ಜಯಂತಿ ಸುನಿಲ್-ಬೈರಾಗಿ

ಕಾವ್ಯ ಸಂಗಾತಿ

ಬೈರಾಗಿ

ಜಯಂತಿ ಸುನಿಲ್

ಇನ್ನಿಲ್ಲದ ಒಲವಿನ ಗಂಟಿಗೆ ನೂರಾರು ವಿರಹದ ತೇಪೆಗಳು
ಹೆಗಲಿಗೇರಿ
ಒಡಲಲ್ಲಿರುವ ಹಿಂಸೆಗೆ ಇಳಿಬಿದ್ದ ಗಡ್ಡಧರಿಸಿ
ಪ್ರೀತಿಯನ್ನು ಕೂಡಿ, ಕಳೆದು ಗುಣಿಸಿ, ಭಾಗಿಸಿ ಸರಳ ಸಮೀಕರಣದಲ್ಲೇ ಸೋತಭಾವ
ಪ್ರೀತಿಯ ಸನ್ನಿಯೇ ಅಂತಹುದು..
ಹೌದು…
ಇವ ಬೈರಾಗಿ,ಬೊಗಸೆಯಷ್ಟು ಪ್ರೀತಿಗಾಗಿ ಜೋಳಿಗೆ ಹಿಡಿದ ವೈರಾಗಿ..!!

ಭವಬಂಧನಗಳ,ಲೋಭ,ಮೋಹಗಳ ವಕ್ರಸುಳಿಯಲ್ಲಿ ನಲುಗಿ ಹೊರಬಂದ..
ಆದರೂ ಮತ್ತದೇ ಪ್ರೀತಿಗಾಗಿ ಕೈಯೊಡ್ಡುತ್ತಲೇ ಹೊರನಡೆದ..
ಬೆಂಕಿಯಲ್ಲಿ ಬದುಕುವುದು ಸುಲಭದ ಮಾತಲ್ಲಾ..
ಯುಗ ಮುಗಿದರೂ ಪ್ರೀತಿಯ ನಿಶೆ ಇಳಿಯುವುದೇ ಇಲ್ಲಾ..!!

ಇದು ಸ್ಮಾರ್ಟ್ ಯುಗ
ಕೊಂಡು ಕೊಳ್ಳುವ ಸಂಬಂಧಗಳು ತಕ್ಕಡಿಯಲ್ಲಿ ಕುಣಿಯುತ್ತವೆ..
ಬರೀ ಲೆಕ್ಕಾಚಾರ
ಲಾಭದ್ದೇ ಪಾರುಪತ್ಯ
ಸ್ವಾರ್ಥದ್ದೇ ಮೇಲುಗೈ..!!

ಅವನಿಗೆ ತಿಳಿಯದು
ಲೋಕ ಹಿಂದಿನಂತಿಲ್ಲ
ಬಂಧನಗಳು ಬಹಳ ಸಡಿಲ
ಉಡುಪು ಧರಿಸಿದಷ್ಟೇ ಸುಲಭ
‌ಸತ್ಯವನ್ನು ಶೋಧಿಸುವುದು ಮೂರ್ಖತನ…
ಶೋಧಿಸಿದಷ್ಟೂ ನಿಗೂಡ ಪ್ರಪಾತ..!!

ಅವನ ಅರಿವಿಗೆ ಬಾರದೆ
ನಡೆದಷ್ಟು ಮೈಲಿಗಟ್ಟಲು ಬಂಜರು..?
ಮೋಡಗಳು ತುಂಬಿಕೊಳ್ಳುವುದನ್ನೇ ಕಾಯ್ವ ಮುಗಿಲಂತೆ,.
ಕತ್ತರಿಸಿ ಬಿದ್ದ ಹೃದಯ ಜೋಡಿಸುವ ಮತ್ತೊಂದು ಪ್ರೀತಿಯ ಹೃದಯಕ್ಕಾಗಿ ಇವನ ಹುಡುಕಾಟ, ಅಲೆದಾಟ, ಪರದಾಟ..!!

ಬದುಕನ್ನು ಕೇವಲ ಬದುಕಾಗಿ ನೋಡಿದ್ದರೆ ಇವ ಬೈರಾಗಿಯಾಗುತ್ತಿರಲಿಲ್ಲಾ..
ಕತ್ತಲೆಯ ನೋವಿನ ಮೌನದಲಿ
ಸಾವಿರ ಮಾತನು ಹುಡುಕುತ್ತಾನೆ…
ಮೌನಕ್ಕೆ ಮಾತಾಗುವ ದನಿಯ ಹಿಂಬಾಲಿಸುತ್ತಾನೆ..!!

ಗುಡಿಸಿಲಿನಲ್ಲಿನ ಹಸಿವು ಸಾಯದು‌..
ಪ್ರೀತಿಗಾಗಿ ಇವನ ಮೂಕ ಪ್ರತಿಭಟನೆಯು ನಿಲ್ಲದು..
ಬಹುಶಃ ಬದುಕು ಇವನನ್ನು ಕೆಟ್ಟದಾಗಿ ನಡೆಸಿಕೊಂಡಿರಬಹುದು
ಇವನ ಬದುಕಲ್ಲಿ ಪ್ರೀತಿಯ ಅರೆಸಾವಾಗಿರಬಹುದು..!!

ಯಾರಿಗೂ ಎಚ್ಚರವಾಗದ ರಾತ್ರಿಯಲ್ಲಿ..
ಕನಸುಗಳೇ ಇಲ್ಲದ ಮನೆಯನ್ನು ತೊರೆದು
ಜಗತ್ತಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಲೊರಟ..
ಒಂಟಿತನದ ವಲಯ ದಾಟಲೊರಟ…!!

ಚರ್ಮದ ಚಪ್ಪಲಿಗೂ..
ಸವೆದ ಹಾದಿಗೂ
ಇವನನ್ನು ಭರಿಸಲಾಗುತ್ತಿಲ್ಲಾ
ಅವನು ನಡೆವ ಪ್ರತಿರಾತ್ರಿ ಮುಗಿದು ಹೋಗುವುದಿಲ್ಲ..
ಮತ್ತದೇ ಹಗಲು ಮತ್ತದೇ ಜೋಳಿಗೆ ಹಿಡಿದ ಅವನ ನಡಿಗೆ..
ಅದೇ ಸಪ್ಪೆ ಹಾದಿಗೆ ಜೊತೆಯಾಗುತ್ತದೆ..!!

ನಡೆಯುತ್ತಾನೆ,ನಡೆಯುತ್ತಲೇ ಇದ್ದಾನೆ…
ಕೊಳಲಾಗುವ ಅವನ ದನಿಗೆ
ತುಟಿಯಾಗುವ ಅನಂತದೆಡೆಗೆ
ಮತ್ತದೇ ಮೋಹದೆಡೆಗೆ..!!


3 thoughts on “ಜಯಂತಿ ಸುನಿಲ್-ಬೈರಾಗಿ

  1. ಇಹ ಪರಗಳೊಡೆಯ – ಜೋಳಿಗೆ ಹಿಡಿದ ಬೈರಾಗಿಯ ಭಾವ ಪೂರ್ಣ ಕವಿತೆ, ಜಯಂತಿ ಮೇಡಂ.

  2. ಧನ್ಯವಾದಗಳು ಸರ್ ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ

Leave a Reply

Back To Top