ಮಧು ಕಾರಗಿ ಇಂದಲ್ಲ ನಾಳೆ

ಕಾವ್ಯ ಸಂಗಾತಿ

ಮಧು ಕಾರಗಿ ಇಂದಲ್ಲ ನಾಳೆ

ಯಾಕೀಗ ಹೆಚ್ಚಾಗಿ
ಕವಿತೆಗಳ ಬರೆಯುತ್ತಿಲ್ಲ ನೀವು ?
ಪ್ರಿಯ ಓದುಗರೊಬ್ಬರ
ಕೇಳಲು ಹಿತವಾದ ಪ್ರಶ್ನೆ

ಹಾಳೆಗಳು ಖಾಲಿಯಾಗಿವೆ ಎಂದು ನಕ್ಕೆ
ಓಹೋ ! ಎಂದವರೂ ನಕ್ಕರು
ಆದರೆ ,
ಅರ್ಥ ಹೀಗಿದೆ ನೋಡಿ –

ಹೂಜಿಗೆ
ಕಲ್ಲು ತಂದು ಹಾಕಿ
ಮೇಲೆ ಬಂದ ನೀರು
ಕುಡಿದು ರೆಕ್ಕೆಬಡಿಯುತ್ತ
ಪುರ್ರನೆ ಹಾರಿ ಹೋದ
ಜಾಣ ಕಾಗೆಯ ಕಥೆಯಲ್ಲ
ಕವಿತೆ ಬರೆಯುವುದು

ಆಮೆ ನರಿಯ ಓಟ
ಕವಿತೆ ಬರೆಯುವುದೆಂದರೆ ;
ಗೆದ್ದವರು ಯಾರೆಂದು
ಮತ್ತೆ ನಿಮಗೆ ಹೇಳಬೇಕಿಲ್ಲ
ನೀವೂ ಬಲ್ಲಿರಿ !

ಕವಿ ಮನವು
ಸದಾ ಉನ್ನತಕ್ಕೆ ಹಂಬಲಿಸಬೇಕು
ಗಾಢ ಕಾಡುವಿಕೆಯ ಗಂಧವಿಲ್ಲದ
ನನ್ನದೇ ಕವಿತೆಗಳ ತಿರಸ್ಕರಿಸುವ
ಮುಖ್ಯ ಕಾರಣವಿದು !

ಬತ್ತಿ ಎಣ್ಣೆ ಹೀರಿದಂತೆ
ನಾನೀಗ ಖಾಲಿಯಾಗಿದ್ದೇನೆ
ಬದುಕಿದ್ದನ್ನು ಬರೆದು ಮುಗಿಸಿದ್ದೇನೆ
ಆದರೆ ,
ಬದುಕುವ ಬದುಕು ಮುಗಿದಿಲ್ಲ

ಅನುಭವಗಳ ಮೈಲು ದೂರಗಳ
ನಿರಾತಂಕದಿ ಕ್ರಮಿಸಿ
ಹೊತ್ತು ತರಬೇಕು ಅಲ್ಲಿಂದ
ನೂರು ಕವಿತೆಗಳ ಸರಕು !

ಒಳ್ಳೆಯ ಕವಿತೆಗಳು
ಹುಟ್ಟುವುದಕ್ಕೆ ,
ಕೆಟ್ಟ ದಿನಗಳನ್ನು ಬದುಕಬೇಕು
ನಾನೂ ಮತ್ತೆ ಬರೆಯುತ್ತೇನೆ
ಇಂದಲ್ಲ ನಾಳೆ !


One thought on “ಮಧು ಕಾರಗಿ ಇಂದಲ್ಲ ನಾಳೆ

Leave a Reply

Back To Top