ನಿನ್ನನ್ನು ಮರೆತು ಹೇಗೆ ಬದುಕಲಿ ಹೇಳು!-ಅನುವಾದಿತ ಕವಿತೆ

ಅನುವಾದ ಕಾವ್ಯ

ನಿನ್ನನ್ನು ಮರೆತು ಹೇಗೆ ಬದುಕಲಿ ಹೇಳು!

ಉರ್ದೂ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಏನು ಹೇಳಲಿ…?
ನನ್ನ ಕೈಗಳಿಂದಲೇ ನಾನೇ
ನಮ್ಮ ಪ್ರಣಯದ ದೀಪಗಳನು ಬೆಳಗಿಸಿದೆನಲ್ಲಾ?
ಎಷ್ಟು ದುರ್ಭಾಗ್ಯವೋ ನೋಡು!
ಇಷ್ಟರಲ್ಲೇ ನಾನೇ ಅವುಗಳನು ಆರಿಸಬೇಕಾಯಿತು
ನಾನು ಹರಡಿಕೊಂಡಿದ್ದ…
ನನ್ನ ಆಸೆಗಳ ಬೀದಿಗಳೊಳಗೆ ಹೋಗದೆ
ನನ್ನನ್ನು ನಾನೇ ತಡೆಯಲ್ಪಡಬೇಕಾಯಿತು

ಪ್ರಿಯ…
ನಿನ್ನನ್ನು ಮರೆತುಹೋಗಬೇಕೆಂಬ ನಿರ್ಣಯವನು
ಎಷ್ಟು ನಿರ್ದಯವಾಗಿ ತೆಗೆದುಕೊಂಡರೂ ಕೂಡ
ನನ್ನ ಹೃದಯಕ್ಕೂ…
ನನಗೂ ತಿಳಿಯಬೇಕಾದದ್ದು ಏನೆಂದರೆ
ಅಸಲು ನಿನ್ನನು ಮರೆತು ಹೇಗೆ ಬದುಕಬಲ್ಲನೆಂಬುದು?!
ಮರೆವಿನೊಳಗೆ ನೀನು ಬರುವುದಿಲ್ಲವಲ್ಲಾ?
ಈ ನರಕಯಾತನೆಯಲಿ
ಈಗ ಹೇಗಿರಬೇಕು ನಿನ್ನೊಡನೆ ನಾನು?

ರಹದಾರಿಗಳಲಿ…
ಎಂದಾದರೂ ನೀನು ಭೇಟಿಯಾದರೆ ಹೇಗೆ
ಮುಖ ತಿರುವಿಕೊಂಡು ಹೋಗಲೇಬೇಕೆ ಇನ್ನು?
ಯಾವ ಮೆಹಫಿಲ್ನಲ್ಲಾದರೂ ನನ್ನ ಮುಂದೆ
ಯಾರಾದರೂ ನಿನ್ನ ಹೆಸರು ಹೇಳಿದರೆ
ಕೇಳಿಯೂ ಕೇಳದಂತೆ
ಮೌನವಾಗಿ ನೋಟವನು ನೆಲಕ್ಕೆ ವಾಲಿಸಲೇಬೇಕೆ?
ಎಷ್ಟು ದುರದೃಷ್ಟವೋ ನನ್ನದು ನೋಡಿದೆಯಾ?!
ಅರ್ಥವಾಗುವುದೆ ನಿನಗೆ ಏನಾದರೂ?

ಈ ಜೀವನಕ್ಕೆ ಇನ್ನೇನು ಉಳಿದಿದೆ
ಭಯದಲ್ಲೇ ದಿನಗಳು ಉರುಳಿಹೋಗುವವೇನೋ?
ಇಷ್ಟಕ್ಕೂ ಈಗ ನಾನಿನ್ನು ಮಾಡಬೇಕಾದದ್ದೇನು?
ನಿನ್ನ ಆಲೋಚನೆಗಳಿಂದ ದೂರವಾಗಿ ಹೋಗಿ
ನಿನ್ನ ಮೇಲಿನ ಆಸೆಯನ್ನು ಭೂಮಿಯಲಿ ಹೂತುಹಾಕಿ
ಹೇಗಿರುವೆನೋ ಏನೋ ಇನ್ನು ಮುಂದೆ?

ಸರಿ… ತಪ್ಪುವುದಿಲ್ಲವಲ್ಲಾ
ನಿನ್ನನು ಮರೆತುಹೋಗಬೇಕೆಂಬ ನಿರ್ಣಯ ಮಾಡಿಬಿಟ್ಟೆ
ಆದರೆ ಪ್ರಿಯತಮೆ, ನನ್ನ ಹೃದಯಕ್ಕೂ
ನನಗೂ ತಿಳಿಯಬೇಕಾದದ್ದು ಏನಂದರೆ…
ಅಸಲು ನಿನ್ನನು ಮರೆತುಹೋಗಿ ಹೇಗೆ ಬದುಕಬಲ್ಲನೆಂಬುದೇ?
ಮರೆತುಹೋಗಬಲ್ಲೆನಂತಿಯಾ?

ಹೋಗಲಿ ನೀನಾದರೂ ಹೇಳು
ನಿನ್ನನು ಮರೆಯುವುದು ಹೇಗೋ?
ನೀನು ಹೇಗೆ ಹೇಳಿದರೆ ಹಾಗೆ ಬದುಕಬಲ್ಲೆನೇನೋ ನೋಡುವೆ
ನೀನು ನನ್ನನು ನಿನ್ನ ಜ್ಞಾಪಕಗಳಿಂದ ಅಳಸಿಹಾಕುವ ಕೆಲಸಗಳೇನೋ ಮಾಡುತ್ತಿರುತ್ತಿಯ ಬಿಡು
ನನಗೆ ಗೊತ್ತು…


ಉರ್ದೂ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

2 thoughts on “ನಿನ್ನನ್ನು ಮರೆತು ಹೇಗೆ ಬದುಕಲಿ ಹೇಳು!-ಅನುವಾದಿತ ಕವಿತೆ

Leave a Reply

Back To Top