ಕಾವ್ಯ ಸಂಗಾತಿ
ಡಾ.ವಾಯ್.ಎಮ್.ಯಾಕೊಳ್ಳಿ
ಗಜಲ್
ಬದುಕಿನ ಸಂತೆ ಮುಗಿಸಿ ಹೊರಟಾಗ ದೂರ ನಿಂತು ಹೋಗಿ ಬಾಯೆಂದು ಹೇಳಿ ಬಿಡು
ನಿನಗಾಗಿ ನಾ ಬಿಟ್ಟು ಹೋದ ಮರೆಯದ ನೆನಪುಗಳೆ ಸಾಕೆಂದು ಹೇಳಿಬಿಡು
ಕೇಳು ಸುತ್ತಲಿನ ಜಗಕೆ ಚೆಲುವು ಕಡ ಕೊಟ್ಟು ನಡೆದಿರುವೆ ನಾನು
ಮದ್ಯರಾತ್ರಿಯ ಕನಸು ನನಸಾಗದೆ ಮುರಿದು ಬಿತ್ತೆಂದು ಹೇಳಿಬಿಡು
ಕಟ್ಟಿದ ಸೌಧ ಬರಿ ಕಲ್ಪನೆಯಾದೀತೆಂದು ಊಹಿಸಿರಲಿಲ್ಲ
ನೀನಿರದೆ ದಹಿಸುವ ಬೆಂಕಿಯೂ ಸುಡದೆಂದು ಹೇಳಿಬಿಡು
ಕೊನೆಗಾಲಕೆ ಒಲವಿನಾಸರೆ ಬೇಕೆಂದು ಬಯಸಿದ್ದು ತಪ್ಪೇನು ಗೆಳತಿ
ಹೆಪ್ಪುಗಟ್ಟಿದ ಮೌನ ಮುರಿದು ಮಾತಾಡಲಿಲ್ಲ ಏಕೆಂದು ಹೇಳಿಬಿಡು
ಬರೀ ಪ್ರೀತಿಯೊಂದನೆ ಮನದ ತೋಟದಲಿ ನಾ ಬಿತ್ತಿ ಬೆಳೆದವನು
ಶಪಿಸಲಾರೆ ದೂರ ಮಾಡಿದ ಯಾರನೂ ಹೋಗಿ ಬಾಯೆಂದು ಹೇಳಿಬಿಡು
ಇಲ್ಲಷ್ಟೇ ಏಕೆ ಅಲ್ಲಿಯೂ ನಿನ್ನ ನೆನೆಯುತ್ತೇನೆ ಸುಳ್ಳಲ್ಲ ನನ್ನಾಣೆ ಸಖಿ
ಹೊತ್ತ ಶವ ತುಸು ಇಳಿಸಿ ನೋಡಿ ನೀ ನನ್ನವನೆಂದು ಹೇಳಿಬಿಡು
ಕಣ್ಣೀರೇಕೆ ಹಾಕುವೆ ಈ ಜನ್ಮದ ದುಃಖ ಇಂದಾದರೂ ನೀಗಿತಲ್ಲ
ವಿದಾಯ ಹೇಳಿ ಕಳಿಸುವ ಮುನ್ನ ಕ್ಷಮಿಸು ಯಯಾ ನೀನೆಂದು ಹೇಳಿಬಿಡು