ಸಾಹಿರ್ ಲುಧಿಯಾನ್ವಿ ಕವಿತೆ-ಯುದ್ಧ ಬೇಡ…!

ಕಾವ್ಯ ಸಂಗಾತಿ

ಉರ್ದು ಕಾವ್ಯ ಕ್ಷೇತ್ರದ ಮೇರು ಕವಿಯ ಕವಿತೆ ಕನ್ನಡಕ್ಕೆ

ಉರ್ದೂ ಮೂಲ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಕೇಳಿ…
ಯುದ್ಧವನ್ನು ಇನ್ನಾದರೂ ನಿಲ್ಲಿಸಿ
ಅದೇ ಒಳಿತು!
ಯಾರ ಮಣ್ಣಿನಲ್ಲಾದರೂ ಸರಿ
ಯುದ್ಧವನ್ನು ನಿಲ್ಲಿಸುವುದೇ ಒಳಿತು!
ದೀಪಗಳು ಬೆಳಗುತಿರುವುದೇ ಒಳಿತು
ರಕ್ತವನು ಹರಿಸದಿರುವುದೇ ಒಳಿತು

ನಿನ್ನ ದೇಶದ್ದಾದರೂ…
ನನ್ನ ದೇಶದ್ದಾದರೂ…
ಯಾರದ್ದಾದರೂ ರಕ್ತ ರಕ್ತವೇ!
ಮತ್ತೆ…
ಅದು ಮನುಷ್ಯ ರಕ್ತವಲ್ಲವೆ…!

ಯುದ್ಧವೆಲ್ಲಿ ನಡೆದರೇನಂತೆ…
ಮೂಡಣದಲ್ಲೋ… ಪಡುವಣದಲ್ಲೋ…
ಎಲ್ಲಾದರೇನು?
ಕಡೆಗೆ ಹತವಾಗುವುದು ವಿಶ್ವ ಶಾಂತಿಯೇ ಅಲ್ಲವಾ…!
ಮತ್ತೆ ಯುದ್ದವೆಂದರೆ ಏನೆಂದುಕೊಂಡೆ?
ಅದು ತನ್ನಷ್ಟಕ್ಕೆ ತಾನೇ ಮಹಾ ವಿಧ್ವಂಸಕರವಾದುದು
ಮಾನವ ಕುಲದ ಯಾವ ನೋವನೂ ಕೂಡ ಅದು ಕೊನೆಗೊಳಿಸಲಾರದು

ಇಂದು ನೀನು ಹರಿಸುವ ಮಾನವ ರಕ್ತ
ನಿನ್ನಲಿ ಕೆರಳುವ ಯುದ್ಧದ ಜ್ವಾಲೆ…!
ತುಂಬಾ ದಯಾಪೂರಿತವಾದುದಂತೆ
ನಿನ್ನ ದೇಶವನು ರಕ್ಷಿಸುವಂತಹದ್ದಾಗಿ ನಿನಗೆ ಕಾಣಬಹುದು
ಅದೊಂದು ದೇಶಭಕ್ತಿಯಂತಲೂ ನಿನಗೆ ತೋರಬಹುದು

ನಿನ್ನ ಮನೆಯನು ಬೆಳಕಿನಿಂದ ತುಂಬಿಸಲು
ಇಷ್ಟು ರಕ್ತ ಹರಿಸುವುದು ಅಗತ್ಯವೆ ಹೇಳು?
ಈ ಯುದ್ಧ ಇದೆಯೆ…
ಇದು ಎಂತಹದ್ದೆಂದರೆ…
ನಾಳೆ ಬಡವರನು ಹಸಿವಿಗೆ ಬಲಿಕೊಡುವುದು

ಅಧಿಪತ್ಯವನು ನಿರೂಪಿಸಿಕೊಳ್ಳಲು
ಮತ್ತೊಬ್ಬರ ದೇಶವನು ಅಂಧಕಾರದಲಿ ಮುಳುಗಿಸುವುದು ನ್ಯಾಯವೆ? ಆಲೋಚಿಸು!
ನೀನು ಬಯಸಿದ ದೇಶಗಳ ಗಡಿಗಳಲಿ
ಅಮಾಯಕರ ಮನೆಗಳ ಮೇಲೆ
ನಿನ್ನ ಬಾಂಬುಗಳು ಸುರಿಯಬಹುದು
ಆದರೆ ಅವು ಮನುಷ್ಯರ ಹೃದಯಗಳನು ಆತ್ಮಗಳನು ಚೂರುಚೂರಾಗಿ ನಾಶಗೈಯುವವು!

ನೀನು ಮಾಡುವ ಯುದ್ಧದಿಂದಾಗಿ
ಸುಟ್ಟು ಬೂದಿಯಾದ ರೈತರ ಹೊಲಗಳು
ಅವು ನಿನ್ನವಾದರೂ… ನನ್ನವಾದರೂ…
ಬಡಜನರನು ಹಸಿವಿನಿಂದ ಉರುಳಾಡಿಸುವ ದುರ್ಭಿಕ್ಷದೊಳಗೆ ತಳ್ಳುವವು ಮರೆಯದಿರು!

ಯುದ್ಧದ ಟ್ಯಾಂಕುಗಳು
ಮುಂದಕ್ಕೇ ಸಾಗಬಹುದು
ಇಲ್ಲವೆ ತಿರುಗಿ ಹಿಂದಕ್ಕೂ ಬರಬಹುದು
ಆದರೆ ನೆನಪಿಟ್ಟುಕೊ…
ಈ ಭೂಮ್ತಾಯಿಯ ಒಡಲು ಮಾತ್ರ ಬರಡು ಬಂಜರಾಗಿ ಉಳಿದುಹೋಗುವುದು

ಯುದ್ಧದ ಸೋಲು-ಗೆಲುವುಗಳ ನಡುವೆ
ಅಳುವೆಯೋ… ಆನಂದಿಸುವೆಯೋ…
ಆದರೆ ಜೀವನ ಮಾತ್ರ…
ವ್ಯರ್ಥವಾದವುಗಳಿಗಾಗಿ ಸ್ಮಶಾನದ ಬೀದಿಗಳಲಿ
ದೀನವಾಗಿ ದುಃಖಾಲಾಪನ ಮಾಡುತ್ತಲೇ ಇರುತ್ತದೆ!
ಅದಕ್ಕೇ ನಾನು ಪ್ರಾರ್ಥಿಸಿಕೊಳ್ಳುವುದೇನೆಂದರೆ…
ಬಾಂಬುಗಳು… ಆಯುಧಗಳು…
ದೊಡ್ಡಸ್ಥಿಕೆಯ ಅಧಿಕಾರದ ಕೈಯಲ್ಲಿರುವ ಮನುಷ್ಯರೇ,
ಇನ್ನು ಯುದ್ಧವನ್ನು ನಿಲ್ಲಿಸಿ!
ನಿಮ್ಮ ಮನೆಯಲ್ಲಾದರೂ… ನಮ್ಮ ಅಂಗಳದಲ್ಲಾದರೂ..‌.
ದೇಶ ಯಾರದ್ದಾದರೂ…
ಅಲ್ಲಿಯಾದರೂ… ಇಲ್ಲಿಯಾದರೂ…
ಅಸಲು ಎಲ್ಲಿಯಾದರೂ ಸರಿ…
ದೀಪಗಳು ಬೆಳಗುತ್ತಲೇ ಇರಬೇಕು!
ಅಸಲು ಯುದ್ಧವೇ ಬೇಡ!
ಯುದ್ಧವು ನಿಂತುಹೋಗಲಿ!


ಉರ್ದೂ ಮೂಲ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಸಾಹಿರ್ ಲುಧಿಯಾನ್ವಿ
08 ಮಾರ್ಚ್ 1921ರಂದು ಪಂಜಾಬಿನ ಲೂಧಿಯಾನದಲ್ಲಿ ಜನಿಸಿದರು. ಅಬ್ದುಲ್ ಹಯೀ ಇವರ ಮೂಲ ಹೆಸರು. ಇವರೊಬ್ಬ ಜನಪ್ರಿಯ ಉರ್ದು ಕವಿ ಮತ್ತು ಹಿಂದಿ ಗೀತ ರಚನಾಕಾರರು. ‘ಸಾಹಿರ್ ಲುಧಿಯಾನ್ವಿ’ ಇವರ ಕಾವ್ಯನಾಮ. ಲಾಹೋರನಲ್ಲಿ ನೆಲೆಯೂರಿದ್ದ ಸಾಹಿರ್ ಅವರು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಮೇಲೆ 1949ರಲ್ಲಿ ಭಾರತಕ್ಕೆ ಬಂದು ಮುಂದೆ ಮುಂಬೈನಲ್ಲಿ ನೆಲೆಯೂರಿದರು. ಇವರಿಗೆ 1964 ಮತ್ತು 1977ರಲ್ಲಿ ಎರಡು ಸಲ ‘ಫಿಲ್ಮ್‌ಫೇರ್ ಪ್ರಶಸ್ತಿ’ ಲಭಿಸಿದೆ. 1971ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಲಾಯಿತು. ಇವರು 25 ಅಕ್ಟೋಬರ್ 1980 ರಂದು ತಮ್ಮ 59 ವರ್ಷಗಳ ವಯಸಿನಲ್ಲಿ ಮುಂಬೈನಲ್ಲಿ ನಿಧನರಾದರು. 8 ಮಾರ್ಚ್ 2013ರಂದು ಸಾಹಿರ್ ಅವರ ಜನ್ಮದಿನದ 92ನೇ ವಾರ್ಷಿಕೋತ್ಸವದಂದು ಇವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ.

3 thoughts on “ಸಾಹಿರ್ ಲುಧಿಯಾನ್ವಿ ಕವಿತೆ-ಯುದ್ಧ ಬೇಡ…!

  1. ತುಂಬಾ ಮಾರ್ಮಿಕ…ಮನತಟ್ಟಿತು ಸರ್… ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top