ಕಾವ್ಯ ಸಂಗಾತಿ
ಗಜಲ್
ಶಮಾ. ಜಮಾದಾರ
ನಿನ್ನೆದೆಯ ಗೂಡಿನಲಿ ಅವಿತ ಮೇಲೆಯೇ ಹಸಕು ಮನಸು ಹಣ್ಣಾದುದು ನಲ್ಲಾ
ನಿನ್ಹೆಸರಿನ ಚಿತ್ರದ ಸೆರಗು ಹೊದ್ದ ಮೇಲೆಯೇ ಕನ್ಯೆಯು ಹೆಣ್ಣಾದುದು ನಲ್ಲಾ
ಹಸನು ಭೂಮಿಯ ಬಯಲಾಗಿತ್ತು ಬದುಕು ನೀ ಬರುವ ಮೊದಲು
ಎದೆಬದುವು ಹಸಿರಾದ ಮೇಲೆಯೇ ಬಯಕೆಯ ನವಿಲುಗರಿಗೆ ಕಣ್ಣಾದುದು ನಲ್ಲಾ
ಖುದಾನ ಎದುರು ಮಂಡಿಯೂರಿದ್ದೆ ಹೆಬ್ಬಂಡೆಯ ಎದೆಯನು ಕರಗಿಸೆಂದು
ವಿರಹದಲಿ ಒಲವಸೋನೆ ಸುರಿದ ಮೇಲೆಯೇ ವಿವರ್ಣವು ಬಣ್ಣವಾದುದು ನಲ್ಲಾ
ಇಡುವ ಅಡಿಅಡಿಗೂ ನಿನ್ನೂರಿನ ನೆಲದ ತಲಬು ಕಾಡಿ ಕಾಡಿ ಕಂಗೆಡಿಸಿಹುದಲ್ಲಾ
ಪ್ರೀತಿಯ ಕುಲುಮೆಯಲ್ಲಿ ಸುಟ್ಟುಕೊಂಡ ಮೇಲೆಯೇ ಒಲವು ಸುಣ್ಣವಾದುದು ನಲ್ಲಾ
ನಿಗಿನಿಗಿಸುವ ಕೆಂಡದ ಹೊಂಡವಾದರೂ ನೀನು ನಿನ್ನದೇ ಹಳವಂಡವೇಕೋ
ಹೆಪ್ಪಿಟ್ಟ ಹಾಲು ಹಾಲಾಹಲವಾದ ಮೇಲೆಯೇ ಗೆಳೆತನ ಗಿಣ್ಣವಾದುದು ನಲ್ಲಾ