ಶಮಾ. ಜಮಾದಾರ.

ಕಾವ್ಯ ಸಂಗಾತಿ

ಗಜಲ್

ಶಮಾ. ಜಮಾದಾರ.

ಬೆಂಕಿಯೆನುವೆ ಬರಹಗಳನೋದಿ ಮನೆಯಲ್ಲಿ ತಣ್ಣನೆಯ ಹಿಮವಾಗಿರುತ್ತೇನೆ
ಮಲ್ಲಿಗೆಯೆನುವೆ ಸೌಂದರ್ಯಕೆ ಕೋಣೆಯಲ್ಲಿ ಕಾಗದ ಹೂವಿನ ಗಮವಾಗಿರುತ್ತೇನೆ

ಗೆಲ್ಲುಗೆಲ್ಲುಗಳಲಿ ಹೀಯ್ಯಾಳಿಕೆಯ ಬಾಣ ನೆಟ್ಟ ಗುರುತುಗಳಿವೆ ಗಮನಿಸು
ದೈವಿಕವೆನುವೆ ಚಹರೆಕಳೆಗೆ ಮೂಲೆಯಲ್ಲಿ ಮೂಸದ ಹಳೆಯ ಕಸವಾಗಿರುತ್ತೇನೆ

ಅಂತರಾಳದ ಕತ್ತಲೆ ಗೂಡಲ್ಲಿ ಅಡಗಿಸಿಟ್ಟ ಕತ್ತರಿಸಿರಿದ ರೆಕ್ಕೆಗಳನ್ನು ಜೋಡಿಸುವೆಯಾ
ಮೈನಾಹಕ್ಕಿಯೆನುವೆ ಉಲಿವ ದನಿ ಕೇಳಿ ಭಯದಲ್ಲಿ ಸತತ ಮೌನವಾಗಿರುತ್ತೇನೆ

ಸಾಂಗತ್ಯದ ಸುಗಮ ಪಥದಲ್ಲಿ ಅಡೆತಡೆಯಾಗುವ ಆತಂಕಗಳಿಗೆ ಕೊನೆಯಂದೋ
ರಂಭೆಯೆನುವೆ ತಳಕು ಬಳುಕಿಗೆ ಹಾಸಿಗೆಯಲ್ಲಿ ಹಳಸಲು ಮಾಂಸವಾಗಿರುತ್ತೇನೆ

ಅಧಿಕಾರ ಹೇಳಲಷ್ಟೇ ಶಮಾ, ಸವಕಲು ನಾಣ್ಯ ಬದುಕಿನ ಪಯಣದಲ್ಲಿ
ದೀಪವೆನುವೆ ನಗೆಬೆಳಕಿಗೆ ಮೋಡದ ಮರೆಯಲ್ಲಿ ಮಾಸಿದ ತಾರೆಯಾಗಿರುತ್ತೇನೆ


2 thoughts on “ಶಮಾ. ಜಮಾದಾರ.

  1. ತಲ್ಲಣಗಳ ಅನಾವರಣ..
    ವೈರುದ್ಧ್ಯಗಳ ಸಹಿಸುವಿಕೆ
    ಗಜಲ್ ಮ್ಯಾಮ್ ಸೂಪರ್..

Leave a Reply

Back To Top