ಕಾವ್ಯ ಸಂಗಾತಿ
ಜಯಂತಿ ಸುನಿಲ್
ಗಜಲ್
ಅವನ ಹೃದಯದ ಕೋಣೆಗೆ ಬೀಗ ಹಾಕುವುದನ್ನು ಮರೆತೆ..
ಒಳಗೆ ಬರಲು ಬಾಗಿಲಲ್ಲಿ ನಿಂತ ದುಃಖಕ್ಕೆ ಕದ ಮುಚ್ಚುವುದನ್ನು ಮರೆತೆ..!!
ಬೇರು ಸಾಯುವ ಸೂಚನೆ ಕಾಣುತ್ತಿದೆ ಎದೆಯಲ್ಲಿ..
ಪ್ರೀತಿಯ ಹೂವಿಗೆ ನೀರುಣಿಸಿದ ಮಾಲಿಯ ಮುಂದಿನ ಪಯಣ ಎಲ್ಲಿಗೆಂದು ಕೇಳುವುದನ್ನು ಮರೆತೆ..!!
ಬದುಕು ತೋರಿಸಿದ ದಿಕ್ಕಾದರೂ ಯಾವುದೋ ತಿಳಿಯದಾದೆ…
ದಿಕ್ಕು ಬದಲಿಸಿದ ನಂಬಿಕೆ ಕನಸನ್ನು ಚದುರಿಸಿ ಒದ್ದು ಹೋದಾಗ ತಡೆಯುವುದನ್ನು ಮರೆತೆ..!!
ಕತ್ತಲು ಬಿದ್ದ ರಾತ್ರಿಗೆ ತೇಪೆ ಹಾಕುವ ಬೆಳಕಿನಡಿ ಮತ್ತದೇ ಕತ್ತಲು..
ಇರುಳಗನಸಲಿ ಬಿದ್ದ ಹಗಲುವೇಷಧಾರಿಯ ಮುಖವಾಡ ಸರಿಸುವುದನ್ನು ಮರೆತೆ..!!
ನನಗಾಗಿ ಯಾವ ಹಾಡೂ ಕೊರಳಲ್ಲಿ ಉಳಿಯದಾಯ್ತು..
ಗಂಟಲಲ್ಲಿ ಮೂಡಿದ ಆಪ್ಯಾಯತೆಯ ಅವನ ದನಿ ಕನವರಿಕೆಯೋ? ಪಿಸುಮಾತೋ? ಆಲಿಸುವುದನ್ನು ಮರೆತೆ..!!
ಅದೆಷ್ಟು ಏಕಾಂತದ ಇರುಳುಗಳು ಕಳೆದವು ಆಸೆಕಂಗಳ ಮುಗಿಲಲಿ…
ಪ್ರಣಯದ ಬೆನ್ನತ್ತಿ ಪ್ರಳಯ ಸೃಷ್ಟಿಸಿದ ಬಿಸಿಲುಗುದುರೆಗೆ ಜೀನು ಹಾಕುವುದನ್ನು ಮರೆತೆ..!!
ಕತ್ತಲ ಗರ್ಭದಲ್ಲಿ ನಲುಗಿದ ನೋವಿನ ಉಸಿರಲಿ ಅವನ ಹೆಸರಿದೆ…
ಮಗ್ಗಲು ಬದಲಿಸಿದ ಜಯ ನಾಳೆ ನನ್ನದೆಂದು ಅವನಿಗೆ ಹೇಳುವುದನ್ನು ಮರೆತೆ..!!
ತುಂಬಾ ಚೆನ್ನಗಿದೆ
ಧನ್ಯವಾದಗಳು ಮೇಡಂ