ಕಾವ್ಯ ಸಂಗಾತಿ
ಪ್ರೀತಿಪುಳಕ
ನಿರ್ಮಲಾ ಹೆಗಡೆ
ನಿನ್ನ ನೇಹದ ಮನಕೆ ಸೋತಿಹ
ಎನ್ನೆದೆಯು ಮುದವಾಂತಿದೆ|
ಕಣ್ಣನೋಟದ ಮಂದಹಾಸದಿ
ಬಣ್ಣಬಣ್ಣದ ಕನಸಿದೆ||
ಸೆಳೆವ ಮಾತಿನಂದದಿಂದ
ಒಲವ ರಾಗ ಮೀಟಿದೆ|
ನಲಿಯುತುಲಿವ ಪದಲಾಸ್ಯಕೆ
ಅಳಿಯದಂತ ಕಸುವಿದೆ||
ಪ್ರೀತಿಯೆರಕ ತೋಕಲೆಂತ
ರೀತಿ ಕಾವ್ಯದೋಕುಳಿ|
ಆತುಕೊಂಡರದುವೆ ಒಲವು
ಭೀತಿ ಸೋಕದಾ ಸುಳಿ||
ವಿರಹದಲ್ಲು ಬಿಸುಪನೆಚ್ಚ
ಸರಸ ನೆನಪಿನಪ್ಪುಗೆ|
ಹರೆಯ ಮರೆಸುತೊರೆದ ಭಾವ
ತೊರೆಯ ಹರಿವು ಮೆಚ್ಚುಗೆ||
One thought on “ನಿರ್ಮಲಾ ಹೆಗಡೆ -ಪ್ರೀತಿಪುಳಕ”