ಎ. ಹೇಮಗಂಗಾ-ಗಜಲ್

ಕಾವ್ಯ ಸಂಗಾತಿ

ಗಜಲ್

ಎ. ಹೇಮಗಂಗಾ

ಮಾತೂ ಹೃದಯ ಇರಿವ ಈಟಿಯಾಗುವುದೆಂದು ಅರಿತಿರಲಿಲ್ಲ ನಾನು
ನೋವ ಕಣ್ಣೀರೂ ನೆತ್ತರಂತೆ ಧಾರೆಯಾಗುವುದೆಂದು ಅರಿತಿರಲಿಲ್ಲ ನಾನು

ನನಗಾಗಿಯೇ ನಿನ್ನೊಲವು ಎಂದೂ ಮೀಸಲೆಂಬ ಖಾತ್ರಿಯಿತ್ತು ನನ್ನಲ್ಲಿ
ಸುಳಿವೇ ಇಲ್ಲದೆ ಪ್ರೀತಿ ಪಲ್ಲಟವಾಗುವುದೆಂದು ಅರಿತಿರಲಿಲ್ಲ ನಾನು

ಅದೆಷ್ಟು ಭರವಸೆಯಿತ್ತು ಕನಸಿಗೆ ರಂಗು ತುಂಬಿದ ನಲ್ಮೆ ನುಡಿಗಳಲ್ಲಿ!
ಊಸರವಳ್ಳಿಯಂತೆ ಬಣ್ಣ ಬದಲಾಗುವುದೆಂದು ಅರಿತಿರಲಿಲ್ಲ ನಾನು

ಮೃದುತಲ್ಪವೂ ಶರಶಯ್ಯೆಯಾದೀತೆಂಬ ಕಲ್ಪನೆ ಇರಲಿಲ್ಲ ನನಗೆ
ಮಿಲನ ಸುಖದ ಅಮಲೂ ಬೇಡವಾಗುವುದೆಂದು ಅರಿತಿರಲಿಲ್ಲ ನಾನು

ನಿನ್ನಪ್ಪುಗೆಯ ಸುಷುಪ್ತಿಯಲಿ ನಾ ಮರಣ ಅಪ್ಪಿದ್ದರೆ ಎಷ್ಟು ಚೆನ್ನಿತ್ತು!
ಅನುಬಂಧವೇ ಮುಳ್ಳುಬೇಲಿಯಾಗುವುದೆಂದು ಅರಿತಿರಲಿಲ್ಲ ನಾನು

ಕಹಿ ಕ್ಷಣಗಳ ಸೋಸಿ ದೂಡುವ ತೂತು ಜೋಳಿಗೆಯಾಗಿತ್ತು ಮನಸು
ಮೋಸದ ಕತ್ತಿಯೇಟಿಗದು ಬಲಿಯಾಗುವುದೆಂದು ಅರಿತಿರಲಿಲ್ಲ ನಾನು

ಬೆಂಗಾಡಾದ ‘ಹೇಮ’ಳ ಬಾಳಲ್ಲಿ ಹಸಿರು ಮತ್ತೊಮ್ಮೆ ಚಿಗುರುವುದೆಂತು?
ಮೋಹಪಾಶವೇ ಬದುಕಿಗೆ ಉರುಳಾಗುವುದೆಂದು ಅರಿತಿರಲಿಲ್ಲ ನಾನು


2 thoughts on “ಎ. ಹೇಮಗಂಗಾ-ಗಜಲ್

  1. ಅತ್ಯಂತ ಸಂವೇದನಾಶೀಲ , ಮನ ಮುಟ್ಟುವ ಹಾಗೂ ಮೋಸದ ಪ್ರೀತಿಗೆ ಮನಸೋಲದಿರಲು ಹದಿಹರೆಯದ ಮಕ್ಕಳಿಗೊಂದು ಬುದ್ಧಿವಾದ.!
    ತುಂಬಾ ಚೆನ್ನಾಗಿದೆ ಮೇಡಂ.

Leave a Reply

Back To Top