ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಅವರು ಬಣ್ಣ ಹಚ್ಚುತ್ತಾರೆ

ಕಾವ್ಯ ಸಂಗಾತಿ

ಅವರು ಬಣ್ಣ ಹಚ್ಚುತ್ತಾರೆ

ಮರುಳಸಿದ್ದಪ್ಪ ದೊಡ್ಡಮನಿ

ಅವರು ಬರಿ ಬಣ್ಣದ ಮಾತಾಡುತ್ತಾರೆ
ಹಸಿವಿನ ನೋವು ಗೊತ್ತಿರದವರು
ಬರಿ ಹುಸಿ ಸುಳ್ಳನು ಹಬ್ಬಿಸುತ್ತಾರೆ
ನಮ್ಮೊಳಗೆ ಕದನ ಹಚ್ಚುತ್ತಾರೆ.

ಮಾತಿಗೂ ನಾಲಿಗೆಗೂ ಸಂಭಂದ ಇಲ್ಲವೆಂದು ಬರಿ ಜೊಳ್ಳು ತೂರುತ್ತಾರೆ
ಇವರ ಮಾತಿಗೆ ಮಳ್ಳಾದ ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ

ನಾವು ದೀಪ ಹಚ್ಚುತ್ತೇವೆ ಅವರು
ನಮ್ಮ ನಮ್ಮೊಳಗೆ ಬೆಂಕಿ ಗಿರುತ್ತಾರೆ
ಕುದಿವ ಅಗ್ನಿಗೆ ತುಪ್ಪ ಸುರಿಯುತ್ತಾರೆ
ಬೆಗುದಿಯನು ಗಾಳಿಗೆ ಇಡುತ್ತಾರೆ

ನಮ್ಮ ಹೆಗಲ ಮೇಲೆ ಸವಾರಿ ಮಾಡಿ
ನಮ್ಮೆದೆಗೆ ಬಂಧೂಕಿನ ನಳಿಕೆ ಹಿಡಿಯುತ್ತಾರೆ
ಎಲ್ಲರಿಗೂ ಬಣ್ಣ ಬಳಿಯುತ್ತಾರೆ
ಹದ ಮೀರಿದ ಹಗೆ ಸಾಧಿಸುತ್ತಾರೆ

ಕತ್ತು ಸೀಳಿ ನೆತ್ತರು ನೆಲಕೆ ಕುಡಿಸಿ
ಜಾತಿಯ ಬಣ್ಣ ಬಳಿದು
ಕನಸಿಗೆ ಕೊಳ್ಳಿ ಇಟ್ಟು ತಮ್ಮ ಮೈ
ಕಾಯಿಸಿ ಕೊಳ್ಳುತ್ತಾರೆ

ಉತ್ತಿ ಬಿತ್ತಿದ ಕೈಗಳು ಮೇಳಿ ಹಿಡಿದ
ಹೆಗಲುಗಳು ಬಣ್ಣ ಮೆತ್ತಿಕೊಂಡಿವೆ
ಇನ್ನಾದರೂ ಸಾಕು ನಿಲ್ಲಿಸಿರಿ
ಬಣ್ಣದ ಮಾತಿಗೆ ಹೊಟ್ಟೆ ತುಂಬದು .


Leave a Reply

Back To Top