ದೇವರಾಜ್ ಹುಣಸಿಕಟ್ಟಿ ಕವಿತೆ-

ಕಾವ್ಯ ಸಂಗಾತಿ

ಮದಿರೆ ಮತ್ತೂ ಮತ್ತಿನ ಹಕೀಗತ್ತು…..

ದೇವರಾಜ್ ಹುಣಸಿಕಟ್ಟಿ

ನನ್ನ ಕುಡುಕನೆಂದು ದೂರಿದ ಜಗತ್ತು
ಕುಡಿದಿದ್ದೆನೆಂದು ಕೇಳಲೇ ಇಲ್ಲಾ….

ನಿನ್ನ ಬೊಗಸೆ ಮೌನವ
ತುಸುವೆ ತುಸು ಕೋಪವ
ಒಂದಿಷ್ಟು ವಿರಹದ ಕಂಬನಿಯ ಬಿಡದೆ ಕುಡಿದೆನೆಂದರೆ ನಂಬುವುದಿಲ್ಲ

ಕಾಣದ ಭೂತ ಪ್ರೇತಗಳನ್ನೇ ನಂಬುವ ಜಗ
ನಿನ್ನ ನೆನಪುಗಳಿಗೆ
ರಾತ್ರಿಗಳಲಿ ನನ್ನ ನಿದಿರೆ ಕಳೆದುಕೊಂಡೆನೆಂದರೆ
ಸುತಾರಾಮ್ ಒಪ್ಪುವುದಿಲ್ಲ

ನನ್ನ ಕುಡುಕನೆಂದು ದೂರಿದ ಜಗತ್ತು
ಕುಡಿದಿದ್ದೆನೆಂದು ಕೇಳಲೇ ಇಲ್ಲಾ

ಅವಳ ಕಣ್ಣ ಸಮುದ್ರದಿ ಪ್ರೀತಿಯ ಮಧು ಕುಡಿದೆ
ತುಟಿಯ ಕೆಂಪು
ಕರುಳು ಹೊಕ್ಕಿ
ಹೃದಯ ನಶೆಯಲಿ
ತೊದಲು ಬಿಕ್ಕಿ
ಎಚ್ಚರ ಕಳೆದುಕೊಂಡೆನೆಂದರೆ
ನಂಬುವುದಿಲ್ಲ

ಹಾರುವ ತಟ್ಟೆಗಳನ್ನೇ ನಂಬುವ ಜಗ..
ನಿನ್ನ ಕನಸ ಕಸೂತಿಗಳಿಗೆ
ಇಡೀ ಜೀವಮಾನವನ್ನೇ ಕಳೆದುಕೊಂಡೆನೆಂದರೆ ಸುತರಾಮ್ ಒಪ್ಪುವುದಿಲ್ಲ…

ನನ್ನ ಕುಡುಕನೆಂದು ದೂರಿದ ಜಗತ್ತು
ಕುಡಿದಿದ್ದೆನೆಂದು ಕೇಳಲೇ ಇಲ್ಲಾ

ನಿನ್ನ ಗೆಜ್ಜೆ ಸದ್ದಿಗೆ
ನನ್ನ ಲಯ ತಪ್ಪಿದ ಹೆಜ್ಜೆಯ ಮರುಳು
ಕಿವಿಯ ಜುಮುಕಿಯ ಹೊಯ್ದಟಕೆ ನನ್ನ ಜಾರಿದ ಲಜ್ಜೆಯ ತಿರುಳು
ಹೊರಳು
ದಾರಿಯಲ್ಲಿ ಬಿಡದೆ ಗುಟುಕಿಸಿದೆ ಎಂದರೆ ನಂಬುವುದಿಲ್ಲ

ಹಲ್ಲಿ ಬೆಕ್ಕಿನ ಶಕುನವನ್ನು ನಂಬುವ ಜಗ
ನಿನ್ನ ನಂಬಿಕೆಗೆ ನೂರು ಕಣ್ಣ ಪತ್ರಗಳ ಹರಿದೆನೆಂದರೆ
ಸುತರಾಮ್ ಒಪ್ಪುವುದಿಲ್ಲ…

ನನ್ನ ಕುಡುಕನೆಂದು ದೂರಿದ ಜಗತ್ತು
ಕುಡಿದಿದ್ದೆನೆಂದು ಕೇಳಲೇ ಇಲ್ಲಾ

ತಂಪು ಸುರಿದು
ದಿನ ಇಳಿಸಂಜೆಯಲಿ ಅಪ್ಪುವ ಏಕಾಂತವ
ನಶೆಯ ಸುರಿದು
ಅನಾಮತ್ತ್ ಚೆದ್ದರದಂತೆ ಹೊದ್ದಿರುವ ಆಗಸವ
ಮೊಗೆ ಮೊಗೆದು ಕುಡಿದೆನೆಂದರೆ ನಂಬುವುದಿಲ್ಲ

ಸತ್ತವರ ಸುಡುವ ಹೂಳುವ ಇಲ್ಲವೇ ರಿವಾಜನ್ನು ನಂಬುವ ಜಗ
ನಿನ್ನ ವಿರಹದಲಿ ಪ್ರತಿ ಕ್ಷಣ ನನ್ನ ನಾನೇ ಸುಟ್ಟುಕೊಂಡೆನೆಂದರೆ ಸುತಾರಾಮ್ ಒಪ್ಪುವುದಿಲ್ಲ…

ಇಳೆ ಕುಡಿದ ಮಳೆ
ಸಮುದ್ರ ಸೇರಿದ ನದಿಗೆ
ಉಸಿರ ಹಡೆವ ಕಾಡಿಗೆ

ಎಂದೂ ಸಾಕ್ಷಿ ಉಳಿಯುವುದಿಲ್ಲ
ಥೇಟ್ ನಾನು ಕುಡಿದಂತೆ


Leave a Reply

Back To Top