ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಬೇರೆಯವರ ಸೇವೆಯಲ್ಲಿಯೇ ಸವೆದು ಹೋಗುವ ಜೀವಗಳು…

ಬೇರೆಯವರ ಸೇವೆಯಲ್ಲಿಯೇ ಸವೆದು ಹೋಗುವ ಜೀವಗಳು…

ಕತ್ತಲು ತುಂಬಿದ ಮನೆ. ಮನೆಯ ಮೂಲೆ ಮೂಲೆಗಳಲ್ಲಿಯೂ ಚದುರಿ ಹೋದ ನೂಲಿನೆಳೆಗಳು. ಕೈಯಿಂದ ನೇಯುವ ಕೈಮಗ್ಗಗಳು ಮುಂಜಾನೆಯಿಂದ ಸಂಜೆಯವರೆಗೂ ಕಟ್ ಕಟ್ ಕಟ್ಟಯಂದು ಶಬ್ದ ಮಾಡುತ್ತವೆ.  ಗಂಡ – ಹೆಂಡತಿ ಅಲ್ಲದೇ ಇಡೀ ಮನೆಯ ಪರಿವಾರದವರೇಲ್ಲರೂ  ಒಂದೋ ಇಲ್ಲವೇ  ಎರಡು ಸೀರೆಗಳನ್ನು ನೇಯುತ್ತಾರೆ.  ನೇಯ್ದ ಸೀರೆಗಳನ್ನು  ಸಾಹುಕಾರನಿಗೆ ಕೊಟ್ಟು, ಸಾಹುಕಾರಿನಿಂದ ತರುವ ಪುಡಿಗಾಸು ಇಡೀ ಕುಟುಂಬಕ್ಕೆ ಆಧಾರ..!!

ಮುಂಜಾನೆ  ಎಂಟು ಗಂಟೆಗೆ   ಮನೆ ಮನೆಗೆ ಹೋಗಿ ಬಟ್ಟೆಗಳನ್ನು ಸಂಗ್ರಹಿಸಿ ತಂದು ಮಡಿ ಮಾಡಬೇಕು. ನಂತರ ಇಸ್ತ್ರಿ ಮಾಡಿ, ಶುಭ್ರವಾದ ಬಟ್ಟೆಗಳನ್ನು ಮತ್ತೆ ಅವರವರ  ಮನೆಗೆ ಮುಟ್ಟಿಸಬೇಕು. ಇದು ಇಂದು ನಿನ್ನೆಯದಲ್ಲ  ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.  ಆದರೂ ಅವರು ಕೊಡುವ ಅಲ್ಪಸ್ವಲ್ಪ ಕಾಸು ದವಸ ಧಾನ್ಯಗಳೇ ಇವರ  ಕುಟುಂಬಕ್ಕೆ ಆಧಾರ…!!

ಎಂಟು ದಿನವಾಯಿತು ಮಡಿಕೆಗಳನ್ನು ಮಾಡಿ ಯಾವಾಗ ಖರ್ಚಾಗುವುದೋ ಏನೋ..?ಇಡೀ ಕುಟುಂಬವೇ ಮಡಿಕೆ ಮಾಡಲು ಬೇವರು ಹರಿಸುತ್ತದೆ. ಹೊಲದಿಂದ ಮಣ್ಣನ್ನು ತಂದು   ಹದವಾಗಿ ಕಲೆಸಬೇಕು. ನಂತರ ನೆನಸುತ್ತಾ ತುಳಿಯಬೇಕು. ಅದನ್ನು ತಿಗರಿಗೆ ಹಾಕಿ ಬೆವರು ಹನಿಗಳನ್ನು ಸುರಿಸುತ್ತಾ, ತಿಗರಿಯನ್ನು ತಿರುಗಿಸುತ್ತಾ, ಬದುಕಿನ ಚಕ್ರವನ್ನು ಉರುಳಿಸಲೇಬೇಕು..! ತಿಗರಿಯ ಚಕ್ರವೇ ಆ ಕುಟುಂಬಕ್ಕೆ ಆಸರೆ..!!

ಈ ಮೇಲಿನ ವೃತ್ತಿಪರ ಬಂಧುಗಳ ಸ್ಥಿತಿಯನ್ನು ನೋಡಿದಾಗ,  ಆಧುನಿಕ ಕಾಲಘಟ್ಟದಲ್ಲಿ ರಬ್ಬರ್, ಪ್ಲಾಸ್ಟಿಕ್, ಫೈಬರ್  ಮತ್ತು ಆಧುನಿಕ ಇನ್ನಿತರ ಉಪಕರಣಗಳು  ಬಂದು ಮೂಲ ವೃತ್ತಿಗಳನ್ನು ಮೂಲೆಗುಂಪು ಮಾಡಿ, ಅಕ್ಷರಶಃ ಬದುಕನ್ನು ಬೀದಿಗೆ ಬರುವಂತೆ ಮಾಡಿರುವುದು ನೋವಿನ ಸಂಗತಿ. 

ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿಕ ಮತ್ತು ಕಾಯಕ ಜೀವಿಗಳು ಒಬ್ಬರಿಗೊಬ್ಬರು ಪೂರಕವಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ವರ್ಷದುದ್ದಕ್ಕೂ ತಾನುಗೈದ ಆಯಕ್ಕೆ ವರ್ಷದ ಕೊನೆಯಲ್ಲಿ ಅಂದರೆ ಸುಗ್ಗಿಯ ಸಮಯದಲ್ಲಿ ರೈತರು ಕಸಬುದಾರರಿಗೆ ಇಂತಿಷ್ಟು ಕಾಳು ಕಡಿಗಳನ್ನು,  ಧಾನ್ಯಗಳನ್ನು,  ತೆಗೆದಿರಿಸಿ ಅವರನ್ನು ಕರೆದು ಕೊಡುತ್ತಿದ್ದರು. ಹೊಲದಲ್ಲಿ ಬೆಳೆಯುವ ತರಕಾರಿ, ಕಾಯಿಪಲ್ಲೆ, ಹಣ್ಣುಗಳನ್ನು, ಆಯಗಾರರಿಗೆ ಮೊದಲೇ ಕೊಟ್ಟು ನಂತರ ಬೇರೆಯವರಿಗೆ ಸಲ್ಲಿಸುತ್ತಿದ್ದಿದ್ದು ವಾಡಿಕೆ.

 ಆದರೆ ಇವತ್ತು ಅಂತಹ ಪರಸ್ಪರ ಪ್ರೀತಿ, ವಿಶ್ವಾಸದ ಸಂಬಂಧಗಳು ಕಳಚಿಹೋಗಿ ವ್ಯಾಪಾರದ ಕಪಿಮುಷ್ಠಿಯಲ್ಲಿ ಬೆಂದುಹೋಗುತ್ತಿವೆ. ಆಧುನಿಕ ಕಾಲದ ತಾಂತ್ರಿಕ, ಕೈಗಾರಿಕರಣದಿಂದಾಗಿ ಗ್ರಾಮೀಣ ಭಾಗದ ಕುಂಬಾರಿಕೆ, ಚಮ್ಮಾರಿಕೆ, ಅಕ್ಕಸಾಲಿಗತನ ಮೇಧಾರಿಕೆ,ಕಂಬಾರಿಕೆ, ಮಡಿವಾಳಿಕೆ.. ಇವುಗಳಲ್ಲದೆ ಇನ್ನೂ ಹತ್ತು ಹಲವಾರು ವೃತ್ತಿಪರ ಕಸಬುಗಳ ಬಂಧುಗಳು ಆಧುನಿಕತೆಯ ಒಡೆತಕ್ಕೆ ಬಿದ್ದು ನರಳುತ್ತಿದ್ದಾರೆ.

ಹಳ್ಳಿಗಳ ಪ್ರತಿಯೊಬ್ಬರ ಮನೆಗಳಲ್ಲಿ ಮದುವೆ, ಋತುಮತಿ, ಬಾಣಂತನ, ಸಾವು – ನೋವುಗಳಲ್ಲಿಯೂ ಯಾವುದೇ ಮುಖ್ಯ ಸಮಾರಂಭಗಳಿರಲಿ ಎಲ್ಲಾ ವೃತ್ತಿಪರ ಬಂಧುಗಳು ಹಾಜರಿರುತ್ತಿದ್ದರು. ತಮ್ಮ ತಮ್ಮ ಕೆಲಸಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದರು. ಅದು ತಮ್ಮ ಮನೆಯ ಕೆಲಸವೆಂದೇ ಅವರು ಭಾವಿಸಿಕೊಂಡಿದ್ದರು.

 ಬಟ್ಟೆಗಳನ್ನು ಮಡಿ ಮಾಡಿ, ಅವುಗಳನ್ನು ಇಸ್ತ್ರಿ ಮಾಡಿ ಶುಭ್ರಗೊಳಿಸಿ ಅಚ್ಚುಕಟ್ಟಾಗಿ ಕೊಡುವ ಮಡಿವಾಳ ಬಂಧುಗಳ ಪ್ರೀತಿಯನ್ನು ಮರೆಯುವುದುಂಟೆ..?

ಅವರ ಜೊತೆಗೆ ಕಕ್ಕುಲತೆಯಿಂದ ಮಾತನಾಡುತ್ತಾ, ಅಕ್ಕ, ಅಮ್ಮ, ಅತ್ತೆ, ಮಾವ ಅಣ್ಣ ತಮ್ಮ ಎನ್ನುವ ಸಂಬಂಧಗಳು ಇವತ್ತು ಕಾಣೆಯಾಗಿರುವುದು ವಿಷಾದವೇನಿಸುತ್ತವೆ. ಅವರ ಜಾಗದಲ್ಲಿ ವಾಷಿಂಗ್ ಮಷೀನ್ ಗಳು ಕೆಲಸ ಮಾಡುತ್ತವೆ. ಆದರೆ ಅವರ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕವಾಗಿ ಸದೃಢವಾಗುವ ಅನೇಕ ಯೋಜನೆಗಳನ್ನು  ತರಬೇಕಾಗಿರುವುದು ಪ್ರಜಾಸತ್ತಾತ್ಮಕ ಸರ್ಕಾರಗಳ ಕರ್ತವ್ಯ.

ಮಣ್ಣಿನ ಮಡಿಕೆಯ ಜಾಗದಲ್ಲಿ ಪ್ಲಾಸ್ಟಿಕ್ ಗಳು, ಫೈಬರ್ ಗಳು, ಲೀಲಾಜಾಲವಾಗಿ ಓಡಾಡುತ್ತಿವೆ. ಮಣ್ಣಿನ ಮಡಿಕೆಗಳು ಇವತ್ತು ಮೂಲೆಗುಂಪಾಗಿರುವುದನ್ನು ಕಂಡರೂ.. ಮತ್ತೆ ಮಣ್ಣಿನ ಮಡಿಕೆಗಳು ಆಧುನಿಕತೆಯ ಸ್ಪರ್ಶವನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಕಾಣುತ್ತವೆ. ಆದರೆ ನಿಜವಾಗಿಯೂ ಮಡಿಕೆಯನ್ನು ಮಾಡಿದವರಿಗೆ ಲಾಭ ಸಿಗದೆ ಮಧ್ಯವರ್ತಿಗಳ ಹಾವಳಿಯಿಂದಾಗಿ ಮಾರುಕಟ್ಟೆಯ ಲಾಭಕೋರತನದ ಕಪಿಮುಷ್ಠಿಯಿಂದಾಗಿ ಅವರು ಮತ್ತೆ ಆರ್ಥಿಕವಾಗಿ ನಷ್ಟದಲ್ಲಿರುವುದನ್ನು ನಾವು ಕಾಣಬಹುದು. ಇಂತಹ ವೃತ್ತಿಪರ ಕುಲಕಸಬುಗಳಿಗೆ ಸರ್ಕಾರಗಳು ಸರಿಯಾದ ಮಾರುಕಟ್ಟೆಯನ್ನು ಒದಗಿಸದೆ ಹೋದರೆ ಅವರು ತಯಾರಿಸಿದ ವಸ್ತುಗಳಿಗೆ ನ್ಯಾಯಯುತವಾದ ಮೌಲ್ಯವನ್ನು ನೀಡಿದೆ ಹೋದರೆ.

 ಅವರ ಶ್ರಮ ಹೇಗೆ  ಸಾರ್ಥಕವಾಗುತ್ತದೆ..?

ದುಡಿಯುವವನಿಗೆ   ಸರಿಯಾದ ಲಾಭ ಇಲ್ಲದೆ ಹೋದರೆ “ದುಡಿಯುವವನು ದುಡಿಯುತ್ತಲೇ ಇರುತ್ತಾನೆ. ಕೊಳ್ಳುವವನು ಕೊಳ್ಳುತ್ತಲೇ ಸಣ್ಣವನಾಗುತ್ತಾನೆ. ದುಡಿಯುವವನು ಮತ್ತು ಕೊಳ್ಳುವವನ ಮಧ್ಯದಲ್ಲಿ ಬಂದು ಹೋಗುವ ದಲ್ಲಾಳಿಯು ಕೊಬ್ಬುತ್ತಾನೆ” ಎನ್ನುವ ಮಾತಂತೂ ಸುಳ್ಳಲ್ಲ ಎನಿಸುತ್ತದೆ.

ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ವೃತ್ತಿಯವರು ಪ್ರತಿಯೊಬ್ಬರ ಜೀವನದಲ್ಲಿಯೂ  ಸದಾ ಸೇವೆಯನ್ನು ಸಲ್ಲಿಸುತ್ತಾರೆ.

ಪರರ ಸೇವೆಯಲ್ಲಿಯೇ ತಮ್ಮ ಒಳಿತನ್ನು ಕಂಡುಕೊಂಡಿದ್ದಾರೆ.

ಕ್ಷೌರಿಕರು ಕೇಶ ವಿನ್ಯಾಸವನ್ನು ಮಾಡುವುದರ ಜೊತೆಗೆ ಮುಖವನ್ನು ಸುಂದರಗೊಳಿಸುವ ಕಾಯಕ.  ಮಡಿವಾಳರು ಬಟ್ಟೆಯನ್ನ ಶುದ್ಧಗೊಳಿಸುವ ಕಾಯಕ.  ಕುಂಬಾರನು ಮಡಿಕೆಗಳನ್ನು ಮಾಡುವ ಕಾಯಕ. ಕಂಬಾರನು ಕೃಷಿಗೆ ಬೇಕಾದ ಸಲಕರಣೆಗಳನ್ನು ತಯಾರಿಸುವ ವೃತ್ತಿ. ಹಾಗೆಯೇ ಹಳ್ಳಿಗಳ, ನಗರಗಳ ಪ್ರಮುಖ ರಸ್ತೆಗಳನ್ನು ಕಸ ಗುಡಿಸಿ ಶುಚಿಗೊಳಿಸುವ ಪೌರಕಾರ್ಮಿಕರ ಸೇವೆಯು ಅಲ್ಲದೆ ಪ್ರತಿಯೊಬ್ಬರ ಪಾದವು ಮುಳ್ಳು ಕಲ್ಲುಗಳ ತುಳಿತದ ನೋವಿನಿಂದ ಮುಕ್ತಗೊಳಿಸಿ ಕಾಲನ್ನು ರಕ್ಷಿಸುವ ಪಾದರಕ್ಷೆಗಳನ್ನು ತಯಾರಿಸುವ ಚಮ್ಮಾರಿಕೆಯ ಬಂಧುಗಳ ಕಾಯಕ. ಅವರ  ಬದುಕಿನಲ್ಲಿರುವ ಮುಳ್ಳು ಕಲ್ಲುಗಳನ್ನು ತೆಗೆಯುವದಾದರೂ ಯಾವಾಗ ಎನ್ನುವ..? ವಾಸ್ತವಿಕ ಸತ್ಯವನ್ನು ನಾವು ತಿಳಿಯಬೇಕು.

 ವಿವಿಧ ಕಾರ್ಖಾನೆಗಳು ಬಂದು ವೃತ್ತಿಪರರ ಕುಲಕಸಬುಗಳನ್ನು ಕಸಿದು ಅವರ ಬದುಕನ್ನು ಅತಂತ್ರಗೊಳಿಸಿರುವದಂತೂ ಸತ್ಯವಾಗಿದೆ.

ಸಮಾಜದಲ್ಲಿರುವ ವೃತ್ತಿಪರ ಕುಲ ಕಸುಬುಗಳ ಬಂಧುಗಳಿಗೆ ಅವರ ಕಸಬುಗಳಿಗೆ ತಕ್ಕಂತೆ ಆಧುನಿಕ ಉಪಕರಣಗಳನ್ನು ಒದಗಿಸಬೇಕು.  ಅವರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ನ್ನು ಮತ್ತು ಕಚ್ಚಾ ವಸ್ತುಗಳನ್ನು ಸರ್ಕಾರವೇ ಒದಗಿಸಬೇಕು. ಅವರಿಂದ  ಸಿದ್ಧ ವಸ್ತುಗಳನ್ನು ತಯಾರಿಸಲು ಪ್ರೋತ್ಸಾಹಿಸಬೇಕು. ಹಾಗೆಯೇ ಸರಿಯಾದ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಬೇಕು.

 ಇಡೀ ತಮ್ಮ ಬದುಕನ್ನು ಬೇರೆಯವರ ಸೇವೆಯಲ್ಲಿ ಸವೆಸುವ ಇಂತಹ ಶ್ರಮಜೀವಿಗಳ ಶ್ರಮ ಸಮಾಜಕ್ಕೆ ಅಪಾರವಾಗಿದೆ. ನಮ್ಮಂತೆ ಅವರ ಬದುಕು ಸುಂದರವಾಗುವದಾದರೂ ಯಾವಾಗ…? ಎಲ್ಲರಂತೆ ಅವರ ಬದುಕು ಚೆಂದವಾಗಬೇಕು. ಎಲ್ಲರಂತೆ ಅವರ ಜೀವನಹಸನಾಗಬೇಕು. ಆಗ ವೃತ್ತಿಪರ ಕುಲಕಸಬುಗಳು ಸಮಾಜದಲ್ಲಿ ಆಧುನಿಕತೆಯ ಸ್ಪರ್ಶವನ್ನು ಪಡೆದುಕೊಂಡು ಉತ್ಪಾದಕರಿಗೂ ಬಳಕೆದಾರರಿಗೂ ಒಳ್ಳೆಯ ಮಾರುಕಟ್ಟೆ ಸಿಕ್ಕಾಗ ದಲ್ಲಾಳಿಗಳ ಕಾಟ ತಪ್ಪಿ ಆರ್ಥಿಕ ನಷ್ಟದಿಂದ ಮುಕ್ತರಾಗಿ ಲಾಭದಾಯಕವಾಗಿ ಸಂತುಷ್ಟರಾಗುತ್ತಾರೆ.

ಸೇವೆ ಮಾಡುವ ಅವರ ಬದುಕು ಸದಾ ಸವಿಯಾಗಿರಲೆಂದು ಬಯಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ 
ಕವನ ಲೇಖನಗಳ ಪ್ರಕಟ.

Leave a Reply

Back To Top