ಉದಯವಾಯಿತು ನಮ್ಮ ಚೆಲುವ ‘ಕರ್ನಾಟಕ ರಾಜ್ಯ’ವೂ..!

ವಿಶೇಷ ಲೇಖನ

ಉದಯವಾಯಿತು ನಮ್ಮ ಚೆಲುವಕರ್ನಾಟಕ ರಾಜ್ಯ’ವೂ..!

ಉದಯವಾಯಿತು ನಮ್ಮ ಚೆಲುವ ಕರ್ನಾಟಕ ರಾಜ್ಯವೂ..!

ಇನ್ನೂ ಪ್ರತಿಯೊಬ್ಬರ ಉಸಿರಾಗಬೇಕಿದೆ ಕನ್ನಡವೂ.!! —

ಆಡೋಕೆ ಒಂದೇ ಭಾಷೆಯೂ. ಅದುವೇ ಕನ್ನಡವೂ..!

ಇಂದು ನಾವು ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ. ಇದಕ್ಕೆ ಕಾರಣವೇನೆಂದರೆ ಕರ್ನಾಟಕ ಏಕೀಕರಣವೇ ಹೌದು..!

ಈಗಿನ ಕರ್ನಾಟಕ 20 ಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು ಮೊದಲು. ಮುಂದೊಂದು ದಿನ ದೊಡ್ಡ ದೊಡ್ಡ ಹೋರಾಟಗಳು ನಡೆದು ಕರ್ನಾಟಕ ಏಕೀಕರಣ ಆಗಿ ‘ಕರ್ನಾಟಕ ರಾಜ್ಯ’ ಹುಟ್ಟಿಕೊಂಡಿತು..!

ಅಂದ್ಹಾಗೆ ಏಕೀಕರಣ ಚಳುವಳಿ 19 ನೇ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು..!

ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳು ಮಾತ್ರ ಇದ್ದವು..!

ಅಂದ್ಹಾಗೆ ಛಿದ್ರ ಛಿದ್ರವಾಗಿ ಹರಿದು ಯಾವ್ಯಾವುದೋ ಪ್ರಾಂತ್ಯಗಳಿಗೆ ಸೇರಿದ್ದೆಲ್ಲವ್ರನ್ನೂ ಒಂದುಗೂಡಿಸಬೇಕು ಅನ್ನೋ ಕಲ್ಪನೆಯೇ ಒಂದು ಅದ್ಭುತವಾಗಿತ್ತು..!

ಆರಂಭದಲ್ಲಿ ಯಾರೂ ಕೂಡ ಇದಕ್ಕೆ ನೀರು ಮತ್ತು ಸೊಪ್ಪು ಹಾಕದಿದ್ದರೂ ಮುಂದೊಂದು ದಿನ ಕಲ್ಪನೆಗಳಿಗೆ ಹೊಸ ಬೇರು, ಹೊಸ ಚಿಗರು ಮೊಳಕೆಯೊಡೆಯುವ ಕಾಲವೂ ಕೂಡ ಪರಿಪಕ್ವವಾಗಿತ್ತು..!

ಇದಕ್ಕೆ ಪೂರಕವಾಗಿ ಕನ್ನಡದ ಏಕೀಕರಣದ ಕನಸನ್ನು ಬಿತ್ತಿ ಕನ್ನಡವನ್ನು ಸಮರ್ಥವಾಗಿ ಕಟ್ಟುವಲ್ಲಿ ಸರ್ ವಾಲ್ಟರ್ ಎಲಿಯಟ್, ಸರ್.ಥಾಮಸ್ ಮನ್ರೋ, ಗ್ರೀನ್ ಹಿಲ್ ಆರ್.ಗ್ರಾಂಟ್, ಡಬ್ಲ್ಯು.ಎ.ರಸೆಲ್, ಜೆ.ಎಫ್.ಫ್ಲೀಟ್‌ ರಂತಹ ಬ್ರಿಟಿಷ್ ಅಧಿಕಾರಿಗಳೂ ಕೂಡ ಕೆಲಸ ಮಾಡಿದವರು. ಇವರಿಗೆ ಕೈಜೋಡಿಸಿದ್ದೇ ಕನ್ನಡಿಗರಾದ ಡೆಫ್ಯೂಟಿ ಚೆನ್ನಬಸಪ್ಪ, ರಾ.ಹ.ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾಯರು ಮುಂತಾದ ಹಿರಿಯರು..!

ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರೋ ಒಂದು ಪ್ರಾಂತ್ಯ ರಚನೆ ಆಗಬೇಕು ಅನ್ನೋ ಇಂಗಿತವನ್ನು ವ್ಯಕ್ತಪಡಿಸಿದರು ಅವರು. ಇದೇ ಇಂಗಿತದ ಮೇಲೆಯೇ ಮೊಳಕೆಯೊಡೆದ ಕನಸು ಮುಂದೊಂದು ದಿನ ನನಸಾಗಿ ಕರ್ನಾಟಕ ರಾಜ್ಯ ಉದಯವಾಯಿತು..!

ಇದೆಲ್ಲದರ ಜೊತೆಗೆ ಕೆಲವು ಐತಿಹಾಸಿಕ ಘಟನೆಗಳೂ ಪುಷ್ಟಿಯನ್ನು ನೀಡಿದವು..!

# ವಂಗಭಂಗ ಚಳವಳಿಯ ಪ್ರೇರಣೆಯೂ..! —

1905 ರಲ್ಲಿ ಬ್ರಿಟಿಷ್ ಸರ್ಕಾರದ ಮುಂದೆ ಬಂಗಾಳ ರಾಜ್ಯದ ವಿಭಜನೆಗೆ ಪ್ರಸ್ತಾಪವನ್ನು ಇಡಲಾಗಿತ್ತು. ಇದಕ್ಕಾಗಿಯೇ ಬಂಗಾಳಿಗಳು ವಂಗಭಂಗ ಹೋರಾಟ ನಡೆಸಿದರು..!

ಈ ಹೋರಾಟವು ತೀವ್ರಗೊಂಡು 1912 ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು..!

# ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವೂ..! —

ರಾ.ಹ.ದೇಶಪಾಂಡೆ ನೇತೃತ್ವದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಅನ್ನೋ ಸಂಘವನ್ನು ಧಾರವಾಡದಲ್ಲಿ ಹುಟ್ಟುಹಾಕಲಾಯಿತು..!

ಇದು ಕನ್ನಡಕ್ಕಿದ್ದ ಕೆಟ್ಟ ಸ್ಥಿತಿಯನ್ನು ದೂರ ಮಾಡಲು ಸಾಕಷ್ಟವಾಗಿ ಶ್ರಮಿಸಿತ್ತು. ಕನ್ನಡದಲ್ಲಿ ಶಿಕ್ಷಣ ಪ್ರಸಾರ ಹಾಗೂ ಕನ್ನಡ ಬೆಳವಣಿಗೆ ಸಂಬಂಧ ಹಲವು ಪುಸ್ತಕಗಳ ಭಂಡಾರವನ್ನು ಹೊರ ತಂದಿತು. ಇದರ ಮುಂದುವರಿದ ಭಾಗವಾಗಿಯೇ 1907 ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವೂ ನಡೆಸಿತು..!

ಇದಾದ ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿತ್ತು..!

1915 ರಲ್ಲಿ ಸ್ಥಾಪನೆಯಾಗಿ ಕನ್ನಡಕ್ಕೆ ಸಂಬಂಧಿಸಿದಂತೆ ವಿವಿಧ ಸಮ್ಮೇಳನಗಳನ್ನೂ ಆಯೋಜನೆ ಮಾಡಿತು. ಇಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳು ಕನ್ನಡದ ಏಕೀಕರಣದ ಹೋರಾಟಕ್ಕೆ ದೊಡ್ಡ ಸ್ಫೂರ್ತಿಯನ್ನೇ ನೀಡಿತು..!

# ಆಲೂರು ವೆಂಕಟರಾಯರ ಹೋರಾಟವೂ..! —

ಕರ್ನಾಟಕ ‘ಕುಲ ಪುರೋಹಿತ’ರೆಂದೇ ಕರೆಯಲ್ಪಡುವ ಆಲೂರು ವೆಂಕಟರಾಯರು ‘ಕರ್ನಾಟಕದ ಗತವೈಭವ ಅನ್ನೋ ಗೃಂಥವನ್ನು ಬೆರೆದರು. ಇದು ಏಕೀಕರಣದ ಹೋರಾಟಕ್ಕೆ ದೊಡ್ಡ ಶಕ್ತಿಯನ್ನೇ ನೀಡಿತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ.ರಾಘವೇಂದ್ರರಾಯರು ಸೇರಿಕೊಂಡು 1916 ರಲ್ಲಿ ಸ್ಥಾಪಿಸಿದ ಕರ್ನಾಟಕ ಸಭೆ ಏಕೀಕರಣದ ಬೇಡಿಕೆಗೆ ಮತ್ತಷ್ಟು ತಾಖತ್ತು ನೀಡಿತು. ಅಷ್ಟರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ — ಚೆಲ್ಮ್ಸ್‌ಫರ್ಡ್ ಸಮಿತಿಯೂ ನೇಮಕಗೊಂಡಿತು..!

# ಹೋರಾಟಕ್ಕೆ ದೊಡ್ಡ ಶಕ್ತಿಯನ್ನು ಕೊಟ್ಟ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು..!’ —

1924 ರಲ್ಲಿ ಬೆಳಗಾವಿಯಲ್ಲಿ ಬಾಪೂಜಿ ನೇತೃತ್ವದಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್​ ಮಹಾಧಿವೇಶನವೂ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಚಾಲನೆಯೂ ದೊರೆಯಿತು. ಆಗಲೇ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು…!

1944 ರಲ್ಲಿ ಧಾರವಾಡದಲ್ಲಿ 9 ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶ ನಡೆಯಿತು..!

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಅಂದರೆ ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕ ಅನ್ನೋ ಘೋಷಣೆಗಳೂ ಮೊಳಗಿದವು..!

ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಹುಟ್ಟಿಕೊಂಡಿತು. ಈ ಪರಿಷತ್ ಏಕೀಕರಣಕ್ಕೆ ಹೊಸ ತಿರುವನ್ನು ನೀಡಿತು. ಇದೆಲ್ಲದರ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ 1951 ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಕಾಲ ಉಪವಾಸ ಮಾಡಿ ನಿಧನರಾದರು..!

ಅವರ ನಿಧನದ ಬೆನ್ನಲ್ಲೇ ಕೇಂದ್ರ ಸರ್ಕಾರ, ಆಂಧ್ರ ಪ್ರಾಂತ ರಚನೆಗೆ ಮುಂದಾಯಿತು..!

ಇದಾದ ಬೆನ್ನಲ್ಲೇ ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು 1953 ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸವನ್ನು ಸತ್ಯಾಗ್ರಹದ ರೂಪದಲ್ಲಿ ಆರಂಭಿಸಿದರು. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನವು ಹೆಚ್ಚಿತೊಡಗಿತು..!

ಟಿಪ್ಪು ಸುಲ್ತಾನ ನಿಧನ ಹೊಂದಿದ ಬಳಿಕ ಬ್ರಿಟಿಷರಿಂದಾಗಿ ಕರುನಾಡು ಹಲವಾರು ಪ್ರಾಂತ್ಯಗಳಾಗಿ ಬೇರ್ಪಟ್ಟವು..!

ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯನ್ನಾಡುವ ಪ್ರತ್ಯೇಕ ರಾಜ್ಯ ರಚನೆಯೂ ಆಗುತ್ತದೆ ಅಂತಾ ಹೋರಾಟಗಾರರೆಲ್ಲರೂ ಭಾವಿಸಿದ್ದರು. ಆದರೆ ಅದು ಪೂರ್ತಿಯಾಗಿ ಏಕೀಕರಣ ಆಗಿಲು ಸಾಧ್ಯವಾಗಲಿಲ್ಲ..!

ಕಾರಣ ಇಷ್ಟೇ ಕಾಸರಗೋಡು ಕೈತಪ್ಪಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೆ ಉಳಿದಿದ್ದವು. ಏಕೀಕರಣದ ಆದ ಮೇಲೆಯೂ ಪ್ರಾಚೀನ ಕಾಲದಿಂದಿದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು..! ನಂತರದ ದಿನಗಳಲ್ಲಿ 1973 ನವೆಂಬರ್ 1 ರಂದು ರಾಜ್ಯಕ್ಕೆ ‘ಕರ್ನಾಟಕ’ ಎಂದು ಪುನರ್ ನಾಮಕರಣವನ್ನೂ ಮಾಡಲಾಯಿತು. ಅದುವೇ ಅರಳಿದ ನಮ್ಮ ಸುಂದರವಾದ ಮತ್ತು ಸೊಗಸಾದ ‘ಕರ್ನಾಟಕ ರಾಜ್ಯ’ವೂ..!

ಹೀಗೆಯೇ ‘ಕರ್ನಾಟಕ ರಾಜ್ಯ’ದ ಉದಯವಾಯಿತು ಸಾಕಷ್ಟು ಹೋರಾಟಗಳ ಮೇಲೆಯೇ..!

ಹೀಗೆಯೇ ಉದಯವಾಯಿತು ನಮ್ಮ ಚೆಲುವ ಕರ್ನಾಟಕ ರಾಜ್ಯವು, ಇನ್ನೂ ಪ್ರತಿಯೊಬ್ಬರ ಉಸಿರಾಗಬೇಕಾಗಿದೆ ಕನ್ನಡವೂ..!


ಕೆ.ಶಿವು.ಲಕ್ಕಣ್ಣವರ

One thought on “ಉದಯವಾಯಿತು ನಮ್ಮ ಚೆಲುವ ‘ಕರ್ನಾಟಕ ರಾಜ್ಯ’ವೂ..!

  1. ಇತಿಹಾಸ ಕಟ್ಟಿ ಕೊಟ್ಟಿದ್ದಕ್ಕೆ ಶರಣು.
    ಇಂದಿನ ಯುನಕರಿಗೆ ಮಾನ್ಯ ಮಾರ್ಗ…

Leave a Reply

Back To Top