ಹಾಂ *ಪುರುಷನಿವನು- ಅನ್ನಪೂರ್ಣ ಸು ಸಕ್ರೋಜಿ

ಕಾವ್ಯಸಂಗಾತಿ

ಹಾಂ ಪುರುಷನಿವನು

ಅನ್ನಪೂರ್ಣ ಸು ಸಕ್ರೋಜಿ

ಪುರುಷನಿವನು ಹೃದಯವಿಲ್ಲದವನು
ಒಪ್ಪಿಕೊಂಡೆನಾದರೂ ಇವನಲಿ
ಕಾಣದು ಕಂಗಳಲಿ ಆರ್ದ್ರತೆ
ಆದರೆ ಭಾವನೆಗಳಿಗಿಲ್ಲ ಕೊರತೆ

ವ್ಯಕ್ತವಾಗದು ಎಂದೂ ಸೀದಾ
ಸಹಜ ಸರಳ ಪ್ರೇಮಪ್ರೀತಿ
ಅವ್ಯಕ್ತ ಪ್ರೀತಿಯ ರೀತಿಯೇ
ಬೇರೆ ತರಹವೇ ಆಗಿರುವದು

ತಾಯ ಹೃದಯದ ಕಾಳಜಿ
ತಂದೆಯ ತೋರಿಕೆಯ ಕೋಪ
ಅಣ್ಣನ ಪ್ರೀತಿಯ ಗದರಿಕೆ
ಗೆಳೆಯನ ಸಲುಗೆಯ ಬೈಗುಳ

ಗಂಡಸಿನ ದರ್ಪ ಅಧಿಕಾರ
ಪುರುಷ ಅಹಂ ಅಹಂಕಾರ
ಪ್ರಿಯ ಪತ್ನಿಯ ಜೊತೆಗಾರ
ಪರಿವಾರದ ಸುಬೇದಾರ

ಸಂಬಂಧಗಳ ಬಂಧ ಅರಿತವ
ಸದಾ ಮಧುರವಾಗಿಸುವವ
ತಾಯಿಯೊಂದಿಗೆ ಹಂಚಿಕೊಳ್ಳಲಾರ
ಪತ್ನಿಯೊಂದಿಗೆ ತೋಡಿಕೊಳ್ಳಲಾರ

ಸಹನೆಯೊಂದಿಗೆ ಸಂಭಾಳಿಸುವನು
ಉದ್ಯೋಗದೊಂದಿಗೆ ಮನೆಯನು
ಸಮತೆಯಿಂದ ಕಾಣುವನು
ರಕ್ಷಿಸುವ ಕಾವಲುಗಾರನಿವನು

ತನ್ನ ಕನಸುಗಳ ಮುಚ್ಚಿಡುವವ
ಮನೆ ಮಕ್ಕಳಿಗಾಗಿ ಸಾಲ ಮಾಡುವವ
ವೃದ್ಧ ತಂದೆತಾಯಿ,ಪತ್ನಿಗಾಗಿ
ದುಡಿಮೆಯೇ ದೈವವೆನ್ನುವವ

ಸಂಕಷ್ಟಗಳಿಗೆ ಅಂಜದವ
ನಗುತ ನಂಜುಂಡನಾಗುವ
ನಾನಿರುವೆನೆಂಬ ಭರವಸೆಗಾರ
ಸಲಹೆ ನೀಡುವ ಸಲಹೆಗಾರ

ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆ
ಸ್ತ್ರೀ ಬೇಕು ಪುರುಷನ ಅಸ್ತಿತ್ವಕೆ
ಆಗ ಮಹಾಪುರುಷನೆನಿಸುವ
ಪುರುಷ ಪರುಷಮಣಿಗೆ ವಂದನೆ


Leave a Reply

Back To Top