ಕಾವ್ಯ ಸಂಗಾತಿ
ಗಾಯದ ಗುರುತು
ಜಹಾನ್ ಆರಾ ಕೋಳೂರು
ನನ್ನ ಮನದ ಗೋಡೆಗೆ
ನೇತು ಹಾಕಿದ್ದ ಹೃದಯದ ಫೋಟೋಫ್ರೇಮ್ಗೆ
ಅವನ ಅನುಮಾನ ಕಲ್ಲಾಗಿ ಹೊಡೆದದ್ದು
ಎಲ್ಲೂ ನೋಟಿಫಿಕೇಶನ್ ಬರಲೇ ಇಲ್ಲ.
ನಿಲ್ಲದ ಕಣ್ಣೀರ ದಾರಿ ಹಿಡಿದು
ಹೋಗಿ ನೋಡಿದಾಗ
ಅರಿವಾಯಿತು
ಕಲ್ಲು,
ಫ್ರೇಮ್ ಅಷ್ಟೇ ಹಾಳು ಮಾಡಿಲ್ಲ
ಗೋಡೆಗೂ ನಿಶಾನು ನೀಡಿದೆ.
ನೆಲಕ್ಕೆ ಬಿದ್ದ ನೂರು ಗಾಜಿನ ಚೂರು
ನನ್ನ ಭಾವನೆಗಳಿಗೆ
ಸಾವಿರಾರು ಗಾಯ ಮಾಡಿದವು
ಒಳಗೆ ಆದದ್ದು,
ಒಳಗಿದ್ದವನಿಗೆ ಬೇಕಾಗಿರುವುದಿಲ್ಲ
ಅವನ ಹೃದಯಕ್ಕೆ ಈಗ
ಬೇಗ ಬೀಗ ಬೀಳುತ್ತದೆ
ನನ್ನ ಅಕೌಂಟ್ ಬ್ಲಾಕ್ ಆಗುತ್ತದೆ
ಮತ್ತೆ ನಾ
ಬದುಕಿನ ಚಾವಿ ಹುಡುಕಿ
ಪ್ರಣಯದ ಪಾಸ್ವರ್ಡ್ ನೆನಪಿಸಿ
ಒಳಗೆ ಹೋಗುವರೆಗೆ
ಸಾವಿನ ಬಾಗಿಲು ತಟ್ಟಿ ಬರುತ್ತೇನೆ.
ಒಮ್ಮೊಮ್ಮೆ ಅನ್ನಿಸುತ್ತಿದೆ,
ಈ ಕಡಲುಗಣ್ಣಿನ ಹನಿಗಳಿಂದಲೇ
ಕಾರ್ಮೋಡವಾಗಿ ಮಳೆಯಾಗುತ್ತಿರುವುದು.
ಎಂದೂ ಕೊಡೆ ಹಿಡಿಯದ
ಅವನ ಹೃದಯವಾದರೂ ಹಸಿರಾಗಿರಲಿ
ಜಹಾನ್ ಆರಾ ಕೋಳೂರು
ನಡುವೆ ಸಾಲುಗಳ ಅಂತರ ವಿದ್ದರೂ…… ಭಾವನೆಗಳ ಮಧ್ಯ ಅಂತರವನ್ನು ಸಮೀಪಿಸಲು ಕೀ ಮಾತೆ password ಗಳಾಗಿರಬೇಕು .
ಜಹಾಂ ಉತ್ತಮ ಕವಿತೆ
ಹೃದಯಕ್ಕೆ ತಾಕುತ್ತದೆ ಕವಿತೆ….