ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಒಂಟಿ ಹೃದಯದ ಬಡಿತವ ಕೇಳಿದರೂ ಸುಮ್ಮನಿದ್ದೆಯೇಕೆ
ನಿಸ್ತೇಜ ಬಾನಿನಲ್ಲಿ ಕಾವಳವು‌ ಸುರಿದರೂ ಸುಮ್ಮನಿದ್ದೆಯೇಕೆ

ಸುಮಧುರ ಭಾವಗಳಿಗೆ ಮಣೆಹಾಕಲು ಕೂಡಲಿಲ್ಲ ಇಂದು
ಒಲವಿನ ಸಂಕೋಲೆಯನು ಹಾಕಿದರೂ ಸುಮ್ಮನಿದ್ದೆಯೇಕೆ

ನಕ್ಷತ್ರಗಳು ಮೋಡದ ಮರೆಯಲ್ಲಿ ಮುಷ್ಕರ ಹೂಡಿವೆಯಲ್ಲ
ಕಣ್ಣಾಲೆಯಲಿ ನೀರು ನಿತ್ಯ ಸುರಿದರೂ ಸುಮ್ಮನಿದ್ದೆಯೇಕೆ

ತುಟಿಯಂಚಲಿ ನಗುವು ಮಾಸಿ ಎಷ್ಟೋ ದಿವಸವಾಯಿತು
ಗಂಟಲೊಣಗಿ ಒಂದೇಸಮ ಬಿಕ್ಕಿದರೂ ಸುಮ್ಮನಿದ್ದೆಯೇಕೆ

ಅಭಿನವನ ಧೃಢನಿರ್ಧಾರ ಕೊನೆಗೂ ದುಃಖನೀಡಿತಲ್ಲವೆ
ಒತ್ತಾಯದ ಕಟ್ಟುಪಾಡು ಹೇರಿದರೂ ಸುಮ್ಮನಿದ್ದೆಯೇಕೆ


Leave a Reply

Back To Top