ಕಾವ್ಯ ಸಂಗಾತಿ
ತೆನೆಗಳೆಲ್ಲಿ ಅರಳುವುವು
ಬೆಂಶ್ರೀ ರವೀಂದ್ರ
ಗುಂಡಿಗಳು ಬಾಯ್ದೆರೆದಿವೆ
ಸೇತುವೆಗಳು ಮುರಿದಿವೆ
ಆಸ್ಪತ್ರೆಯಲಿ ಆಕ್ಸಿಜನ್ ಖಾಲಿ
ದೆಹಲಿಯಲ್ಲಿ ಅಮರಿದ ಹೊಂಜು
ತುಂಬಿದ ಹೊಟ್ಟೆಯೊಳಗೆ ಅವಳಿ ಮಕ್ಕಳು
ಡಾಕ್ಟರ ಬಳಿ ಸಮಯವಿಲ್ಲ
ಆಸ್ಪತ್ರೆಯ ಬಾಗಿಲು ಮುಚ್ಚಿದೆ
ಕರಳುಬಳ್ಳಿ ಹರಿದು ಹರಣ ಹಾರಿ
ಗುಡಿಸಲಲಿ ರಕ್ತ ಚೆಲ್ಲಿದೆ
ಎತ್ತರವಾದ ಶಾಲೆಗಳ ಹೆಬ್ಬಾಗಿಲು
ತೇಲುಗಣ್ಣು ಮಾಲುಗಣ್ಣಾಗಿದೆ ಈ ಮಣ್ಣು
ಅಮೇರಿಕ ವೀಸಾ ಹೆಚ್ಚು ನೀಡಲಿದೆ
ಆಸೆಗೆ ಹೀಚುಕಾಯಿಗಳ ಬಲಿ
ಅರ್ಥಕಳೆದ ಬಣ್ಣಗಳಿಗೀಗ ಕೋರೆದಾಡಿಗಳು
ಬಾಚಿಹಲ್ಲುಗಳು ಹಸಿಮಾಂಸವ ಕಚ್ಚಿಕಚ್ಚಿ ಬಾಯಾಡಿಸುತ್ತ ಮೆಲುಕುತ್ತಿವೆ
ಕಟಬಾಯಿಯಿಂದ ರಕ್ತ ಸೋರುತ್ತಿದೆ
ಇಲ್ಲೂ ಕೇಳುತ್ತಿದೆ ದೂರದಲಿ ಸಿಡಿವ ಬಾಂಬುಗಳು
ವಾಲುತ್ತಿವೆ ಹದತಪ್ಪಿ ತಕ್ಕಡಿಯ ಹಲ್ಲೆಗಳು
ಪ್ರತಿಮಾ ರಾಜ್ಯದಲಿ ಅರ್ಜುನನೊಬ್ಬನೆ ಅಲ್ಲ ದಂಡಿಗೆ ದಂಡು ನುಗ್ಗಿದೆ; ಉಲ್ಕೆಗಳು ದಾಳಿ
ಎಲ್ಲೆಗಳು ಮುರಿದಿವೆ
ಹುಲ್ಲೂ ಹಲ್ಲೆಗೆ ಇಳಿದಿದೆ
ಹುಲ್ಲೆಗಳು ಬಸವಳಿದಿವೆ
ಇದೀಗ ವೇಗಕ್ಕೇ ಸಮಯ
ಕ್ಷಣದಲೆಲ್ಲ ಬದಲಾಗುವುದಂತೆ
ಯಾಕೆ ಹೀಗಾಡುವಿರಿ
ಮರೆತಿರಾ ನಿಮ್ಮ ಬೇರುಗಳ
ಬೇರುಗಳ ಊರಿ ಉರಿಮುಗಿಲಿಗೆ ನೋಡಿ
ಆಕಾಶದೆತ್ತರಕೆ ಪ್ರತಿಮೆಗಳು
ನಗೆಮೊಗ, ಬಿರುಮೊಗ, ಧೀಮೊಗ, ಧೀರಮೊಗ… ಹೀಗೆ ಅಲ್ಲಿದೆ ತರಹೆವಾರಿ ಮೊಗ, ಮೊಗೆದುಕೊಳ್ಳಿ ಸೌಭಾಗ್ಯವ
ಬದುಕಿ ಬದುಕಿ ಪ್ರತಿಮಾ ಲೋಕದಲ್ಲಿ
ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರವಲ್ಲಿ
ಆ ಪ್ರತಿಮೆಗಳ ಮುಸುಮುಸು ನಗುವಲಿ
ಸಮಾಧಿಗಳು ವಿಜೃಂಭಿಸುವಾಗ
ತೆನೆಗಳೆಲ್ಲಿ ಅರಳುವುವು
ಪೆಟ್ರೋಲು ವಾಸನೆ ಗಬ್ಬೆನ್ನುವಾಗ
ಮಣ್ಣಿನ ವಾಸನೆ ಮೂಗಿಗೆ ತಲುಪುವುದೆ.