ಕಾವ್ಯಸಂಗಾತಿ
ಗಜಲ್
ವಾಣಿ ಯಡಹಳ್ಳಿಮಠ
ಒಡೆದೊಂದು ಹೃದಯವ ಬಗೆದು ನೋಡು
ಕಂಬನಿಯ ಮಹಾಕಾವ್ಯವದು , ಓದಿ ನೋಡು
ಛಿದ್ರಗೊಂಡ ಎದೆಯ ಪ್ರತಿ ಚೂರೂ ಪುಟವಾಗಿಹುದು
ಘಾಸಿಗೊಂಡ ಭಾವದ ಅಳಲು ನೋಡು
ಕಂಬನಿ, ನೆತ್ತರು ಮಿಶ್ರಿತ ಕಲೆಗಳು ಅಲ್ಲಲ್ಲಿ
ತೇವಗೊಂಡ ಪುಟಗಳ ಆಕ್ರಂದನ ನೋಡು
ನೆನಪುಗಳ ನೋವು, ನರಳಿಕೆ ಅತಿಶಯವಲ್ಲಿ
ಜೀವಂತ ನಂಬಿಕೆಯ ಶವಯಾತ್ರೆ ನೋಡು
ಅಲ್ಲಲ್ಲಿ ಬಿದ್ದಿರುವ ನಿಸ್ತೇಜ ಭಾವನೆಗಳ ಬಿಕ್ಕಳಿಕೆ
‘ವಾಣಿ’ಯ ಒಡಲಿನ ಉಸಿರಿನ ಈ ಬೇಗೆಯ ನೋಡು