ಬಿ.ಟಿ.ನಾಯಕ್ ಕಥೆ-ಮೊಬೈಲ್ ಪುರಾಣ

ಕಥಾ ಸಂಗಾತಿ

ಮೊಬೈಲ್ ಪುರಾಣ

ಬಿ.ಟಿ.ನಾಯಕ್

ಮೊಬೈಲ್ ಪುರಾಣ


ಈ ಮೊಬೈಲ್ ಫೋನ್ ಬಳಕೆಯು ಬಂದ ಮೇಲೆ ಅದರಿಂದ ಉಪಯೋಗ ಏಷ್ಟು ಇದೆಯೋ ಅಷ್ಟೇ ದುಃಖ ಪಡಲೂಬಹುದು. ಏಕೆಂದರೇ ಸ್ವತಃ ಮತ್ತು ಬೇರೆಯವರಿಗೂ ಕಿರಿಕಿರಿ, ತೊಂದರೆ ತಪ್ಪಿದ್ದಲ್ಲ ಎನ್ನುವದಕ್ಕೆ ಈ ಕೆಳಗಿನವುಗಳು ದೃಷ್ಯ ಸಾಕ್ಷಿ. !

ಅದೊಂದು ದಿನ ನಾನು ಹಾಲು ತರಲು ಅಂಗಡಿಗೆ ಹೋಗಿದ್ದೆ. ಒಬ್ಬ ಮಧ್ಯ ವಯಸ್ಸಿನ ಹೆಂಗಸು ಅಲ್ಲಿಗೆ ಬಂದಿದ್ದಳು. ಆಗಲೇ, ಅವಳಿಗೆ ಒಂದು ಫೋನ್ ಕಾಲ್ ಬಂತು. ತಕ್ಷಣ ಅದನ್ನು ತೆಗೆದು ಕೊಳ್ಳುತ್ತಾ ಅಂಗಡಿಯವನಿಗೆ ದುಡ್ಡು ಕೊಟ್ಟಳು, ಕೌಂಟರ್ ಮೇಲಿದ್ದ ಒಂದು ಹಾಲಿನ ಪ್ಯಾಕೆಟ್ ತೆಗೆದು ಕೊಂಡು ಹೊರಟೇ ಬಿಟ್ಟಳು. ಆಗ ಅಂಗಡಿಯವ ಆಕೆಯನ್ನು ಜೋರಾಗಿ ಕೂಗಿ ಕೂಗಿ ಕರೆದ.
‘ಅಮ್ಮ, ಆ ಹಾಲೀನ ಪ್ಯಾಕೆಟ್ ನಿಮ್ಮದಲ್ಲ, ಇಲ್ಲಿದೇ ನೋಡಿ ನಿಮ್ಮ ಪ್ಯಾಕೆಟ್ ಬೆಣ್ಣೆಯದ್ದು !’
ಆಕೆಗೆ ತಪ್ಪಿನ ಅರಿವಾಗಿ ಮರಳಿ ಬಂದು ಹಾಲಿನ ಪ್ಯಾಕೆಟ್ ಕೊಟ್ಟು ಬೆಣ್ಣೆಯ ಪ್ಯಾಕೆಟ್ ತೆಗೆದುಕೊಂಡು ಹೋದಳು. ಸುತ್ತಲಿದ್ದವರು ಖೊಳ್ಳನೇ ನಕ್ಕಿದ್ದೇ ನಕ್ಕಿದ್ದು !

ಇನ್ನೊಂದು ದಿನ ಅದೇ ಅಂಗಡಿಗೆ ಒಬ್ಬ ಯುವಕ ಮೋಟಾರ್ ಸೈಕಲ್ ನಲ್ಲಿ ಬಂದ. ಆತ ಮೊಬೈಲ್ ನಲ್ಲಿ ಮಾತಾಡುತ್ತಲೇ ಇದ್ದ. ಬಹಳ ಹೊತ್ತು ಬೈಕ್ ಮೇಲೆಯೇ ಕುಳಿತು ಮಾತಾಡುತ್ತ ಇದ್ದ. ಆಮೇಲೆ, ಒಮ್ಮಿಂದೊಮ್ಮೆಲೇ ಇದೋ ಎರಡು ನಿಮಿಷದಲ್ಲಿ ಬಂದೇ ಬಿಟ್ಟೆ, ಅಲ್ಲೇ ಇರಿ’ ಎಂದು ಹಾಲು ತೆಗೆದುಕೊಂಡು ಹೋಗಲಿಕ್ಕೇಂದೇ ಬಂದವನು ಹಾಗೆಯೇ ಹೊರಟು ಹೋದ !

ಫೇಸ್ಬುಕ್ ಪ್ರೀಯನೊಬ್ಬ ಆಪ್ ಓಪನ್ ಮಾಡಿ ಅದರೊಳಗೆ ಆಳವಾಗಿ ಇಳಿದು ಬಿಟ್ಟ. ಅವನ ಮುಖದಲ್ಲಿ ಸಿಟ್ಟಿನ ಛಾಯೆ ಎದ್ದು ಕಾಣುತ್ತಿತ್ತು. ಕಾಮೆಂಟ್ಸಗೆ ಏನೋ ಪ್ರತಿಕ್ರೀಯೆ ಹುಡುಕುತ್ತಿದ್ದ. ಸಿಕ್ಕವನ ಹಾಗೆ ಖುಷಿ ಮಿಶ್ರಿತ ಸಿಟ್ಟಿನಿಂದ ಅಕ್ಷರಗಳನ್ನು ಹೊಂದಿಸಿ ಕಳುಹಿಸಿದ. ಏನೋ ಸಾಧಿಸಿದವನಂತೆ ಹಿರಿ ಹಿರಿ ಹಿಗ್ಗಿದ. ಆದರೇ, ಕ್ಷಣದಲ್ಲೇ, ಅದಕ್ಕೆ ಪ್ರತಿಕ್ರಿಯೆ ಬಂದೇ ಬಿಟ್ಟಿತು. ಆ ಪ್ರತಿಕ್ರಿಯೆಯಲ್ಲಿ ಆತನನ್ನು ದೂಷಣೆ ಮಾಡುವುದಲ್ಲದೇ , ಆತನ ಮೂರ್ಖತನದ ಬಗ್ಗೆ ಆಕಡೆಯವರು ಎತ್ತಿ ತೋರಿಸಿದ್ದರು. ಕೋಪದಿಂದ ಸಿಡಿದೆದ್ದು ಮತ್ತೇ ಅದರ ಪ್ರತಿಕ್ರಿಯೆಯ ತಯಾರಿ ನಡೆಸಿದ. ಟೈಪ್ ಮಾಡ್ತಾ ಮಾಡ್ತಾ ಏನೋ ಎದ್ದು ನಿಂತು ವೀರಾ ವೇಷದಿಂದ
ಹೋರಟ. ಇನ್ನೇನು ಮಾಡಿದ್ದ ಮೆಸೇಜ್ ಹೊರಟು ಹೋಯಿತು. ಆಗ ಆತ ಸ್ವರ್ಗಕ್ಕೆನೇ ಹಾರಿದಂತವನಾಗಿ, ಕಾಣದ ಚರಂಡಿಯಲ್ಲಿ ಆಯ ತಪ್ಪಿ ಬಿದ್ದು ಬಿಟ್ಟ. ಹಾಗೆ ಬಿದ್ದಾಗ ಕೈಯಲ್ಲಿ ಇದ್ದ ಮೊಬೈಲ್ ಚರಂಡಿಯಲ್ಲಿ ಮುಳುಗಿ ಮಾಯವಾಗಿ ಬಿಟ್ತು. ಆತನಿಗೆ ಕಾಲಿಗೆ ಸಕತ್ ಗಾಯವಾಗುವದಲ್ಲದೇ ಮನಸ್ಸಿಗೂ ಆಘಾತವಾಯಿತು. ಏಕೆಂದರೇ, ಮೂವತ್ತು ಸಾವಿರ ಬೆಲೆಯ ಮೊಬೈಲ್ ಕಳೆದುಕೊಂಡಾತನಿಗೆ ಗೊಳೋ ಏಂದು ಅಳುವುದೊಂದೇ ಬಾಕಿ ಇತ್ತು !

ಅಲ್ಲೊಬ್ಬಳು ತಾಯೀ ಮದ್ಯಾನ್ಹ ಒಂದು ಗಂಟೆಗೆ ಶಾಲೆಗೆ ಹೋಗಿ ತನ್ನ ಮಗುವನ್ನು ಕರೆದು ಕೊಂಡು ಬರಬೇಕಿತ್ತು, ಮತ್ತು ಸ್ಟೇಷನರಿ ಅಂಗಡಿಯಲ್ಲಿ ಏನೋ ಒಂದು ಐಟಂ ಕೂಡಾ ಖರೀದಿಸಬೇಕಿತ್ತು. ಅದೇ ಧ್ಯಾನದಲ್ಲಿ ಆಕೆ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಆಕೆಯ ಮೊಬೈಲ್ ರಿಂಗಣಿಸಿತು. ತಡ ಮಾಡದೆಯೇ ಕರೆಗೆ ಓಗೊಟ್ಟಳು.
ಒಹ್ ! ಅದು ಅವಳ ಗೆಳತಿ ಮೀರಾಳ ಕರೆ.
‘ಮೀರಾ ಸ್ವಲ್ಪ ಇರೇ ಸ್ಕೂಟರ್ ಪಾರ್ಕ್ ಮಾಡ್ತಾ ಇದ್ದೇನೆ’ ಎಂದಳು.
ಆಮೇಲೆ ಸ್ಟೇಷನರಿ ಅಂಗಡಿಯ ಮುಂದೆಯೇ ಅದನ್ನು ನಿಲ್ಲಿಸಿದಳು. ಹಾಗೆಯೇ ಮೊಬೈಲ್ನಲ್ಲಿ ಮಾತಾಡ್ತಾ ಮಾತಾಡ್ತಾ ಅಂಗಡಿಯೊಳಗೆ ಹೋದಳು. ಆದರೇ, ಅಂಗಡಿಯವನೊಂದಿಗೆ ಏನೂ ಹೇಳಲಾಗದೆ ಹೇಗೋ ‘ನಿಲ್ಲಿ’ ಏಂದು ಸನ್ನೆ ಮಾಡಿದಳು. ಹಾಗೆಯೇ ಫೋನಿನಲ್ಲಿ ಮಾತಾಡುತ್ತಲೇ ಇದ್ದಳು. ಅಂಗಡಿಯವ ಒಂದು ಬಾರಿ ವಿಚಾರಿಸಿದ.
‘ ಅಮ್ಮಾ ಏನ್ಬೇಕಿತ್ತು ?’ ಆದರೆ ಅವನು ಹೇಳಿದ್ದು ಈಕೆಗೆ ಕೇಳಿಸಲೇ ಇಲ್ಲ. ಆಮೇಲೆ ಹಾಗೆಯೇ ಇನ್ನೊಮ್ಮೆ ಕೇಳಿ ಆತ ತನ್ನ ಗ್ರಾಹಕ ಕಾಳಜಿ ಮೆರೆದ. ಆದರೆ ಇದ್ಯಾವುದು ಪರಿವೆ ಇಲ್ಲದೇ ಆಕೆ ತನ್ನ ಗೆಳತಿಯೊಂದಿಗೆ ಮಾತಾಡುತ್ತಿದ್ದಳು. ಸ್ಟೇಷನರಿ ಅಂಗಡಿ ಮಾಲೀಕ ಆಕೆಗೆ ಮತ್ತೆ ಕೇಳುವದನ್ನೇ ಬಿಟ್ಟ. ಸುಮಾರು ಅರ್ಧ ಗಂಟೆ ಮೀರಾಳೊಂದಿಗೆ ಮಾತಾಡಿ, ಎಲ್ಲ ಉಭಯ ಕುಶಲೋಪರಿ ಮುಗಿದಾದ ಮೇಲೆ, ಒಮ್ಮೆಲೇ ಆಕೆಗೆ ತನ್ನ ಮಗುವಿನ ನೆನಪು ಬಂತು. ತಕ್ಷಣವೇ ಮೀರಾಗೆ ಬೈ ಹೇಳಿ, ಅಂಗಡಿಯವನಿಗೆ ಆಮೇಲೆ ಬರ‍್ತೇನೆಂದು ಹೇಳಿ ಹೊರ ಬರುವಷ್ಟರಲ್ಲಿ ಆಕೆಯ ಸ್ಕೂಟರನ್ನು ಟ್ರಾಫಿಕ್ ಪೋಲೀಸ್ ಎತ್ತಾಕೊಂಡು ಹೋದದ್ದು ಆಕೆಯ ಗಮನಕ್ಕೆ ಬಂತು. ಒಟ್ಟಾರೆ ಅಂಗಡಿಯಲ್ಲಿ ಏನೂ ಖರೀದಿಸಲಾಗಲಿಲ್ಲ ಮತ್ತು ಮಗುವನ್ನು ಕರೆಯಲು ಅರ್ಧ ಘಂಟೆ ಹಿಂದೆಯೇ ಹೋಗಬೇಕಿತ್ತು. ಈಗ ಗಾಡಿ ಕೂಡ ಇಲ್ಲ. ಏನು ಮಾಡೋದು ಎಂದು ಆಕೆಗೆ ತಿಳಿಯದಾಯ್ತು. ಅವಳ ಜೀವ ಮಗುವಿನ ಕಡೆಗೆ ಎಳೆಯುತ್ತಿತ್ತು. ಒಂದುವರೆ ಕಿಲೋಮೀಟರು ಅನಿವಾರ‍್ಯವಾಗಿ ಈಗ ನಡೆದುಕೊಂಡೇ ಹೋದಳು. ಶಾಲೆ ತಲುಪುವಷ್ಟರಲ್ಲಿ ಅರ್ಧ ಗಂಟೆ ತಡ ಆಗಿತ್ತು .ಅಲ್ಲಿಗೆ ಹೋದಾಗ ಮಗು ಅಳುತ್ತಿತ್ತು, ಅಲ್ಲದೇ ಶಾಲೆಯ ಆಯಾಗಳು ಈಕೆಯನ್ನು ಕಂಡಾಕ್ಷಣ ಬೀದಿ ನಾಯಿಗಳಂತೆ ಅಟ್ಯಾಕ್ ಮಾಡಿದರು. ‘ಏನಮ್ಮ ಬೇಗ ಬರಬಾರದೇ’ ಏಂದು. ಈಕೆಯ ಕಣ್ಣು ಒದ್ದೆಯಾಯಿತು. ಸುಮ್ಮನೇ ಏನೂ ಮಾತಾಡದೆ ಮಗುವನ್ನು ಎತ್ತಿಕೊಂಡು ಪುನಃ ಒಂದೂವರೆ ಕಿಲೋ ಮೀಟರ್ ನಡೆದು ಕೊಂಡೇ ಮನೆ ಕಡೆಗೆ ಹೊರಟಾಗ ಅವಳು ಸುಸ್ತೋ ಸುಸ್ತು !

ನನಗೆ ಮಿತ್ರರೊಬ್ಬರಿಂದ ಮೊಬೈಲ್ ಕರೆ ಬಂತು. ಅವರು ತುಂಬಾ ಆತ್ಮೀಯರು. ಬಹಳೇ ಖುಷಿಯಾಯಿತು. ಆಗ ನಾನು ಅವರ ಜೊತೆಗೆ ಉಭಯ ಕುಶಲೋಪರಿ ಮಾಡಿದೆ;
‘ ಹೇಗಿದ್ದೀರಾ ಸಾರ್.?’
‘ ಚೆನ್ನಾಗಿದ್ದೀನಿ, ತಾವು ಹೇಗೆ ?’
‘ಅಂದ ಹಾಗೆ ನೀವು ಬೆಂಗಳೂರಿಗೆ ಈ ಸಮೀಪದಲ್ಲಿ ಹೋಗಿದ್ದೀರಾ ?’
‘ಸಮೀಪದಲ್ಲೇನು ಬಂತು, ನಾನು ಅಲ್ಲಿಂದ ಬಂದದ್ದೇ… ಮೊನ್ನೆ ‘
‘ಹಾಗಾ, ಅಂದ್ರೇ ನೀವು ಊರಲ್ಲೇ ಇದ್ದೀರಿ ಎನ್ನಿ ಊರಲ್ಲಿ ಇಲ್ಲ, ಪಕ್ಕದ ಹೋಬಳಿ ಅಸ್ಕಿಯಲ್ಲಿ ಇದ್ದೀನಿ ‘
‘ಅರೆ,ನಾನು ಕೂಡ ಅಸ್ಕಿಯಲ್ಲೇ ಇದ್ದೇನೆ ಸಾರ್ ‘
‘ಹೌದಾ ! ಬನ್ನಿ ಭೇಟಿ ಯಾಗೋಣ ‘ ಎಂದರು.
‘ಅಸ್ಕಿ ಮನೆಯಲ್ಲಿ ಇದ್ದೀರಾ ಹೇಗೆ ?’
‘ಮನೆಯಲ್ಲಿ ಇಲ್ಲ, ಇಲ್ಲಿ ದಾಸಪ್ಪನ ಕಿರಾಣಿ ಅಂಗಡಿ ಹತ್ತಿರ ಯಾರನ್ನೋ ಕಾಯುತ್ತಾ ನಿಂತಿದ್ದೇನೆ ‘
‘ಇದೇನು ಸಾರ್, ನಾನೂ ದಾಸಪ್ಪನ ಅಂಗಡಿಯಲ್ಲಿ ದಿನಸಿಗಳನ್ನು ಖರೀದಿಸುತ್ತಾ ಇದ್ದೇನೆ ‘ ಎಂದೇ.
ಆಗ ಅವರು ಖೊಳ್ಳನೇ ನಗುತ್ತಾ, ನನಗೆ ಹಿಂದಿರುಗಿ ನೋಡುವಂತೆ ಹೇಳಿದರು. ಹಿಂದಿರುಗಿ ನೋಡಿ ಆಶ್ಚರ್ಯಚಕಿತನಾದೆ. ಅವರು ಅಲ್ಲಿಯೇ ನನ್ನ ಬೆನ್ನ ಹಿಂದೆಯೇ ನಿಂತಿದ್ದರು.!
ಇಷ್ಟು ಹೊತ್ತು ಅವರು ಬೆಂಗಳೂರಿನಿಂದ ಅಸ್ಕಿವರೆಗೆ ಮಾತಾಡಿದ್ದು ನನ್ನ ಬೆನ್ನ ಹಿಂದೆಯೇ !
ಅಂಗಡಿಯವನಿಗೆ ಸ್ವಲ್ಪ ಇರುವಂತೆ ಹೇಳಿ ಅವರ ಜೊತೆಗೆ ಮಾತಾಡಿ ಪರಸ್ಪರ ಸಂತೋಷ ಪಟ್ಟೆವು.

ಒಂದು ಕಡೆ ನಾನೇ ಕರೆ ಮಾಡಿ ಮಾತಾಡಿದೆ.
‘ಹಲೋ ‘
‘ ಹಲೋ ಯಾರ‍್ರೀ ಅದು’ ಒಬ್ಬ ಹೆಂಗಸಿನ ಧ್ವನಿ ಬಂತು.
‘ಅಮ್ಮ, ಸಿದ್ದಣ್ಣ ಇದ್ದಾರಾ ?’
‘ಯಾರ್ರೀ ನೀವು ? ಯಾವ ಸಿದ್ದಣ್ಣ ಏನು ಕಥೆ, ಇಡ್ರೀ ಫೋನು ‘ ಆ ಹೆಂಗಸು ಬೇಜಾರಿಂದ ಹೇಳಿದಳು.
‘ಏನಮ್ಮ ಹೀಗೆ ಹೇಳ್ತೀರಾ, ಸಿದ್ದಣ್ಣ ನನ್ನ ಶಾಲೆ ಸಹಪಾಠಿಯಾಗಿದ್ದವರು, ಆತನ ಜೊತೆ ಮಾತಾಡ್ಬೇಕು ‘ಎಂದು ಹೇಳಿದಾಗ;
‘ಏಯ್, ಇಡ್ರೀ ಸಿದ್ದಣ್ಣ ಅಂತೇ ಸಿದ್ದಣ್ಣ. ಇಲ್ಲಿ ಯಾವ ಸಿದ್ದಣ್ಣ ಇಲ್ಲ ಗೊಡ್ಡಣ್ಣ ಇಲ್ಲ ಇಡ್ರೀ ಫೋನು ‘
‘ಅರೇ, ಹಾಗಂದ್ರೆ ಏನಮ್ಮ, ಇದು ಅವರ ನಂಬರ್ ತಾನೆ ?’
‘ಅದೇನೋ ನಂಗೊತ್ತಿಲ್ಲ, ಇಲ್ಲಿ ಸಿದ್ದಣ್ಣ ಅನ್ನೋರು ಯಾರು ಇಲ್ಲ, ಇಡ್ರೀ ಫೋನು ‘
‘ಏನಾಯಿತಮ್ಮ ಹಾಗೇಕೆ ಮಾತಾಡ್ತೀರಾ ?’ ಏನ್ರೀ ಇದು ಅತಿಯಾಯಿತು, ಮನೆಯಲ್ಲಿ ಗಂಡಸರು ಇಲ್ಲದಾಗ ನೀವೇನು ಮಾಡೋದ್ರೀ ಫೋನು ?’
‘ಏನು ? ಮನೇಲಿ ಇಲ್ಲವೆಂದು ಮೊದಲೇ ಹೇಳಬೇಕಲ್ವಾ ?’
‘ಈಗ ಗೊತ್ತಾಯಿತಲ್ಲ ಇಡ್ರೀ….ನೀವು ಇಡದಿದ್ರೆ ನಾನು ಇಡ್ತೀನಿ ನೋಡ್ರಿ ‘
‘ ಇಲ್ಲಮ್ಮ ನಾನೇ ಇಡ್ತೀನಿ ‘ ಎಂದು ಇಟ್ಟೇ ಬಿಟ್ಟೆ !

ಅಷ್ಟರಲ್ಲೇ ನನಗಿನ್ನೊಂದು ಕಾಲ್ ಬಂತು ಅದನ್ನು ಸ್ವೀಕರಿಸಿದೆ.
‘ಹಲೋ ಯಾರಪ್ಪ ನೀನು ?’ ಫೋನ್ಮಾಡಿದವನೇ ಕೇಳಿದ.
‘ಏನ್ರೀ, ನನಗೆಯೇ ಫೋನು ಮಾಡಿ ನನ್ನನ್ನೇ ಯಾರು ಅಂತ ಕೇಳ್ತಿರೀ ? ಅಯ್ಯೋ ನೀವು ಯಾರು ಅಂತ ತಿಳಿದು ಕೊಳ್ಳೋದು ಬೇಡ್ವಾ ?’
‘ಅಲ್ಲಾರೀ, ನಾನ್ಯಾರು ಅಂತ ಗೊತ್ತಿಲ್ಲದೇ ನನಗೆ ಅದ್ಹೇಗೆ ಫೋನ್ಮಾಡ್ತೀರಿ ?’ ಅದಕ್ಕೆ ಆತ; ‘ಯಾವನೋ ತಲೆ ಕೆಟ್ಟವನು ನಂಬರ್ ಕೊಟ್ಟ, ಈಗ ತಲೆ ಕೆಟ್ಟವನ ಜೊತೆ ಮಾತಾಡ್ಬೇಕಾಗಿದೆ’ ಏಂದ. ‘ಏನಯ್ಯ ನನಗೆ ತಲೆ ಕಟ್ಟೋವ್ನು ಅಂತಿಯಾ ? ಜಗಳ ಮಾಡೋಕೆ ಫೋನ್ ಮಾಡಿದಿಯಾ ಹೇಗೆ ?’ ‘ಮತ್ತೇ ಏನೋ ಮೆಲ್ಲಗೆ ಮಾತಾಡಿದರೇ ದಬಾಯಿಸಲು ಬರ್ತೀಯಾ’. ‘ ‘ಇರ್ಲಿ ಇಟ್ಟು ಬಿಡಯ್ಯಾ ತಲೆ ತಿನ್ನಬೇಡ.’ ‘ನೀನೇ ಇಡು..’ ಆಯ್ತು ನೀನೂ ಇಡು’ ಏಂದಾಗ ಇಬ್ಬರೂ ಇಟ್ಟರು. ಈಗ ಬೇರೆ ಕರೆಯೊಂದು ಬಂತು; ಏನ್ಸಾಮೀ ಹಸು ಹಾಗೇನೇ ಐತೆ, ಅದರದ್ದು ರೋಗ ಕಡಿಮೀನೇ ಆಗಿಲ್ಲ. ನಿಮ್ಮೌಷದ ಕೆಲಸಾನೇ ಮಾಡಿಲ್ಲ. ನಾವೇನಾದ್ರು ನಿಮ್ಗೆ ಕಲ್ಕೊಟ್ಟೀವಾ ?.
‘ಏನಮ್ಮ ಏನ್ಮಾತಾಡ್ತೀಯಾ ?ನೀನು ಯಾರು ? ಯಾರಿಗೆ ಮಾತಾಡ್ಬೇಕಿತ್ತು ಎಂಬ ಅರಿವು ಇದೆಯಾ?’ ಹೀಗೆ ಕೇಳಿದಾಗ ಆಕೆ ಹೇಳಿದ್ಲು;
‘ಕಂಡೀವ್ನಿ ಬಿಡಪ್ಪ ದುಡ್ಡು ಪೀಕಿದೆ, ಆದ್ರೇ ಜಡ್ಡು ಹೋಗಿಲ್ಲ ಯಾಕೆ…..?’
‘ಏನಮ್ಮ ದುಡ್ಡು, ಜಡ್ಡು ?’ ಆಕೆ ಆ ಮಾತಿಗೆ ಸೊಪ್ಪು ಹಾಕಲಿಲ್ಲ.
‘ಅಯ್, ಬಿಡ್ರೀ ಸಾರು ನಂಗೊತ್ತಾಗಕಿಲ್ವ, ಬೇಕಿದ್ರೇ ಇನ್ನಷ್ಟು ಕೀಳಿ ಯಾರು ಬೇಡಂತಾರೆ, ಆದ್ರೆ ಹಸುಗೆ ರೋಗ ಕಡಿಮೆ ಆಗ್ಬೇಕು ತಾನೆ.’
‘ಏಯ್ಬಿಡಮ್ಮ… ಯಾರು ನೀನು ನನ್ನಲ್ಲಿ ಏನು ನಿನ್ಮಾತು ? ಅಯ್ಯ…ಸಾರೂ ಅದೇ ಮಾತ್ ಹೇಳ್ತೀಯ..ಗ್ಯಪ್ತಿ ಬರ್ಲಿಲ್ವ ? ಓಯ್..ಅಮ್ಮ ಸ್ವಲ್ಪ ಬಾಯಿ ಮುಚ್ಚಿಕೊಂಡು ನಾನು ಹೇಳುವುದನ್ನು ಕೇಳು. ಬರೀ ನೀನೆ ರೈಲು ಬಿಡಬೇಡ.’ ಏಂದಾಗ; ‘ರೈಲಂತೆ ರೈಲು ನಾನ್ಯಾಕೆ ಬಿಡ್ಲಿ. ನ್ಯಾಯ ನಮ್ತಾವ ಐತಿ, ಬಿಡಾಕಿಲ್ಲ ನಾವು’. ಹೀಗೆಯೇ ಬಿಟ್ಟರೇ ಹಾಗೆಯೇ ಬೆಳೆಸ್ತಾಳೆ ಏಂದು ನಯವಾಗಿ ಅವರು ಹೇಳಿದರು. ‘ಅಮ್ಮ ನಾನು ಹಸುವಿನ ಡಾಕ್ಟರ್ ಅಲ್ಲ. ನನಗನ್ನಿಸಿದ ಪ್ರಕಾರ ನೀವು ಮಳವಳ್ಳಿಯಿಂದ ಮಾತಾಡ್ತೀರಿ. ನಾನೋ ದೂರದ ಗೋಕಾಕ್ ನಿಂದ ಮಾತಾಡ್ತಾ ಇದ್ದೇನೆ ಅರ್ಥವಾಯ್ತಾ ‘? ‘ಅಂದ್ರೇ ನೀವು ಹಸುವಿನ ಡಾಕ್ಟ್ರು ಅಲ್ವ ?’ ಅಲ್ಲಮ್ಮ ಮಹಾತಾಯಿ ನನ್ನ ಕೈ ಬಿಡು’. ‘ಅಯ್ಯ ನಾನು ನಿಮ್ಮ ಕೈ ಹಿಡಿದಿದ್ದೀನಾ ? ಬಿಡಿ..ಅಯ್ಯ ಸಾರೂ ನೀವು ಡಾಕ್ಟರ್ ಅಲ್ಲಾಂದ್ರೇ ಅದ್ಯಾರ್ಜೊತೆಗೆ ನಾನು ಅವತ್ತು ಮಾತಾಡ್ದೆ ?’ ‘ಗೊತ್ತಿಲ್ಲ ತಾಯಿ..ದಯಮಾಡಿ ಸಾಕು ಮಾಡು’ ‘ಆಯ್ತು ಬಿಡಪ್ಪ ನನ್ಗಂಟೇನೂ ಹೋಗಕಿಲ್ಲ…. ಇಡ್ತೀನಿ ನೋಡು’ ಏಂದು ಬ್ರೇಕ್ ಹಾಕಿದಾಗ ಸುರಿಮಳೆ ಹೊಡೆದು ನಿಂತ ಹಾಗೆ ಆಯ್ತು. ಈ ಮೊಬೈಲ್ ಪುರಾಣಕ್ಕೆ ಕೊನೆ ಇಲ್ಲವೇ ?
ಬಿ.ಟಿ.ನಾಯಕ್.
ಶ್ರೀಗಂಧದಕಾವಲು, ಬೆಂಗಳೂರು.

8 thoughts on “ಬಿ.ಟಿ.ನಾಯಕ್ ಕಥೆ-ಮೊಬೈಲ್ ಪುರಾಣ

  1. Satire on mobile nicely written knitting incidents we see normally in course of every day. Keep it up and look forward for more from you. Harisarvotham

    1. Your views made me so delighted and seeks your elderly wishes as a matter of encouragement. Thanq Sri.Hari Sarvottam Sir.

  2. ನಿಜ ಜೀವನದಲ್ಲಿ ನಡೆಯುವ ವಾಸ್ತವಿಕ ಘಟನೆಗಳನ್ನು ತಾವು ಕಥೆಯ ರೂಪದಲ್ಲಿ ಅನಾವರಣ ಮಾಡಿದ್ದು ಸೊಗಸಾಗಿದೆ. ಅಭಿನಂದನೆಗಳು ಸಾರ್

Leave a Reply

Back To Top