ಕಾವ್ಯ ಸಂಗಾತಿ
ದೇವರಿಗೆ ಬಿಟ್ಟ ಗೂಳಿ
ವಿಜಯಲಕ್ಷ್ಮಿ ಕೊಟಗಿ
ಕರೆದು ಕಟ್ಟುವವರಿಲ್ಲ
ತುರಿಸಿ ಮೇವು ಹಾಕುವವರೆ ಎಲ್ಲಾ
ಹಚ್ಚ ಹಚ್ಚಗಿದ್ದದ್ದೇ ತಿಂದು
ಚೆಚ್ಚ ಬೆಚ್ಚಗೆ ಮಲಗುವ
ಇದು ದೇವರಿಗೆ ಬಿಟ್ಟ ಗೂಳಿ
ಉತ್ತುಬಿತ್ತಲು ಹೆಗಲೀಯಲಿಲ್ಲ
ನೋಟಪಾಠದಿ ಪಳಗಿಸುವವರಿಲ್ಲ
ನಾನೇ ಗುರು ನಾನೇ ಗುರಿಯೆಂಬ
ಅಹಂಕಾರದ ಚಾಳಿಗಿಲ್ಲ ಬೇಲಿ
ಇದು ದೇವರಿಗೆ ಬಿಟ್ಟ ಗೂಳಿ
ಛತ್ರಿ ಚಾಮರದ ವಂದಿಮಾಗಧರು
ಹಿಂದೆ ಹಿಂಡು ಹಿಂಡಾದ ಪಾಮರರು
ಮುಂಗಾಲನೆತ್ತಿ ಹುಳ್ಳಗೆ ನಗುತ್ತ
ಕಣ್ಣ ಕಳ್ಳಾಟ ಮರೆಮಾಚಿ ಬೀಗುವ
ಇದು ದೇವರಿಗೆ ಬಿಟ್ಟ ಗೂಳಿ
ಉಚ್ಚೆ ಹೊಯ್ದರದೇ ತೀರ್ಥ ಪವಿತ್ರ
ಶಿರದಿ ಕಾಲಿಟ್ಟರೆ ಮುಕ್ತಿ ಪಾಪಾತ್ಮರ ಭಕ್ತಿ
ಬುರುಡೆ ಬಿಡುತ ನೆಡೆದಾಡುವ ದೈವ
ಪೂಜಿಸುವ ಬಾಗ್ಯಕ್ಕೆ ಎಣೆಯುಂಟೇ
ಇದು ದೇವರಿಗೆ ಬಿಟ್ಟ ಗೂಳಿ
ಹೊರಗಿದ್ದರೆ ಜೈಕಾರ ಝಣ್ ಝಣ್ ಹಣ
ಒಳಗಿದ್ದರೂ ಕುಣಿತದೆ ಠಣ್ ಠಣ್ ಠಣಾ
ಅಕ್ಷರಕ್ಕೊಂದು ಆಶೀರ್ವಾದಕ್ಕೊಂದು ದರ ಖಾದಿ ಖಾಕಿಗೆ ವಿಶೇಷ ವಿನಾಯಿತಿ ಪೂರ
ಇದು ದೇವರಿಗೆ ಬಿಟ್ಟ ಗೂಳಿ
ಖ್ಯಾವಿಗೆ ಸೆಡ್ಡು ಹೊಡೆದ ಬಣ್ಣಗಳ ಆಟ
ಒಳಮೈಕಾವಿಗೆ ಕೆಂಪಾಗಿದೆ ಕಣ್ಣನೋಟ
ಕಾಮದೇವನಿಗೆ ಹೋಮ ಮದನ ಧೂಮ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ
ಇದು ದೇವರಿಗೆ ಬಿಟ್ಟ ಗೂಳಿ.
One thought on “ವಿಜಯಲಕ್ಷ್ಮಿ ಕೊಟಗಿ-ದೇವರಿಗೆ ಬಿಟ್ಟ ಗೂಳಿ.”