ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಚಂದ್ರಾವತಿ ಬಡ್ಡಡ್ಕ ಅವರ ರಸಭರಿತ ಅನುಭವಗಳ ಕತೆ

ಬೆಣ್ಣೆಕಡ್ಡಿ ಇಲ್ಲದ ಬದುಕೂ

…..

ಹೇಗೆ ದಿವ್ಯಳ ಸ್ನೇಹ ಸಂಪಾದಿಸುವುದೂ…. ಹಗಲಿರುಳು ನನ್ನ ಊಟ, ನಿದ್ರೆ ಕೆಡಿಸಿ ಚಿಂತೆಗೆ ತಳ್ಳಿದ ವಿಚಾರವದು. ಇದಕ್ಕಾಗಿ ನಾನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗೇ ಹೋಗಿದ್ದವು.

ಚೆಂದಗೆ ಮಿರಿಮಿರಿ ಮಿಂಚುವ ನೈಲಕ್ಸ್ ಅಂಗಿಗಳ ಒಡತಿ ಅವಳು. ಆರು ತಿಂಗಳಿಗೆ ಬೇರೆಬೇರೆ ಸ್ಲೇಟು, ಬಣ್ಣದ ಬೆಣ್ಣೆಕಡ್ಡಿ(ಬಳಪ), ಅಧುನಿಕ ವಿನ್ಯಾಸದ ಪಾಠೀಚೀಲ. ಹೀಗೆ… ನಮ್ಮೆಲ್ಲರಲ್ಲಿ ಆಸೆ ಮತ್ತು ಅಸೂಯೆ ಹುಟ್ಟಿಸುವ ವಸ್ತುಗಳು ಅವಳಬಳಿ ಇದ್ದವು. ನಂಗಾದರೋ, ನಾನು ಶಾಲೆಗೆ ಸೇರುವಾಗ ಅಕ್ಕ ಬಳಸಿ, ಉಳಿಸಿದ ಅಂಚು ಮುರಿದ ಸ್ಲೇಟು. ತೂತಾದ ಚೀಲ, ತುಂಡಾದ ಕಡ್ಡಿಗಳು. ವಾರವಿಡೀ ಒಂದೇ ಅಂಗಿ, ಅದೂ ಸವೆದು ಮುದುರಿರುವ ಕೋಟನ್ ಬಟ್ಟೆಯದ್ದು. ಆದರೆ, ನಂಗೆ ಅವಳ ಸ್ನೇಹದ ಅನಿವಾರ್ಯತೆ ಉಂಟಾದದ್ದು ಅವಳ ಬಳಿ ಬಣ್ಣಬಣ್ಣದ ಇಡಿಇಡೀ ಬೆಣ್ಣೆಕಡ್ಡಿಗಳನ್ನು ಕಂಡಾಗ.

ನನಗೆ ಕಡ್ಡಿಗೆ ಬರವಿಲ್ಲದಿದ್ದರೂ, ಅವೆಲ್ಲ ಕಂತ್ರಿ ಕಡ್ಡಿಗಳು. ವಿನೋದಳ ಬಳಿ ಇದ್ದಂತಹ, ನಯವಾಗಿ ಬೆಣ್ಣೆಯಂತೆ ಜಾರುವ ಮುತ್ತಿನಂತಹ ಅಕ್ಷರ ಮೂಡಿಸುವ ಬೆಣ್ಣೆಕಡ್ಡಿಯಲ್ಲ. ಇನ್ನೂ ಕೆಲವು ಸಹಪಾಟಿಗಳಲ್ಲಿ ಬೆಣ್ಣೆಕಡ್ಡಿ ಇತ್ತಾದರೂ, ಒಂದೋ-ಎರಡೂ ಇಲ್ಲವೇ ತುಂಡುತುಂಡು. ಇವಳಂತೆ ಚೀಲಕ್ಕೆ ಕೈಹಾಕಿ ಹಿಡಿಹಿಡಿ, ಉದ್ದುದ್ದದ ಕಡ್ಡಿಗಳನ್ನು ಮೊಗೆಮೊಗೆದು ತೆಗೆವಂತಹ ಶ್ರೀಮಂತಿಕೆ ಇಲ್ಲ. ಅವಳ ಅಕ್ಕಪಕ್ಕದಲ್ಲಿ ಕುಳಿತ ಕೆಲವು ನನ್ನಂತಹ ಆಶೆ ಬುರ್ಕೆತಿಗಳಿಗೆ ಅವಳು ಒಂದೆರಡು ಚಿಕ್ಕ ತುಂಡು ಕಡ್ಡಿಗಳನ್ನು ದಯಪಾಲಿಸಿದ್ದಳು.

ಆ ದಿನಗಳಲ್ಲಿ ಗುಬ್ಬಿಮರಿಯಂತಿದ್ದ ನನಗೆ ಯಾವಾಗಲೂ ಫಸ್ಟ್ ಬೆಂಚೇ. ಹಿಂದಿನ ಬೆಂಚಿ ಬಳಿ ಹೋಗಿ ಅವಳ ಬಳಿ ಕುಳಿತುಕೊಳ್ಳುವಂತಿಲ್ಲ. ಆಗೆಲ್ಲ ಸಾಮಾನ್ಯಕ್ಕೆ ದೋಸ್ತಿಗಳಾಗುವುದು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವವರು. ತರಗತಿ ಆರಂಭದ ಗಂಟೆ ಹೊಡೆಯುವ ಮುನ್ನ ಅವಳ ಬೆಂಚಿನ ಬಳಿ ಸುಮ್ಮಸುಮ್ಮನೆ ಸುಳಿದಾಡಿ ನೋಡಿದೆ! ಅವಳು ಹೋಂವರ್ಕ್ ಮಾಡದೇ ಇದ್ದಾಗ, ನನ್ನ ಪುಸ್ತಕ ನೋಡಿ ಲೆಕ್ಕಮಾಡ್ತಿಯಾ ಅಂತಕೇಳಿ ನೋಡಿದೆ. ಆದರೆ ಅವಳು ಮಾಸ್ಟ್ರ ತಂಗಿಯಾಗಿದ್ದ ಕನಕಳ ಪುಸ್ತಕದ ಮೊರೆ ಹೋಗಿದ್ದಳು. ಒಂದೆರಡು ಬಾರಿ ಹಲ್ಲುಕಿರಿದು ಟ್ರೈಮಾಡಿದೆ. ಕರುಣೆಯಿಂದಾದರೂ ತುಂಡು ಬೆಣ್ಣೆಕಡ್ಡಿಯೊಂದನ್ನು ಕೊಡಲೀ ಅಂತ. ಅವಳು ಕ್ಯಾರೇ ಅನ್ನಲಿಲ್ಲ.

‘ಛೇ….. ಬೆಣ್ಣೆ ಕಡ್ಡಿ ಇಲ್ಲದ ಬದುಕೂ ಒಂದು ಬದುಕೇ’ ಎಂಬಲ್ಲಿಯವರೆಗೆ ನನ್ನನ್ನು ಬೆಣ್ಣೆಕಡ್ಡಿ ಸೆಳೆದಿತ್ತು। ಆ ಸೆಳೆತದ ತೀವ್ರತೆ ಎಷ್ಟಿತ್ತೆಂದರೆ, ನಾಚಿಕೆ, ಮಾನ, ಮರ್ಯಾದೆ, ಅಹಂ ಎಲ್ಲಬಿಟ್ಟು, ಹಲ್ಲುಗಿಂಜಿ, “ದಿವ್ಯದಿವ್ಯ; ವಿನೋದ ಒಂದು ಬೆಣ್ಣೆ ಕಡ್ಡಿ ಕೊಡೇ” ಅಂತ ಒಂದು ಸರ್ತಿ ಕೇಳೇಬಿಟ್ಟೆ. ಎಲ್ಲಿ ಕೊಟ್ಲು….. ಉಮ್, ಹೋಗೋಗು ಕಡ್ಡಿ ಕೊಟ್ಟರೆ ಮನೇಲಿ ಬೈಯ್ತಾರೆ ಅಂತ ಅವಳ ಪೋಳೇ ಕಣ್ಣನ್ನು ಮತ್ತಷ್ಟು ಅಗಲವಾಗಿಸಿದ್ದಳು. ಅವಮಾನ, ನಿರಾಸೆ ಒಟ್ಟಾಗಿ ಅಪ್ಪಳಿಸಿತು. ಆದರೆ ಕೈಲಾಗದ ನಾನು ಏನೂ ಮಾಡಲು ತೋಚದೆ ‘ಸಿಂಬಳ(ಗೊಣ್ಣೆ)ಸುರ್ಕೆತಿ’ ಅಂತ ಅವಳನ್ನು ಮನದಲ್ಲೇ ಬಯ್ದು ನನ್ನ ಬೆಂಚಿಗೆ ಮರಳಿದೆ.

ಇಂತಹ ಅವಮಾನ(?)ವಾದರೂ ಬೆಣ್ಣೆಕಡ್ಡಿ ವ್ಯಾಮೋಹ ಮಾತ್ರ ಬಿಟ್ಟಿರಲಿಲ್ಲ! ‘ಬೈ ಹುಕ್ ಆರ್ ಕ್ರುಕ್’, ನಂಗದು ಬೇಕೇ ಆಗಿತ್ತು. ಹಾಗಾಗಿ ಒಮ್ಮೆ ಆದ ಅವಮಾನವನ್ನು ಬದಿಗೊತ್ತಿ, ಒಂದಕ್ಕೆ ಹೋಗುವಾಗ ಅವಳ ಕೈ ಹಿಡಿದುಕೊಂಡು ಹೋಗಲು ಪ್ರಯತ್ನಿಸಿದೆ. ಆಗೆಲ್ಲ ನಮ್ಮ ಶಾಲೆಯಲ್ಲಿ ಲ್ಯಾವೆಟ್ರಿ ಇರಲಿಲ್ಲ. ನಾವೆಲ್ಲ ಮೂತ್ರವಿಸರ್ಜನೆಗೆ ಒಂದೊಂದು ಪೊದೆಗಳ ಮರೆಯನ್ನು ಗೊತ್ತು ಮಾಡಿಕೊಂಡಿದ್ದೆವು. ಆಯಕಟ್ಟಿನ ನನ್ನ ಜಾಗದ ಮೇಲೆ ಎಲ್ಲರಿಗೂ ಕಣ್ಣು. ಹಾಗಾಗಿ ಈ ಮೂಲಕ ಪ್ರಭಾವ ಬೀರುವ ಹುನ್ನಾರದಲ್ಲಿ ವಿನೋದಳನ್ನು ನನ್ನ ಜಾಗಕ್ಕೆ ಆಮಂತ್ರಿಸಿದ್ದೆ. ಬಂದು ಒಂದಕ್ಕೆ ಮಾಡಿ ಹೋದಳಾದರೂ ಸ್ನೇಹದ ಹಸ್ತ ಚಾಚಲೇ ಇಲ್ಲ! ಎಲಾ ಇವ್ಳಾ ಅನಿಸಿತಾದರೂ ನಾನು ಹೆಲ್ಪ್‌ಲೆಸ್.

ಕೊನೆಗೆ ಈ ಗಿಮ್ಮಿಕ್‌ಗಳೆಲ್ಲ ಯಾಕೆ, ದುಡ್ಡುಕೊಟ್ಟು ಖರೀದಿ ಮಾಡುವ ಎಂಬುದಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ! ಮನೆಯಲ್ಲಿ ಬಂದು ಅವ್ವನೊಡನೆ ಐವತ್ತು ಪೈಸೆಯ ಬೇಡಿಕೆ ಇಟ್ಟೆ. ನಿಂಗೆ ಪೈಸೆ ಯಾಕೆ ಅನ್ನತ್ತಾ ತಾರಾಮಾರ ಬೈಯ್ದುಬಿಟ್ರು. ಆದರೂ ಛಲಬಿಡದ ‘ತ್ರಿವಿಕ್ರಮಿನಿ’ಯಂತೆ, ಸತತ ಮೂರು ದಿನಗಳ ಕಾಲ ಎಡೆಬಿಡದೆ ಅತ್ತುಕರೆದು ರಂಪ ಮಾಡಿದ್ದಕ್ಕೆ ಅವ್ವ ನನ್ನ ಬೇಡಿಕೆಯನ್ನು ಮನ್ನಿಸಲೇ ಬೇಕಾಯ್ತು. ಆದರೆ ಪಾಪ ಅವರ ಬಳಿಯಾದರೂ ದುಡ್ಡೆಲ್ಲಿಂದ? ಕೊನೆಗೆ ಯಾವುದೋ ಕಷ್ಟದ ಸಂದರ್ಭದಲ್ಲಿ, ಯಾವುದೋ ದೇವರಿಗೆ ಹರಕೆ ಅಂತ ಮಡಿವಸ್ತ್ರದಲ್ಲಿ ಕಟ್ಟಿಟ್ಟಿದ್ದ ಎಂಟಾಣೆ ನಾಣ್ಯವನ್ನು ನನ್ನ ಕೈಲಿರಿಸಿದರು.

ಗೆದ್ದೆನೆಂಬ ಸಂಭ್ರಮದಲ್ಲಿ ಬೆಳಿಗ್ಗೆ ಸರಿ ತಿಂಡಿಯನ್ನೂ ತಿನ್ನದೆ ಶಾಲೆಗೆ ಓಡಿ ದಿವ್ಯಳ ದಾರಿ ಕಾಯುತ್ತ ನಿಂತಿದ್ದೆ. ಅವಳು ಬರುತ್ತಲೇ ಓಡಿ ಹೋಗಿ ಎಂಟಾಣೆ ನಾಣ್ಯವನ್ನು ಅವಳ ಎದುರು ಹಿಡಿದು, ಒಂದು ಬೆಣ್ಣೆಕಡ್ಡಿ ಕೊಡೂ ಅಂತ ಧೈರ್ಯ ಮತ್ತು ಗರ್ವದಿಂದ ಕೇಳಿದೆ. ನಾಣ್ಯವನ್ನು ಎರಡೆರಡು ಬಾರಿ ಸವರಿದಳಾದರೂ, ನಾನು ಕೊಡುದಿಲ್ಲಪ್ಪ; ಮನೇಲಿ ಬೈತಾರೆ ಅಂತ ಮುಖತಿರುವಿ ನಡೆದೇ ಬಿಟ್ಟಳು.

ಹೇಗಾಗಬೇಡ ನಂಗೆ? ಕಡ್ಡಿಯ ಮೇಲಣ ವ್ಯಾಮೋಹ ಹೆಚ್ಚಿತೇ ವಿನಹ ಕಡಿಮೆಯಾಗಲಿಲ್ಲ. ಎಷ್ಟು ಯೋಚಿಸಿದರೂ ಏನು ಮಾಡುವುದೆಂಬುದೇ ತೋಚಲಿಲ್ಲ! ಹೈಸ್ಕೂಲಿಗೆ ಪೇಟೆಗೆ ಹೋಗುತ್ತಿದ್ದ ಅಣ್ಣನ ಬಳಿ ಬೆಣ್ಣೆಕಡ್ಡಿ ತಂದುಕೊಡೆಂದು ವಿನಂತಿಸಿದೆ. ಇರೋ ಕಡ್ಡಿಯಲ್ಲಿ ಬರಿ ಅಂತ ಬಯ್ದನೆ ವಿನಹ ನನ್ನ ವಿನಂತಿಯನ್ನು ಮನ್ನಿಸುವ ದಯೆ ತೋರಲಿಲ್ಲ. ಮಾತಿಗಿಂತ ಸಿಟ್ಟನ್ನೆ ಉದುರಿಸುವ ಅಪ್ಪನ ಬಳಿ ಕೇಳುವಂತೆಯೇ ಇಲ್ಲ.

ಈ ಬೆಣ್ಣೆಕಡ್ಡಿ ದೆಸೆಯಿಂದಾಗಿ ನನಗೆ ಆಟಪಾಠದ ಕಡೆ ಗಮನಕೇಂದ್ರೀಕರಿಸಲಾಗುತ್ತಿರಲಿಲ್ಲ. ಊಟತಿಂಡಿ ಸೇರುತ್ತಿರಲಿಲ್ಲ. ಈ ಮಧ್ಯೆ ದಿವ್ಯಳಂತೂ ಕಲ್ಲರ್‌ಕಲ್ಲರ್ ಕಡ್ಡಿಗಳನ್ನು ತಂದು ಪ್ರದರ್ಶನ ಮಾಡುತ್ತಿದ್ದಳು. ವಿನೋದಳಿಗೆ ನೆಲ್ಲಿಕಾಯಿ ತಂದುಕೊಟ್ಟ ಕಾತ್ಯಾಯಿನಿಗೆ ಸಹ ಒಂದು ತುಂಡು ಬೆಣ್ಣೆಕಡ್ಡಿ ಲಭಿಸಿತ್ತು. ಒಟ್ಟಿನಲ್ಲಿ ನನ್ನದು ಮಾತ್ರ ಬೆಣ್ಣೆಕಡ್ಡಿ ಇಲ್ಲದ ನಿಕೃಷ್ಟ ಬದುಕಾಗಿತ್ತು.

ಆದರೂ ಆಸೆ ಬತ್ತಲಿಲ್ಲ. ಹೇಗಾದರೂ ಮಾಡಿ ಅವಳ ಚೀಲದಿಂದ ಒಂದು ತುಂಡು ಬೆಣ್ಣೆಕಡ್ಡಿ ಕದಿಯುವುದು ಎಂಬ ಕ್ರಿಮಿನಲ್ ಸಂಚುಹೂಡಿದೆ. ಕದ್ದೇ ಗೊತ್ತಿಲ್ಲದಿದ್ದ ನನಗೆ ಕದಿಯುವುದಾದರೂ ಹೇಗೆ ಎಂಬುದೇ ತೋಚಲಿಲ್ಲ. ಒಂದೆರಡು ಬಾರಿ ಅವಳ ಬೆಂಚಿನ ಬಳಿ ಸುಳಿದೆನಾದರೂ, ಚೀಲಕ್ಕೆ ಕೈಹಾಕುವ ಧೈರ್ಯ ಬರಲಿಲ್ಲ. ಅಂತಹ ವೃತ್ತಿಪರ ಕಳ್ಳಿ ಅಲ್ಲದ ಕಾರಣ, ಹೇಗೆ ಕದಿಯುವುದೆಂಬುದೇ ದೊಡ್ಡಚಿಂತೆಯಾಯಿತು. ಕೊನೆಗೆ ‘ಸಂಜೆ ಆಟಕ್ಕೆ ಬಿಟ್ಟಾಗ’ ಎಂಬುದಾಗಿ ಮುಹೂರ್ತ ನಿಗದಿ ಪಡಿಸಿದೆ.ಒಂದು ದಿನ ಆಟಕ್ಕೆ ಬಿಟ್ಟಾಗ ಹೊಟ್ಟೆ ನೋವೆಂಬ ಕುಟಿಲೋಪಾಯ ಹೂಡಿ ಆಟಕ್ಕೆ ಹೋಗದೆ ತರಗತಿಯಲ್ಲೇ ಕುಳಿತಿದ್ದೆ. ಎಲ್ಲರೂ ಆಟಕ್ಕೆ ಹೋದಮೇಲೆ ಕದಿಯುವ ಲೆಕ್ಕಹಾಕಿದ್ದೆ. ಆಗಲೆ ಎದೆಬಡಿತ ಜೋರಾಗಿತ್ತು. ಅಷ್ಟರಲ್ಲಿ ಅಲ್ಲೇ ಹಾದ ಸರಳಾ ಟೀಚರ್ ಕ್ಲಾಸ್‌ರೂಮಿನೊಳಗೆ ಬಂದು, ಆಟಕ್ಕೆ ಯಾಕೆ ಹೋಗಲಿಲ್ಲ ಎಂಬುದಾಗಿ ಕೇಳಿದರು. ಹೊಟ್ಟೆ ನೋವು ಎಂಬ ಸಬೂಬು ಹೇಳಿದೆ. ಹಾಗಾದರೆ ಚೀಲ ಹಿಡ್ಕೊಂಡು ಮನೆಗೆ ಹೋಗೆಂದರು. ಥುತ್ ಇವರ, ಅನ್ನುತ್ತಾ ಜೋಲುಮೋರೆಯೊಂದಿಗೆ ಮನೆಗೆ ನಡೆದೆ. ಅಲ್ಲಿಗೆ ನನ್ನ ಕಳ್ಳತನದ ಯೋಜನೆಯೂ ಮುರಿದುಬಿತ್ತು.

ಸಾಯ್ಲತ್ಲಾಗೆ, ಇವಳ ದೊಡ್ಡಸ್ತಿಕೆಯ ಬೆಣ್ಣೆಕಡ್ಡಿ ಯಾರಿಗೆ ಬೇಕು? ಸಿಂಬಳ ಸುರ್ಕೆತಿ ಅಂತ ನನ್ನನ್ನು ಸಮ್ಮನಾಗಿಸಿಕೊಂಡು, ಅವಳ ಅದೃಷ್ಟಕ್ಕೆ ಕರುಬುತ್ತಾ, ನನ್ನ ದುರಾದೃಷ್ಟಕ್ಕೆ ಮರುಗುತ್ತಾ ಕಷ್ಟಪಟ್ಟು ಕಡ್ಡಿಯಾಶೆಯನ್ನು ಹತ್ತಿಕ್ಕಿಕೊಂಡೆ.

ಅದು ಮಾವಿನಮಿಡಿ ಸೀಸನ್. ನಮ್ಮ ಮನೆಯಲ್ಲಿ ಮೂರ್ನಾಲ್ಕು ನೆಕ್ಕರೆ ಮಾವಿನ ಮರಗಳು ಇದ್ದವು. ಆಗೆಲ್ಲ ನನ್ನ ಚೀಲ ತುಂಬ ಮಾವಿನ ಮಿಡಿಗಳು. ನನ್ನ ಬೆಂಚಿನ ಗೆಳತಿಯರಿಗೆ ದಿನನಿತ್ಯ ಮಿಡಿ ಸರಬರಾಜಾಗುತ್ತಿತ್ತು. ಇಂಥಾ ಒಂದು ದಿನ ದಿವ್ಯ ನನ್ನಬಳಿ ಮಾವಿನಮಿಡಿ ಯಾಚಿಸಿದಳು. ಅವಳು ಕೇಳಿದ ಹೊತ್ತಿಗೆ ಅಂದಿನ ಕೋಟಾ ಮುಗಿದು, ಮಿಡಿ ಖಾಲಿಯಾಗಿತ್ತು.

ನಾಳೆ ಕೊಡ್ತೇನೆ ಅಂದೆ(ನಿಜವಾಗ್ಲೂ ಇದ್ದಿರಲಿಲ್ಲ. ಅವಳು ಕಡ್ಡಿಕೊಡದ ಸಿಟ್ಟಲ್ಲ). ಮರುದಿನ ಬೆಳಗ್ಗೆ ಮಾವಿನಮಿಡಿ ಸಮಾರಾಧನೆ ವೇಳೆ ವಿನೋದಳಿಗೂ ಕರೆದು ಕೊಟ್ಟೆ. ಇನ್ನೂ ಒಂದು ಕೊಡೆಂದಳು. ಚೀಲದಲ್ಲಿತ್ತು, ಕೊಟ್ಟೆ. ಅವಳ ಬೆಂಚಿಗೆ ತೆರಳಿದವಳು, ಅವಳ ಪಾಠಿ ಚೀಲದ ಸಮೇತ ಮರಳಿ ನನ್ನಬಳಿ ಬಂದಳು. ನನ್ನ ಹೆಸರಿಡಿದು ಕರೆದವಳೇ…. ಒಂದಿಡೀ ಬೆಣ್ಣೆಕಡ್ಡಿ ಮತ್ತು ಹಿಡಿತುಂಬ ಬಣ್ಣಬಣ್ಣದ ತುಂಡುಕಡ್ಡಿಗಳನ್ನು ನನ್ನ ಪುಟ್ಟ ಬೊಗಸೆಯಲ್ಲಿಟ್ಟುಳು! ಸಾವಿರ ಬಲ್ಬುಗಳು ಏಕಕಾಲಕ್ಕೆ ಬೆಳಗಿದಂತೆ, ಗೆಜ್ಜೆಗಳು ನಲಿದಂತೆ, ಗಂಟೆಗಳು ಉಲಿದಂತೆ ಭಾಸವಾಗಿ ಅನಿವರ್ಚನೀಯ ಆನಂದದಿಂದ ಮೂಖಳಾದೆ!


ಚಂದ್ರಾವತಿ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

About The Author

Leave a Reply

You cannot copy content of this page

Scroll to Top