ಕಾವ್ಯ ಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ
ಒಡಲ ಉರಿ ಶಮನವಾಗಲು ಪ್ರೀತಿಯ ನುಡಿಗಾಗಿ
ಜೀವವದು ಕಾಯುತ್ತಿದೆ
ಕಡಲಿನೊಳಗಿನ ನಿಶ್ಯಬ್ದ ಒಮ್ಮೊಮ್ಮೆ ಭೋರ್ಗರೆದು
ಬಿಸಿಯಲ್ಲಿ ಬೇಯುತ್ತಿದೆ
ಹರಿವ ಹಾವಂತೆ ಮನವು ಸದಾ ಚಲಿಸುವ ವಾಹಿನಿ
ತೆರದಿ ಹೊರಟಿದೆಯೇಕೋ
ಗರಿಮುರಿದ ಹಕ್ಕಿಯಾಗಿ ಹೃದಯ ಕಳವಳದಿ ಸಿಲುಕಿ
ವಿಲಿವಿಲಿ ಒದ್ದಾಡುತ್ತಿದೆ
ಇರುಳು ಕವಿದ ರಾತ್ರಿಯಲ್ಲಿ ಚುಕ್ಕೆಗಳು ಇಣುಕುವದನು
ಮರೆತು ಹೋದನೇಕೆ
ವಿರಹ ತಾಪದ ಬೊಗಸೆ ಕಣ್ಣಿನ ಚಂದ್ರನ ಮುನಿಸು
ಮನವ ಕೆಣಕುತ್ತಿದೆ
ಜಲವಿರದ ಬತ್ತಿದ ಕೆರೆಯಲಿ ನೀರಡಿಸಿದ ಕರುವಂತೆ
ಕರುಣೆಯ ಅರಸಿದೆ
ಬಿಲದಂತೆ ಇಲಿಯಂತೆ ಕನಸು ಒಳಹೊರಗೆ ಸಾಗದೆ
ಸದಾ ಅಲೆಯುತ್ತಿದೆ
ಮುಗಿಯದ ಅಧ್ಯಾಯವಾಗಿ ಪುಟಪುಟದಿ ನಿತ್ಯ
ಕೊರಗುವನು ಅಭಿನವ
ಚಿಗುರದ ತರುವಿನ ಸುಮವಾಗಿ ಒಳಗೆ ಜೀವವು
ದುಃಖದಿ ಹಪಹಪಿಸುತ್ತಿದೆ