ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

The Gift -( ಕಿರು ಚಿತ್ರ )

ಕಿರುಚಿತ್ರ –  the gift (ಕನ್ನಡ)

ತಾರಗಣ -ಪದ್ಮಶ್ರೀ ಬಿ. ಜಯಶ್ರೀ ಇತರರು

ನಿರ್ದೇಶನ -ಸ್ನೇಹಿತ ಮತ್ತು ವಿದ್ಯಾರ್ಥಿಗಳ ತಂಡ

ಸೀದಾಸಾದ ಸೀರೆ ಉಟ್ಟ ತಲೆನೆರೆತ ಅಜ್ಜಿ ಆಟೋದಲ್ಲಿ ಕುಳಿತಿದ್ದಾರೆ .ಅವರ ಕೈಯಲ್ಲಿ ಬೆಲೆಬಾಳುವ ಬ್ರಾಂಡೆಡ್ ಕಾರು (ಆಟಿಕೆ )ಇದೆ. ಮುಖದಲ್ಲಿ ಸ್ವಲ್ಪ ಗೊಂದಲ ಕಾಣುತ್ತಿದೆ .ತಮ್ಮ ಮನೆಗೆ ವಾಪಸ್ ಹೋಗುವ ದಾರಿಯನ್ನು ಆಟೋದವರಿಗೆ ಸೂಚಿಸುತ್ತಿದ್ದಾರೆ .ಆದರೆ ಇಲ್ಲೊಂದು ಸಮಸ್ಯೆ ತಲೆದೋರಿದೆ .ವಯೋ ಸಹಜ ಮರುಗುಳಿತನಕ್ಕೆ ಒಳಗಾಗಿರುವ ಅಜ್ಜಿ (ಬಿ. ಜಯಶ್ರೀ) ಗೆ ತಮ್ಮ ಮನೆಯ ವಿಳಾಸ ಮರೆತುಹೋಗಿದೆ ತಾನು ಆಟೋ ಹತ್ತಿ ಹೊರಟ ಸ್ಥಳಕ್ಕೆ ಮತ್ತೆ ಸುತ್ತಿ ಸುತ್ತಿ ವಾಪಸ್ ಆಗುವ ಅಜ್ಜಿ ಇಕ್ಕಟ್ಟಿಗೆ ಸಿಲುಕುತ್ತಾರೆ. ಆಟೋದವನು ಅವರನ್ನು ಅಲ್ಲಿ ಇಳಿಸಿ ಹೋಗುತ್ತಾನೆ, ದಾರಿ ಕಾಣದೆ ನಿಂತಿದ್ದ ಅಜ್ಜಿಗೆ ಮಲ್ಲಿಗೆ ಹೂವು ಮಾರುವವನು ಎದುರಾಗುತ್ತಾನೆ .ಅದರಿಂದಾಗಿ ತಾವು ಮರೆತಿದ್ದ ತಮ್ಮ ವಿಳಾಸ ‘ಜಾಸ್ಮಿನ್ ಅಪಾರ್ಟ್ಮೆಂಟ್’ ನೆನಪಾಗಿ ಮನೆಗೆ ಹಿಂದಿರುಗುತ್ತಾರೆ.

ಇಷ್ಟು ಹೇಳಿದರೆ ಕಥೆಗೂ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ? ಈ ಕಿರು ಚಿತ್ರದಲ್ಲಿ ಹೇಳು ಹೊರಟಿರುವುದು ಅಜ್ಜಿಯ ಮರುಗುಳಿತನವನಲ್ಲ, ಅವರಿಗೂ ಅವರ ಮನೆಯ ಸದಸ್ಯರಿಗೂ ಇರುವ ಅವಿನಾಭಾವ   ಸಂಬಂಧದ ಕುರಿತಂತೆ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ.

     ತಮ್ಮ ಮುದ್ದಿನ ಮೊಮ್ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ತರಲೆಂದು ಹೊರಟ ಅಜ್ಜಿಯ ಸಾಹಸಯಾತ್ರೆ ಯ ಕಿರು ಪರಿಚಯ ಈಗಾಗಲೇ ನಮಗಾಗಿದೆ .ಪ್ರೀತಿಯ ಮಗ ಆಡಲು ಬಯಸಿದ್ದು ಬೆಲೆಬಾಳುವ ಬ್ರಾಂಡೆಡ್ ಆಟಿಕೆಯನ್ನು ಆಟಿಕೆಗಾಗಿ ತಾಯಿಯನ್ನು ಪೀಡಿಸುವುದನ್ನು ಕೇಳಿಸಿಕೊಂಡ ಅಜ್ಜಿ ಮುದ್ದಿನ ಮೊಮ್ಮಗನಿಗೆ ಅಚ್ಚರಿಯ ಉಡುಗೊರೆ ತರಲು ಹೇಳದೆ ಕೇಳದೆ ಮನೆ ಬಿಟ್ಟಿದ್ದಾರೆ…

         ಇಲ್ಲಿ ಅಜ್ಜಿಯ ಮರುಗುಳಿತನ ಮೊಮ್ಮಗನಿಗಾಗಿ ಉಡುಗೊರೆ ತರಲು ಅವರು ಪಡುವ ಪರಿಪಾಟಲಿನ ಹಾಗೂ ಮೊಮ್ಮಗನ ಮೇಲಿನ ಅವರ ಪ್ರೀತಿಯ ಭಾಗವಾಗಿದೆ.

         ಬೆಳಗಿನ ತಿಂಡಿಯನ್ನು ಸೊಸೆ ಕೊಟ್ಟಿರ್ತಾಳೆ, ಮರುಮಾತಿಲ್ಲದೆ ತಿಂದು ಮುಗಿಸುವ ಅಜ್ಜಿ 10 ನಿಮಿಷದ ನಂತರ ಮತ್ತೆ ತಿಂಡಿ ತಿಂದೇ ಇಲ್ಲ ಎಂದು ಹೇಳುವುದು ಅವರಿಗೆ ಮರುಗುಳಿತನ ಇದೆಯೆಂಬುದು ತಿಳಿಸುವುದಾಗಿದೆ. ಆ ಮನೆಯ ಮಗ ಕಿರು ಚಿತ್ರದಲ್ಲಿ ಕಂಡು ಬರುವುದಿಲ್ಲ. ಸೊಸೆಗೆ ಅತ್ತೆಯ ಮೇಲೆ ಕಾಳಜಿ ಇದೆ . ಅಜ್ಜಿಯ ವಾಕಿಂಗ್ ಗೆ ಅಪಾರ್ಟ್ಮೆಂಟ್ನ ಸೆಕ್ಯೂರಿಟಿಯನ್ನು ಜೊತೆ ಮಾಡಿದ್ದಾಳೆ ಆಕೆ .ಅತ್ತೆ ಮನೆಯಲ್ಲಿ ಕಾಣದಿದ್ದಾಗ ಆತಂಕ ಪಡುತ್ತಾಳೆ ಆಕೆ..

     ಚಿತ್ರದ ಕೊನೆಯಲ್ಲಿ ನಾಲ್ಕಾರು ಕಾರುಗಳನ್ನು ಹೊರತೆಗೆಯುವ ಸೊಸೆ ಅತ್ತೆಯನ್ನು “ಏಕೆ ಇಷ್ಟೊಂದು ಕಾರು ತಂದಿದ್ದೀರಿ ?”ಎಂದು ಕೇಳುತ್ತಾಳೆ .ಅದಕ್ಕೆ ಅತ್ತೆ ನೀಡುವ ಉತ್ತರ ಬಹಳ ಮಾರ್ಮಿಕವಾಗಿದೆ .”ನನ್ನ ಉಳಿದ ದಿನಗಳು ಎಷ್ಟು ನನಗೆ ತಿಳಿಯದು” ಮೊಮ್ಮಗನಿಗೆ ಪ್ರತಿ ವರ್ಷವೂ ಒಂದೊಂದು ಕಾರನ್ನು ತನ್ನ ಉಡುಗೊರೆಯನ್ನಾಗಿ ನೀಡಬೇಕೆಂದು  ಆಕೆ ಆಗ್ರಹಿಸುವುದರೊಂದಿಗೆ ಕಿರು ಚಿತ್ರ “the

gift””ಮುಗಿಯುತ್ತದೆ.

     ಇಡಿ ಕಿರುಚಿತ್ರ  ಮನಸ್ಸಿಗೆ ತಟ್ಟುವುದು ಅದರೊಳಗೆ ಅಡಗಿರುವ ಪ್ರೀತಿ ಎಂಬ ನಿಡುಗಂಟಿನಿಂದ. ಒಟ್ಟು ಕುಟುಂಬದ ವ್ಯವಸ್ಥೆ ಒಡೆದು ಸಣ್ಣ ಕುಟುಂಬಗಳಾಗಿರುವ ,ಸ್ವಾರ್ಥ ತುಂಬಿರುವ ಇಂದಿನ ಸಮಾಜದಲ್ಲಿ ಹಿರಿಯರ ಸ್ಥಾನವೇನು ಎಂಬ ಪ್ರಶ್ನೆ ಮೂಡದಿರದು. ಹಿರಿಯರನ್ನು ನೋಡಿಕೊಳ್ಳದೆ ತಾತ್ಸರ ತೋರಿ ವೃದ್ಧಾಶ್ರಮಗಳಿಗೆ ಅಟ್ಟುತ್ತಿರುವ ಈ ಕಾಲದಲ್ಲಿ ಇಂತಹ ಕಿರು ಚಿತ್ರಗಳು ಭರವಸೆಯ ಬೆಳ್ಳಿ ಕಿರಣಗಳಾಗಿವೆ.

ಈ ಚಿತ್ರದಲ್ಲಿ ವಯಸ್ಸಾದ ತಾತ ಅಜ್ಜಿಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವರೊಂದಿಗಿನ ತಮ್ಮ ಒಡನಾಟದಲ್ಲಿ ಎಷ್ಟು ಸಂತೋಷಪಡುತ್ತಾರೆ ಎಂಬುದನ್ನು  ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

   ಈ ಕಿರು ಚಿತ್ರದಲ್ಲಿ  ಸೊಸೆ ,ಮೊಮ್ಮಗ ,ಅಜ್ಜಿ ಮೂರೇ ಪಾತ್ರಗಳಿದ್ದರೂ ಅವರ ನಡುವೆ ಬಾಂಧವ್ಯ ಇಲ್ಲಿಮನೆಯ ಹಿರಿಯರ ಮೇಲೆ ಕಿರಿಯರ ಕಾಳಜಿಯನ್ನು ಅರ್ಥಗರ್ಭಿತವಾಗಿ ಚಿತ್ರಿಸಿದ್ದಾರೆ. ಉಡುಗೊರೆ ಚಿಕ್ಕದಿರಲಿ ದೊಡ್ಡದಿರಲಿ ಅದರ ಹಿಂದಿನ ಪ್ರೀತಿಗೆ ಎಂದಿಗೂ ಮಹತ್ವ ,ಇಲ್ಲಿ ಉಡುಗೊರೆ ಕೇವಲ ಒಂದು ಸೂಚಕ.

 ಹಾಗಾಗಿ ಈ ಚಿತ್ರ ನೋಡಿ ಆದಮೇಲೆ ಒಂದು ರೀತಿಯ ಬೆಚ್ಚನೆಯ ಪ್ರೀತಿ ವಾತ್ಸಲ್ಯಗಳ ಅನುಭೂತಿ ಮೂಡುತ್ತದೆ ಮನಸ್ಸು ಅರಳುತ್ತದೆ. ಚಿತ್ರ ಮುಗಿದಾಗ ನಮ್ಮ ಪ್ರೀತಿ ಪಾತ್ರರಿಂದ ನಾವು ಪಡೆದಿದ್ದ ಉಡುಗೊರೆಗಳು ,ಅವುಗಳ ಮಹತ್ವ ನೆನಪಾಗದಿರದು .ಬಾಲ್ಯದಲ್ಲಿ ನಮ್ಮ ಅಜ್ಜಿ ತಾತಂದಿರು ನಮಗೆ ನೀಡಿದ ಅನವರತ ಪ್ರೀತಿಯ ನೆನಪನ್ನು ಮರುಕಳಿಸುತ್ತದೆ ಈ ಕಿರುಚಿತ್ರ.

ಅಜ್ಜನೊಂದಿಗೆ ಆಡಿದ ಆಟಗಳು ಅಜ್ಜಿ ಮಾಡಿಕೊಟ್ಟ ಚಕ್ಲಿ ಕೋಡುಬಳೆಗಳು ನೆನಪಾಗದಿರವು..

          ಎಂಥ ಪಾತ್ರಗಳನ್ನಾದರೂ ಸಲೀಸಾಗಿ ನಿಭಾಯಿಸಬಲ್ಲ ರಂಗಭೂಮಿಯ ಬಹುಮುಖ ಪ್ರತಿಭೆ ಪದ್ಮಶ್ರೀ ಬಿ.ಜಯಶ್ರೀ ಅವರು ಅಜ್ಜಿಯ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ ,ಇಡೀ ಕಿರು ಚಿತ್ರದ ಮುಖ್ಯ ಪಾತ್ರಧಾರಿ ಅವರೇ ಆಗಿದ್ದಾರೆ. ಮರುಗುಳಿ ಅಜ್ಜಿಯಂತೆ, ಚೌಕಾಸಿ ಮಾಡುವ ಗಿರಾಕಿಯಂತೆ, ಆಟೋದಲ್ಲಿ ಕುಳಿತು ತಬ್ಬಿಬ್ಬಾಗುವ ಸಂದರ್ಭದಲ್ಲಿ ಮೊಮ್ಮಗನಿಗೆ ಆಟಿಕೆ ನೀಡಿ ಸಂತೃಪ್ತರಾಗುವ ಸನ್ನಿವೇಶಗಳಲ್ಲಿ ಅವರ ಅಭಿನಯ ಮನಮುಟ್ಟುವಂತಿದೆ.

    ಸೊಸೆ ಮೊಮ್ಮಗ ಪಾತ್ರಪೋಷಣೆಯು ಚೆನ್ನಾಗಿದೆ. ಆಟಿಕೆ ಅಂಗಡಿಯಲ್ಲಿ ನಡೆಯುವ ಸಂಭಾಷಣೆಗಳು ಚೆನ್ನಾಗಿವೆ .ಹೊರಾಂಗಣ ದೃಶ್ಯೀಕರಣ ಸೊಗಸಾಗಿದೆ.

ತಾವು ತಿಳಿಸಬೇಕಾಗಿರುವ ವಿಷಯವನ್ನು ಮನಮುಟ್ಟುವಂತೆ ಅರ್ಥಗರ್ಭಿತವಾಗಿ ನಿರ್ದೇಶಕರು ತಿಳಿಸಿದ್ದಾರೆ. ಸ್ನೇಹಿತ ಮತ್ತು ವಿದ್ಯಾರ್ಥಿ ತಂಡ ಈ ಕಿರು ಚಿತ್ರವನ್ನು ಪ್ರಯೋಗಾತ್ಮಕವಾಗಿ ತೆರೆಗೆ ತಂದಿದ್ದಾರೆ. ಒಟ್ಟಾರೆಯಾಗಿ ಬೆಚ್ಚನೆಯ ಪ್ರೀತಿಯ ಅನಾವರಣ the gift ಕಿರುಚಿತ್ರ.

ಯೂಟ್ಯೂಬ್ ನಲ್ಲಿ ಲಭ್ಯವಿದೆ.

ಕಿರುಚಿತ್ರ –  the gift (ಕನ್ನಡ)

ತಾರಗಣ -ಪದ್ಮಶ್ರೀ ಬಿ. ಜಯಶ್ರೀ ಇತರರು

ನಿರ್ದೇಶನ -ಸ್ನೇಹಿತ ಮತ್ತು ವಿದ್ಯಾರ್ಥಿಗಳ ತಂಡ


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top