ನಮ್ಮಜ್ಜಿ ( ಕಥಾರೂಪಕ ಕವನ )ಹಮೀದಾ ಬೇಗಂ ದೇಸಾಯಿ

ಕಾವ್ಯ ಸಂಗಾತಿ

ನಮ್ಮಜ್ಜಿ ( ಕಥಾರೂಪಕ ಕವನ )

ಹಮೀದಾ ಬೇಗಂ ದೇಸಾಯಿ

ನಮ್ಮವ್ವ ಹುಟ್ಟಿದಾಗ
ಹೆಣ್ಣಾತಂತ ಕುಡುಕ ನಮ್ಮಜ್ಜ
ನಮ್ಮಜ್ಜೀನ ಬಿಟ್ಟು
ಯಾವ್ದೋ ಸೂಳೀ ಮನಿ ಹೊಕ್ಕಂತ..

ಎಳೀ ಕಂದವ್ನ ಎದಿಗವಚಿ
ಅವಡುಗಚ್ಚಿ ದುಕ್ಕಾ ನುಂಗಿ
ಕಣ್ಣೀರ ಕುಡ್ದು ಕುಡ್ದು
ಕಲ್ಲಿನಾಂಗಾದ್ಲು ನಮ್ಮಜ್ಜಿ…

ಹರೇದ ಕೆಂಡಾ ಹೊಟ್ಟ್ಯಾಗ ಸುಟ್ಟು
ನಗಾವ್ರ ಮುಂದ ಸೆರಗಾ ಕಟ್ಟಿ
ಅರ್ಧಾ ರೊಟ್ಟಿ ತಿಂದು ಅರಹೊಟ್ಟಿ ಇದ್ರೂ
ಗಟ್ಟಿ ಎದೀ ಹಾಲು ಕುಡಿಸಿ, ನಮ್ಮವ್ವನ್ನ
ಉಕ್ಕಿನ ಗೊಂಬಿ ಮಾಡಿದ್ಲು..

ಮಂದಿಮನಿ ಭಾಂಡೆ ತಿಕ್ಕಿ
ಅರಿವಿ ಒಗೆದು, ಕುಬಸಾ ಹೊಲ್ದು
ಒಂದುಡ್ಡ ಸಾಲಾ ಮಾಡ್ದ
ಸಾಲೀ ಕಲಿಸಿ ನಮ್ಮವ್ವನ್ನ
ಸಾಲೀ ಟೀಚರ್ ಮಾಡಿದ್ಲು..

ಯಾರ ಮನ್ಯಾಗ ಹೆಣ್ಣು ಹುಟ್ಟಿದ್ರೂ
ತಾನಽ ಪೇಢೆ ಕೊಟ್ಟ ಬರತಾಳ
ತನ್ನ ಹೆಸರಿಗೆ ತಕ್ಕಾಂಗ
ಊರಿಗೇ ಬಡೀ- ಮಾ ಆಗ್ಯಾಳ..

ಒಂದ ನಸುಕಿನ್ಯಾಗ ಅಳಕೋತ ಬಂದ ಒಂದ ಮುದುಕಿ
” ಬಡೀಮಾ, ನಿನ ಗಂಡ ಸತ್ತಬೇ “ಅಂದಾಗ…
ನಮ್ಮಜ್ಜಿ ಅಳಲಿಲ್ಲ, ಕರೀಲಿಲ್ಲ,
ಬಾಯ್ ಬಾಯ್ ಬಡಕೋಲಿಲ್ಲ..
ಕೊಳ್ಳಾನ ಗುಳದಾಳಿ ಮುದುಕಿ ಕೈಗಿಟ್ಟು
” ಇದ್ನ ಒಯ್ದು ಅವ್ನ ಹೆಣದ ಮ್ಯಾಲಿಡು “
–ಅಂತ್ಹೇಳಿ ಕುಸಿದು ಅಲ್ಲೇ ತಣ್ಣಗಾದ್ಲು..

ಬಂದ ಮುದುಕಿ ದೂರ ದೂರ ಹೋದಾಂಗ..
ಯಾಕೋ ನಮ್ಮಜ್ಜಿ ನಂಗ ಹತ್ರ ಹತ್ರ ಆದ್ಲು…


5 thoughts on “ನಮ್ಮಜ್ಜಿ ( ಕಥಾರೂಪಕ ಕವನ )ಹಮೀದಾ ಬೇಗಂ ದೇಸಾಯಿ

Leave a Reply

Back To Top