ನಾಮದೇವ ಕಾಗದಗಾರ ಕವಿತೆ-ಒಡಲ ವೇದನೆ

ಕಾವ್ಯ ಸಂಗಾತಿ

ಒಡಲ ವೇದನೆ

ನಾಮದೇವ ಕಾಗದಗಾರ

ಚಿತ್ರಕೃಪೆ:ನಾಮದೇವ ಕಾಗದಗಾರ

ರವಿಕೆಯೊಳಗಿನ ಉಬ್ಬುಗಳನ್ನು
ಹುಡುಕುವ ಲಜ್ಜೆಗೆಟ್ಟವರಿಗೆ
ಅವಳೊಳಗಿನ ವೇದನೆ
ಏಕೆ ಕಾಣುತ್ತಿಲ್ಲ ?

ಸುತ್ತೆಲ್ಲ ಸೇರಿವೆ
ರಣಕೇಕೆ ಹಾಕುತ್ತಾ
ಜೊಲ್ಲು ಸುರಿಸುವ
ರಣಹದ್ದುಗಳ ದಂಡು!

ನಿಮ್ಮೊಡಲೊಳಗೆ
ಬುಗಿಲೆದ್ದ ಬಯಕೆಗಳು
ಭಯೋತ್ಪಾಧಕರಿಗಿಂತಲೂ
ಘೋರ!

ಕಂಗೆಟ್ಟ ಆಸೆಗಳು
ಹಾಸಿಗೆಯ ತುಂಬೆಲ್ಲಾ
ಚೆಲ್ಲಿ ಚುಚ್ಚುತ್ತಿವೆ
ಬೇಲಿ ಮುಳ್ಳುಗಳಾಗಿ,

ಈ ವಿಷದ ನಾಲಿಗೆ
ಚಾಚಿದೆ ಎಲ್ಲೆಂದರಲ್ಲಿ
ಜೀವದ ಕೊರಳಿಗೆ
ಉರುಳಾಗಿ ಪರಿಣಮಿಸಿದೆ,

ಮೂಢ ಮೌಡ್ಯಗಳು
ಸುತ್ತು ಹಾಕಿವೆ
ಅಬಲಯರ ಸುತ್ತ
ಕಾಮದಾಹದ ರಣಹದ್ದುಗಳಾಗಿ,

ಕನಸು ಹೊತ್ತ
ಮೊಗ್ಗುಗಳು
ಕಮರಿ ಹೋಗುತ್ತಿವೆ
ಅರಳುವ ಮೊದಲೇ,

ಒಡಲೊಳಗಿನ ಬೇರುಗಳಿಗೆ
ಕಿಚ್ಚು ಹಚ್ಚುತ್ತಿರುವ
ಕಾಮುಕರ ನರ-ನಾಡಿಗಳನ್ನು
ಕಿತ್ತೆಸೆಯಬೇಕಾಗಿದೆ..

ಮತ್ತೊಂದು ಕಾಮುಕ ಬೀಜ
ಮೊಳಕೆಯಾಗುವ ಮೊದಲು..


ಚಿತ್ರ ಮತ್ತು ಕವಿತೆ:
ನಾಮದೇವ ಕಾಗದಗಾರ

Leave a Reply

Back To Top