ಎಂ.ಆರ್.ಅನಸೂಯ ಕವಿತೆ-ಮನೋಭಾವ.

ಕಾವ್ಯ ಸಂಗಾತಿ

ಮನೋಭಾವ

ಎಂ.ಆರ್.ಅನಸೂಯ

ದುಮ್ಮಾನದೆ ಬಿಕ್ಕಳಿಸಲು ಕಣ್ಣೀರು
ಆನಂದ ತುಂಬಿ ತುಳುಕಲು ಆನಂದ ಬಾಷ್ವ
ಜಂಗಮ ಭಾವಗಳು ಸ್ಥಾವರ ಮನದಲ್ಲಿ

ಕೊಟ್ಟರೆ ತನಗೆ ಬೇಕಿದ್ದನ್ನೇ ತ್ಯಾಗ
ಕೊಟ್ಟರೆ ತನಗೆ ಹೆಚ್ಚಾದನ್ನೇ ದಾನ
ಸಂಚಾರಿ ಭಾವಗಳು ಸ್ಥಾಯಿ ಮನದಲ್ಲಿ

ಮಿತಿಯಲ್ಲಿದ್ದರೆ ಆಸೆ
ಮಿತಿ ಮೀರಿದರೆ ದುರಾಸೆ
ಚರ ಭಾವಗಳು ಸ್ಥಿರ ಮನದಲ್ಲಿ

ಇದ್ದರೆ ನಾನು ಅಹಂಭಾವ
ಹೋದರೆ ನಾನು ಅನುಭಾವ
ರೂಪಾಂತರಿ ಭಾವಗಳು ನಿರಾಕಾರ ಮನದಲ್ಲಿ

ಹಿತವಾದರೆ ಅಭಿಮಾನ ಸ್ವಾಭಿಮಾನ
ಅಹಿತವಾದರೆ ಅಭಿಮಾನ ದುರಭಿಮಾನ
ಮೂರ್ತಭಾವಗಳು ಅಮೂರ್ತ ಮನದಲ್ಲಿ

ನೆನೆದರೆ ಉಪಕಾರ ಕೃತಜ್ಞತೆ
ಮರೆತರೆ ಉಪಕಾರ ಕೃತಘ್ನತೆ
ನಾನಾ ಭಾವಗಳು ಏಕ ಮನದಲ್ಲಿ


Leave a Reply

Back To Top