ಆಸೀಫಾ ಕವಿತೆ-ಅಂದಿನಂತಿಲ್ಲ

ಕಾವ್ಯಸಂಗಾತಿ

ಅಂದಿನಂತಿಲ್ಲ

ಆಸೀಫಾ

ಅಂದಿನಂತಿಲ್ಲ ಇಂದು ನನ್ನಪುಟ್ಟ ಹಳ್ಳಿ
ಕಾಣದು ಹಳೆಯದೇನೂ ಅಲ್ಲಿ ಇಲ್ಲಿ
ಎಲ್ಲೆಲ್ಲೂ ಬಣ್ಣ ಬಣ್ಣದ ಮನೆ ಮಹಡಿ
ಬದಲಾಗಿದೆ ಜನರ ಬದುಕಿನ ರೀತಿ ನೀತಿ

ಸಗಣಿಯ ನೀರು ಕಾಣದ ಅಂಗಳ
ಪೇಂಟಿನ ಬರಹ ರಂಗೋಲಿ ಮರೆಸಿತ
ತುಳಸಿಗಿಲ್ಲವಾಯಿತು ಮುಂಗಡೆಯ ಜಾಗ
ಬದಲಾಗಿದೆ ನಮ್ಮವರ ಆಚಾರ ವಿಚಾರ

ತೋಟ ತೋಪುಗಳ ಮಾಡಿ ನೆಲಸಮ
ವಿಲ್ಲಾಗಳತ್ತ ಸಾಗುತಿದೆ ಇವರ ಮನ
ಗೊಜ್ಜು ಚಟ್ನಿಗಳಿಗಿನ್ನಿಲ್ಲ ಸ್ಥಾನಮಾನ
ಪಿಜ್ಜಾ ಬರ್ಗರ್ ಗಳಲ್ಲಿದೆ ಈ ಜಮಾನ

ಲಂಗ ದಾವಣಿ ಇನ್ನೆಲ್ಲಿ ಕುರ್ತಾ ಧೋತಿ
ಲೆಗ್ಗಿಂಗು ಮಿಡಿ ಜೀನ್ಸಗಳದೇ ಫಜೀತಿ
ಬಳೆಯಿಲ್ಲದ ಕೈ ಗೆಜ್ಜೆಯಿಲ್ಲದ ಕಾಲ್ಗಳು
ಬದಲಾಗಿದೆ ಮುಗ್ಧರ ಜೀವನ ಶೈಲಿಯು

ಮಾತು ಮಾತಿಗೂ ರುದ್ರ ತಾಂಡವ
ಹೈಟೆಕ್ ಹುಡುಗರ ನವ ಅವತಾರ
ಬುದ್ಧಿ ಹೇಳಲು ತಿದ್ದಿ ಕೊಳ್ಳದವರ
ಬದಲಾಗಿದೆ ಯುವ ಪೀಳಿಗೆ ಜಗ

ಅರಿಸಿನ ಪೂಸದ ಮೊಗದೊಳಗೆ
ಕಾಂತಿಯಿಲ್ಲ ಕಣ್ಣು ಗುಡ್ಡೆಯೊಳಗೆ
ಮುಳುಗುತಿಹರು ಪರರ ಬಣ್ಣದೊಳಗೆ
ಬದಲಾಗಿದೆ ಸಂಪ್ರದಾಯ ಹಳ್ಳಿಯೊಳಗೆ

ಬಾವಿ ಮುಚ್ಚಿ ಮಣ್ಣು ತುಂಬಿಸಿಹರು
ಬಾಯಿ ತುಂಬಾ ಪೊಗಳೆ ಮಾತುಗಳು
ಸಂಸ್ಕೃತಿ ಸಂಸ್ಕಾರ ಮರೆತೇಬಿಟ್ಟರು
ಬದಲಾಗಿದೆ ಹಳ್ಳಿ ಹೆತ್ತವರ ಮರೆತು


One thought on “ಆಸೀಫಾ ಕವಿತೆ-ಅಂದಿನಂತಿಲ್ಲ

Leave a Reply

Back To Top