ವಿಜಯಶ್ರೀ ಹಾಲಾಡಿ-ನನ್ನನ್ನೇ ಪ್ರೀತಿಸಿಕೊಳ್ಳುತ್ತಿರುವ ಹೆಣ್ಣು ನಾ

ಕಾವ್ಯ ಸಂಗಾತಿ

ನನ್ನನ್ನೇ ಪ್ರೀತಿಸಿಕೊಳ್ಳುತ್ತಿರುವ ಹೆಣ್ಣು ನಾ

ವಿಜಯಶ್ರೀ ಹಾಲಾಡಿ

ನಾನೆಂದರೆ ದೇಹವಲ್ಲ
ಹಾಗೇ ಆತ್ಮವೂ ಅಲ್ಲ

ರಕ್ತದ ಪ್ರತಿ ಬಿಂದುವಿನಲ್ಲಿ
ಮೆದುಳಿನ ಕೋಶ ಕೋಶಗಳಲ್ಲಿ
ತುಂಬಿಕೊಂಡಿರುವಂತೆಯೇ
ಕಣ್ಣ ಮಿಂಚಿನಲ್ಲಿ
ಜೊಂಪೆ ಕೂದಲಲ್ಲಿ
ಹೂ ನಗೆಯಲ್ಲಿ
ನನ್ನ ನೆರಳೇ ಆದ
ಛಾಯಾಚಿತ್ರಗಳಲ್ಲೂ
ನಾನಿದ್ದೇನೆ
ಎಂದೋ ಹೇಳಿದ್ದೇನೆ
‘ನನ್ನ ನಾ ಬಿಚ್ಚಿಡುವುದಿಲ್ಲ
ಹಾಗೆಂದು ಬಚ್ಚಿಡುವುದೂ ಇಲ್ಲ’
ತಡವಾಗಿಯಾದರೂ
ನನ್ನನ್ನೇ ಪ್ರೀತಿಸಿಕೊಳ್ಳುತ್ತಿರುವ
ಹೆಣ್ಣು ನಾ

ಇವಳ ಕೆನ್ನೆಯಲ್ಲಿ ಗುಂಗಿದೆ
ತುಟಿಯೊಳಗೆ ರಂಗಿದೆ
ತುಂಬಿದೆದೆಯಲ್ಲಿ ಎಂತದೋ ಸುಡುಗಾಡಿದೆ
ಎಂದೆಲ್ಲ ಫೋಟೋ ಝೂಮ್ ಮಾಡಿ
ವಿಕೃತ ವರ್ಣಿಸಿ ಸಾಯುತ್ತೀರೇಕೆ!
‘ಸೋದರ’ ಎಂದರೆ ಅಸಹಜ
ಅನ್ನಿಸಿ ಗೆಳೆಯರೆಂದಿದ್ದೇನೆ
ಅಷ್ಟೇ!
ನಿಮ್ಮ ಘನಸ್ತಿಕೆ ಕಾಪಾಡಿಕೊಳ್ಳಿ

ನಿಸರ್ಗ ಸಹಜ
ನನ್ನ ಮುಖ ಕೈ ಕಾಲು
ಎದೆ ಸೊಂಟ ಹೊಟ್ಟೆ ಎಲ್ಲವೂ
ನೆತ್ತರು ಮಾಂಸಗಳ ಮುದ್ದೆ
ಥೇಟ್ ನಿಮ್ಮಂತೆಯೇ
ಗಂಡಿಗೊಂದು ನಿರಾಳ ಬೆತ್ತಲು
ಹೆಣ್ಣಿಗೊಂದು ಕಾಮದ ಬೆತ್ತಲು
ಎಲ್ಲ ನೀವು ನೀವೇ ಕಲ್ಪಿಸಿಕೊಂಡದ್ದು!
….
ಮೈತುಂಬ ಬಟ್ಟೆ ತೊಟ್ಟರೂ
ಸುಲಿದು ಬಿಸಾಡುತ್ತವೆ
ನಿಮ್ಮ ಕಣ್ಣುಗಳು!

ಹಾಳಾಗಿ ಹೋಗಲಿ
ನಾವು ತೊಲಗುತ್ತೇವೆ
ಫೇಸ್ಬುಕ್ಕಿನಿಂದ
ವಾಟ್ಸಪ್ ಟ್ವಿಟ್ಟರ್ ಗೂಗಲ್
ಅಂತರ್ಜಾಲದ ಜಾಲದಿಂದ
ಜಾಗ್ರತೆ..
ಜೀವಜಾಲದ ತೊಟ್ಟಿಲು
ತೂಗುತ್ತಲೇ ಬಂದಿರುವ
ಭೂಮಿ- ತೂಕದ ಸಹನೆ
ಕೈ ಜಾರಿದ ದಿನ

…..ಕೈ ಜಾರಿದ ದಿನ
ತೊಲಗಲೇಬೇಕಾಗುತ್ತದೆ
ಇಡೀ ಮನುಷ್ಯ ಸಂತಾನ
ಈ ನೆಲದಿಂದ!
—————————————————–


ವಿಜಯಶ್ರೀ ಹಾಲಾಡಿ

2 thoughts on “ವಿಜಯಶ್ರೀ ಹಾಲಾಡಿ-ನನ್ನನ್ನೇ ಪ್ರೀತಿಸಿಕೊಳ್ಳುತ್ತಿರುವ ಹೆಣ್ಣು ನಾ

Leave a Reply

Back To Top