ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಕಥೆ

ಗಿಣ್ಣಿನ ಪರಿಮಳ

ಟಿ ಎಸ್ ಶ್ರವಣ ಕುಮಾರಿ

ಗಿಣ್ಣಿನ ಪರಿಮಳ

ಟಿ ಎಸ್ ಶ್ರವಣ ಕುಮಾರಿ

ಮೂರುದಿನದ ಕೆಳಗೆ ಕರುಹಾಕಿದ್ದ ಗಂಗೆಯ ಹಾಲನ್ನು ಕರೆಯಲು ಕೊಟ್ಟಿಗೆಗೆ ಬಂದಳು ನಾಗಲಕ್ಷ್ಮಿ. ಪುಟ್ಟ ಕೆಂದಗರು ಗೌರಿಯನ್ನು ಬಿಚ್ಚಿ, ಅದು ಗುದ್ದಿಗುದ್ದಿ ಹಾಲು ಹೀರುತ್ತಿರುವುದನ್ನೇ ಸಂಭ್ರಮದಿಂದ ನೋಡುತ್ತಾ ಗಂಗೆದೊಗಲನ್ನು ನೀವತೊಡಗಿದಳು. ಇದು ಗಂಗೆಯ ಮೂರನೆಯ ಕರು. ಮೂರೂ ಹೆಣ್ಣುಗರುವೇ. ʻಮದ್ಲೆರಡನ್ನು ಎಂತೆಂತೋ ಆಗಿ ಮಾರ‍್ಬೇಕಾಯ್ತು, ಇದ್ನಾದ್ರೂ ಹ್ಯಾಗಾರೂ ನಾವೇ ಇಟ್ಕಬೇಕುʼ ಅಂದುಕೊಂಡಳು. ʻಮೂರ‍್ದಿನ್ವಾಯ್ತು. ಇವತ್ನ ಹಾಲಲ್ಲಿ ಗಿಣ್ಣು ಮಾಡುದೇʼ ಎಂದುಕೊಳ್ಳುತ್ತಾ ಗೌರಿ ಕುಡಿದಾದ ಮೇಲೆ ಅದನ್ನು ತಂದು ಪಕ್ಕಕ್ಕೆ ಕಟ್ಟಿ ಕೆಚ್ಚಲನ್ನು ತೊಳೆದು ಹಾಲು ಹಿಂಡುತ್ತಿರುವಾಗ ʻಗಿ‌ಣ್ಣು ಮಾಡಿದ್ರೆ ತಿನ್ನಕ್ ರಾಮನೇ ಇಲ್ವಲ್ಲʼ ಅನ್ನಿಸಿ ಪೆಚ್ಚಾಯಿತು. ʻಅವಂಗೋ ಗಿಣ್ಣಂದ್ರೆ ಪೈತ್ಯ. ಜಾಸ್ತಿ ತಿಂದ್ರೆ ಉಸ್ರೆಳೆಯುತ್ತೇಂತ ಹಿಡಿದ್ಹಿಡಿದು ಕೊಡ್ತಿದ್ದಿದ್ದು; ಆದ್ರಿವತ್ತು ಅಷ್ಟೂ ಇಲ್ದಂಗಾಯ್ತಲ್ಲ‌ʼ ಅನ್ನಿಸಿ ಮಗನನ್ನು ನೆನೆಸಿಕೊಂಡು ಕಣ್ಣೊರೆಸಿಕೊಂಡಳು. ಗಂಗೆಯ ಮುಂದಷ್ಟು ಹುಲ್ಲು, ನೀರು ನೋಡಿಕೊಂಡು ಹಾಲನ್ನು ತೆಗೆದುಕೊಂಡು ಒಳಬಂದಳು. ಅಡುಗೆ ಒಲೆಯ ಆರುತ್ತಾ ಬಂದಿದ್ದ ಕಟ್ಟಿಗೆಗಳನ್ನು ಸರಿಯಾಗಿ ಒಟ್ಟಿ ಊದುತ್ತಿರುವಾಗ ಇನ್ನೊಂದು ಯೋಚನೆ ಬಂತು. ʻಗಿಣ್ಣು ಮಾಡ್ಕಂಡು ಸುಶೀಲಮ್ಮನ ಮನ್ಗೇ ತಗಂಡೋದ್ರೆ?!ʼ ಹ್ಯಾಂಗೂ ಅವ್ಳಿಗೂ ಗಿಣ್ಣೆಂದರೆ ಇಷ್ಟವೇ. ʻಮನ್ಲಿನ್ಯಾರೂ ತಿನ್ನಲ್ವೇ, ಹಂಗಾಗಿ ಮಾಡಕ್ಕೇ ಬೇಜಾರು‌ʼ ಅಂತಿದ್ಲು ಹೋದ್ಸಲ‌ ಕೇಳ್ದಾಗ. ಈಗದೇ ನೆಪ ಮಾಡ್ಕಂಡು ಗಿಣ್ಣೇ ತಗಂಡೋದ್ರೆ ಅವಳೂ ತಿಂದಾಳು, ರಾಮಂಗೂ ಕೊಟ್ಟಂಗಾಯ್ತುʼ ಅನ್ನಿಸಿ ಮನಕ್ಕೆ ಹಿಗ್ಗಾಯಿತು.

ʻಮನೆಗಾದ್ರೆ ಬರೀ ಬೆಲ್ವೇ ಸಾಕು, ಆದ್ರೆ ಸುಶೀಲಮ್ಮನ ಮನಿಗೆ ತೊಗಂಡೋಗೋದೂಂದ್ರೆ ಒಂದೆರ‍್ಡು ಏಲಕ್ಕಿಯಾದ್ರೂ ಬೇಡ್ವಾʼ ಅನ್ನಿಸಿ ಲಕ್ಷ್ಮಿಯನ್ನು ಕರೆದು ತನ್ನ ಮುರುಕು ಟ್ರಂಕಿನ ಹಳೆಯ ಸೀರೆಯ ಮಧ್ಯದ ಕಾಸಿನಖಜಾನೆಯಿಂದ ಐದುರೂಪಾಯಿ ಅವಳ ಕೈಗೆ ಹಾಕಿ “ಸೆಟ್ರಂಗಡಿಯಿಂದ ಏಲಕ್ಕಿ ತಗಂಬಾರೆ” ಅಂದಳು. “ಇಷ್ಟುಕ್ಕೆಲ್ಲಾ ಕೊಡಕ್ಕಾಗಲ್ಲ ಅಂತ್ಬೈತಾರ‍್ಯೆ ಸೆಟ್ರು, ನಾನೋಗಲ್ಲ” ಆರುವರ್ಷದ ಲಕ್ಷ್ಮಿ ಕೊಸರಾಡಿದಳು. “ಎಷ್ಟ್‌ಬರತ್ತೋ ಅಷ್ಟೇ ಕೊಡ್ಬೇಕಂತೆ ಅಂತ್ಹೇಳೆ” ರೇಗಿಕೊಂಡು ಜೊತೆಗೇ ಇನ್ನೊಂದು ರೂಪಾಯನ್ನು ಅವಳ ಕೈಗೆ ಹಾಕಿ “ಇಕಾ ನೀನು ಪೆಪ್ಪರ್ಮೆಂಟ್‌ ತಗಾ” ಅಂದಮೇಲೆ ಅಂಗಡಿಗೆ ಓಡಿ ಎಣಿಸಿದಂತೆ ಆರು ಏಲಕ್ಕಿ ತಂದಳು. “ಅಬ್ಬಬ್ಬಬ್ಬಾ ಚಿನ್ನ, ಇನ್ನೊಂದ್ನಾಲ್ಕು ಕೊಟ್ರೆ ಏನು ಕೈಬಿದ್ದೋಗ್ತಿತ್ತಾ” ಗೊಣಗಿಕೊಂಡು ಜತನವಾಗಿ ಎರಡು ಏಲಕ್ಕಿಯನ್ನು ʻಇನ್ನೊಂದಿನಕ್ಕಿರ‍್ಲಿʼ ಎಂದಡಗಿಸಿಟ್ಟು ನಾಲ್ಕನ್ನು ಜಜ್ಜಿಕೊಂಡಳು. ಎಲ್ಲವನ್ನೂ ಬೆರಸಿ ಗಿಣ್ಣನ್ನು ಬೇಯಲಿಟ್ಟು ಅಡುಗೆಯನ್ನು ಮುಂದುವರೆಸಿದಳು. ಮನೆತುಂಬಾ ಗಿಣ್ಣಿನ ಪರಿಮಳ ತುಂಬಿಕೊಂಡಿತು. ಕೆಲಸಕ್ಕೆ ಹೊರಟಿದ್ದ ಗಂಡನಿಗೂ, ಸ್ಕೂಲಿಗೆ ಹೊರಟಿದ್ದ ಶಂಕರನಿಗೂ, ಲಕ್ಷ್ಮಿಗೂ ಊಟ ಬಡಿಸಿ “ಸ್ವಲ್ಪ ತಣೀಲಿ, ಸ್ಕೂಲಿಂದ ಬಂದ್ಮೇಲೆ ಗಿಣ್ಣು ತಿನ್ನೀರಂತೆ” ಎಂದು ಗಂಡನ ಡಬ್ಬಿಗೆ ಮಾತ್ರಾ ಎರಡು ಹಲ್ಲೆ ಗಿಣ್ಣನ್ನು ಹಾಕಿಕೊಟ್ಟಳು. ಮಂಜಯ್ಯನೂ “ರಾಮಂಗೆ ಗಿಣ್ಣಂದ್ರೆ ಬಲಿಷ್ಟ. ಇವತ್ತವ್ನೇ ಇಲ್ವಲ್ಲೇ” ಅಂದರು. “ಸುಶೀಲಮ್ಮನ ಮನಿಗೆ ಹೊರ‍್ಟಿದೀನಿ, ಅವ್ನಿಗೂ ತಗಂಡೋಗ್ ಕೊಡ್ತೀನಿ” ಅಂದಿದ್ದಕ್ಕೆ ಅವನಿಗೆ ಸ್ವಲ್ಪ ಸಮಾಧಾನವಾಯಿತು.

ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಸುಶೀಲ, ನಾಗಲಕ್ಷ್ಮಿ ಸಹಪಾಠಿಗಳು. ನಾಗಲಕ್ಷ್ಮಿಯ ಅಮ್ಮ ಅನ್ನಪೂರ್ಣಮ್ಮ ಸುಶೀಲನ ಅಮ್ಮನ ಮನೆಗೆ ಅಡುಗೆ, ಇನ್ನಿತರ ಸುತ್ತುಗೆಲಸಕ್ಕಾಗಿ ಹೋಗುತ್ತಿದ್ದಾಗ ನಾಗಲಕ್ಷ್ಮಿಯೂ ಹಿಂದೆಯೇ ಹೋಗುತ್ತಿದ್ದುದರಿಂದ ಸುಶೀಲನಿಗೂ ನಾಗಲಕ್ಷ್ಮಿಗೂ ಒಳ್ಳೆಯ ಸಲುಗೆಯಿತ್ತು. ಮುಂದೆ ಓದದೆ ನಾಗಲಕ್ಷ್ಮಿ ಗೇಟ್‌ ಕೀಪರ್‌ ಮಂಜಯ್ಯನನ್ನು ಮದುವೆಯಾಗಿ ಹಿಂದೆಯೇ ತನ್ನ ಅಮ್ಮನಂತೆ ಅಲ್ಲಿಲ್ಲಿ ಅಡುಗೆ, ಸುತ್ತುಕೆಲಸಗಳಿಗೆ ಹೋಗತೊಡಗಿದಳು. ಕಾಲೇಜಿನ ಓದು ಮುಗಿದಮೇಲೆ, ಮದುವೆಯಾಗಿ ಶ್ರೀಮಂತರ ಮನೆಯನ್ನು ಸೇರಿದ ಸುಶೀಲ ತನ್ನ ಗೆಳೆತನವನ್ನು ಮುಂದುವರೆಸಿಕೊಂಡು ಆಗೀಗ ಸಹಾಯಕ್ಕೆ ನಾಗಲಕ್ಷ್ಮಿಯನ್ನು ಕರೆಯುವುದಿತ್ತು. ಮದುವೆಯ ನಂತರ ಇಬ್ಬರ ಹೆಸರಿನ ಮುಂದೂ ಅಮ್ಮ ಸೇರಿಕೊಂಡು ನಾಗಮ್ಮ, ಸುಶೀಲಮ್ಮ ಆಗಿದ್ದರಷ್ಟೇ.

*

ಅವರೆಲ್ಲಾ ಹೊರಟ ಮೇಲೆ ಅಡುಗೆಮನೆಯನ್ನು ಅಚ್ಚುಕಟ್ಟು ಮಾಡಿಕೊಂಡ ನಂತರ ʻತಾನೀಗ ಊಟ ಮಾಡುವುದು ಬೇಡ; ಹೇಗೂ ಸುಶೀಲಮ್ಮ ಊಟ ಮಾಡ್ಕಂಡೇ ಹೋಗೇಂತಾಳೆ; ರಾತ್ರಿಗಷ್ಟು ಅಕ್ಕಿ ಮಿಕ್ಕತ್ತೆ. ಅಲ್ಲೇ ಮಾಡ್ಕಂಡ್ಬಂದ್ರಾಯ್ತುʼ ಎಂದುಕೊಳ್ಳುತ್ತಾ ಹೋಗುವ ತಯಾರಿ ನಡೆಸಿದಳು. ಸೀರೆಯನ್ನುಟ್ಟುಕೊಂಡು ಡಬ್ಬಿಯನ್ನು ವೈರಿನ ಬುಟ್ಟಿಯಲ್ಲಿಟ್ಟುಕೊಳ್ಳುವಾಗಲೇ ಸುಶೀಲಮ್ಮನ ಮನೆಯ ಡ್ರೈವರ್‌ ಪರ‍್ಶುರಾಮ “ನಾಗಮ್ನೋರೇ, ರಾಮ ಇಲ್ಲಿಗೇನಾರಾ ಬಂದಿದಾನಾ” ಎನ್ನುತ್ತಾ ಬಾಗಿಲಲ್ಲಿ ನಿಂತ. ಅವನು ಹೇಳಿದ ರೀತಿಯಿಂದಲೇ ನಾಗಲಕ್ಷ್ಮಿ “ಇಲ್ವಲ್ಲೋ, ಯಾಕೋ, ಎಂತಾಯ್ತೋ?” ಎಂದಳು ಭಯದಿಂದ. “ಅದೇನೋ ಬೆಳ್ಗೆ ಒಂಭತ್ಗಂಟೆಯಿಂದ ರಾಮ ಕಾಣ್ತಿಲ್ಲ. ಸ್ಕೂಲತ್ರ ಹುಡಿಕ್ಕಂಡ್ಹೋಗಿದ್ದೆ. ಅಲ್ಗೂ ಹೋಗಿಲ್ಲ. ಇಲ್ಲಿಗೇನಾರಾ ಬಂದಿದಾನಾ ನೋಡ್ಕಂಡು, ಬಂದಿದ್ರೆ ಅವ್ನೂ, ಕಡಿಗ್‌ ನಿಮ್ನಾದ್ರೂ ಅರ್ಜೆಂಟಾಗಿ ಕರ‍್ಕಂಬಾಂದ್ರು‌” ಅಂದ. ನಾಗಲಕ್ಷ್ಮಿಯ ಕಾಲುಗಳು ಥರಥರಗುಟ್ಟಿದವು. ಕುಸಿದು ಥಪ್ಪನೆ ಕುಳಿತಳು. ಮೈಯೆಲ್ಲಾ ಬೆವರತೊಡಗಿತು. ಪರಶುರಾಮ “ಅದ್ಯಾಕಷ್ಟು ಗಾಭ್ರಿಯಾಗ್ತೀರ, ಇಲ್ಲೇ ಎಲ್ಲೋ ಹೋಗಿದ್ದಾನು. ಗಂಡುಡ್ಗ ಅಲ್ವಾ, ಅಷ್ಟೊಂದ್ಯಾಕೆ ಹೆದ್ರಿಕೆ. ಬರ‍್ತಾನ್ಬನ್ನಿ ಹೋಗೋಣ” ಅಂದ. ಏನೂ ತೋಚದೆ ಬುಟ್ಟಿಯನ್ನು ತೆಗೆದುಕೊಂಡು ಹೋಗುವುದು ಬೇಡವೆನ್ನಿಸಿ, ಅಡುಗೆಮನೆಯಲ್ಲೇ ಬಿಟ್ಟು ಬಾಗಿಲಿಗೆ ಬೀಗ ಹಾಕಿಕೊಂಡು ಬಂದು ಕಾರಿನಲ್ಲಿ ಕುಳಿತಳು… ಮನಸ್ಸು ಆರು ತಿಂಗಳ ಹಿಂದಕ್ಕೋಡಿತು.

*

ಹಿರಿಮಗಳು ಗಿರಿಜನ ಮದುವೆಗೆಂದು ನಾಗಲಕ್ಷ್ಮಿ ಸುಶೀಲಮ್ಮನ ಬಳಿ ಇಪ್ಪತ್ತುಸಾವಿರ ರೂಪಾಯನ್ನು ಸಾಲವಾಗಿ ತೆಗೆದುಕೊಂಡಿದ್ದಳು. ತಿಂಗಳು-ತಿಂಗಳು ಒಂದೊಂದು ಸಾವಿರದಂತೆ ತೀರಿಸುವೆನೆಂದು ಹೇಳಿದ್ದರೂ, ಎಂಟು ತಿಂಗಳಾದರೂ ಒಂದು ಸಾವಿರವನ್ನೂ ವಾಪಸ್ಸು ಕೊಡಲಾಗಿರಲಿಲ್ಲ. ಏನೇನೋ ನೂರೆಂಟು ತಾಪತ್ರಯಗಳು. ಆಕೆಯೇನೋ ಇದುವರೆಗೂ ʻಯಾವಾಗ್ಕೊಡ್ತಿಯೇʼ ಅಂತ ಕೇಳಿಲ್ಲ. ಆದರೂ ತಾನಾದರೂ ಹೇಳಬೇಕಲ್ಲವೇ. ಹೀಗೆ ಆವತ್ತು ಮೆಣಸಿನ ಪುಡಿಗೆ ಹುರಿಯುತ್ತಿದ್ದಾಗ ಮಾತು ತೆಗೆದ ನಾಗಲಕ್ಷ್ಮಿ “ಗಿರ‍್ಜನ ಮದ್ವೆಗಂತ ನಿನ್ನತ್ರ ತಗಂಡಿದ್ದ ಇಪ್ಪತ್ತು ಸಾವ್ರದಲ್ಲಿ ಒಂದ್ರುಪಾಯೂ ಹಿಂದ್‌ಕೊಡಕ್ಕಾಗಿಲ್ಲ. ಶಕುಂತ್ಲಮ್ಮನತ್ತೆ ಹೋದ್ಮೇಲೆ ಅವರ‍್ಮನೆ ಅಡ್ಗೆಕೆಲ್ಸವೂ ತಪ್ಪೋಯ್ತು. ಇನ್ನೊಂದ್ಮನೆ ಯಾವ್ದಾರೂ ಸಿಕ್ಮೇಲೆ ತೀರಿಸ್ಕೋತ ಹೋಗ್ತೀನಿ ಸುಶೀಲಮ್ಮ” ಅಂದಳು. “ಆಯ್ತ್ಬಿಡು, ನಾನೇನೀಗ್ ನಿನ್‌ಕುತ್ಗೆ ಮೇಲೆ ಕೂತಿದೀನಾ. ಇನ್ನೊಂದ್ಮನೆ ಸಿಕ್ಮೇಲೇ ಕೊಡೀವಂತೆ” ಎನ್ನುತ್ತಾ ಮೆಣಸಿನಕಾಯಿಯ ಘಾಟು ತಡೆಯಲಾಗದೆ ಹೊರಹೋದಳು.

ಪುಡಿ ಕುಟ್ಟಿ ಮುಗಿಸಿ, ಗುಡಿಸಿ, ಕಟ್ಟೆಯನ್ನು ಒರಸಿ, ಕಾಫಿಗೆ ನೀರಿಟ್ಟು ಸುಶೀಲಮ್ಮನನ್ನು ಕರೆದಳು. ಕಾಫಿ ಮಾಡಿ ಇಬ್ಬರಿಗೂ ಲೋಟದಲ್ಲಿ ಸುರುವಿ ನಾಗಲಕ್ಷ್ಮಿಗೂ ಕೊಟ್ಟು ಅಲ್ಲೇ ಸ್ಟೂಲಿನ ಮೇಲೆ ಕುಳಿತು ಕಾಫಿ ಹೀರುತ್ತಾ “ನಿನ್ಮಗ ರಾಮಂಗೆ ಎಷ್ಟು ವರ್ಷ್ವೇ ಈಗ?” ಕೇಳಿದಳು ಸುಶೀಲಮ್ಮ. “ಮೊನ್ನೆ ಅಮಾತ್ಸೆಗೆ ಒಂಭತ್ತುಂಬಿ ಹತ್ತಕ್ಬಿತ್ತು” ಎಂದಳು ನಾಗಲಕ್ಷ್ಮಿ. “ಅಲ್ಲಾ, ನಂತಲೇನಲ್ಲಿ ಒಂದ್ಯೋಚ್ನೆ ಬಂತೇ. ನಿಂಗೇ ಗೊತ್ತಲ್ಲಾ ನಂಗೀಗ ವರ್ಷದಿಂದ ಮೊಣಕಾಲು ಗಂಟುನೋವು, ಸರಸರಾಂತ ಓಡಾಡಕ್ಕಾಗಲ್ಲ. ದಿನಾ ಬೆಳಿಗ್ಗೆ ಇವ್ರು, ಸುರೇಶ, ಸ್ಮಿತಾ ಹೊರಡೋಷ್ಟ್ರಲ್ಲಿ ತಿಂಡಿ, ಅಡ್ಗೆ ಮಾಡೋಷ್ಟ್ರಲ್ಲೇ ಸಾಕಾಗೋಗತ್ತೆ. ಬೆಳಗ್ನೊತ್ತು ಮನಿಗ್ ಬರೋ ಜನಾ ಒಬ್ರಾ ಇಬ್ರಾ… ಒಂದ್ಹತ್ಸಲ ಕಾಫಿ ಬೆರ‍್ಸಿ, ಕೆಲೊಬ್ರಿಗೆ ತಿಂಡಿ ಸೈತಾ ಕೊಡ್ಬೆಕು, ಕುಡಿದ್ಲೋಟ, ತಟ್ಟೆ ತೆಗ್ಯೂದೇ ದೊಡ್ಕೆಲ್ಸ. ಎಂತಾರೂ ಸಣ್ಪುಟ್ಟ ಸಾಮಾನು ತರಿಸ್ಕಬೇಕೂಂದ್ರೆ ಪರ‍್ಶುರಾಮ ಬರೋತಂಕ ಯಾರೂ ಕೈಗ್‌ಸಿಗಲ್ಲ. ಯಾರ‍್ಯಾರೋ ಬರ‍್ತಿರ‍್ತಾರೆ- ಇವ್ರುನ್‌ ಕೇಳ್ಕಂಡೋ, ಸ್ಮಿತಾ, ಸುರೇಶನ್‌ ಕೇಳ್ಕಂಡೋ, ಕಡಿಗ್‌ ನನ್‌ಕೇಳ್ಕಂಡೋ…. ಅವ್ರಿಬ್ರೂ ಕಿವ್ಯೊಳ್ಗೆಂತದೋ ಚುಚ್ಕಂಡ್‌ ಮೇಲ್‌ ಸೇರ‍್ಕಂಬಿಡ್ತಾರಪ್ಪ, ಎಷ್ಟು ಕರುದ್ರೂ ʻಓʼನ್ನಲ್ಲ. ನಂಕೈಲಿ ಹತ್ತಿಳಿಯಕ್ಕಾಗಲ್ಲ. ಪಜೀತಿಯಾಗ್ಬಿಟ್ಟಿದೆ. ಕೂಗಿದ್ರೆ ʻಓʼ ಅನ್ನಕ್ಕೊಬ್ರು ಬೇಕ್‌ಕಣೆ ನಂಗೆ. ನೀನ್ಯಾಕೆ ರಾಮನ್ನ ನಂಮನ್ಲಿ ಬಿಡ್ಬಾರ‍್ದು? ಇಷ್ಟೇ ಕೆಲ್ಸ, ಮನೆಯಿಡೀ ಓಡಾಡ್ಕಂಡು ಕರ‍್ದಾಗ ಬಂದು ಅಲ್ಲಿಗ್‌-ಇಲ್ಲಿಗ್‌ ಮುಟ್ಸುದಷ್ಟೇಯ. ಮುಂದಿನ್‌ರೋಡಲ್ಲೇ ಸ್ಕೂಲಿದ್ಯಲ್ವೆನೆ. ಈಸಲಕ್ಕೆ ಇಲ್ಲೇ ಸೇರ‍್ಕಳ್ಳಿ. ಮಧ್ಯಾಹ್ನದೂಟಕ್‌ ಮನಿಗ್ಬರ‍್ಬೋದು. ಸಂಜೆಗ್ಯಾರೂ ಅಷ್ಟೊಂದು ಬರೋವ್ರಿರಲ್ಲ. ಸಣ್ಣಪುಟ್ಟ ಕೆಲ್ಸವಷ್ಟೇಯ. ಇನ್ನೂ ನಾಕ್ನೆ ಕ್ಲಾಸಲ್ವಾ. ಹಾಗೀಗೆ ಆಟಾಡ್ತ ಓದ್ಕಬೋದು. ಏನಂತೀಯೇ?” ಕುಡಿದ ಲೋಟ ಕೆಳಗಿಟ್ಟರು. ಅಲ್ಲೇ ಗೋಡೆಗೊರಗಿ ನಿಂತಿದ್ದ ನಾಗಲಕ್ಷ್ಮಿ ಎರಡೂ ಲೋಟವನ್ನೂ ಸಿಂಕಿನಲ್ಲಿ ತೊಳೆದು, ಬಾರಲಿಸಿದಳು. ತಕ್ಷಣ ಉತ್ತರ ಕೊಡಲು ತೋಚಲಿಲ್ಲ. “ನೋಡು, ಅವ್ನಕೈಲಿ ಸುಮ್ನೆ ಮಾಡಿಸ್ಕಳಕ್ಕೆ ನಂಗೂ ಒಂಥರವೇಯ. ತಿಂಗ್ಳಿಗೆ ಒಂದೂವರೆ ಸಾವಿರ ರೂಪಾಯಿ ಕೊಡ್ತೀನೆ. ಯೋಚ್ನೆಮಾಡಿ, ನಿಂಗಂಡನ್ನೂ ಕೇಳ್ಹೇಳು” ಮಾತು ಮುಗಿಸಿದಳು. “ಆಯ್ತು, ಇವ್ರುನ್ನೂ ಯಾವ್ದುಕ್ಕೂ ಒಂದ್ಮಾತು ಕೇಳಿ, ಹೇಳ್ತೀನಿ” ಎಂದು ಸುಶೀಲಮ್ಮ ಕೊಟ್ಟಿದ್ದ ಕಡೆದಮಜ್ಜಿಗೆಯ ಬಾಟಲಿ, ಪ್ರಸಾದದ ಎರಡ್ಹೋಳು ತೆಂಗಿನಕಾಯಿ, ಪಪ್ಪಾಯಿ ಎಲ್ಲವನ್ನೂ ಬುಟ್ಟಿಯಲ್ಲಿಟ್ಟುಕೊಂಡು ಹೊರಟಳು.

*

ಯೋಚನೆ ಮಾಡುವುದಕ್ಕೇನಿತ್ತು?! ರಾಮನ್ನೂ ದುಡಿಯಕ್‌ಹಚ್ಚೂದಾ… ದುಡ್ಯೋದು ಅಂದ್ರೆ… ಅಂತಾ ಕಷ್ಟದ್‌ಕೆಲ್ಸವೇನೂ ಅಲ್ವಲ್ಲ. ತೊಳ್ದು, ಬಳ್ದು‌, ಒಗ್ದು ಮಾಡೋ ಕೆಲ್ಸಕ್ಕೆ ಮುನಿಯಮ್ಮ ಇದ್ದೇಇದಾಳೆ. ಏನೋ ಸಮಯಾಂದ್ರೆ, ಎಲ್ರೂ ತಿಂದು, ಕುಡಿದ ತಟ್ಟೆ, ಲೋಟ ಒಂದೆರಡು ತೊಳೀಬೇಕಾಗ್ಬೋದು, ಎಂಜಲುಗೋಮೆ ಹಚ್ಬೇಕೇನೋ… ಅಷ್ಟೇಯ. ನಮ್ಮನ್ಲೂ ಇಷ್ಟ್ಕೆಲ್ಸ ಮಾಡ್ತಾನಲ್ವಾ. ಒಬ್ಬಂಗಾದ್ರೂ ಮೂರೊತ್ತೂ ಹೊಟ್ತುಂಬಾ ಊಟ ಸಿಗುತ್ತೆ.  ಎಲ್ಕಿಂತ ಸುಶೀಲಮ್ಮ‌ ಒಳ್ಳೇವ್ಳು, ಸದಾ ನನ್‌ಕಷ್ಟಕ್ಕಾಗಿರೋವ್ಳು. ತಾನಾಗಿ ಕೇಳ್ದಿದ್ರೂ ಅದೋ, ಇದೋ ಕೊಡ್ತಲೇ ಇರ‍್ತಾಳೆ. ಈಗ್ವರ್ಷ್ದಿಂದ್ಲೇ ಪಾಪ, ಇಷ್ಟು ಕಾಲ್ನೋವಿಗೆ ವದ್ದಾಡ್ತಿರದು. ಅವ್ಳ ಸಮಯಕ್ಕೂ ಆಗ್ಬೇಕು. ಸಾಲ ತೀರ‍್ಸಕ್ಕೂ ಒಂದಾರಿಯಾಗುತ್ತೆ. ಆದ್ರೂ… ರಾಮನ್ನ ಕಂಡೋರ ಮನೇಲಿ ಬಿಟ್ಟು… ದುಡ್ಡು ತಗಳೂದು ಅಂದ್ರೆ ದುಡ್ಸೋದು ಅಂತ್ಲೇತಾನೇ… ಇಷ್ಟು ಚಿಕ್ಕತಮ್ಮ ದುಡ್ದು ಅಕ್ಕನಮದ್ವೆ ಸಾಲತೀರ‍್ಸುದಾ… ಕಣ್ಣಲ್ಲಿ ನೀರಾಡಿತು. ಬಗೆಹರಿಯದೆ ರಾತ್ರಿ ಊಟ ಬಡಿಸುವಾಗ ಗಂಡನ ಮುಂದೆ ʻಹೀಗೆ ಸುಶೀಲಮ್ಮ ಕೇಳಿದ್ಲು…ʼ ಅಂದಳು. ಮಂಜಯ್ಯನೂ ಊಟ ನಿಲ್ಲಿಸಿ ಯೋಚನೆಗೆ ಬಿದ್ದು, ನಿಧಾನವಾಗಿ “ನಿಂಗೇನನ್ಸುತ್ತೆ? ನಂದೇನಿಲ್ಲ… ಅವ್ನು ಹೊಂದ್ಕತಾನಾ… ಸಿರಿವಂತ್ರ ಮನೆ, ಬೆಂಕಿ ಸಾವಾಸವಲ್ವೇ…” ಎನ್ನುತ್ತಾ ಊಟ ಮುಗಿಸಿ ಎದ್ದರು. ಮಲಗುವಾಗ ರಾಮನನ್ನೂ ಕೇಳಿದಳು. ಅವನೂ ಸಾಕಷ್ಟು ಸಲ ಅವರ ಮನೆಯನ್ನು ನೋಡಿದ್ದನಲ್ಲ. “ನಂಗೊತ್ತಾಗಲ್ವೇ. ನೀನು ಹೋಗೂಂದ್ರೆ ಹೋಗ್ತಿನಿ” ಎಂದು ಮಲಗಿದ. ಅಂತೂ ಇನ್ನೂ ಸ್ಕೂಲು ಶುರುವಾಗಲು ಹದಿನೈದು ದಿನವಿರುವಾಗಲೇ ಅಲ್ಲಿನ ಸ್ಕೂಲಿಗೆ ಅಡ್ಮಿಷನ್‌ ಮಾಡಿಸಿ, ಅವರ ಮನೆ ಸೇರಿದ…

*

ಎರಡು ಚದುರದಲ್ಲೇ ಎರಡು ಅಡ್ಡಗೋಡೆ ಹಾಕಿ ಈ ಭಾಗ ಅಡುಗೆ ಮನೆ, ಈ ಭಾಗ ಪಡಸಾಲೆ ಆ ಭಾಗ ಕೋಣೆ, ಹಿಂದಿನ ಕೊಟ್ಟಿಗೆಯ ಒಂದು ಭಾಗವೇ ಬಚ್ಚಲುಮನೆ, ವಠಾರದ ನಾಲ್ಕೂ ಮನೆಗಳಿಗೆ ಸೇರಿ ಎರಡು ಪಾಯಿಖಾನೆ ಇದ್ದ ಕಿಷ್ಕಿಂದಾ ಕಾಂಡದಲ್ಲಿದ್ದವನಿಗೆ, ಅವನಿಗೆಂದೇ ಹಿಂದುಗಡೆಯ ಒಂದು ರೂಮು, ಹಾಸಿಗೆ, ಬಟ್ಟೆ, ಸಾಮಾನು ಇಟ್ಟುಕೊಳ್ಳಲು ಟ್ರಂಕು ಎಲ್ಲಾ ಕೊಟ್ಟಾಗ ತಕ್ಷಣಕ್ಕೇನೋ ತಾನು ತುಂಬಾ ದೊಡ್ಡವನಾದ ಹಾಗನ್ನಿಸಿ ಮೊದಲಿಗೆ ಖುಷಿಯಾಯಿತು. ಕೋಣೆಯ ಪಕ್ಕದಲ್ಲೇ ಹೊರಗಿನವರು ಉಪಯೋಗಿಸುವ ಸ್ನಾನದ ಮನೆ, ಅದರ ಮಗ್ಗುಲಲ್ಲಿ ಪಾಯಿಖಾನೆಯೂ ಇದ್ದು ಅನುಕೂಲವಾಗಿತ್ತು; ಆದರೆ ರಾತ್ರಿಯಲ್ಲಿ ಒಂಟಿಯಾಗಿ ಮಲಗಬೇಕಾದಾಗ ಗೋಣಿತಾಟಿನ ಮೇಲೆ ಹಳೆಯ ಸೀರೆಗಳನ್ನು ಹಾಸಿಕೊಂಡು ಅಮ್ಮನ ಪಕ್ಕದಲ್ಲೇ ಮುದುರಿಕೊಳ್ಳುತ್ತಿದ್ದಾಗ ಸಿಗುತ್ತಿದ್ದ ಏನೋ ಒಂದು… ಇದ್ದಕ್ಕಿದ್ದಂತೆ ಕಳೆದುಹೋದ ಹಾಗಾಗಿ, ಭಯವಾಗಿ, ಒಂದಷ್ಟು ಹೊತ್ತು ಅತ್ತ… ಎಷ್ಟೋ ಹೊತ್ತಿನ ಮೇಲೆ ನಿದ್ರೆ ಬಂತು.

ಮರುದಿನ ಬೆಳಗ್ಗೆ ತನ್ನ ಮನೆಯ ಅಭ್ಯಾಸದಂತೆ ಕೌಪೀನ ಹಾಕಿಕೊಂಡು ಬಾಗಿಲು ತೆರೆದಿಟ್ಟೇ ಸ್ನಾನ ಮಾಡುತ್ತಿರುವಾಗ ಅತ್ತಕಡೆ ಹಾದ ಸುರೇಶ “ಇದೆಂತದೋ ನಿನ್‌ಅವಸ್ಥೆ ಮಾರಾಯ, ಎಂತದದು ಸೊಂಟಕ್ಕೆ ಕಟ್ಕಂಡಿರದು. ಹೀಂಗ್‌ ಬಾಗ್ಲು ಹಾರುಹೊಡ್ದು ಸ್ನಾನ ಮಾಡ್ಬಾರ‍್ದು. ಮ್ಯಾನರ‍್ಸ್‌ ಅಲ್ಲ. ಹಲ್ಲ್ಹೆಂಗ್‌ ಉಜ್ದಿ” ಅಂದ. “ಹಲ್ಪುಡಿ ಇಲ್ವಲ್ಲ, ಅಮ್ಮಂಗೆ ತಂಕೊಡಕ್ಕೆ ಹೇಳ್ತೀನಿ ಸುರೇಶಣ್ಣ” ಅಂದ ತಲೆತಗ್ಗಿಸಿ. ನೋಡಿಲ್ಲಿ, ಹೊಸ ಟೂತ್ಬ್ರಷ್ಷು, ಇದ್ನ ತೊಳ್ಕಂಡು ಮೇಲಿಷ್ಟು ನೋಡು… ಇದು ಪೇಸ್ಟು, ಇದ್ನ ಹಾಕಿ ಹೀಂಗೆ ಹಲ್ಲುಜ್ಜುದು. ತಗಾ ಉಜ್ಜು ನೋಡೋಣ. ಹಾಗೇ… ಉಜ್ಜಿದ್ದಾದ್ಮೇಲೆ ಬ್ರಷ್‌ ತೊಳ್ದು, ಇಕಾ.. ಎರ‍್ಡುನ್ನೂ ಹೀಗಿಲ್ಲಿಡೋದು. ಮೈಸೋಪಿದೆ ನೋಡು. ಅದು ನಿಂದೇಯಾ. ಹಾಕ್ಕಂಡು ಉಜ್ಕಾ. ಬಕೇಟಲ್ಲಿ ತಣ್ಣೀರಿದ್ಯಲ್ಲೋ…, ಇಲ್ನೋಡು ಈ ಕಡೆ ನಲ್ಲಿ ಬಿಟ್ಕಂಡ್ರೆ ಬಿಸ್ನೀರು ಬರುತ್ತೆ, ಅದ್ನ ಬಿಟ್ಕ, ತಣ್ಣೀರಲ್ಲಿ ಮಾಡ್ಬೇಡ, ನೆಗ್ಡಿಯೋ, ಜ್ವರವೋ ಬಂದಾತು” ಬಿಸಿನೀರಿನ ನಲ್ಲಿ ತಿರುಗಿಸಿ ಬಾಗಿಲನ್ನು ಮುಂದೆಳೆದುಕೊಂಡು ಹೊರಟ. ʻಅದ್ಸರಿ, ನಮ್ಮನ್ಲಿ ಮೈತೊಳ್ಕಳೋವಾಗ ಬಚ್ಲಿಗೆ ಬಾಗ್ಲೇ ಇರಲ್ವಲ್ಲ, ಕೊಟ್ಟಿಗೆ ಪಕ್ಕದ ಕಲ್ಲುಹಾಸಲ್ಲಿ, ಒಂದು ಬಕೆಟ್‌ ನೀರು ಸೇದ್ಕಂಡು ಬಂದಿಟ್ಕಂಡು ಸುರ‍್ಕಳದಷ್ಟೇಯ. ಸಾಪಾದ ಕಲ್ಲಲ್ಲಿ ಮೈಕೈ ತಿಕ್ಕಳದು. ಸ್ನಾನ ಮಾಡಿದ್‌ ನೀರು ಹಂಗೇ ಪಕ್ಕದಲ್ಲಿ ಹರ‍್ಕಂಡು ತೊಂಡೇ ಬಳ್ಳಿಗೋ, ಕೆಸವಿನ ದಂಟಿಗೋ ಹೋಗ್ತಿತ್ತು. ಅಪ್ಪ ಸ್ನಾನ ಮಾಡ್ವಾಗ ಕೌಪೀನ ತೊಟ್ಕತಿದ್ದ, ನಾನೂ ಶಂಕ್ರನೂ ಹಾಗೇ. ಅಮ್ಮ ಸೀರೆ ತುಂಡುಟ್ಕಂಡು ಕೂತು ಮೈತೊಳ್ಕತಿದ್ದುದು. ಗಿರಿಜ್ನೂ ಹಂಗೇಯ. ಅಮ್ಮ ಸ್ನಾನ ಮಾಡ್ತಿರ‍್ವಾಗ ಎಷ್ಟೋ ಸಲ ನಾವು ಪಕ್ಕದಲ್ಲಿ ಹಸೂಗೆ ಹುಲ್ಲು ಹಾಕುದೋ, ನೀರು ಇಡುದೋ, ಸಗ್ಣಿ ತೆಗ್ಯುದೋ ಮಾಡ್ತಿದ್ವಲ್ಲ. ಪುಟ್ಟವ್ನಿದ್ದಾಗ ಒಳ್ಗಿಂದ ಒಂತಪ್ಲೆ ನೀರ್‌ಕಾಸ್ತಂದು, ಸ್ನಾನ ಮಾಡುಸ್ತಿದ್ದಿದ್ದು, ಇದೆಂತೋ ಹೊಸ್ತು, ಅಮ್ಮ ಬಂದಾಗ ಹೇಳ್ಬೇಕುʼ ಅಂದುಕೊಂಡು ಸ್ನಾನ ಮುಗಿಸಿದ. ಅಂದು ಸಂಜೆ ಬರುವಾಗ ಸುರೇಶ ಅವನಿಗೆಂದೇ ನಾಲ್ಕು ಜೊತೆ ಬನೀನು ಮತ್ತು ಒಳಚಡ್ಡಿಗಳನ್ನು ತಂದುಕೊಟ್ಟು ಅವನ ಕೌಪೀನವನ್ನು ಆಚೆಗೆ ಎಸೆಸಿದ. ಹೀಗೆ ನಾಗರೀಕ ನಡವಳಿಕೆಯ ಮೊತ್ತಮೊದಲ ಪಾಠ ಕಲಿತ ರಾಮ…

ಮರುದಿನ ಮಧ್ಯಾಹ್ನ ಅವರಮ್ಮ ಬಂದು ಆತಂಕದಿಂದ “ಹೇಂಗಿದೀಯೋ…?” ಎಂದಾಗ ಅವಳ ಸಮಾಧಾನಕ್ಕೆ “ಚೆನ್ನಾಗಿದೀನೇ” ಅಂದು ನಕ್ಕದ್ದಾಯಿತು. ಅವರಮ್ಮನೂ ನಂಬಿಕೊಂಡಂತೆ ನಟಿಸಿದ್ದಾಯಿತು… ಇಲ್ಲಿ, ಮನೆಯಲ್ಲಿದ್ದ ಹಾಗೆ, ಏನಾದರೂ ತಿನ್ನುವ ತೊಡವಾದಾಗ “ಏ ಒಂತುಂಡು ಬೆಲ್ಲ ಕೊಡೆ, ಪುಟಾಣಿ ಕೊಡೆ, ಕಾಯ್ಚೂರು ಕೊಡೆ” ಎಂದು ಕೇಳುವಂತಿಲ್ಲ. ಕಣ್ಣೆದುರಿಗೇ ಬೇಕಾದಷ್ಟು ಹಣ್ಣುಗಳು ಬಿದ್ದಿದ್ದರೂ ಯಾರಾದರೂ ಕೊಡದೆ, ತಿನ್ನುವಂತಿಲ್ಲ. ಡಬ್ಬಿಗಳಲ್ಲಿ ಕೋಡ್ಬಳೆ, ಚಕ್ಲಿ, ಉಪ್ಪೇರಿ ತುಂಬಿಕೂತಿರುತ್ತವೆ. ತಾನಾಗಿ ಕೈಹಾಕುವಂತಿಲ್ಲ. ಮನೆಯಲ್ಲಿ ಆಟವಾಡಲೋ, ಜಗಳವಾಡಲೋ ಲಕ್ಷ್ಮಿಯಾದರೂ ಇರುತ್ತಿದ್ದಳು. ಇಲ್ಲಿ ಜೊತೆಯವರ‍್ಯಾರೂ ಇಲ್ಲದೆ ತಲೆಕೆಡುತ್ತಿತ್ತು. ಸ್ಮಿತಾ ಕಾಲೇಜಿಗೆ ಹೋಗುತ್ತಾಳೆ, ಸುರೇಶ ಇಂಜಿನೀರಿಂಗ್‌ ಕಡೆಯ ವರ್ಷದಲ್ಲಿದ್ದಾನೆ… ಅವರಿಬ್ಬರಿಗೆ ಇವನ ಜೊತೆ ಏನು ಮಾತು?!. ಏನಾದರೂ ಕೆಲಸಕ್ಕೆ ಕರೆಯುತ್ತಾರೆ. ತಾವು ಏನಾದರೂ ತಿನ್ನುವಾಗ ಇವನ ಕೈಗೂ ಇಡುತ್ತಾರೆ. ಒಮ್ಮೊಮ್ಮೆ ಏನಾದರೂ ತಮಾಶೆ ಮಾಡುತ್ತಾರೆ. ಇವನಿಗೂ ಸಲಿಗೆ ಬೆಳೆಸಿಕೊಳ್ಳಲು ಹಿಂಜರಿಕೆಯೇ….  ಸುಮ್ಮನೆ ವರಾಂಡದಲ್ಲಿ ಬೊಂಬೆಯ ಹಾಗೆ ಕೂತಿರಬೇಕು. ಬರುವವರನ್ನು ಮಾತಾಡಿಸಿ, ಕೂರಿಸಿ ಯಜಮಾನರನ್ನೋ, ಸುರೇಶ, ಸ್ಮಿತರನ್ನೋ ಇಲ್ಲವೇ ಸುಶೀಲಮ್ಮನನ್ನೋ ಕರೆಯಬೇಕು. ಯಾರು ಕರೆದರೂ ಹೋಗಿ ಅವರಿಗೆ ಬೇಕಾದ್ದನ್ನು ತಂದು ಕೊಡುವುದೋ, ಇಟ್ಟು ಬರುವುದೋ ಮಾಡುವುದು; ಕೆಲವೊಮ್ಮೆ ಸ್ಮಿತನ, ಸುರೇಶನ ಬಟ್ಟೆ ಇಸ್ತ್ರಿ ಮಾಡಿಸಿಕೊಂಡು ಬರುವುದು; ಮೂಲೆಯ ದಿನಸಿ ಅಂಗಡಿಯಿಂದ ಏನಾದರೂ ಸಣ್ಣಪುಟ್ಟ ಸಾಮಾನುಗಳನ್ನು ತಂದುಕೊಡುವುದು ಇಂಥವೇ. ಕೆಲವೊಮ್ಮೆ ಏನೂ ಕೆಲಸವಿಲ್ಲದೆ ಕೂತಲ್ಲೇ ತೂಕಡಿಸುವಂತಾಗುತ್ತಿತ್ತು. ತಿಂಡಿ, ಊಟ, ಕಾಫಿ ಯಾವುದಕ್ಕೂ ಮೋಸವಿಲ್ಲ. ಸುಶೀಲಮ್ಮನ ಕೈ ಧಾರಾಳವೇ. ತಮ್ಮನೆಯಲ್ಲಿದ್ದಂತೆ ಸ್ವತಂತ್ರವಿಲ್ಲ ಅಷ್ಟೇ. ಹೇಗೋ ಅಂತೂ ಹೊಸ ವಾತಾವರಣಕ್ಕೆ ಹೊಂದಿಕೊಂಡ. ಅಷ್ಟರಲ್ಲಿ ಸ್ಕೂಲೂ ಶುರುವಾಗಿ ಸ್ವಲ್ಪ ನಿರಾಳವಾಯಿತು… ಶಾಲೆಯಲ್ಲಿ ಹೊಸ ಗೆಳೆಯರಾದರು… ದಿನ ಬೇಗನೇ ಸಾಗುತ್ತಿತ್ತು…

*

ಅಂದು ಬೆಳಗ್ಗೆ ಹೀಗೇ ಅವನು ವರಾಂಡದಲ್ಲಿ ಕುಳಿತಿರುವಾಗ, ಮೊಬೈಲಿನಲ್ಲಿ ಮಾತಾಡುತ್ತಾ ಸ್ಮಿತಾ ಹೊರಗೆ ಬಂದಳು. ಮನೆಯೊಳಗೆ ನೆಟ್ವರ್ಕ್‌ ಸಿಗದಿದ್ದಾಗ ಅವಳು ಹೀಗೆ ಹೊರಬಂದು ಮಾತಾಡುವುದಿತ್ತು. ಮಾತಾಡುತ್ತಲೇ ಗೇಟಿನ ಬಳಿ ಯಾರಿಗೋಸ್ಕರವೋ ಕಾಯತೊಡಗಿದಳು. ಸ್ವಲ್ಪ ಹೊತ್ತಿನಲ್ಲೇ ಯಾರೋ… ಅವಳ ಕಾಲೇಜಿನ ಹುಡುಗನೇ ಇರಬೇಕು, ಬಂದ. ಅವನ ಜೊತೆ ನಗುನಗುತ್ತಾ ಮಾತಾಡುತ್ತಾ ನಿಂತಳು. ಇವನಿಗೂ ಕೆಲಸವಿಲ್ಲದ್ದರಿಂದ ನೋಡುತ್ತಾ ಕುಳಿತ. ಅಷ್ಟರಲ್ಲಿ ಒಳಗಿಂದ ಸುಶೀಲಮ್ಮ ರಾಮನನ್ನು ಕರೆದು “ಸ್ಮಿತಾ ಎಲ್ಲಿ ನೋಡೋ, ಕಾಫಿ ಬೆರ‍್ಸಿ ಅಷ್ಟೊತ್ತಾಯ್ತು” ಎಂದರು. “ಅಲ್ಲಿ ಗೇಟಿನತ್ರ ಯಾರೋ ಹುಡುಗನ್‌ ಜತೆ ಮಾತಾಡ್ತಾ ನಿಂತಿದಾಳೆ” ಅಂದ. “ಹುಡ್ಗಾನಾ…” ಎಂದು ಸ್ವಲ್ಪ ಯೋಚಿಸುತ್ತಲೇ ಹೊರಬಂದರು. ಅವರಮ್ಮ ಬರುವುದಕ್ಕೂ, ಸ್ಮಿತಾ ಅವನೆಡೆಗೆ ಒಂದು ಫ್ಲೈಯಿಂಗ್‌ ಕಿಸ್‌ ದಾಟಿಸುವುದಕ್ಕೂ ಸರಿಹೋಯಿತು. ಆ ಹುಡುಗ ಇವರನ್ನು ನೋಡಿದವನೇ ತನ್ನ ಬೈಕನ್ನು ಓಡಿಸಿಕೊಂಡು ಹೊರಟೇ ಹೋದ. ʻಇದ್ದಕ್ಕಿದ್ದಂತೆ ಅವನೇಕೆ ಗಾಯಬ್‌ ಆದʼ ಎಂದು ತಿಳಿಯದೆ ಹಿಂತಿರುಗಿ ನೋಡಿದರೆ ಅಲ್ಲಿ ಅಮ್ಮ ನಿಂತಿದ್ದರಿಂದ ಪೆಚ್ಚಾದಳು. ತಕ್ಷಣವೇ ಏನೂ ಆಗದಂತೆ “ಕಾಫಿ ಬೆರೆಸಿದ್ಯಾ” ಅನ್ನುತ್ತಾ ಒಳಬಂದಳು. ಅವಳು ಅಡುಗೆಮನೆಗೆ ಬರುವವರೆಗೂ ಸುಶೀಲಮ್ಮನೂ ಸುಮ್ಮನಿದ್ದು ನಂತರ ತಗುಲಿಕೊಂಡಳು “ಯಾರೇ ಅವ್ನು? ಯಾಕ್ಬಂದಿದ್ದ ಮನೆಹತ್ರ?” “ಅಯ್ಯೋ ನಮ್‌ ಕ್ಲಾಸ್ಮೇಟಮ್ಮ, ನೋಟ್ಸು ಇಸ್ಕಳಕ್ಕೆ ಬಂದಿದ್ದ” ʻಏನಂಥಾ ದೊಡ್ವಿಷಯ ಅಲ್ಲʼ ಅನ್ನುವಂತೆ ಹೇಳಿದಳು. “ನೋಟ್ಸು ಕೊಡಕ್ಕೆ ಅಷ್ಟೊತ್ಯಾಕೆ? ನೀನಷ್ಟೊಂದು ಕಿಸ್ಕಂಡು ಮಾತಾಡ್ಸಿ ಹೀಂಗ್‌ ಬೇರೆ ಮಾಡ್ದ್ಯಲ್ಲ” ಎಂದು ಅವಳು ಫ್ಲೈಯಿಂಗ್‌ ಕಿಸ್‌ ಕೊಟ್ಟಿದ್ದನ್ನು ಅಭಿನಯಿಸಿ ತೋರಿಸಿದಳು. “ನಿಂಗೆಂಥೋ ಭ್ರಮೆ ಅಷ್ಟೇಯ” ಎನ್ನುತ್ತಾ ಮುಂದೆ ಮಾತು ಬೆಳೆಸಲು ಅವಕಾಶ ಕೊಡದೆ ಕಾಫಿಲೋಟವನ್ನು ಕೈಗೆತ್ತಿಕೊಂಡು ಅಲ್ಲೇ ನಿಂತಿದ್ದ ರಾಮನನ್ನು ನೋಡಿ ʻಇವ್ನೇ ಎಲ್ಲೋ ಅಮ್ಮನ್‌ ಕಿವಿ ಊದಿರ‍್ಬೇಕು, ಇಲ್ದಿದ್ರೆ ಅಡ್ಗೆಮನೇಲಿದ್ದೋಳಿಗೆ ಹೆಂಗ್‌ತಿಳೀತು ನಾನಷ್ಟೊತ್ತು ಮಾತಾಡ್ತಿದ್ದೇಂತʼ ಅನ್ನಿಸಿ ಅವನತ್ತ ಅನುಮಾನದ ನೋಟಹರಿಸಿ ಮಹಡಿ ಹತ್ತಿದಳು. ಅವಳಿಗೆ ಕೋಪ ಬಂದಿದೆಯೆಂದು ಅರ್ಥವಾದರೂ, ʻಏಕೆ?ʼಎನ್ನುವುದು ಅವನಿಗೆ ಹೊಳೆಯಲಿಲ್ಲ.

ಅಂದಿನಿಂದ ಅವಳು ಫೋನ್‌ ಮಾಡಲು ಹೊರಬಂದರೆ ಅಲ್ಲಿ ಕೂತಿರುತ್ತಿದ್ದ ರಾಮನನ್ನು ʻನೀನೆದ್ದು ಒಳಗ್ಹೊಗೋʼ ಎಂದು ಕಳಿಸಿಬಿಡುತ್ತಿದ್ದಳು. ಅಂದು ಹಾಗೇ ಒಳಗೆ ಹೋದೊಡನೆ ಸುಶೀಲಮ್ಮ “ಏನ್ಬೇಕೋ, ಏನಕ್ಬಂದ್ಯೋ” ಎಂದು ಕೇಳಿದರೆ ಉತ್ತರ ಕೊಡಲು ತಿಳಿಯದೆ ಮತ್ತೆ ಹೊರಗೆ ಹೋಗಿ ಕೂತ. ಮಾತು ಮುಗಿಸಿ ಒಳಬಂದ ಸ್ಮಿತಾ “ಇಲ್ಕೂತು ಮಾತ್ಕೇಳ್ತಿದ್ಯಾ. ಒಬ್ರು ಮಾತಾಡ್ತಿರೋದನ್ನ ಇನ್ನೊಬ್ರು ಕೇಳಿಸ್ಕಾಬಾರ‍್ದು, ಅದು ಮ್ಯಾನರ‍್ಸ್ ಅಲ್ಲಾ ತಿಳ್ಕಾ” ಎಂದು ರೇಗಿ ಅವನಿಗರ್ಥವಾಗದ ನಾಗರೀಕತೆಯ ಇನ್ನೊಂದು ಪಾಠ ಹೇಳಿಕೊಟ್ಟಳು. ʻಇದೊಳ್ಳೇ ಪಂಚಾಯ್ತಿಯಾಯ್ತಲ್ಲ ಇಲ್ಕೂತ್ರೆ ಸ್ಮಿತಕ್ಕ ಒಳ್ಗೋಗು ಅಂತಾಳೆ, ಒಳಗೋದ್ರೆ ಅಮ್ಮ ಎಂತಕ್ಬಂದ್ಯೋ ಅಂತಾರೆ. ಎಂಥ ಮಾಡುದೋʼ ಅಂದುಕೊಂಡ. ಅಷ್ಟೊತ್ತಿಗೆ ಒಳಗಿಂದ ಸುಶೀಲಮ್ಮ “ರಾಮಾ ಎಲ್ರುನೂ ತಿಂಡಿಗ್‌ ಕರ‍್ಯೋ” ಎಂದರು…

*

ಅವತ್ತು ಸ್ಕೂಲ್‌ಮುಗಿಸಿ ಹೊರಬರುವಾಗ ಆ…ವತ್ತು ಬೆಳಗ್ಗೆ ಬಂದಿದ್ದ ಹುಡುಗನ ಬೈಕಿನ ಹಿಂದಿನಿಂದ ಸ್ಮಿತಾ ಇಳಿಯುತ್ತಿರುವುದನ್ನು ರಾಮ ನೋಡಿದ. ಅವರಿಬ್ಬರೂ ಅಲ್ಲೇ ಮರದ ಕೆಳಗೆ ಮಾತಾಡುತ್ತಾ ನಿಂತರು. ಯೂನಿಫಾರಂನಲ್ಲಿ ಅಷ್ಟು ಹುಡುಗರ ಮಧ್ಯೆ ಇದ್ದ ರಾಮನನ್ನು ಅವಳು ಗಮನಿಸಲಿಲ್ಲ. ಅವನೂ ತನ್ನ ಪಾಡಿಗೆ ಮನೆಗೆ ಹೋದ. ಗೇಟಿನಲ್ಲೇ ನಿಂತಿದ್ದ ಸುಶೀಲಮ್ಮ “ನೋಡೋ ರಾಮ, ಇಷ್ಟೊತ್ತಾದ್ರೂ ಸ್ಮಿತಾ ಮನ್ಗೇ ಬಂದಿಲ್ಲ, ಇವತ್ತು ಮಧ್ಯಾನ್ವೇ ಬರ‍್ಬೇಕಿತ್ತು” ಅಂದರು. “ಅವ್ಳಿಲ್ಲೇ ನಮ್‌ಸ್ಕೂಲ್ ರಸ್ತೆ ಮೂಲೇಲಿ‌ ಅವತ್ತು ಬಂದಿದ್ನಲಾ, ಆ ಹುಡ್ಗನ ಜತಿಗೆ ಮಾತಾಡ್ತಾ ನಿಂತಿಯಾಳೆ” ಎಂದು ಒಳಗೆಹೋದ. ʻಇದೇನಿದು?ʼ ಎಂದು ಆತಂಕವಾದರೂ, ಇಲ್ಲೇ ಹತ್ತಿರವಿದಾಳಲ್ಲ, ಬರ‍್ತಾಳೆ ಎಂದು ಕಾಯುತ್ತಾ ನಿಂತರು. ಸ್ವಲ್ಪ ಸಮಯದಲ್ಲೇ ಬಂದ ಸ್ಮಿತನಿಗೆ ಬಾಗಿಲಲ್ಲೇ ನಿಂತಿದ್ದ ಅಮ್ಮನನ್ನು ನೋಡಿ ಅಧೈರ್ಯವಾದರೂ, ಏನೂ ಆಗದವಳಂತೆ ಒಳಬಂದಳು. ಮನೆಯೊಳಗೆ ಬಂದ ತಕ್ಷಣ “ಎಂತಕ್ಕೇ ಲೇಟು” ಕೇಳಿದರು ಸುಶೀಲಮ್ಮ. “ಎಕ್ಸ್‌ಟ್ರಾ ಕ್ಲಾಸಿತ್ತಮ್ಮ” ಎಂದಳು ಮೆಟ್ಟಿಲು ಹತ್ತುತ್ತಾ. “ಎಲ್ಲಿ ಕಾಲೇಜಲ್ಲಾ, ಇಲ್ಲಾ ಮುಂದಿನ್ಬೀದಿ ಮರದ್‌ಕೆಳ್ಗಾ” ಎಂದರು ಸಿಟ್ಟಿನಲ್ಲಿ. “ನಿಂಗ್ಯಾರು ಹೇಳಿದ್ರು ಸುಳ್ಸುಳ್ಳೇ, ಆ ರಾಮನಾ. ಮಾಡ್ತೀನವ್ನಿಗೆ. ಅವ್ನುಹೇಳ್ದ, ನೀನಂಬ್ದೆ. ಅವ್ನು ಯಾರನ್‌ಕಂಡ್ನೋ ಬಂದ್‌ ನಿನ್ನತ್ರ ಪುಳ್ಳೆಯೆಬ್ಸಿದಾನೆ” ಎಂದು ಬೈದುಕೊಳ್ಳುತ್ತಾ ಕೋಣೆಯ ಬಾಗಿಲು ಹಾಕಿಕೊಂಡಳು. ʻಇದ್ಯಾಕೋ ವಿಪ್ರೀತಕ್ಕಿಟ್ಟುಕೊಳ್ತಿದೆ, ಇವರತ್ರ ಮಾತಾಡ್ಬೇಕು ಇವತ್ತುʼ ಎಂದು ಯೋಚನೆಗೆ ಬಿದ್ದರು ಸುಶೀಲಮ್ಮ.

*

ಇವತ್ತು ಬೆಳಗ್ಗೆ ಸುಶೀಲಮ್ಮನಿಗೆ ಅಟ್ಟದ ಮೇಲಿಟ್ಟಿದ್ದ ಒಂದು ಪಾತ್ರೆಯನ್ನು ಇಳಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಇಟ್ಟುಕೊಂಡಿದ್ದ ಸ್ಟೂಲು ಕಾಣಲಿಲ್ಲ. ರಾಮನನ್ನು ಕರೆದು “ಸ್ಟೂಲ್‌ ಕಂಡಿದ್ಯೇನೋ” ಕೇಳಿದಳು. “ಸ್ಮಿತಾಕ್ಕನ ಬಾತ್ರೂಮಿನ ಬಲ್ಬ್‌ ಹೋಗಿತ್ತಂತೆ, ಹೊಸಬಲ್ಪು ಹಾಕ್ಕಬೇಕು, ತಂಕೊಡು ಅಂದ್ಲು ನಿನ್ನೆ. ತಗಂಡೋಗ್‌ಕೊಟ್ಟೆ” ಎಂದ. “ಇಷ್ಟೊತ್ತಿಗೆ ಹಾಕಿದ್ದಾಗಿರುತ್ತೆ, ಅರ್ಜೆಂಟಾಗಿ ಮೇಲಿಂದ ತಪ್ಲೆ ಇಳಸ್ಕಬೇಕು. ತೊಗೊಂಬಾ ಹೋಗು” ಎಂದು ಓಡಿಸಿದಳು. ಇವನು ಸ್ಮಿತನ ರೂಮಿಗೆ ಹೋದಾಗ ಬಾಗಿಲು ಮುಂದೆ ಹಾಕಿತ್ತು. ಅವಳೇ ಹಿಂದೆ ಹೇಳಿಕೊಟ್ಟಿದ್ದ ನಾಗರೀಕತೆಯ ಪಾಠದಂತೆ “ಸ್ಮಿತಾಕ್ಕ” ಎಂದು ಒಂದೆರಡು ಸಲ ಕರೆದ. ಅವಳ ಧ್ವನಿ ಕೇಳಲಿಲ್ಲ. ಎಲ್ಲೋ ಕೆಳಗೆ ಮೊಬೈಲ್ನಲ್ಲಿ ಮಾತಾಡ್ತಿದಾಳೇನೋ ಎಂದುಕೊಂಡು ಹೆದರಿಕೊಂಡೇ ರೂಮಿನ ಬಾಗಿಲು ತೆಗೆದ. ಕಾಣಲಿಲ್ಲ, ಸಧ್ಯ! ಎಂದುಕೊಳ್ಳುತ್ತಾ ಹೋಗಿ ಮುಂದೆಮಾಡಿದ್ದ ಬಾತ್ರೂಮಿನ ಬಾಗಿಲು ತಳ್ಳಿದ. ಪಕ್ಕದಲ್ಲೇ ಇದ್ದ ಸ್ಟೂಲನ್ನು ಎಳೆದುಕೊಂಡ. ಪ್ಲಾಸ್ಟಿಕ್‌ ಪರದೆಯ ಹಿಂದೆ ಶೋವರ್‌ ಕೆಳಗೆ ನಿಂತು ಯಾವುದೋ ಲಹರಿಯಲ್ಲಿದ್ದ ಸ್ಮಿತಾಗೆ ಧಡಭಡ ಶಬ್ದ ಕೇಳಿ “ಯಾರದು?” ಎಂದು ಅರ್ಧ ಹೆದರಿಕೆಯಲ್ಲಿ, ಅರ್ಧ ಕೋಪದಲ್ಲಿ ಪರದೆಯಿಂದ ಮುಖ ಮಾತ್ರ ಇಣುಕಿದರೆ ರಾಮ ಸ್ಟೂಲನ್ನು ಎತ್ತಿಕೊಂಡು ಹೋಗುತ್ತಿದ್ದಾನೆ. “ಯೂ… ರಾಸ್ಕಲ್” ಎಂದು ಅವಳು ಕಿರುಚುವಷ್ಟರಲ್ಲಿ ಅವನು ಸ್ಟೂಲನ್ನು ತೆಗೆದುಕೊಂಡು ಬಾಗಿಲೆಳೆದುಕೊಂಡು ಕೆಳಗೆ ಹೋಗಿದ್ದ………

ಸ್ನಾನ ಮುಗಿಸಿ ಬಾತ್ರೋಬಲ್ಲೇ ಕೆಳಗೆ ಬಂದ ಸ್ಮಿತಾ ಅಡುಗೆಮನೆಯಲ್ಲಿ ಅಮ್ಮ ಹತ್ತಿದ್ದ ಸ್ಟೂಲಿನ ಪಕ್ಕದಲ್ಲಿ ನಿಂತು ಪಾತ್ರೆ ಇಳಿಸಿಕೊಳ್ಳುತ್ತಿದ್ದ ರಾಮನನ್ನು ಕಂಡಾಕ್ಷಣವೇ ಕೋಪ ತಡೆಯಲಾರದೆ ʻಪಠೀರ್‌ʼ ಎಂದು ಕೆನ್ನೆಗೆ ಬಾರಿಸಿದಳು. “ನಿಂಗಷ್ಟು ಗೊತ್ತಾಗಲ್ವೇನೋ. ಅವತ್ತು ಹೇಳಿರ‍್ಲಿಲ್ವಾ, ಸೀದಾ ನನ್ರೂಮಿಗೆ ನುಗ್ಕೂಡ್ದು, ಬಾಗ್ಲು ತಟ್ಟಿ, ಕರ‍್ದು ʻಬಾʼ ಅಂದ್ಮೇಲೆ ಬರ‍್ಬೇಕೂಂತ” ಎಂದವಳೇ ಇನ್ನೊಂದು ಕೆನ್ನೆಗೂ ಬೆರಳುಮೂಡುವಂತೆ ಬಾರಿಸಿದಳು. ಸ್ಟೂಲನ್ನು ಹತ್ತಿದ್ದ ಸುಶೀಲಮ್ಮ ದಿಗ್ಭ್ರಾಂತಿಯಿಂದ ಕೆಳಗಿಳಿದು “ಎಂತಾಯ್ತೆ, ಎಂತಕ್ಕೇ ಅವನ್ನ ಹೊಡೀತಿದಿ” ಎಂದು ಮತ್ತೂ ಬಾರಿಸಲು ಎತ್ತಿದ್ದ ಕೈಯನ್ನು ಇಳಿಸಿದರು. “ಎಂತಾಯ್ತಾ?! ಸ್ಕೌಂಡ್ರಲ್! ನಾಯೀಗ್‌ ಸಲ್ಗೆ ಕೊಟ್ರೆ ಸಿಂಹಾಸ್ನ ಏರಿ ಕುತ್ಕಂತಂತೆ. ನಾನು ಸ್ನಾನ ಮಾಡ್ತಿದ್ರೆ ಇವ್ನು ಸೀದಾ ಬಾತ್ರೂಮಿಗೆ ನುಗ್ಗುದಾ. ಅಷ್ಟು ಮೈಮೇಲೆಚ್ರ ಇಲ್ವಾ. ಸಾವ್ರ ಸಲ ಹೇಳಿದೀನಿ, ನನ್ರೂಮಿಗೆ ಸೀದಾ ನುಗ್ಗಕ್ಕೂಡ್ದು, ನನ್‌ಸಂಗ್ತೀಗ್‌ ಬರಕ್ಕೂಡ್ದು ಅಂತ. ಎಂಥಾ ಹರಾಮ್‌ಕೋರ! ಇವತ್ತು ಸೀದಾ ಬಾತ್ರೂಮಿಗೇ ನುಗ್ಗಿಯಾನಲ್ಲ, ಇನ್ನೂ ಹತ್ವರ್ಷಕ್ಕೇ ಇಷ್ಟು ಕೆಟ್ಟಿದಾನಲ್ಲ. ನೀನು ಅವ್ನನ್ನ ತಲೆಮೇಲೆ ಮೆರ‍್ಸಿದ್ದು ಅತಿಯಾಯ್ತು” ಎನ್ನುತ್ತಾ ಮತ್ತೆ ಬೆನ್ನ ಮೇಲೆ ಗುದ್ದಿದಳು. “ಬಿಡೇ ಅವನ್ನ, ನೀನ್ಯಾಕೋ ಅವ್ಳನ್ನ ಕರೀದೆ ಬಾತ್ರೂಮಿಗೆ ನುಗ್ಗಿದ್ದು” ಎನ್ನುತ್ತಾ ಅವನ ಕಡೆ ತಿರುಗಿದಳು. “ನೀವು ಸ್ಟೂಲ್‌ ತಗಂಬಾಂದ್ರಲ್ಲ, ರೂಮಿನ ಬಾಗ್ಲುಬಡ್ದು ಕರ‍್ದೆ. ಅವ್ಳ ದನಿ ಕೇಳ್ಳಿಲ್ಲ, ಫೋನಲ್ಲಿ ಮಾತಾಡಕ್ಕೆ ಕೆಳ್ಗೋಗಿದಾಳೇನೋಂತ ಬಾಗ್ಲುತೆಗ್ದೆ, ಅಕ್ಕ ಕಾಣ್ಲಿಲ್ಲ. ಬಾತ್ರೂಮ್‌ ಬಾಗ್ಲು ತೆಗ್ದು ಪಕ್ದಲ್ಲೇ ಇದ್‌ ಸ್ಟೂಲನ್‌ ಎತ್ಕಂಡ್‌ಬಂದೆ ಅಷ್ಟೇಯ” ಎಂದ ಅಳುತ್ತಾ. “ಅಷ್ಟೇಯ ಅಂತೆ ಅಷ್ಟೇಯ” ಎನ್ನುತ್ತಾ ಇನ್ನೊಮ್ಮೆ ಗುದ್ದಿ “ಮಾಡ್ತಿನ್ತಡಿ ನಿಂಗೆ, ಪೋಲೀಸ್ನೋರ‍್ಗೆ ಫೋನ್‌ಮಾಡ್ತಿನಿ. ನನ್‌ರೂಮಲ್ಲಿ ಕದ್ದಿದೀಯಾಂತ ಕಂಪ್ಲೇಟ್‌ ಕೊಡ್ತೀನಿ. ಲಾಕಪ್ನಲ್ಲಿ ಹಾಕ್ಕಂಡ್‌ ನಾಕ್‌ಬಾರಿಸ್ತಾರೆ. ಆಗ್ ಬುದ್ಧಿ ಬರತ್ನಿಂಗೆ” ಎಂದು ಮತ್ತೆ ಕೈಯೆತ್ತಿದಾಗ “ನೀನು ಹೊರಗೋಗೋ” ಎಂದು ಅವನನ್ನು ಬಿಡಿಸಿ ಹೊರಗೆ ಕಳಿಸಿ ಮಗಳನ್ನು ತರಾಟೆಗೆ ತೆಗೆದುಕೊಂಡಳು. “ಏನಂದ್ಕಂಡಿದೀಯ ನೀನು. ಕಂಡೋರ‍್ಮನೆ ಚಿಕ್ಕುಡ್ಗ ಅವ್ನು. ಬಾಗ್ಲು ಬೋಲ್ಟ್‌ಹಾಕ್ಕಂಡು ಸ್ನಾನಮಾಡ್ಬೇಕಾದ್ದು ನೀನು. ಅದಕ್ಕೇನ್ಗೊತ್ತು. ನಾಹೇಳ್ದೆ, ಅವ್ನು ತಗಂಬಂದ. ಅವ್ನಿಗೆ ನೀನು ಸ್ನಾನ ಮಾಡ್ತಿರದೂ ಗೊತ್ತಾಗಿಲ್ಲ. ಪರ‍್ದೆ ಹಿಂದೆತಾನೆ ಇದ್ದೆ. ಅಷ್ಟಕ್ಕಿಷ್ಟು ರಂಪ ಮಾಡುದಾ” ದಬಾಯಿಸಿದರು. ತಾಯಿ ಮಗಳಿಗೆ ದೊಡ್ಡ ವಾಗ್ವಾದವೇ ಶುರುವಾಯಿತು…..

*

ಹೊರಬಂದ ರಾಮನ ಕಿವಿಯಲ್ಲಿ ʻಪೋಲೀಸ್ನೋರ‍್ಗೆ ಫೋನ್‌ ಮಾಡ್ತಿನಿ. ನನ್‌ ರೂಮಲ್ಲಿ ಕದ್ದಿದೀಯಾಂತ ಕಂಪ್ಲೇಟ್‌ ಕೊಡ್ತೀನಿ. ಲಾಕಪ್ನಲ್ಲಿ ಹಾಕ್ಕಂಡ್‌ ನಾಕ್‌ಬಾರಿಸ್ತಾರೆʼ ಅನ್ನೋದೇ ಕಿವಿಯಲ್ಲಿ ಗುಯ್ಗುಡಲು ಶುರುವಾಗಿ ದುಃಖ ಒತ್ತೊತ್ತಿ ಬಂತು. ʻಪೋಲೀಸ್ನೋರು ತನ್ನ ಎಳ್ಕಂಡೋದಂಗೆ, ಲಾಠಿ ತಗಂಡು ಬಾರಿಸ್ತಿದ್ದಂಗೆʼ ಕಣ್ಮುಂದೆ ಬಂದು ಧಿಗಿಲಾಯಿತು. ʻಅವ್ರು ಬರೋಷ್ಟ್ರಲ್ಲಿ ಇಲ್ಲಿಂದ ತಪ್ಪಿಸ್ಕಂಬಿಡ್ಬೇಕುʼ ಎನ್ನಿಸಿ ಅಳುತ್ತಾ ಸೀದಾ ಮನೆಯಿಂದ ಹೊರಟು ಸ್ಕೂಲಿನ ಕಟ್ಟೆಯ ಮೇಲೆ ಕುಳಿತ. ʻಇಲ್ಲಿಗೂ ಹುಡುಕ್ಕೊಂಡು ಬಂದ್ಬಿಟ್ರೆʼ ಅನ್ನಿಸಿ ಅಲ್ಲಿಂದೆದ್ದು ತಮ್ಮನೆಗೇ ಹೋಗಿಬಿಡೋಣವೆಂದು ಮನೆಯ ದಾರಿ ಹಿಡಿದ. ʻಇಲ್ಲಿಲ್ಲಾಂತ ಮನಿಗೇ ಹುಡಿಕ್ಕಂಡು ಬಂದ್ಬಿಟ್ರೆʼ ಅನ್ನಿಸಿ ಗಾಂಧಿಪಾರ್ಕಿಗೆ ಹೋಗಿ ಕುಳಿತ. ಪಾರ್ಕಲ್ಲಿ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಕೂತಿದ್ದರು; ಕೆಲವೊಬ್ಬರು ನೆರಳಿನಲ್ಲಿದ್ದ ಬೆಂಚಿನ ಮೇಲೆ ಮಲಗಿದ್ದರು. ಮರವೊಂದರ ಬುಡದಲ್ಲಿ ಕೂತು ಮನಸಾರೆ ಅತ್ತ. ʻನಾನೆಂತ ಮಾಡ್ದೆ? ಅವ್ಳು ಸ್ನಾನಮಾಡ್ತಿದ್ಲು ಅಂತ ನಂಗೊತ್ತಿತ್ತಾ. ನಾನಾಕಡೆ ತಿರಿಗಿ ಸೈತಾ ನೋಡ್ಲಿಲ್ಲ. ಅವ್ಳಿಗ್ಯಾಕೋ ನನ್ಕಂಡ್ರೆ ಆಗುದಿಲ್ಲ. ಎಂತಾರ ನೆವ್ನ ಮಾಡ್ಕಂಡು ಸದಾ ಬೈತಿರ‍್ತಾಳೆ, ಹಂಗ್ಸತಾಳೆ… ಅವನು ಆ ಮನೆಗೆ ಹೋದಂದಿನಿಂದ ನಡೆದದ್ದನ್ನೆಲ್ಲಾ ನೆನಪಿಸಿಕೊಂಡ….

ಅದೆಷ್ಟು ಹೊತ್ತಾಯಿತೋ ಹಾಗೇ ಕುಳಿತುಕೊಂಡು… ಪಕ್ಕದ ಸ್ಕೂಲಿನ ಹುಡುಗರೆಲ್ಲಾ ಊಟದ ಡಬ್ಬಿ ತೆಗೆದುಕೊಂಡು ಬಂದು ಅಲ್ಲಲ್ಲಿ ಮರದ ನೆರಳಲ್ಲಿ ಗುಂಪುಗುಂಪಾಗಿ ಕೂತು ಬುತ್ತಿ ಬಿಚ್ಚತೊಡಗಿದರು. ಊಟದ ವಾಸನೆ ಬಂದ ತಕ್ಷಣ ಹೊಟ್ಟೆಯಲ್ಲಿ ಹಸಿವು ಭುಗಿಲೆಂದಿತು. ಎದ್ದು ಹೋಗಿ ಅಲ್ಲೇ ಇದ್ದ ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಹೊಟ್ಟೆ ತುಂಬಾ ಕುಡಿದ. ಯಾವನೋ ಪೋಲೀಸು, ಪಾರ್ಕಿನೊಳಗಾಸಿ ಬಂದದ್ದು ಕಂಡಿತು. ʻಅವ್ನು ತನ್ನೇ ಹುಡ್ಕಂಡು ಬಂದದ್ದೇನೋʼ ಅನ್ನಿಸಿ ಭಯವಾಯಿತು. ʻಇಷ್ಟು ಹುಡುಗ್ರಿರ‍್ವಾಗ ಅವ್ನಿಗೆ ಗುರ‍್ತಾಗಲ್ಲ. ಈಗ್ಲೇ ತಪ್ಪಿಸ್ಕಂಬಿಡ್ಬೇಕುʼ ಅನ್ನಿಸಿ ತಕ್ಷಣವೇ ಅಲ್ಲಿಂದೆದ್ದು ಪಾರ್ಕಿನ ಹೊರಗೆ ನಡೆದ. ಮುಂದೆಲ್ಲಿ ಹೋಗಬೇಕೆಂದು ತೋಚಲಿಲ್ಲ. ಮಧ್ಯಾಹ್ನ ದಾಟಿತ್ತು. ʻಪೋಲೀಸ್ನೋನ ಕೈಲಿ ಸಿಗಾಕ್ಕಂಡು, ಒದೆ‌ ತಿನ್ನಕ್ಕಿಂತ ಬೇರೆ ಯಾವ್ದಾರೂ ಊರಿಗೆ ಓಡೋಗಿಬಿಡೋಣʼ ಎನ್ನಿಸಿ ಬಸ್ಟ್ಯಾಂಡ್‌ ಕಡೆ ನಡೆದ. ಯಾವುದಾದರೂ ಹೊರಡುವ ಬಸ್ಸಿಗೆಂದು ಕಾಯುತ್ತಾ ಕಲ್ಲುಬೆಂಚಿನ ಮೇಲೆ ಕುಳಿತ. ಪಕ್ಕದಲ್ಲಿ ಕುಳಿತವರ ಬಳಿ ಯಾರೋ ಬಿಕ್ಷುಕ ಹುಡುಗರು ಬೇಡುತ್ತಾ ಬಂದರು. ಅವರು ಗದರಿಕೊಂಡು ಓಡಿಸಿ ತಮ್ಮತಮ್ಮಲ್ಲೇ ಮಾತಾಡಿಕೊಳ್ಳತೊಡಗಿದರು. “ಎಷ್ಟೋ ಹುಡುಗ್ರು ನೋಡಿ, ಮನೆಯಿಂದ ಓಡಿ ಬಂದ್ಬಿಡ್ತವೆ. ಯಾರ‍್ಕೈಲಾದ್ರೂ ಸಿಗಾಕ್ಕಂಡ್ರೆ ಹೀಗೆ ಬಿಕ್ಷೆಬೇಡೋಕ್ಕೆ ಹಚ್ತಾರೆ. ಇದೊಂದು ದೊಡ್ಡ ದಂಧೆಯಾಗ್ಬಿಟ್ಟಿದೆ” “ಹೌದೌದು ಅದ್ಯಾವ್ದೋ ಸಿನ್ಮಾನೂ ಬಂದಿತ್ತಲ್ಲ ಇದ್ರ ಬಗ್ಗೆ” ಇನ್ನೊಬ್ಬನೆಂದ. ಕೇಳಿಸಿಕೊಂಡ ರಾಮನಿಗೆ ನಡುಕಬಂದು ʻಯಾರ‍್ಕೈಲೋ ಸಿಗಾಕಂಡು ಭಿಕ್ಷೆ ಬೇಡಕ್ಕಿಂತ ನದೀಗ್‌ಬಿದ್ದು ಸಾಯುದೇ ವಾಸಿʼ ಅನ್ನಿಸಿಬಿಟ್ಟಿತು… ಮೇಲೆದ್ದು ನದಿಯ ಕಡೆ ಹೊರಟ……

*

ಸುಶೀಲಮ್ಮ ಬೈದು, ಸ್ಮಿತ ಕೋಪಿಸಿಕೊಂಡು ಮಹಡಿ ಹತ್ತಿ ರೂಮಿನ ಬಾಗಿಲನ್ನು ದಢಾರೆಂದು ಹಾಕಿಕೊಳ್ಳುವಾಗ ಜಗಳ ಒಂದು ಮುಕ್ತಾಯವನ್ನು ಕಂಡಿತು. ʻಅವ್ನ ಸ್ಕೂಲಿಗೆ ಹೊತ್ತಾಯ್ತಲ್ಲ, ಇನ್ನೂ ತಿಂಡಿತಿಂದಿಲ್ಲʼ ಎಂದು “ರಾಮಾ ತಿಂಡಿ ತಗೋ ಬಾರೋ, ನಿಂಗ್‌ ಸ್ಕೂಲಿಗೆ ಹೊತ್ತಾಯ್ತು” ಕರೆದರೆ ಉತ್ತರವಿಲ್ಲ. ವರಾಂಡದಲ್ಲಿಲ್ಲ. ರೂಮಲ್ಲೇನಾದರೂ ಅಳುತ್ತಾ ಕೂತಿದ್ದಾನೇನೋ ಅಂದುಕೊಂಡರೆ ಅಲ್ಲೂ ಇಲ್ಲ. ಹೊರಗೆ ಬಂದಾಗ ಪರ‍್ಶುರಾಮ ಕಂಡ. “ರಾಮನ್ನೇನಾರೂ ಕಂಡ್ಯೇನೋ” ಕೇಳಿದರೆ “ನಾ ಬರ‍್ವಾಗ ಆಕಡೆ ಹೋಗ್ತಿದ್ನಪ್ಪ, ನೀವೆಂತಾರ ತರಕ್ಕೆ ಕಳ್ಸಿಯೀರೇನೋ ಅನ್ಕಂಡೆ” ಅಂದ. “ನಾನೆಂತಕ್ಕೂ ಕಳಿಸ್ಲಿಲ್ಲ, ಸ್ಕೂಲ್ಗೇನಾದ್ರೂ ಹೋಗಿದಾನಾ ನೋಡ್ಕಂಬಾ. ನಾಕ್ನೇ ಕ್ಲಾಸು, ಬಿ ಸೆಕ್ಷನ್ನು” ಎಂದವನನ್ನು ಓಡಿಸಿದರು. ಸ್ವಲ್ಪಹೊತ್ತಿನಲ್ಲೇ ಅವನು ಸ್ಕೂಲಿಗೂ ಬಂದಿಲ್ಲವೆಂದುಕೊಂಡು ಬಂದ. ಹಾಗಾದ್ರೆ ಎಲ್ಲೋದ ಈ ಹುಡ್ಗ ಎಂದು ತಲೆಕೆಟ್ಟು ಸೋಫಾಮೇಲೆ ಕುಕ್ಕರಿಸಿದರು. ಕಾಲೇಜಿಗೆ ಹೋಗಲು ತಯಾರಾಗಿ ಬಂದ ಸುರೇಶ “ಎಂತಾಯ್ತು ಬೆಳಗ್ಗಿಂದ ನಿಂಗೂ, ಸ್ಮಿತಂಗೂ ಎಂತೋ ಹತ್ಕಂಡಿತ್ತಲ್ಲ, ನೀನ್ಯಾಕ್‌ ಹಿಂಗ್‌ಕೂತಿದಿ” ಎಂದ. ಯಾರಾದರೂ ಕೇಳಿದರೆ ಸಾಕು ಎನ್ನುವಂತೆ ಕಾಯುತ್ತಾ ಕುಳಿತಿದ್ದ ಸುಶೀಲಮ್ಮ ಎಲ್ಲವನ್ನೂ ಹೇಳಿಕೊಂಡು ಅಳತೊಡಗಿದರು. “ಇದೊಳ್ಳೆ ಪಂಚಾಯ್ತಿಯಾಯ್ತಲ್ಲ” ಎಂದು ಅಮ್ಮನ ಪಕ್ಕದಲ್ಲಿ ಕುಳಿತ. ಸ್ಮಿತಾನೂ ಕಾಲೇಜಿಗೆ ಹೋಗಲು ತಯಾರಾಗಿ ಬಂದವಳು “ನಂಗ್‌ ತಿಂಡಿ ಬ್ಯಾಡ, ನಾ ಹೊರ‍್ಟೆ” ಎಂದು ಚಪ್ಪಲಿ ಮೆಟ್ಟಿಕೊಳ್ಳತೊಡಗಿದಳು. “ಆಮೇಲೆ ಚಪ್ಲಿ ಹಾಕ್ಕಳೋವಂತೆ, ಇಲ್ಬಾ, ನೋಡೀಗ ನಿನ್‌ರಾದ್ಧಾಂತದಲ್ಲಿ ರಾಮ ಮನೆಬಿಟ್ಟು ಹೋಗಿಯಾನೆ. ಎಲ್ಲೋಗಿದಾನೇಂತ್ಲೇ ತಿಳೀತಿಲ್ಲ” ಸುರೇಶ ಅವಳನ್ನು ಕರೆದ. “ನಾನೇನು ಮನೆಬಿಟ್ಟು ಹೋಗೂಂತದ್ನಾ, ನನ್ಯಾಕ್‌ ದೂರ‍್ತೀಯಾ?” “ಅಷ್ಟು ಸಣ್ಹುಡ್ಗನ್ನ ಪೋಲೀಸ್ರಿಗ್ಹಿಡ್ಕೊಡ್ತೀನಿ ಅಂದಿದೀಯಲ್ಲ, ಬುದ್ಧಿ ಇದ್ಯೇನೆ ನಿಂಗೆ. ಅವ್ನೇನಾರ ಮಾಡ್ಕಂಡ್ರೆ‌, ಓಡೋದ್ರೆ ಎಂತ ಮಾಡೋದು. ಅಪ್ಪ ಬೇರೆ ಊರಲ್ಲಿಲ್ಲ” ದಬಾಯಿಸಿದ. ಪರ‍್ಶುರಾಮನ್ನ ಕರೆದು “ಅವ್ರ ಮನೆಗೇನಾರಾ ಹೋಗಿದಾನ ನೋಡ್ಕಂಡ್ಬಾ. ಇದ್ರೆ ಇಬ್ರುನ್ನೂ, ಇಲ್ದಿರೆ ಅವ್ರಮ್ಮನ್ನಾದ್ರೂ ಬರ‍್ಬೇಕಂತೇಂತ ಕರ‍್ಕಂಬಾ” ಎಂದು ಕಳಿಸಿದ. ಈ ಮಟ್ಟಕ್ಕೆ ಮುಟ್ಟಬಹುದು ಅಂದುಕೊಂಡಿಲ್ಲದ ಸ್ಮಿತಾಗೂ ಭಯವಾಗತೊಡಗಿ ಪುಸ್ತಕವನ್ನು ಟೇಬಲ್ಲಿನ ಮೇಲಿಟ್ಟು ನಿಧಾನವಾಗಿ ಕುಳಿತಳು.

*

ʻಅವನಲ್ಲಿದ್ದರೆ ಸಾಕಪ್ಪಾʼ ಎಂದುಕೊಂಡು ಮೂವರೂ ಕೂತಿರುವಾಗಲೇ ನಾಗಲಕ್ಷ್ಮಿ ಕಾರಿಂದಿಳಿದು ಬಂದಳು. ಅವಳ ದುಗುಡ ತುಂಬಿದ ಮುಖ ನೋಡಿ ಮೂವರಿಗೂ ಚಿಂತೆ, ಭಯ ಶುರುವಾದವು. ಮತ್ತೆ ಅವಳೆದುರಿಗೆ ಬೆಳಗಿನ ಪುರಾಣವೆಲ್ಲಾ ಹೊರಬಂತು. ನಾಗಲಕ್ಷ್ಮಿಗೆ ಏನು ಹೇಳಬೇಕೆಂದೇ ತೋಚಲಿಲ್ಲ, ಕುಸಿದು ಕೂತು ಮಂಡಿಯ ಮೇಲೆ ತಲೆಯೂರಿ ಯೋಚಿಸತೊಡಗಿದಳು. ಎಷ್ಟೇ ತಡೆದುಕೊಂಡರೂ ತಾನಾಗೇ ಕಣ್ಣಲ್ಲಿ ನೀರು ತುಂಬತೊಡಗಿತು. “ಅವ್ನಿನ್ಯಾರ‍್ಮನಿಗಾದ್ರೂ ಹೋಗಿರ‍್ಬೋದೇನೇ” ಎಷ್ಟೋ ಹೊತ್ತಿನ ಬಳಿಕ ಸುಶೀಲಮ್ಮ ಕೇಳಿದಳು. ಕಣ್ಣೊರಸಿಕೊಂಡು ತಲೆಯಾಡಿಸುತ್ತಾ “ಹಂಗ್ಯಾರ‍್ಮನಿಗಾದ್ರೂ ಹೋಗೋಷ್ಟು ಸಲ್ಗೆಯಿಲ್ಲ” ಎಂದಳು. “ಹೀಗಾಗುತ್ತೆ ಅಂತ ನಂಗೊತ್ತಾಗ್ಲಿಲ್ಲ ನಾಗಮ್ಮ” ಎಂದಳು ಸ್ಮಿತಾ ಅಳುತ್ತಾ. ನಾಗಲಕ್ಷ್ಮಿ ಏನ್ತಾನೇ ಹೇಳಿಯಾಳು. ಕೂತುಕೂತ ಹಾಗೇ ಮಧ್ಯಾಹ್ನದ ಊಟದ ಸಮಯವಾಯಿತು. “ಏಳೇ ನೀನೂ ಒಂತುತ್ತು ಊಟ ಮಾಡೀವಂತೆ. ಬೆಳ್ಗಿಂದ ಯಾರೂ ತಿಂಡಿನೂ ತಿಂದಿಲ್ಲ” ಸುಶೀಲಮ್ಮ ಎದ್ದಳು. ʻತಾನು ಬೇಡವೆಂದರೆ ಅವರೂ ಯಾರೂ ಊಟ ಮಾಡುವುದಿಲ್ಲವೆಂದು ನಾಗಲಕ್ಷ್ಮಿ “ನಂಗ್‌ ಸ್ವಲ್ಪನೇ ಸಾಕು” ಎಂದು ಹಾಕಿಕೊಂಡ, ತಿಂದ ಶಾಸ್ತ್ರ ಮಾಡೆದ್ದಳು. ಊಟ ಮುಗಿದಮೇಲೆ ಸುರೇಶ “ಒಂದ್ಕೆಲ್ಸಾ ಮಾಡಿ ನೀವೀಗ ಮನಿಗ್ಹೋಗಿ. ಅಲ್ಲೋ, ಇಲ್ಲೋ ಎಲ್ಲಾದ್ರೂ ಹೋಗಿದ್ರೂ ಸಾಯಂಕಾಲ್ದೊಳ್ಗೆ ಮನೀಗ್‌ ವಾಪಸ್ಸು ಬರ‍್ಬೋದು. ಕಡೀಗೆ ರಾತ್ರಿಯಾದ್ರೂ ಬರ‍್ಬೋದು. ಅವನ್ಬಂದ ತಕ್ಷಣ ಎಲ್ಲಿಂದಾರೂ ನಮಗೆ ಫೋನ್‌ ಮಾಡ್ಸಿ. ನಮ್ಗೂ ಆತಂಕ್ವೇ. ಇವತ್ತು ಬರ‍್ಲಿಲ್ಲಾಂತಾದ್ರೆ, ನಾಳೆಬೆಳಿಗ್ಗೆ ಪೋಲಿಸ್‌ ಕಂಪ್ಲೇಂಟ್‌ ಕೊಡೋಣ ಇಲ್ಲೇನಾರೂ ಬಂದ್ರೆ ನಾವ್‌ನಿಮ್ಗೆ ತಿಳಿಸ್ತೀವಿ” ಎಂದ. ನಾಗಲಕ್ಷ್ಮಿಗೂ ಮನೆಗೆ ಹೋಗಿ ಕಾಯುವುದೇ ಒಳ್ಳೆಯದೇನೋ ಅನ್ನಿಸಿತ್ತು. ಪರ‍್ಶುರಾಮ ಮನೆಗೆ ಬಿಟ್ಟ. ಬಂದವಳೇ ಅಷ್ಟುಹೊತ್ತೂ ತಡೆಹಿಡಿದಿಟ್ಟಿದ್ದ ಅಳುವನ್ನು ನಿರಾಳವಾಗಿ ಹರಿಯಲುಬಿಟ್ಟಳು… ಬಿಕ್ಕಿ ಬಿಕ್ಕಿ ಅತ್ತಳು…

*

ಮಕ್ಕಳು ಸ್ಕೂಲಿಂದ ಬಂದರು. “ಗಿಣ್ಣು ತಿಂಕಂತೀವೇ” ಎಂದು ಇಬ್ಬರೂ ಅಲ್ಲಿದ್ದಷ್ಟನ್ನೂ ಹಂಚಿಕೊಂಡು ತಿಂದು “ಘಮ್ಮಂತಿತ್ತೇ” ಎಂದು ಆಟಕ್ಕೋಡಿದರು. ಇವಳೂ ಎದ್ದು ಕೊಟ್ಟಿಗೆಯ ಕಡೆ ಹೋಗಿ ದನದ ನಿಗಾ ನೋಡಿದಳು. ಕತ್ತಲಾಗತೊಡಗಿತು. ಒಲೆಹಚ್ಚಿ ಎಸರಿಗಿಟ್ಟಳು. ಹೇಗೋ ಅಡುಗೆ ಮುಗಿಸುವ ಹೊತ್ತಿಗೆ ಗಂಡನೂ ಬಂದಿದ್ದಾಯಿತು. ಎಲ್ಲರಿಗೂ ಬಡಿಸಿದಳು. ಸ್ವಲ್ಪ ಹೊತ್ತಿನಲ್ಲೇ ಮಕ್ಕಳಿಬ್ಬರೂ ಮಲಗಿದರು. ಗಂಡನೂ ಹಾಸಿಗೆಯನ್ನು ಹಾಸಿಕೊಂಡು ಮಲಗಲನುವಾದಾಗ ಅಷ್ಟುಹೊತ್ತೂ ಅದುಮಿಕೊಂಡಿದ್ದೆಲ್ಲವನ್ನೂ ಅವನೊಂದಿಗೆ ಹಂಚಿಕೊಂಡು ಮತ್ತೆ ಅತ್ತಳು. ಅವನಿಗೂ ಏನೂ ತೋರದೆ “ಈಗೇನ್ಮಾಡುದು?” ಅಂದ. ಒಂದಷ್ಟು ಹೊತ್ತು ಬಿಟ್ಟು, “ಸರಿ ನೀನೂಟ ಮಾಡಿ ಕೆಲ್ಸ ಮುಗ್ಸೋಗು. ಆಮೇಲ್‌ ಮಾತಾಡೋಣ” ಎಂದವನು ಯೋಚಿಸುತ್ತಾ ಕುಳಿತ. ತಟ್ಟೆಗಿಷ್ಟು ಹಾಕಿಕೊಂಡರೂ ಸೇರಲಿಲ್ಲ ಅವಳಿಗೆ. ಹಾಗೇ ಮುಚ್ಚಿಟ್ಟು, ಪಾತ್ರೆಗಳನ್ನು ಬಿಡುವುಮಾಡಿ ತೊಳೆದು, ಒಲೆಸಾರಿಸಿ. ಕೆಲಸ ಮುಗಿಸಿಕೊಂಡು ತಿರುಗುವಾಗ ಬೆಳಗ್ಗೆ ತೆಗೆದುಕೊಂಡು ಹೊರಟಿದ್ದ ವೈರುಬುಟ್ಟಿ ಕಣ್ಣಿಗೆ ಬಿತ್ತು. ಬೆಳಗಾಗೂ ಹೊತ್ತಿಗೆ ಗಿಣ್ಣೆಲ್ಲಾ ಹಳಸಿಹೋಗಿರತ್ತೆ, ಸಾಯಂಕಾಲ್ವೇ ಕೊಟ್ಟಿದ್ರೆ ಮಕ್ಕಳಾದ್ರೂ ತಿಂಕಂತಿದ್ರು ಅನ್ನಿಸಿತು. ಊಟದ್ಹೊತ್ಗೂ ನೆನ್ಪಾಗ್ಲಿಲ್ವಲ್ಲ ಎಂದುಕೊಳ್ಳುತ್ತಾ ಅದನ್ನು ನೋಡುವುದಕ್ಕೂ ಬೇಸರವಾಗಿ ತಿಪ್ಪೆಗೆಸೆದು ಬರೋಣವೆಂದು ಹಿತ್ತಲಿಗೆ ಹೋದಳು…

ಡಬ್ಬಿಯ ಮುಚ್ಚಳ ತೆಗೆದಳು ಏಲಕ್ಕಿಯ ಪರಿಮಳ ಮೂಗಿಗಡರಿ ಅವ್ನಿಗೇಂತ ಎಷ್ಟು ಆಸೆಯಿಂದ ಮಾಡ್ದೆ, ಎಲ್ಲಿದಾನೋ… ಇದಾನೋ… ಅಥವಾ… ಕೆಟ್ಟದ್ದನ್ನೇ ಯೋಚಿಸಿ ಕಣ್ಣೀರು ತುಂಬಿಬಂತು… ಸೆರಗಿನಿಂದ ಕಣ್ಣೊರಸಿಕೊಳ್ಳುತ್ತಿರುವಾಗ ಮೆಲ್ಲಗೆ “ಅಮ್ಮಾ…” ಎಂದಂತಾಯಿತು. ಸುತ್ತಮುತ್ತಲೂ ತಿರುಗಿ ಯಾರೂ ಕಾಣದೆ ʻನಂಗೇ ಭ್ರಾಂತ್ಯೇನೋʼ ಅನ್ನಿಸಿದಾಗ ಕೊಟ್ಟಿಗೆಯ ಒಣಹುಲ್ಲಿನ ರಾಶಿಯ ನಡುವಿನಿಂದ ಯಾರೋ ಎದ್ದುಬಂದಹಾಗಾಯಿತು. ಕಣ್ಣರಳಿಸಿಕೊಂಡು ಧ್ವನಿಬಂದತ್ತ ನೋಡತೊಡಗಿದಳು. ಮೈಗೆ ಹತ್ತಿದ್ದ ಹುಲ್ಲಿನ ಎಸಳುಗಳನ್ನು ಕೊಡವಿಕೊಳ್ಳುತ್ತಾ ರಾಮ “ಅಮ್ಮಾ,,,” ಎಂದು ಓಡಿಬಂದವನೇ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಗಟ್ಟಿಯಾಗಿ ಅಳತೊಡಗಿದ. ಕಳೆದುಹೋಗಿದ್ದ ನಿಧಿ ಸಿಕ್ಕಂತಾಗಿ ನಾಗಲಕ್ಷ್ಮಿಗೂ ಮಾತು ಹೊರಡದೆ ಅವನನ್ನು ಮತ್ತೆ ಮತ್ತೆ ತಬ್ಬಿಕೊಂಡು ಬೆನ್ನು ನೇವರಿಸಿ ಸಮಾಧಾನ ಪಡಿಸಿದಳು, ತಾನೂ ಮಾಡಿಕೊಂಡಳು. ಎಷ್ಟೋ ಹೊತ್ತಿನ ಮೇಲೆ ರಾಮ “ನಾನ್ಮತ್ತೆ ಅವರ‍್ಮನೆಗೆ ಹೋಗಲ್ವೆ. ಸ್ಮಿತಾ ನನ್ನ ಪೋಲೀಸಿಗೆ ಹಿಡ್ಕೊಡ್ತಾಳಂತೆ…” ಎನ್ನುತ್ತಾ ಅತ್ತ. “ನಾನೂ ಕಳ್ಸದಿಲ್ಲ ಕಣೋ, ಉಪ್ಪೋ, ಗಂಜ್ಯೋ ಇಲ್ಲೇ ಕುಡ್ಕೊಂಡು ನಮ್ಜತಿಗೇ ಇರು. ಏನೋ ನೀನೊಬ್ನಾದ್ರೂ ಮೂರ‍್ಹೊತ್ತು ನೆಮ್ಮದ್ಯಾಗಿ ಊಟಮಾಡಕ್ಕೆ ಅವ್ಕಾಶವಾಯ್ತಲ್ಲ ಅಂತ ಕಳ್ಸಿದ್ದಷ್ಟೇಯ. ಹೊಟ್ಟೆಗಿಲ್ದಿದ್ರೂ ಬೇಡ. ನಿನ್ನ ಕಳ್ಸಲ್ಲ ಮಗ್ನೆ” ಎನ್ನುತ್ತಾ ಸಮಾಧಾನ ಮಾಡುತ್ತಾ “ಇಕಾ ನಿಂಗೋಸ್ಕರ ಅಂತ ಬೆಳಗ್ಗೆ ಮಾಡಿದ್ದ ಗಿಣ್ಣು. ತಿನ್ಕೋ ಎನ್ನುತ್ತಾ ಒಂದೊಂದೇ ಹಲ್ಲೆಯನ್ನು ಅವನ ಬಾಯಿಗಿಟ್ಟಳು. ಕಣ್ಣೊರಸಿಕೊಂಡು ಒಳಗೆ ಬಂದವನನ್ನು “ಒಂಚೂರು ಮಜ್ಜಿಗೆ ಅನ್ನ ತಿಂತೀಯೇನೋ?” ಎಂದರೆ “ಬೇಡ ಮಲಗೋಣ” ಎಂದ. ಎಷ್ಟೋ ತಿಂಗಳುಗಳ ಮೇಲೆ ಅಮ್ಮನ ಪಕ್ಕದಲ್ಲಿ ಅವಳ ಹರಕು ಸೀರೆಯನ್ನೇ ಹೊದ್ದು ಮುದುರಿಕೊಂಡು ಅವಳನ್ನು ತಬ್ಬಿಕೊಂಡು ಸ್ವಲ್ಪಹೊತ್ತಿನಲ್ಲೇ ಗಾಢನಿದ್ರೆಗೆ ಶರಣಾದ.

ಬೆಳಗ್ಗೆ ಇನ್ನೂ ನಸುಕತ್ತಲಿರುವಾಗಲೇ ಹೊರಗಡೆ ಸುರೇಶ “ನಾಗಲಕ್ಷಮ್ಮ, ರಾಮ ಬಂದ್ನಾ ಮನೆಗೆ” ಎಂದು ಬಾಗಿಲು ತಟ್ಟಿದ ಶಬ್ದಕ್ಕೆ ಮಲಗಿದ್ದವರೆಲ್ಲರಿಗೂ ಎಚ್ಚರವಾಯಿತು. ಬಾಗಿಲು ತೆರೆದ ನಾಗಲಕ್ಷ್ಮಿ “ತಡರಾತ್ರಿ ಬಂದ ಕಣೋ. ಅಷ್ಟೊತ್ತಿಗೆ ಫೋನ್‌ ಮಾಡ್ಲಿಕ್ಕಾಗ್ಲಿಲ್ಲ. ಈಗೆದ್ಮೇಲೆ ಫೋನ್‌ ಮಾಡ್ಸೋಣಾಂತಿದ್ದೆ” ಎಂದಳು. “ಸಧ್ಯ ಬಂದ್ನಲ್ಲ. ರಾತ್ರಿಯೆಲ್ಲಾ ನಾವ್ಯಾರೂ ನಿದ್ದೆ ಮಾಡ್ಲಿಲ್ಲ. ಅದಕ್ಕೇ ಬೆಳಗ್ಗೇನೆ ಓಡ್ಬಂದೆ” ಎನ್ನುತ್ತಾ ದಣಿವಾರಿಸಿಕೊಂಡ. ಅಷ್ಟರಲ್ಲಿ ಎದ್ದ ರಾಮ ಅಮ್ಮನ ಹಿಂದೆ ಅಡಗಿಕೊಂಡು ನಿಂತು ಸುರೇಶನ ಮಾತನ್ನು ಕೇಳಿಸಿಕೊಳ್ಳತೊಡಗಿದ. ಅವನನ್ನು ಅಲ್ಲಿಂದ ಸೆಳೆದುಕೊಂಡ ಸುರೇಶ ನಗುತ್ತಾ “ಆ ಸ್ಮಿತಾನ ಮಾತಿಗೆ ಹೆದರ‍್ಕೊಂಡು ಓಡ್ಬಂದ್ಯೇನೋ ಶೂರ. ಅವ್ಳು ನಿಂಗೇನೂ ಮಾಡಲ್ಲ. ಬಾ ನಂಜೊತೆಗೆ ಹೋಗೋಣ” ಎನ್ನುತ್ತಾ ಅವನ ಕೈ ಹಿಡಿದುಕೊಂಡ. ಅಸಹಾಯನಾಗಿ ರಾಮ “ಅಮ್ಮಾ…” ಎನ್ನುತ್ತಾ ಅವಳ ಕಡೆ ನೋಡಿದ. “ಸುರೇಶ, ಅವ್ನು ಸ್ವಲ್ಪ ಹೆದರ‍್ಕೊಂಡ್ಬಿಟ್ಟಿದಾನೋ. ಒಂದ್ನಾಲ್ಕು ದಿನಾದ್ಮೇಲೆ ಮತ್ತೆ ಕಳಿಸ್ತೀನಿ ಬಿಡು” ಎಂದಳು ನಾಗಲಕ್ಷ್ಮಿ. “ಹೆದರ‍್ಕೊಳಕ್ಕೆ ಅವ್ನೇನು ಹುಡ್ಗೀನಾ. ಬಾ… ಬಾ… ನಾನಿದೀನಲ್ಲ ನಿನ್ಜೊತೆಗೆ. ಸ್ಮಿತಾ ನಿನ್ನೇನೂ ಮಾಡ್ದಂಗೆ ನೋಡ್ಕೋತೀನಿ. ಅಮ್ಮಂಗೂ ನಿಂದೇ ಯೋಚ್ನೆಯಾಗ್ಬಿಟ್ಟಿದೆ” ಎನ್ನುತ್ತಾ ಸುರೇಶ ಬಿಡದೆ ಕರೆದುಕೊಂಡು ಹೊರಟ.

ಮಂಜಯ್ಯನಿಗೆ ನಡೆದದ್ದೇನೆಂದು ಅರ್ಥವಾಗದೆ ಎಲ್ಲರನ್ನೂ ಮಿಕಮಿಕ ನೋಡತೊಡಗಿದ. ನಾಗಲಕ್ಷ್ಮಿ ಅಸಹಾಯಳಾಗಿ ರಾಮನನ್ನೇ ನೋಡುತ್ತಿದ್ದಳು… ಹಿತ್ತಲಲ್ಲಿ ಗಂಗೆ ಗೌರಿಯನ್ನು ತನ್ನ ಬಳಿ ಬಿಡು ಎನ್ನುವಂತೆ “ಅಂಬಾ……” ಎಂದು ಕರೆಯುತ್ತಿದ್ದಳು. ತಿರುತಿರುಗಿ ನೋಡುತ್ತಿದ್ದ ರಾಮ ಮರೆಯಾಗುವ ತನಕ ನೋಡುತ್ತಿದ್ದ ನಾಗಲಕ್ಷ್ಮಿ ಕೊಟ್ಟಿಗೆಗೆ ಹೋಗಿ ಗೌರಿಯನ್ನು ಬಿಚ್ಚಿ ಗಂಗೆಯ ಬಳಿ ತಂದು ನಿಲ್ಲಿಸಿಕೊಂಡಳು. ತಕ್ಷಣವೇ ಗಂಗೆ ಗೌರಿಯ ಮೈನಕ್ಕತೊಡಗಿತು. ʻಅದಕ್ಕಿರುವ ಅದೃಷ್ಟ ತನಗಿಲ್ಲವೇʼ ಅನ್ನಿಸಿ ತಡೆಯಿಲ್ಲದೆ ಬಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹಿಂದೆಯೇ “ನಿಂಗಿನ್ನೆಷ್ಟು ದಿನ ಅಮ್ಮನ ಬಳಿಯ ಪುಣ್ಯವೋ” ಅಂದುಕೊಂಡ ನಾಗಲಕ್ಷ್ಮಿ ಅದರ ಮೈನೇವರಿಸತೊಡಗಿದಳು.


ಟಿ ಎಸ್ ಶ್ರವಣ ಕುಮಾರಿ

9 thoughts on “

  1. ಕಣ್ಮುಂದೆ ನಿಲ್ಲುವಂತಹ ಕಥನ ಶೈಲಿ ತುಂಬಾ ಇಷ್ಟ ಆಯ್ತು

  2. ಬಿಡದೇ ಓದಿಸಿಕೊಂಡು ಹೋಯಿತು.
    ಬಡತನವೇ ಏನೇನೋ ಮಾಡಿಸತ್ತೆ. ಜೊತೆಗೆ ಗೆಳೆತನ, ಉಪಕಾರದ ಭಾರವೂ ಸೇರಿದರೆ..

  3. ಬಡತನ ಏಷ್ಟು ಕಠೋರ ಅಲ್ವಾ? ನನ್ನ ಬಾಲ್ಯದ ನೆನಪಾಯಿತು. ತುಂಬಾ ಸುಂದರ ಬರವಣಿಗೆ.

  4. ನೀವು ವಿವರಣೆ ನೀಡುವ ರೀತಿ ಹೇಗಿದೆ ಅಂದ್ರೆ ಕಥೆ ಓದಿದ ಹಾಗೆ ಅನಿಸಲಿಲ್ಲ, ಕಥೆ ನೋಡಿದೆ ಅನಿಸಿತು ಮೇಡಮ್

  5. ಕಣ್ಣಿಗೆ ಕಟ್ಟಿದಂತೆ ಕತೆ ಬಿಡಿಸಿದ್ದೀರಿ ವಾಣಿ, ಮಾತೃವಾತ್ಸಲ್ಯ,ಜೀವನದ ಅಸಹಾಯಕತೆ,ಸಂಭಂಧಗಳ ಸೂಕ್ಷ್ಮತೆ , ಎಳೆ ಮನಸಿನ ಮುಗ್ಧತೆ ಮನ ತಟ್ಟುವಂತಿದೆ .ಅಭಿನಂದನೆಗಳು, ಗೆಳತಿಗೆ.
    ಮಾಲತಿಶ್ರೀನಿವಾಸನ್

  6. h ತುಂಬಾಆಆಆ ಚಿನ್ನಾದ ವಿವರಣೆ,ಮಕ್ಕಳ ಸೂಕ್ಷ್ಮ ಮನಸ್ಸು ತಾಯಿಯ ಅಸಹಾಯಕತೆ ನವಿರಾಗಿ ಮೂಡಿಬಂದಿದೆ. ಈ

Leave a Reply

Back To Top