ಮಲಯಾಳಂ ಕವಿತೆ-ನಮ್ಮಜ್ಜಿಯ ಮನೆ!

ಅನುವಾದ ಸಂಗಾತಿ

ನಮ್ಮಜ್ಜಿಯ ಮನೆ!

ಆಂಗ್ಲ ಮೂಲ : ಕಮಲಾ ದಾಸ್
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಹಿಂದೊಂದು ಮನೆ ಇರುತ್ತಿತ್ತು
ಅದೀಗ ತುಂಬಾ ದೂರವಾಗಿಬಿಟ್ಟದೆ!
ನನಗೆಷ್ಟೋ ಪ್ರೀತಿಯನು ಹಂಚಿದ ಮನೆ
ನಮ್ಮಜ್ಜಿಯ ಮನೆ!

ಅಜ್ಜಿ ಸತ್ತುಹೋದಳು
ಆ ಮನೆ ನಿಶ್ಶಬ್ದದೊಳಗೆ ಹೊರಟುಹೋಯಿತು
ಅಜ್ಜಿಯ ಪುಸ್ತಕಗಳ ಮಧ್ಯೆ
ಈಗ ಹಾವುಗಳು ಹರಿದಾಡುತ್ತಿವೆ
ಆಗ ಪುಸ್ತಕಗಳನ್ನು ಓದಲು
ನಾನು ತುಂಬಾ ಚಿಕ್ಕವಳು
ಆಮೇಲೆ… ಆಮೇಲೆ…
ನನ್ನ ಮೈಯಲ್ಲಿನ ನೆತ್ತರು
ಬೆಳದಿಂಗಳಷ್ಟು ತಣ್ಣಗಾಗಿಹೋಗಿದೆ.

  • * * *

ಅಲ್ಲಿಗೆ ಹೋಗಬೇಕೆಂದು
ಎಷ್ಟೋ ಸಲ ಅಂದುಕೊಳ್ಳುವೆ
ಆಸೆ ಪಡುವೆ
ಕುರಡಾಗಿಹೋದ ಕಿಟಿಕಿಗಳಿಂದ
ಅಜ್ಜಿಯ ಮನೆಯೊಳಕ್ಕೆ ಇಣುಕಬೇಕೆಂದು
ಅಲ್ಲಿ ಕೊಠಡಿಗಳ ಮಧ್ಯೆ ಗಡ್ಡೆ ಕಟ್ಟಿದ
ಗಾಳಿಯ ರೋದನೆಯನ್ನು ಕಿವಿಯಾನಿಸಿ ಕೇಳಬೇಕೆಂದುಕೊಳ್ಳುವೆ
ಕನಿಷ್ಠಪಕ್ಷ ಅನಂತವಾದ ನಿರಾಸೆಯಿಂದ
ಅಲ್ಲಿಯ ಕತ್ತಲನ್ನಾದರೂ ಎದೆ ತುಂಬಿಕೊಂಡು
ಇಲ್ಲಿಗೆ ತಂದು…
ನನ್ನ ಮಲಗುವ ಕೋಣೆಯ ಬಾಗಿಲ ಹಿಂದಿನ
ನಾಯಿಯಂತೆ ಮುದುಡಿಕೊಂಡು ಮಲಗಬೇಕೆಂದುಕೊಳ್ಳುವೆ

  • * * *

ಅಸಲು ನಂಬಬಲ್ಲೆಯಾ…
ನೀನು ನಂಬಲಾರೆ ಗೊತ್ತಾ?
ನಾನು ಅಷ್ಟು ಅದ್ಭುತವಾದ ಮನೆಯಲ್ಲಿ ವಾಸಿಸಿದ್ದೆ ಅಂತ?!
ಅದಕ್ಕೆಷ್ಟೋ ಹೆಮ್ಮೆಪಡುವೆ…!
ಅದಕ್ಕಿಂತಲೂ ದುಪ್ಪಟ್ಟು ಆ ಮನೆಯನ್ನು ಪ್ರೀತಿಸಿದೆ
ಆದರೆ… ಆದರೆ…
ಎಂದೋ ತಿಳಿಯದು ಅಜ್ಜಿಯ ಮನೆಯಿಂದ ದಾರಿ ತಪ್ಪಿಹೋದೆ!
ಹೇಗೆ..? ಯಾಕೆ ತಪ್ಪಿದೆನೋ…?
ಈಗ ನೋಡು…
ಈ ಅಪರಿಚಿತರ ಮನೆ ಎದುರು
ಭಿಕ್ಷೆ ಬೇಡುತಿರುವೆ ಹಿಡಿಯಷ್ಟು ಪ್ರೀತಿಗಾಗಿ
ಕನಿಷ್ಠ ಕೊಂಚ ಪರಿಹಾರವಾಗಿಯಾದರೂ
ಬರೀ ಪ್ರೀತಿಗಾಗಿ…!
ನಮ್ಮಜ್ಜಿಯ ಮನೆಯಲ್ಲಿ ಸಿಕ್ಕಷ್ಟಲ್ಲವಾದರೂ
ಕೊಂಚವಾದರೂ…

  • * * *

ಆಂಗ್ಲ ಮೂಲ : ಕಮಲಾ ದಾಸ್
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ


One thought on “ಮಲಯಾಳಂ ಕವಿತೆ-ನಮ್ಮಜ್ಜಿಯ ಮನೆ!

Leave a Reply

Back To Top