಶದ
ಗಡಿ ಅಂದಿರಿ; ನಿಮ್ಮ ನಿಮ್ಮೊಳಗೆ
ಅಂತರ ಹುಟ್ಟಿಸಿಕೊಂಡು ನನ್ನ
ಮಾನ ಹರಾಜು ಹಾಕುತ್ತೀರಿ
ಛೆ! ನಿಮ್ಮ ಜನ್ಮಕ್ಕಿಷ್ಟು..!

ಸಾಗರದೊಳಗೂ ನನ್ನ ಹುಟ್ಟಿಸಿ
ಅಲ್ಲಿಯೂ ಗಡಿ ಹಾಕಿಕೊಂಡಿದ್ದೀರಿ
ಇನ್ನು ಆಕಾಶ! ಅದೂ ನನಗೆ ಹೊರತಲ್ಲ
ಅಯ್ಯೋ ! ದೇವರೆ ! ನಿನ್ನನ್ನೂ ಬಿಡದ
ಈ ಜನ ನನ್ನ ಹೇಗೆ ಬಿಟ್ಟಾರು…

ಜಾತಿ, ಧರ್ಮಕೂ ನನ್ನ ನಡುವೆ ತರುತ್ತೀರಿ
ಹೆಣ್ಣು ಗಂಡಿನ ಮಧ್ಯೆಯೂ ನನ್ನದೇ ಪಾತ್ರ
ಸೃಷ್ಟಿ ಮಾಡುತ್ತೀರಿ…

ಪಕ್ಷಿ, ಪ್ರಾಣಿ; ಕ್ರಿಮಿ- ಕೀಟಗಳ
ಬದುಕಿನಲಿ ನಾನಿಲ್ಲ ಹಾಗಾಗಿ
ಅಲ್ಲಿ ಅಶಾಂತಿ, ಕಲಹಗಳಿಲ್ಲ;
ನಾನಿದ್ದ ಕಡೆ ಮಲಿನ ಈ ಜಗವೆಲ್ಲ…


Leave a Reply

Back To Top