ಕಾವ್ಯ ಸಂಗಾತಿ
ಕ್ರಿಕೆಟ್ಟು
ವಿಶ್ವನಾಥ ಎನ್ ನೇರಳಕಟ್ಟೆ
ಅವನು ಔಟಾಗಿದ್ದ
ಐವತ್ತರ ಗೆರೆ ಹಾಯುವ
ಕನಸಿಟ್ಟುಕೊಂಡು
ಹುಮ್ಮಸ್ಸಿನಲ್ಲಿ ಬಂದವನು
ಹದಿನೈದರ ಲಘುಮೊತ್ತಕ್ಕೆ
ಕ್ರೀಸಿನಿಂದಾಚೆ ಹೆಜ್ಜೆ ಹಾಕಿದ್ದ
ಸುಖಾಸುಮ್ಮನೆ ಬೆರಳು ತೋರಿಸಿದ
ಆ ಅಂಪೈರ್ ಗೆ ಇವನ ಮೇಲೆ
ಅದ್ಯಾವ ಜನ್ಮದ ದ್ವೇಷವಿತ್ತೋ
ದೇವರೇ ಬಲ್ಲ
ಹಣ ತಿಂದಿದ್ದರೋ?
ಮ್ಯಾಚ್ ಫಿಕ್ಸಿಂಗ್ ಆಗಿತ್ತೋ?
ಹೊಟ್ಟೆ ಉರಿದಿತ್ತೋ?
ಗೆಲ್ಲಬೇಕಿದ್ದವನನ್ನು
ಪೆವಿಲಿಯನ್ ಆಚೆಗೆ
ದಬ್ಬಿ ಕಳಿಸಿದ್ದರು
ಕ್ರೀಸ್ ಬಿಟ್ಟು ಹೊರಡುವಾಗ
ಅವನ ಮುಖದಲ್ಲಿದ್ದ ದುಃಖ
ಬಿತ್ತರ ಶರಧಿಗಿಂತಲೂ ವಿಶಾಲವಾಗಿತ್ತು
ಸೀಮಾತೀತ ಆಗಸಕ್ಕಿಂತಲೂ ಹಿರಿದಾಗಿತ್ತು
ನೋಡುತ್ತಾ ಕುಳಿತ ನನ್ನಲ್ಲೀಗ
ಮೊನ್ನೆ ಮೊನ್ನೆ ತಾನೇ ನಾನೆದುರಿಸಿದ
ಉದ್ಯೋಗ ಸಂದರ್ಶನದ್ದೇ ಕನವರಿಕೆ