ಅವಳಿಗೆ ರೂಪಕ —ರೇಖಾ ಭಟ್ ಹೊಸ ಕವಿತೆ-

ಕಾವ್ಯ ಸಂಗಾತಿ

ಅವಳಿಗೆ ರೂಪಕ

ರೇಖಾ ಭಟ್

ಬದುಕನ್ನು ಪ್ರೀತಿಸುವ
ಹುಚ್ಚಿಗೆ ಬಿದ್ದವಳು
ಮೋಡದಂತೆ
ಎಲ್ಲೆಡೆ ಪ್ರೀತಿಯ ನೋಟ
ಹರಿಸುತ್ತಾಳೆ
ಆರ್ದ್ರ ಭಾವಗಳ ಮಳೆಗೆ
ಚಿಗುರಿ ಜೀವ ಪಡೆದೆನೆಂದು
ಹರ್ಷಗೊಂಡ ಎದೆ ಬಯಲು
ಮೋಡವನ್ನು ಹಿಡಿದಿಡುವ
ಕನಸು ಕಾಣುತ್ತದೆ

ಗಾಳಿಯಷ್ಟೇ ಹಗುರಾಗಿ
ಬದುಕಬೇಕೆಂದು
ಹಠ ಹಿಡಿದವಳು
ಬಿರಿದ ಉರಿ ನೆತ್ತಿಗಳಿಗೆ
ತಂಪಿನ ಸೆರಗು ಸವರಿ
ಬೆವರ ಸಾಲಲ್ಲಿ
ತನ್ನದೇ ಹೆಸರು ಮೂಡಿಸಿ
ಸಾಗುತ್ತಾಳೆ
ಬಿಸಿ ಒರಟು ಕೈಯೊಂದು
ಆಡುತ್ತಾ ಬಂದ ತಂಗಾಳಿಯ
ಮುಷ್ಟಿಯೊಳಗಿಡಲು
ಯತ್ನಿಸಿ ಸೋಲುತ್ತದೆ

ಅರಳಿ ತಂಪೆರೆಯುವ
ಬಯಕೆಯವಳು
ಹೂವಾಗಿ ನಗುತ್ತಾಳೆ
ಹೂದೋಟ
ನನ್ನದೆಂದು ಮೆರೆಯುವ
ಬೇಲಿ ಸಾಲು
ಹರಡುವ ಕಂಪನ್ನು
ತಡೆಯಲಾರದೆ
ಮೈ ಮುಳ್ಳಾಗಿಸಿಕೊಳ್ಳುತ್ತದೆ

ಅಪರಂಜಿ ತಾನಾಗಬೇಕು
ಎಂದುಕೊಂಡವಳು
ಕುಲುಮೆ ಕಾವಿನಗುಂಟ
ನಡೆಯುತ್ತಾಳೆ
ಸುಟ್ಟು ಪರೀಕ್ಷಿಸುವ
ಹಮ್ಮಿನ ಕುಲುಮೆ
ಕುದಿಯುತ್ತದೆ
ಅವಳು ಶುದ್ಧವಾಗಿ
ಎದ್ದು ಹೊಳೆಯತ್ತಾಳೆ

ಅವಳು ಅಪರೂಪದವಳು
ಎಲ್ಲೂ ಸಲ್ಲುವಳಲ್ಲ
ನಿಲ್ಲುವವಳೂ ಅಲ್ಲ
ಅರ್ಥವಾದ ದಿನ
ಮಳೆ ತಂಗಾಳಿ ಹೊನ್ನು ಹೂಗಳೆಲ್ಲ
ಮಾಯೆಯಾಗಿ ಕಾಡುತ್ತವೆ
ಅವಳಿಗೆ ರೂಪಕವಾಗಿ
ನಿಲ್ಲುತ್ತವೆ


3 thoughts on “ಅವಳಿಗೆ ರೂಪಕ —ರೇಖಾ ಭಟ್ ಹೊಸ ಕವಿತೆ-

Leave a Reply

Back To Top