ಕಥಾಸಂಗಾತಿ
ಸೀತಜ್ಜಿ
ಕೆ.ವಿ.ವಾಸು
ನಮ್ಮ ಸೀತಜ್ಜಿಗೆ ಈಗ ಎಂಬತ್ತರ ಆಜು ಬಾಜು. ಆದರೂ ಕಣ್ಣು ಚೆನ್ನಾಗಿ ಕಾಣುತ್ತದೆ. ಕಿವಿ ಸಹ ಚೆನ್ನಾಗಿ ಕೇಳುತ್ತದೆ. ಸೀತಜ್ಜಿಗೆ 13 ನೇ ವಯಸ್ಸಿಗೆ ಅರಕಲಗೂಡಿನ ಬಂಗ್ಲೇ ರಾಮರಾಯರ ಜೊತೆ ಮದುವೆಯಾಗಿತ್ತಂತೆ. ಆಗೆಲ್ಲಾ ಹಾಗೆ ತಾನೇ, 12-13 ತುಂಬುವುದರೊಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಬಿಡುತ್ತಿದ್ದರು. ವೈದಿಕ ಮನೆತನಕ್ಕೆ ಸೇರಿದ್ದ ಸೀತಜ್ಜಿಯ ತಂದೆ ಭೀಮಸೇನ ರಾಯರು ಹಾಗೂ ತಾಯಿ ಯದುಗಿರಿ, ತಮ್ಮ ಮಗಳು ಸೀತಾಳ ಮದುವೆಯನ್ನು ಸಹ ಚಿಕ್ಕ ವಯಸ್ಸಿನಲ್ಲೇ ರಾಮರಾಯರ ಜೊತೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡಿದ್ದರು. ಮದುವೆ ಎಂದರೆ ಏನು ಎಂದು ತಿಳಿಯದ ವಯಸ್ಸಿನಲ್ಲೇ ಆಗಿನ ಕಾಲದ ಸೀತಜ್ಜಿ ತರಹ ಅನೇಕ ಹೆಣ್ಣು ಮಕ್ಕಳಿಗೆ ಮದುವೆಯಾಗಿಬಿಡುತ್ತಿತ್ತು. ಮುಂದೆ ಹೇಗೋ ಅವರ ಸಂಸಾರ ಒಂದು ತಳಹದಿಗೆ ಬಂದು ಸೇರುತ್ತಿತ್ತು. ಬಾಲ್ಯ ವಿವಾಹವಾದ್ದರಿಂದ , “ವಿದ್ಯೇ ನೈವೇದ್ಯೇ” ಆಗುತ್ತ್ತಿತ್ತು. ಆದರೂ ಹೆಣ್ಣು ಹೆತ್ತವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಇವುಗಳನ್ನೆಲ್ಲಾ ಮೆಲುಕು ಹಾಕುತ್ತಾ ತಮ್ಮ ಪಾಡಿಗೆ ತಾನು ಯಾವುದೋ ದೇವರ ಸ್ರೋತ್ರವನ್ನು ಗುನುಗುತ್ತಿದ್ದ ಸೀತಜ್ಜಿಗೆ ಬೇಡ ಬೇಡವೆಂದರೂ ಹಳೆಯ ನೆನಪುಗಳು
ಸಕ್ಕರೆಯನ್ನು ಮುತ್ತುವ ಇರುವೆಗಳ ಹಾಗೆ ಆಗಾಗ ಕಾಡುತ್ತಿತ್ತು.
ಒಂದು ಕಾಲದಲ್ಲಿ ಸೀತ ಆ ಊರಿನಲ್ಲಿಯೇ ಅತ್ಯಂತ ಸುಂದರ ಯುವತಿಯಾಗಿದ್ದಳು. ನೋಡಲು ಒಳ್ಳೆ ಕರ್ಪೂರದ ಗೊಂಬೆಯಂತಿದ್ದ ಸೀತಾಳನ್ನು ಗಡಸು ಸ್ವಭಾವದ ರಾಮಾಯರಿಗೆ ಕಟ್ಟಿದ್ದರು. ರಾಮರಾಯರಿಗೂ ಸೀತಾಳಿಗೂ ಬರೋಬರಿ 15 ವರ್ಷಗಳ ವಯಸ್ಸಿನ ಅಂತರವಿತ್ತು. ಆದರೂ ಭೀಮಸೇನರಾಯರು ಅದನ್ನು ಲೆಕ್ಕಿಸದೆ
” ಗಂಡಿನ ವಯಸ್ಸು ಯಾರಿಗೆ ಬೇಕಾಗಿದೆ ” ನಮ್ಮ ಸೀತೂ
ಒಳ್ಳೆ ಮನೆ ಸೇರಿದರೆ ಸಾಕು” ಎನ್ನುತ್ತಾ ಮಗಳ ಮದುವೆಯನ್ನು ಸಾಕಷ್ಟು ಅದ್ದೂರಿಯಿಂದಲೇ ಮಾಡಿ
ತಮ್ಮ ಕನ್ಯಾ ಸೆರೆಯನ್ನು ಬಿಡಿಸಿಕೊಂಡಿದ್ದರು. ತಾಯಿ
ಯದುಗಿರಿ ಸಹ ” ಈ ಅಂದ ಚೆಂದ ಎಷ್ಟು ದಿನಗಳ ವರೆಗೆ
ಇರುತ್ತದೆ, ಗಂಡಿಗೆ ಮುಖ್ಯವಾದದ್ದು ಸಂಪಾದನೆ” ಎನ್ನುತ್ತಾ ಗಂಡನ ಮಾತನ್ನು ಸಮರ್ಥಿಸಿದ್ದರು.
13 ನೇ ವಯಸ್ಸಿನಲ್ಲಿ ಮದುವೆಯಾದ ಸೀತಾ, 15 ನೇ
ವಯಸ್ಸಿನಲ್ಲೇ ತಾಯಿಯಾದಳು. ಆಗ ಹುಟ್ಟಿದವನೇ
ಸದಾನಂದ. ಮಗು ಯಾವಾಗಲೂ ಆರೋಗ್ಯವಾಗಿ ನಗುನಗುತ್ತಾ ಇರಲಿ ಎಂಬ ಸದಾಶಯದಿಂದ ರಾಮರಾಯರು ತಮ್ಮ ಚೊಚ್ಚಲ ಮಗುವಿಗೆ ಸದಾನಂದ
ಎಂಬ ಹೆಸರನ್ನು ಇಟ್ಟಿದ್ದರು. ಆದರೆ ವಿಧಿಯ ಆಟವನ್ನು
ಬಲ್ಲವರಾರು. ಮಗು ಹುಟ್ಟಿದ ಆರೇ ತಿಂಗಳಲ್ಲಿ, ರಾಮರಾಯರು, ಹೃದಯ ಸ್ಥಂಬನಕ್ಕೆ ಒಳಗಾಗಿ ಹಠಾತ್
ನಿಧನ ಹೊಂದಿದರು. 13 ನೇ ವಯಸ್ಸಿಗೆ ಮದುವೆ, 16 ನೇ ವಯಸ್ಸಿನಲ್ಲಿ ವೈಧವ್ಯ. ಇದರಿಂದ ಸೀತಳ ಬದುಕು
ಅಲ್ಲೋಲ ಕಲ್ಲೋಲವಾಗಿತ್ತು.
” ಅವರಿಲ್ಲರ ಈ ಹಾಳು ಬದುಕು ನನಗೇಕೆ ? ನನ್ನನ್ನು
ಸಹ ಅವರ ಜೊತೆ ಸುಟ್ಟು ಬಿಡಿ” ಎಂದು ಪರಿಪರಿಯಾಗಿ
ಗೋಳಾಡುತ್ತಿದ್ದ ಸೀತಾಳನ್ನು ತಂದೆ ಭೀಮಸೇನರಾಯ
ಹಾಗೂ ತಾಯಿ ಯದುಗಿರಿ ಅತ್ಯಂತ ಕಷ್ಟಪಟ್ಟು ಸಮಾಧಾನ ಗೊಳಿಸಿದ್ದರು.
ಮಗಳ ಬಾಳು ಇಷ್ಟು ಚಿಕ್ಕ ವಯಸ್ಸಿಗೆ ಹೀಗಾಗಿ ಹೋಯಿತಲ್ಲ ಎಂದು ಭೀಮಸೇನರಾಯರು ತುಂಬಾ
ನೊಂದು ಕೊಳ್ಳುತ್ತಿದ್ದರು. ಮಗಳಿಗೆ ಇನ್ನೊಂದು ಮದುವೆ
ಮಾಡುವ ಯೋಚನೆ ಸಹಾ ತಲೆಯನ್ನು ಕೊರೆಯುತ್ತಿತ್ತು.
ಅವರ ಪತ್ನಿ ಯದುಗಿರಿ ಸಹಾ, ” ಅವಳಿಗೆ ಈಗ ತಾನೇ
16 ವರ್ಷ ತುಂಬಿದೆ. ಪ್ರಯತ್ನ ಪಟ್ಟರೇ ಇನ್ನೊಂದು ಮದುವೆ ಮಾಡಬಹುದು ಎಂದಾಗ
” ಹಾಗಾದರೆ ನೀನೇ ಸೀತಾಳ ಬಳಿ ಪ್ರಸ್ತಾಪಿಸು ಎಂದರು.
ಒಂದು ದಿನ ಸೀತಾ ಒಬ್ಬಳೇ ಇದ್ದ ಸಂಧರ್ಭ ನೋಡಿಕೊಂಡ ರಾಯರು, ಮಗಳನ್ನು ಉದ್ದೇಶಿಸಿ,
” ನೋಡು ಸೀತು, ಹುಟ್ಟಿನ ಜೊತೆ ಸಾವು ಸಹ ಜೊತೆಯಾಗಿ ಬಂದಿರುತ್ತದೆ. ಹುಟ್ಟಿದ ಪ್ರತಿಯೊಂದು
ಜೀವಿಯೂ ಸಹ ಒಂದಲ್ಲಾ ಒಂದು ದಿನ ಸಾಯಬೇಕು.
ಇದು ಪ್ರಕೃತಿ ನಿಯಮ. ಇದನ್ನು ಮೀರಲು ಆ ತ್ರಿಮೂರ್ತಿಗಳಿಗೂ ಸಹಾ ಸಾದ್ಯವಿಲ್ಲ. ನಿನ್ನ ಮಗನ
ಭವಿಷ್ಯವನ್ನು ರೂಪಿಸುವುದು ಈಗ ನಿನ್ಮ ಹೊಣೆ.
ದೈರ್ಯ ತಂದು ಕೋ. ನಿನಗೆ ಮತ್ತೊಂದು ಮದುವೆ ಮಾಡೋಣ ಎಂದು ಕೊಂಡಿದ್ದೇನೆ, ಎಂದದ್ದೇ ತಡ,
ಹಾವನ್ನು ತುಳಿದವಳಂತೆ, ಹಿಂದಕ್ಕೆ ಸರಿದು ನಿಂತ ಸೀತಾ, ಅಪ್ಪ
ಈ ಜನ್ಮಕ್ಕೆ ಇದೊಂದೇ ಮದುವೆ ಸಾಕು ಇನ್ನು ಮುಂದೆ
ಎರಡನೇ ಮದುವೆ ವಿಷಯ ಮಾತನಾಡಿದರೆ ನನ್ನ ಮೇಲಾಣೆ ಎಂದು ಅಳುತ್ತಳೇ ಹೇಳಿ
ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡಳು
ಇದರಿಂದ ತೀವ್ರವಾಗಿ ನೊಂದ ಭೀಮಸೇನ ರಾಯರು,
ಅವರಿವರ ಕೈಲಿ ಹೇಳಿಸಿ ನೋಡಿದರಾದರೂ, ಸೀತಾ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕಲಿಲ್ಲ. ಕಡೆಗೆ
ಭೀಮಸೇನರಾಯರು, ಮಗಳ ಎರಡನೇ ಮದುವೆಯ
ಪ್ರಸ್ತಾಪವನ್ನು ಕೈ ಬಿಟ್ಟಿದ್ದರು.
ಕಾಲ ಚಕ್ರ ಯಾರಿಗೂ ಹೇಳದೆ, ಯಾರನ್ನೂ ಕೇಳದೆ
ಒಂದೇ ಸಮನೇ ಉರುಳುತ್ತಿದೆ. ಸೀತಾಳ ತಂದೆ ಭೀಮಸೇನ ರಾಯರು ಹಾಗೂ ತಾಯಿ ಯದುಗಿರಿ ಒಬ್ಬರ ಹಿಂದೆ ಮತ್ತೊಬ್ಬರು ಅನ್ನುವ ಹಾಗೆ
ಸ್ವರ್ಗಸ್ಥರಾದರು. ಮನೆಯ ಸಂಪೂರ್ಣ ಜವಾಬ್ದಾರಿ
ಈಗ ಸೀಳಾಳ ಮೇಲೆ ಬಿತ್ತು. ನಿಧಾನವಾಗಿ ಸೀತಾ ಒಂದೊದೇ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಾರಂಭಿಸಿದಳು. ಮನೆ ತುಂಬಾ ಆಳು ಕಾಳುಗಳಿದ್ದ
ಮನೆಯಲ್ಲಿ ಸೀತಾ ಮಾತೇ ವೇದ ವಾಕ್ಯ. ಹೊಲ ಗದ್ದೆಗಳ ಮೇಲುಸ್ತುವಾರಿ ಜೊತೆಗೆ, ದವಸ ಧಾನ್ಯಗಳ
ಸಂಗ್ರಹಣೆ, ಮಾರಾಟ ಮುಂತಾದ ಎಲ್ಲಾ ಕಾರ್ಯಗಳನ್ನು ಸ್ವಯಂ ಸೀತಾಳೇ ನಿರ್ವಹಿಸುತ್ತಿದ್ದಳು. ಮಗ ಸದಾನಂದ
ಪದವಿ ಬಿ.ಕಾಂ. ಪದವಿಯಲ್ಲಿ ಉತ್ತಿರ್ಣನಾದಾಗ ಹಿರಿ ಹಿರಿ ಹಿಗ್ಗಿದ ಸೀತಾ ಮುಂದೆ ಮಗನನ್ನು ಎಂ.ಕಾಂ ಗೆ ಸೇರಿಸಲು
ಇಷ್ಟ ಪಟ್ಟಿದ್ದಳು.
” ಇಷ್ಟು ಓದಿದ್ದು ಸಾಕಮ್ಮ ಹೆಚ್ಚು ಓದಿ ಏನು ಕಡೆದು ಕಟ್ಟೆ
ಹಾಕಬೇಕಾಗಿದೆ. ಹೊಲ ಗದ್ದೆಗಳನ್ನು ನೋಡಿಕೊಂಡು,
ಊರಿನಲ್ಲೇ ವ್ಯವಸಾಯ ಮಾಡುತ್ತೇನೆ” ಬಂದಾಗ ಸೀತಾ
” ನಿನ್ನ ಇಷ್ಟವೇ ನನ್ನ ಇಷ್ಟ.ಮಗು” ಎಂದು ಮಗನ ಬೆನ್ನು
ತಟ್ಟಿದ್ದಳು.
ಆದರೆ ನಾವು ಎಣಿಸಿದಂತೆ ಏನೂ ನಡೆಯುವುದಿಲ್ಲ
ಎಂಬುದಕ್ಕೇ ಸೀತಾಳ ಬದುಕೇ ಉತ್ತಮವಾದ ಉದಾಹರಣೆಯಾಗಬಲ್ಲದು. ಓದಿನಲ್ಲಿ ಮುಂದಿದ್ದ
ಸದಾನಂದ ಕ್ರಮೇಣ ಕೆಟ್ಟ ಚಟಗಳಿಗೆ ದಾಸನಾದ. ಸಿಗರೇಟಿನಿಂದ ಪ್ರಾರಂಭವಾದ ಆತನ ದುರಭ್ಯಾಸ, ಮದ್ಯಪಾನ, ಇಸ್ಪೀಟು, ಪರಸ್ತ್ರಿ ಸಹವಾಸ ಮುಂತಾದವುಗಳಿಗೆ ದಾರಿಯಾಯಿತು. ಮನೆಯ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುತ್ತಿದ್ದ ಸೀತಳಿಗೆ ಮಗನ ಮೇಲೆ ಅನುಮಾನ ಬರಲು ಪ್ರಾರಂಭವಾಯಿತು. ಇದರಿಂದ ತೀವ್ರ ನೊಂದ ಸೀತ, ಮಗನಿಗೆ ಮದುವೆಯಾದರೂ ಮಾಡಿದರೆ ಸರಿಹೋಗಬಹುದೆಂದು ಹಾಸನದ ಹಯವದನ ರಾಯರ
ಒಬ್ಬಳೇ ಪುತ್ರಿ ದಾಕ್ಷಾಯಿಣಿಯ ಜೊತೆ ಮಗನ ವಿವಾಹವನ್ನು ಹಾಸನದಲ್ಲಿ ನೆರವೇರಿಸಿದಳು. ತಾಯಿಯ
ಮಾತಿಗೆ ಪ್ರತ್ಯುತ್ತರ ಹೇಳದ ಸದಾನಂದ, ಗಪ್ ಚುಪ್ ಎನ್ನದೇ ದಾಕ್ಷಾಯಿಣಿಯ ಕೊರಳಿಗೆ ತಾಳಿ ಬಿಗಿದಿದ್ದ.
ಅವನಿಗೂ ಅದೇ ಬೇಕಾಗಿತ್ತು. ದಾಕ್ಷಾಯಿಣಿ ಅಷ್ಟೇನೂ
ರೂಪವಂತೆಯಲ್ಲದಿದ್ದರೂ, ನೋಡಲು ದಷ್ಟಪುಷ್ಟವಾಗಿದ್ದು, ಸದಾನಂದನ ಕಾಮದ ಹಸಿವಿಗೆ ಒಳ್ಳೆಯ ಮೇವಾಗಿದ್ದಳು. ಸದಾನಂದನಿಗೆ ಹೆಂಡತಿಯ ಮೇಲೆ ವಿಶೇಷವಾದ ಪ್ರೇಮ ಇಲ್ಲವಾಗಿದ್ದರೂ, ತನ್ನ
ಕಾಮ ತೃಷೆನ್ನು ತೀರಿಸಿಕೊಳ್ಳಲು ಅವಳು ಬೇಕಾಗಿದ್ದಳು.
ಗಂಡನ ಮನೋಭಾವ ಅರಿತಿದ್ದ ದಾಕ್ಷಾಯಿಣಿ ಸಹ,
ಗಂಡನಿಗೆ ಸಹಕರಿಸುತ್ತ ಬಂದಳು. ಬರುಬರುತ್ತಾ ಸೀತಾಳ ಆರೋಗ್ಯದಲ್ಲಿ ಏರು ಪೇರುಗಳು ಉಂಟಾಯಿತು. ಮನೆಯ ಸಂಪರ್ಕ ಜವಾಬ್ದಾರಿ ಸದಾನಂದನ ಪಾಲಾಯಿತು.
ಇಡೀ ಆಸ್ತಿ ಪಾಸ್ತಿಗಳ ಜವಾಬ್ದಾರಿ ವಹಿಸಿಕೊಂಡ ಸದಾನಂದ ಒಂದೊಂದೇ ಆಸ್ತಿಯನ್ನು ಮಾರಾಟ ಮಾಡತೊಡಗಿದ.
ನೋಡು ನೋಡುತ್ತಿದ್ದಂತೆ, ಹಲವಾರು ದುರಭ್ಯಾಸಗಳಿಗೆ
ದಾಸನಾದ. ಹೆಂಡತಿ ದಾಕ್ಷಾಯಿಣಿಯನ್ನು ದನಕ್ಕೆ ಹೊಡೆದ ಹಾಗೆ ಹೊಡೆಯಲು ಪ್ರಾರಂಭ ಮಾಡಿದ. ಮಗಳಿಂದ ವಿಷಯ ತಿಳಿದ ಹಯವದನರಾಯರು,
ದುರ್ಧಾನ ತೆಗೆದುಕೊಂಡವರ ಹಾಗೇ ಮನೆಯ ಒಳಗೆ ಬಂದು
” ಏನಮ್ಮಾ ಸೀತಮ್ಮ ನಿನ್ನ ಮಗ ಒಳ್ಳೆಯವನೆಂದು
ಭಾವಿಸಿ, ಅವನಿಗೆ ಹೆಣ್ಣು ಕೊಟ್ಟಿದ್ದಕ್ಕೆ ಎಂತಹ ಶಿಕ್ಷೆ
ಕೊಟ್ಟಿದ್ದಾನೆ ನೋಡಿದೆಯಾ, ಅವನೇನು ಮನುಷ್ಯನೋ
ರಾಕ್ಷಸನೋ, ನೀನಾದರೂ ಆ ಅಯೋಗ್ಯನಿಗೆ ಬುದ್ದಿ
ಹೇಳಬಾರದೇ ” ಎಂದು ಘರ್ಜಿಸಿದಾಗ
” ನನಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ ಹಯವದನರಾಯರೇ ” ನನ್ನ ಮಾತಿಗೆ ಕವಡೆ ಕಾಸಿನಷ್ಟೂ ಬೆಲೆಯಿಲ್ಲ” ನಾನೇನು ಮಾಡಲಿ ಹೇಳಿ”
ಎಂದಾಗ
ಹಯವದನ ರಾಯರು, ” ನೀವೂ ಬೇಡಿ, ನಿಮ್ಮ ಮಗನೂ
ಬೇಡ, ಎಂದು ಮಗಳನ್ನು ಕೈಹಿಡಿದು ಎಳೆಯುತ್ತಾ ತಮ್ಮ
ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದರು. ಆಗ
ಸೀತಮ್ಮ ರಾಯರ ಕೈ ಹಿಡಿದು ಇದನ್ನು ನಿಮ್ಮ ಕಾಲು
ಎಂದು ಭಾವಿಸಿ ಅವಳನ್ನು ಕರೆದುಕೊಂಡು ಹೋಗಿ
ಈ ಮನೆಯ ಮರ್ಯಾದೆ ಕಳೆಯಬೇಡಿ ಎಂದಾಗ ಕ್ಷುದ್ರ ರಾದ ರಾಯರು, ” ನಮ್ಮ ಮಗನಿಗೆ ಮರ್ಯಾದೆ ಇದ್ದರೆ
ತಾನೇ ಕಳೆಯುವುದು” ಎಲ್ಲವನ್ನೂ ಬಿಟ್ಟು ನಿಟ್ಟು ನಿಂತಿರುವ ಆ ಅಯೋಗ್ಯನಿಗೆ ಸರಿಯಾಗಿ ಬುದ್ದಿ ಕಲಿಸದಿದ್ದರೆ, ನಾನು ಹಯವದನನೇ ಅಲ್ಲ ” ಎಂದು
ಹೇಳುತ್ತ ಹೊರನಡೆದಿದ್ದರು.
ತಾಯಿಯಿಂದ ವಿಷಯ ತಿಳಿದ, ಸದಾನಂದ, ಹೋದರೇ
ಹೋಗಲಿ, ಪೀಡೆ ತೊಲಗಿತು ಎಂದು ಉಢಾಫೆಯಿಂದ
ಹೇಳಿ ಹೊರಗೆ ಹೋದ. ದಾಕ್ಷಾಯಿಣಿ ಮನೆಬಿಟ್ಟು ಹೋದ ಮೇಲೆ ಸದಾನಂದನನ್ನು ಕೇಳುವವರೇ ಇಲ್ಲವಾಯಿತು, ತಾಯಿ ಏನಾದರೂ ಬುದ್ದಿ ಮಾತು ಹೇಳಲು ಬಂದರೆ, ” ನಿನ್ನ ಪುರಾಣ ಯಾರಿಗೆ ಬೇಕು ?
ತೆಪ್ಪಗೆ ಹೋಗಿ ಮಲಗಿಕೋ, ನನ್ನ ಇಷ್ಟ ಬಂದಂತೆ ಮಾಡುತ್ತೇನೆ” ಎಂದಾಗ ಸೀತಮ್ಮ ಕಣ್ಣೀರು ಸುರಿಸುತ್ತಾ
ತಾನು ಇಷ್ಟು ವರ್ಷಗಳ ಕಾಲ ಪೀತಿಯೆರೆದು ಸಾಕಿದ
ಮಗ, ಕುಲಕ್ಕೇ ಮೃತ್ಯವಾದನೇ ಎಂದು ಹಲುಬಿದರು.
ತಾಯಿಯನ್ನು ಕಸದಂತೆ ಕಾಣುತ್ತಿದ್ದ ಸದಾನಂದ, ಆಸ್ತಿಯನ್ನು ಮನಸ್ಸಿಗೆ ಬಂದಂತೆ ಮಾರುತ್ತಾ, ಕೆಲವೇ
ವರ್ಷಗಳಲ್ಲಿ ಬರಿಗೈ ದಾಸನಾದ. ಅದೂ ಅಲ್ಲದೇ ಯಾವುದೋ ಗುಹ್ಯ ರೋಗಕ್ಕೆ ತುತ್ತಾಗಿ ಅವನ ಆರೋಗ್ಯ
ಕ್ಷೀಣಿಸುತ್ತಾ ಬಂದಿತು. ಕೊನೆಗೊಂದು ದಿನ ” ತುಂಬಾ
ತಲೆ ಸುತ್ತುತ್ತಿದೆ” ಎನ್ನುತ್ತಾ ಬಂದ ರಾಘವ ಹಾಸಿಗೆ ಹಿಡಿದು ಮಲಗಿದ. ಪಟ್ಟಣ ಹಾಗೂ ನಗರಗಳ ಖ್ಯಾತ ವೈದ್ಯರಿಗೆ ತೋರಿಸಿ ಔಷದೋಪಚಾರ ಪಡೆದರೂ ಸಹ ಅವನಿಗೆ ಗುಣವಾಗಲಿಲ್ಲ. ಕೊನೆಗೊಂದು ದಿನ
“ಅಯ್ಯೋ ಎದೆ ನೋವು, ಎದೆ ನೋವು ಎಂದು ಚೀರಲು
ಶುರುಮಾಡಿದ ರಾಘವನನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯಲು, ಸಜ್ಜಾದ ಸೀತಮ್ಮ ತಮ್ಮ ಜೊತೆಗೆ ಪಕ್ಷದ
ಮನೆಯ ವೆಂಕಟಸುಬ್ಬಯ್ಯನವರನ್ನು ಸಹ ಕರೆದುಕೊಂಡು ಆಂಬ್ಯುಲೆನ್ಸ್” ಹತ್ತಿದಳು. ಆದರೆ ಆಸ್ಪತ್ರೆ
ತಲುಪುವುದಕ್ಕಿಂತ ಮುಂಚೆಯೇ ಸದಾನಂದನ ಪ್ರಾಣ ಪಕ್ಷಿ
ಹಾರಿ ಹೋಗಿತ್ತು.
ಇದ್ದ ಇಬ್ಬನೇ ಮಗನನ್ನು ಕಳೆದುಕೊಂಡ ಸೀತಮ್ಮ
ಕಾಲ ಚಕ್ರ ಉರುಳಿದಂತೆ, ಸೀತಜ್ಜಿಯಾದರು. “ಪುತ್ರ ಶೋಕಂ ನಿರಂತರಂ ಅನ್ನುವ ಹಾಗೆ ಮಗನ ಅಗಲಿಕೆಯಿಂದ ಅವರು ತೀವ್ರವಾಗಿ ಘಾಸಿಗೊಂಡಿದ್ದರು. ಅವನು ಎಷ್ಟೇ ಕೆಟ್ಟವನಾದರೂ ಸಹ, ಮಗ ಎಂಬ ವಾಂಚಲ್ಯ ಅವರನ್ನು ಬಿಟ್ಟು ಹೋಗಿರಲಿಲ್ಲ. ಎಷ್ಟೋ ಬಾರಿ ತಮಷ್ಟಕ್ಕೆ ತಾವೇ ಏನೋ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು ಸೀತಮ್ಮನವರಿಗೆ ಮತಿಬ್ರಾಂತಿಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ಸೀತಜ್ಜಿಯ ಕಿವಿಗೆ ಸಹಾ ಬಿದ್ದಿತು. ಅವರು ಸುಮ್ಮನೇ ನಕ್ಕು ಬಿಡುತ್ತಿದ್ದರಷ್ಟೇ ಅಲ್ಲದೇ ಯಾವ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಎಷ್ಟೋ ಬಾರಿ ಸೀತಜ್ಜಿ ಮಾಡಿದ ಕೆಲಸವನ್ನೇ ಪುನಃ ಪುನಃ ಮಾಡುತ್ತಿದ್ದರು. ಇತ್ತೀಚೆಗೆ ಅವರಿವರ
ಮನೆಗಳಿಗೆ ಹಪ್ಪಳ, ಸಂಡಿಗೆ ಸಾರಿನ ಪುಡಿ, ಗೊಜ್ಜು ಮುಂತಾದವುಗಳನ್ನು
ಮಾಡಿಕೊಡುತ್ತಾ ಪ್ರತಿ ನಿತ್ಯ ದೇವರ ಜಪವನ್ನು ತಪ್ಪದೇ
ಮಾಡುತ್ತಾ ಸಾತ್ವಿಕ ಜೀವನ ಸಾಗಿಸುತ್ತಿರುವ ಸೀತಜ್ಜಿಯದು ಸ್ವಾವಲಂಬಿ ಬದುಕು. ಯಾರ ಕೈಗೂ
ಬೀಳಬಾರದು, ಇದ್ದಷ್ಟು ದಿನ ಒಳ್ಳೆಯ ಕೆಲಸ ಮಾಡಿ ಕೊನೆಗೆ
ಆ ದೇವರ ಪಾದ ಸೇರಬೇಕೆಂದು ಹಾತೊರೆಯುತ್ತಿರುವ
ಸೀತಜ್ಜಿ, ಊರವರ ಪ್ರೀತಿಗೆ ಪಾತ್ರಳಾಗಿ, ಎಲ್ಲರ ಅಚ್ಚುಮೆಚ್ಚಿನ ಸೀತಜ್ಜಿಯಾಗಿದ್ದರು. ಹಯವದನರಾಯರು ಸಹ, ಸದಾನಂದನ ಮರಣದ ನಂತರ, ದಾಕ್ಷಾಯಿಣಿಯ ಜೊತೆ, ಸೀತಜ್ಜಿಯ ಜೊತೆಯಲ್ಲೇ ವಾಸ ಮಾಡುತ್ತಾ, ಸೀತಜ್ಜಿಯ ಅಳಿದುಳಿದ
ಆಸ್ತಿಪಾಸ್ತಿಗಳ ಮೇಲುಸ್ತುವಾರಿ ವಹಿಸಿಕೊಂಡರು.
ಒಂದು ದಿನ ದೇವರ ಸ್ಮರಣೆಯಲ್ಲಿ ತೊಡಗಿದ್ದ ಸೀತಜ್ಜಿ,
ಕುಡಿಯಲು ನೀರು ಕೇಳಿದರು.
“ಇಗೋ ತಂದೆ” ಎನ್ನುತ್ತಲೇ ಬೆಳ್ಳಿಯ ಚೆಂಬಿನಲ್ಲಿ ನೀರನ್ನು
ತಂದು ಸೀತಜ್ಜಿಗೆ ಕುಡಿಸಿದ ದಾಕ್ಷಾಯಿಣಿ, ನೋಡುನೋಡುತ್ತಲೇ ಸೀತಜ್ಜಿಯ ಕಟಬಾಯಿಯಿಂದ
ನೀರು ಹೊರಬರುತ್ತಿರುವುದನ್ನು ಕಂಡು ಜೋರಾಗಿ
ಕಿರುಚಿ ಕೂಗಿಕೊಂಡಳು. ಲೆಕ್ಕ ಪತ್ರಗಳನ್ನು ನೋಡುತ್ತಾ
ಕುಳಿತಿದ್ದ ಹಯವದನರಾಯರು ಸಹ ಓಡುತ್ತಾ ಹಜಾರಕ್ಜೆ ಬಂದರು, ಆದರೆ ಅಷ್ಟರಲ್ಲಾಗಲೇ
ಸೀತಜ್ಜಿಯ ಪ್ರಾಣ ಹಾರಿಹೋಗಿತ್ತು
ಕೆ.ವಿ.ವಾಸು
“
.