ಇದ್ದೂ ಇಲ್ಲದಂತಿರಬೇಕು -ಅನ್ನಪೂರ್ಣ ಸು ಸಕ್ರೋಜಿ

ಕಾವ್ಯಸಂಗಾತಿ

ಇದ್ದೂ ಇಲ್ಲದಂತಿರಬೇಕು

ಅನ್ನಪೂರ್ಣ ಸು ಸಕ್ರೋಜಿ

ಇರಬೇಕು ಎಲ್ಲರೊಳಗೊಂದಾಗಿ
ತನ್ನಾಳದೊಳಗಿಳಿದಿರಬೇಕು
ಇದ್ದೂ ಇಲ್ಲದಂತಿರಬೇಕು

ಜಗದ ಜಂಜಡದಲಿ ಸಿಕ್ಕಿದ್ದರೂ
ಜಗದ ನಂಟಿಗೆ ಅಂಟಿಕೊಳ್ಳದೇ
ಉಂಟಾಗುವ ಭಾವವಿರಬೇಕು

ಹೊಗಳಿಕೆ ತೆಗಳಿಕೆಗಳನ ಇದ್ದಂತೆ
ಸ್ವೀಕರಿಸುತ ಮುಗುಳ್ನಗುವ ಕಲೆ
ಕರಗತವಾಗಿರಬೇಕು ಮನುಜಾ

ಭೋಗದಲಿ ತ್ಯಾಗವಿರಬೇಕು
ತ್ಯಾಗದಲಿ ತಾ ವಿರಾಗಿಯಾಗಿ
ಮಹಾ ಶಿವಯೋಗಿಯಾಗಿರಬೇಕು

ನಮ್ಮೊಳಗಿದ್ದೂ ಕಾಣದಂತಿರುವ
ಜೀವನದ ಆಧಾರವಾಗಿರುವ
ಪಂಚತತ್ವಗಳನರಿತುಕೊ ಜೀವ

ಬೆಳಗುವ ಸಾಕ್ಷಿರೂಪ ಸೂರ್ಯ
ಸಂದಿಗೊಂದಿಗಳಲಿಯ ಕತ್ತಲು
ಕೊಳಕು ತೆಗೆದರೂ ತಾ ನಿರ್ಲಿಪ್ತ

ಜೀವಿಗಳ ಇರುವಿಕೆಗೆ ಮರುತ
ದುರ್ಗಂಧ ಸುಗಂಧಗಳೆರಡನೂ
ಪಸರಿಸುವನಾದರೂ ತಾ ನಿರ್ಲಿಪ್ತ

ವ್ಯಷ್ಟಿಯಲಿ ಹಸಿವಿನ ರೂಪದಿ
ಸಮಷ್ಟಿಯಲಿ ವೈಶ್ವಾನರ ಅಗ್ನಿ ಎಲ್ಲ ನುಂಗಿದರೂ ತಾ ನಿರ್ಲಿಪ್ತ

ಮೈ ಮನಗಳ ಸ್ವಚ್ಛಗೊಳಿಸುವ
ಗಂಗೆ ತುಂಗೆಯರು ಸತ್ತ ದೇಹ
ಜೀವಂತ ದೇಹ ಸಮಗಾಣುವರು

ಕ್ಷಮಯಾ ಧರಿತ್ರಿಯ ನಿಶ್ಚಿಂತತೆ
ಸ್ಥಿರತೆ ನಿಶ್ಚಲತೆ ಬೇಕು ಮನಕೆ
ಸ್ಥಿತಪ್ರಜ್ಞ ಭಾವ ಜಾಗೃತವಿರಬೇಕು

ಧ್ಯಾನ ಮೌನದಿ ಕಂಡುಂಡ ಜೀವ
ಅನುಭೂತಿಯಿಂದ ಅರಳುವದು
ಇದ್ದೂ ಇಲ್ಲದಂತಾಗಿರುವದು ಜಗದಿ


Leave a Reply

Back To Top